ಯೋಗರಾಜ್ ಭಟ್ ಅಂದಾಕ್ಷಣ, ನೆನಪಾಗೋದೇ ಮಧುರ ಕಥೆಗಳು, ಅದರಲ್ಲೂ ಲವ್ಸ್ಟೋರಿಗೆ ಹೆಚ್ಚು ಒತ್ತು. ಸಣ್ಣದ್ದೊಂದು ಹೊಡೆದಾಟ ಬಡಿದಾಟ ಹೊರತುಪಡಿಸಿದರೆ, ಬರೀ ಮಾತು ಮತ್ತು ಪ್ರೀತಿಗೆ ಹೆಚ್ಚು ಒತ್ತು ಕೊಡುತ್ತಾರೆ. ಈಗ ಭಟ್ಟರು ಹೊಸದೊಂದು ಸಿನಿಮಾಗೆ ನಿರ್ದೇಶಕರು. ಆ ಚಿತ್ರಕ್ಕೆ “ಗರಡಿ” ಎಂದು ನಾಮಕರಣ ಮಾಡಿದ್ದಾರೆ. ಶೀರ್ಷಿಕೆ ಕೇಳಿದೊಡನೆ, ಇದೊಂದು ಪಕ್ಕಾ ಕುಸ್ತಿಮಯ ಸಿನಿಮಾ ಅನಿಸಬಹುದು. ಆದರೆ, ಇಲ್ಲೂ ಸಹ ಪ್ರೀತಿ ಗೀತಿ ಇತ್ಯಾದಿಗೇನೂ ಕೊರತೆ ಇರೋದಿಲ್ಲ ಬಿಡಿ…
ಗಾಳಿಪಟ–2 ಚಿತ್ರದ ನಂತರ, ನಿರ್ದೇಶಕ ಯೋಗರಾಜ್ ಭಟ್ “ಗರಡಿ” ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸೌಮ್ಯ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಸಿನಿಮಾ ಇದು. ಅಂದಹಾಗೆ, ಈ ಚಿತ್ರಕ್ಕೆ ಕೃಷಿ ಸಚಿವ ಬಿ. ಸಿ ಪಾಟೀಲ್ ಅವರ ಪತ್ನಿ ವನಜಾ ಬಿ. ಪಾಟೀಲ್ ಹಾಗು ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಪಕರು.
ಚಿತ್ರಕ್ಕೆ ಯುವ ನಟ ಯಶಸ್ ಸೂರ್ಯ ಹೀರೋ. ಬಿ.ಸಿ ಪಾಟೀಲ್ ಬಹಳ ದಿನಗಳ ನಂತರ ಒಂದು ಪ್ರಮುಖ ಪಾತ್ರಕ್ಕಾಗಿ ಈ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾಯಕಿಯ ಪಾತ್ರಕ್ಕೆ ಹೆಸರಾಂತ ನಟಿಯ ಜೊತೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಇನ್ನುಳಿದಂತೆ, ಚಿತ್ರದ ಇತರೆ ಪಾತ್ರಗಳಿಗೆ ಕಲಾವಿದರ ಹುಡುಕಾಟ ನಡೆಯುತ್ತಿದೆ.
ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಜಯಂತ ಕಾಯ್ಕಿಣಿ ಹಾಗು ಯೋಗರಾಜ್ ಭಟ್ ಸಾಹಿತ್ಯವಿದೆ. ಛಾಯಾಗ್ರಾಹಕ ನಿರಂಜನ್ ಬಾಬು ಇದೇ ಮೊದಲ ಬಾರಿಗೆ ಭಟ್ಟರ ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.
ಭಟ್ಟರ ಜೊತೆಗೂಡಿ “ಡ್ರಾಮಾ” ಚಿತ್ರದ ಚಿತ್ರಕಥೆ ರಚಿಸಿದ್ದ ವಿಕಾಸ್ ಈ ಚಿತ್ರದ ಮೂಲಕ ಭಟ್ಟರೊಡನೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಚಿತ್ರದ ‘ಮುಹೂರ್ತ’ ಹಾಗು ‘ಟೈಟಲ್ ಲಾಂಚ್’ ಕಾರ್ಯಕ್ರಮ ಇತ್ತೀಚೆಗೆ ಹಾವೇರಿ ಜಿಲ್ಲೆಯ ಹಿರೆಕೆರೂರಿನಲ್ಲಿ ನಡೆದಿದೆ.