ನಿರ್ದೇಶಕ ಶಿವತೇಜಸ್ ಅವರು “ದಿಲ್ ಪಸಂದ್” ಸಿನಿಮಾ ಕೈಗೆತ್ತಿಕೊಂಡಿರೋದು ಗೊತ್ತೇ ಇದೆ. ಈಗ ಆ ಸಿನಿಮಾದ ಹೊಸ ಸುದ್ದಿ ಅಂದರೆ, ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಸಿನಿಮಾದವರಿಗೆ ಶುಕ್ರವಾರ ಅಂದರೆ, ಶುಭ ದಿನ. ಹಾಗಾಗಿ, ಚಿತ್ರತಂಡ, ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದು, ಪೋಸ್ಟರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ, ನಿರ್ದೇಶಕ ಶಿವತೇಜಸ್, ಅವರು ಹೆಣೆದಿರುವ ಬ್ಯೂಟಿಫುಲ್ ಲವ್‌ಸ್ಟೋರಿಗೆ “ಡಾರ್ಲಿಂಗ್” ಕೃಷ್ಣ ಬೋಲ್ಡ್ ಆಗಿ, ಕ್ಯಾಮೆರಾ ಮುಂದೆ ನಿಂತಿದ್ದು ಆಗಿದೆ. ಚಿತ್ರಗಳಲ್ಲಿ ಹಲವು ವಿಶೇಷತೆಗಳಿವೆ. ಆ ಪೈಕಿ ಮೊದಲು ಇಲ್ಲಿ ಕಥೆ ವಿಶೇಷವಾಗಿದೆ. ಅಷ್ಟೇ ಅಲ್ಲ, ಒಬ್ಬ ಸಕ್ಸಸ್‌ಫುಲ್ ಹೀರೋ ಸ್ಪೆಷಲ್ ಸ್ಟೋರಿ ಮತ್ತು ರೋಲ್ ಒಪ್ಪಿಕೊಂಡು ಮಾಡುತ್ತಿರುವ ಸಿನಿಮಾ.
ಇನ್ನು, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಸುಮಂತ್ ಕ್ರಾಂತಿ ನಿರ್ದೇಶಕರು. ಈಗ ಶಿವತೇಜಸ್ ಕಥೆಗೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಾಗಿದೆ. ಈ ಹಿಂದೆಯೇ ಸುಮಂತ್ ಕ್ರಾಂತಿ “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ ಅನ್ನೋದು ವಿಶೇಷ.
ಶಿವತೇಜಸ್, ನಿರ್ದೇಶಕರು
ಹೌದು, “ದಿಲ್ ಪಸಂದ್” ಸಿನಿಮಾದ ಶೀರ್ಷಿಕೆಯೇ ಆಕರ್ಷಣೆಯಾಗಿದೆ. ಪೊಲೀಸ್ ಅಧಿಕಾರಿ ಚನ್ನಣ್ಣನವರ್ ಪೋಸ್ಟರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಸದ್ಯ, ಚಿತ್ರದ ಚಿತ್ರೀಕರಣ ಮೊದಲ ಹಂತ ಮುಗಿದೆ. ಇಲ್ಲಿಯವರೆಗೆ ಹತ್ತು ದಿನಗಳ ಕಾಲ ಶೂಟಿಂಗ್ ನಡೆಸಿರುವ ನಿರ್ದೇಶಕ ಶಿವತೇಜಸ್, ಡಿಸೆಂಬರ್ ೧ರಿಂದ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಜೋರು ಮಳೆ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಮುಂದೂಡಲಾಗಿದೆ.
ಸುಮಂತ್ ಕ್ರಾಂತಿ, ನಿರ್ಮಾಪಕರು
ಇನ್ನು, ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ಈಗಾಗಲೇ ಅರ್ಜುನ್ ಜನ್ಯಾ ಅವರ ಸ್ಟುಡಿಯೋದಲ್ಲಿ “ದಿಲ್ ಪಸಂದ್” ಚಿತ್ರದ ಹಾಡುಗಳಿಗೆ ಕೆಲಸ ನಡೆಯುತ್ತಿದೆ. ಮೊದಲ ಹಂತದ ಹತ್ತು ದಿನಗಳ ಚಿತ್ರೀಕರಣದಲ್ಲಿ ಶೇ.೩೦ ರಷ್ಟು ಚಿತ್ರೀಕರಣ ಮಾಡಲಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಡಾರ್ಲಿಂಗ್ ಕೃಷ್ಣ. ನಿಶ್ವಿಕಾ ನಾಯ್ಡು, ತಬಲಾ ನಾಣಿ, ರಂಗಾಯಣ ರಘು, ಚಿತ್‌ಕಲಾ, ಅರುಣ ಬಾಲರಾಜ್ ಸೇರಿದಂತೆ ಇತರೆ ಕಲಾವಿದರು ಪಾಲ್ಗೊಂಡಿದ್ದಾರೆ.
ಈವರೆಗೆ ರಿಚ್ ಮನೆಗಳಲ್ಲೇ ಚಿತ್ರೀಕರಣ ನಡೆದಿದೆ. ಇನ್ನು, ಎರಡನೇ ಹಂತದ ಶೂಟಿಂಗ್‌ನಲ್ಲಿ ಪಬ್, ಟೆಂಪಲ್, ಸಾಫ್ಟ್‌ವೇರ್ ಕಂಪೆನಿ ಹೀಗೆ ಇತರೆ ಲೊಕೇಷನ್‌ಗಳಲ್ಲಿ ಚಿತ್ರೀಕರಿಸಲಾಗುತ್ತದೆ ಎನ್ನುವ ನಿರ್ದೇಶಕರು, ಎರಡನೇ ಹಂತದಲ್ಲಿ ಕಾಮಿಡಿ ನಟ ಸಾಧುಕೋಕಿಲ, ಗಿರಿ ಇತರರು ಕೂಡ ಸೇರಿಕೊಳ್ಳಲಿದ್ದಾರೆ ಎಂದು ವಿವರ ಕೊಡುತ್ತಾರೆ. ಸದ್ಯ ಎರಡನೇ ಹಂತದಲ್ಲಿ ಮಾತಿನ ಭಾಗ ಮುಗಿಸಿ, ನಂತರ ಫೈಟ್ ಮತ್ತು ಸಾಂಗ್ ಪ್ಲಾನ್ ಮಾಡಲಿದೆ ಚಿತ್ರತಂಡ.