ಪುನೀತ್ ನಮನ’- ಕಿರುಚಿತ್ರ ಪ್ರದರ್ಶನ ! ಯುವರತ್ನ’ನ ಜೀವನ ಚರಿತ್ರೆಗೆ ಕಿಚ್ಚನ ಕಂಠದಾನ !

ಅಗಲಿದ ಗಂಧದಗುಡಿಯ ಅರಸುಗೆ ಕನ್ನಡ ಚಿತ್ರರಂಗದ ವತಿಯಿಂದ ಅರಮನೆ ಮೈದಾನದಲ್ಲಿ ಮಂಗಳವಾರ ಪುನೀತ್ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಪ್ಪು ‌ಬೆಳೆದು ನಿಂತ ಹಾದಿಯ ಬಗ್ಗೆ ಬೆಳಕು ಚೆಲ್ಲುವ ಕಿರುಚಿತ್ರ ಪ್ರದರ್ಶನ ಮಾಡಲಾಯ್ತು. ವಿಶೇಷ ಅಂದರೆ ಬಾಲ್ಯದ ಗೆಳೆಯ ಅಪ್ಪು ಜೀವನ ಚರಿತ್ರ್ಯೆಗೆ ಕಿಚ್ಚ ಸುದೀಪ್ ಕಂಠದಾನ ಮಾಡಿದ್ದರು. ಅಭಿನಯ ಚಕ್ರವರ್ತಿ ಅಪ್ಪು ಸಾಧನೆ ಬಗ್ಗೆ ಹೇಳುತ್ತಾ ಹೋಗಿದ್ದು ಹೀಗೆ….

ಓವರ್‌ ಟು ಸುದೀಪ್‌ ವಾಯ್ಸ್…


ಚೆನ್ನೈನ ಆಸ್ಪತ್ರೆಯೊಂದರಲ್ಲಿ 1975ನೇ ಇಸವಿ ಸೋಮವಾರ ಮಾರ್ಚ್ 17ರಂದು ನಕ್ಷತ್ರ ಹುಟ್ಟಿತು. ಚೆನ್ನೆನ ಆಸ್ಪತ್ರೆಯೊಂದರಲ್ಲಿ ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಗರ್ಭದಲ್ಲಿ ಹುಟ್ಟಿದ ಕಂದ ಪುನೀತ್ ರಾಜ್‌ಕುಮಾರ್. ಸಹೋದರರಾದ ಶಿವರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮಾರ್, ಸಹೋದರಿಯರಾದ ಪೂರ್ಣಿಮಾ- ಲಕ್ಷಿಯವರು ಮುದ್ದಿನ ಅಪ್ಪು. ಎಲ್ಲರ ಪಾಲಿನ ಪ್ರೀತಿಯ ಅಪ್ಪು. ಅಭಿಮಾನಿಗಳ ಪಾಲಿಗೆ ಪವರ್‌ಸ್ಟಾರ್.

ಹುಟ್ಟಿದ ಆರೇ ತಿಂಗಳಿಗೆ ಪ್ರೇಮದ ಕಾಣಿಕೆ ಮೂಲಕ ತೆರೆ ಏರಿದ ಅದೃಷ್ಟವಂತ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಪ್ರೇಮದ ಕಾಣಿಕೆ. 1980ರಲ್ಲಿ ವಸಂತ ಗೀತೆ, 1981ರಲ್ಲಿ ಭಾಗ್ಯವಂತ, 1982 ರಲ್ಲಿ ಚಲಿಸುವ ಮೋಡಗಳು, ೧೯೮೩ ರಲ್ಲಿ ಎರಡು ನಕ್ಷತ್ರಗಳು, 1985ರಲ್ಲಿ ಭಕ್ತ ಪ್ರಹ್ಲಾದ ಮತ್ತು ಬೆಟ್ಟದ ಹೂ. ಹೀಗೆ ಸಾಲು ಸಾಲಾಗಿ ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ ಅಪ್ಪು. ಬೆಟ್ಟದ ಹೂ ಚಿತ್ರಕ್ಕೆ ಬಾಲ ಕಲಾವಿದ ರಾಷ್ಟ್ರ ಪ್ರಶಸ್ತಿ ಪಡೆದರೆ, ಎರಡು ನಕ್ಷತ್ರಗಳು ಹಾಗೂ ಚಲಿಸುವ ಮೋಡಗಳು ಚಿತ್ರಕ್ಕೆ ಶ್ರೇಷ್ಟ ಬಾಲ ಕಲಾವಿದ ರಾಜ್ಯಪ್ರಶಸ್ತಿ ಪಡೆದರು. ಡಾ.ರಾಜ್ ಎನ್ನುವ ಮಹಾನ್ ನಟರ ಎದುರು ನಟಿಸಿ ಸೈ ಎನಿಸಿಕೊಂಡವರು. ಕನ್ನಡಿಗರ ಮನೆಮಾತಾಗಿ ಮಾಸ್ಟರ್ ಲೋಹಿತ್ ನಂತರ ಮಾಸ್ಟರ್ ಪುನೀತ್. ಬಾಲ ಕಲಾವಿದನಾಗಿ ಪ್ರೇಕ್ಷಕರು ಹುಬ್ಬೇರುವಂತೆ ನಟಿಸಿದ ಅಮೋಘ ದೃಶ್ಯಗಳು ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿ. ಕನ್ನಡದ ನಟಸಾರ್ವಭೌಮನಾದ ಅಪ್ಪನೆದುರು ನಟಿಸಿ ಅಪ್ಪು ತಂದೆಗೆ ತಕ್ಕ ಮಗ ಹೀಗೆನಿಸಿಕೊಂಡಿದ್ದು ಈಗ ಇತಿಹಾಸ.

ಚಿಕ್ಕಂದಿನಲ್ಲೇ ನಟನೆಯಲ್ಲಿ ಮಾತ್ರವಲ್ಲ ಗಾಯನದಲ್ಲೂ ಮನೆಮಾತಾದ ಅಪ್ಪು, ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ನಾಡುನುಡಿಗೆ ಉದಾಹರಣೆಯಾದರು. ಮಗ ದೊಡ್ಡ ಕಲಾವಿದನಾಗುತ್ತಾನೆಂದು ಅಪ್ಪ-ಅಮ್ಮನಿಗೆ ಆಗಲೇ ಭರವಸೆಯಿತ್ತು. ಡಿಪ್ಲೋಮೋ ಇನ್ ಸೈನ್ಸ್ ಓದಿ ಮುಗಿಸಿದ ಅಪ್ಪು, ೧೯೯೯ರ ಡಿಸೆಂಬರ್ ೦೧ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್‌ರನ್ನು ಕೈಹಿಡಿದರು. ಈಗ ಅವರಿಗೆ ಧೃತಿ ಮತ್ತು ವಂದಿತಾ ಇಬ್ಬರು ಪುತ್ರಿಯರು. ಬಾಲನಟನಿಂದ ನಾಯಕನಟನ ಸ್ಥಾನಕ್ಕೆ ಬರಲು ಅಪ್ಪು ಕಲಿತ ಪಾಠಗಳು ಒಂದೆರಡಲ್ಲ. ನೃತ್ಯ, ಸಾಹಸ, ಈಜು, ಇತರ ಅನೇಕ ಕಲೆಗಳನ್ನು ಕಲಿತರು. ಅಭಿನಯವಂತೂ ಅಜ್ಜ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರಿಂದ ತಂದೆ ಡಾ. ರಾಜ್‌ಕುಮಾರ್ ಅವರಿಂದ ಬಂದ ಬಳುವಳಿ. ೨೦೦೨ರಲ್ಲಿ ನಾಯಕನಟನಾಗಿ ಚಿತ್ರರಂಗಕ್ಕೆ ಮರು ಪದಾರ್ಪಣೆ ಮಾಡಿದ ಪುನೀತ್ ರಾಜ್‌ಕುಮಾರ್ ಅಲ್ಲಿಂದ ಇಲ್ಲಿಯತನಕ 27 ಚಿತ್ರಗಳಲ್ಲಿ ಅಭಿನಯಿಸಿದರು. 6 ರಾಜ್ಯಪ್ರಶಸ್ತಿ, 5 ಫಿಲ್ಮ್ಫೇರ್ ಪ್ರಶಸ್ತಿ, 4 ಸೈಮಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ನಾಡಿನಾದ್ಯಂತ ಅನೇಕ ಸಂಘ-ಸಂಸ್ಥೆಗಳು ಅಭಿನಂದಿಸಿವೆ ಗೌರವಿಸಿವೆ ಸನ್ಮಾಸಿವೆ. ಅಪ್ಪು-ಅಭಿ-ವೀರಕನ್ನಡಿಗ-ಮೌರ್ಯ-ಆಕಾಶ್-ನಮ್ಮ ಬಸವ-ಅಜಯ್-ಅರಸು-ಮಿಲನ-ಬಿಂದಾಸ್-ವಂಶಿ-ರಾಜ್ ದಿ ಶೋಮ್ಯಾನ್-ರಾಮ್-ಪೃಥ್ವಿ-ಜಾಕಿ-ಹುಡುಗರು- ಪರಮಾತ್ಮ-ಅಣ್ಣಾಬಾಂಡ್-ಯಾರೇ ಕೂಗಾಡಲಿ- ನಿನ್ನಿಂದಲೇ-ಪವರ್-ಮೈತ್ರಿ-ರಣವಿಕ್ರಮ-ಚಕ್ರವ್ಯೂಹ-ದೊಡ್ಮನೆ ಹುಡುಗ-ರಾಜಕುಮಾರ-ಅಂಜನಿಪುತ್ರ-ನಟಸಾರ್ವಭೌಮ-ಯುವರತ್ನ-ಇನ್ನೂ ತೆರಕಾಣಬೇಕಿದ್ದ ಜೇಮ್ಸ್. ಇಷ್ಟು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ ನಮ್ಮೆಲ್ಲರ ನೆಚ್ಚಿನ ಪವರ್‌ಸ್ಟಾರ್ ದಿಢೀರನೆ ನಮ್ಮನ್ನೆಲ್ಲ ಅಗಲಿ ಹೋಗಿದ್ದು ಅವರ ಕುಟುಂಬಕ್ಕೆ, ಚಿತ್ರೋದ್ಯಮಕ್ಕೆ, ಕನ್ನಡ ಚಿತ್ರಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಇಡೀ ಕನ್ನಡಿಗರಿಗೆ ದೊಡ್ಡ ಆಘಾತ. ಅವರ ಮನೋಜ್ಞ ಅಭಿನಯವನ್ನು ಯಾರೂ ಮರೆಯೋ ಹಂಗಿಲ್ಲ.

ಡ್ಯೂಪ್‌ಗಳಿಲ್ಲದೇ ನಾನೇ ನಟಿಸುತ್ತೇನೆಂದು ನಟಿಸಿದ ಸಾಹಸ ದೃಶ್ಯಗಳು ಸದಾ ಜೀವಂತ. ಕನ್ನಡ ಚಲನಚಿತ್ರಗಳಲ್ಲಿ ನೃತ್ಯಕ್ಕೆ ಮಾಧರಿಯಾಗಿ ನಿಂತ ಅಪ್ಪು ಅವರ ನೃತ್ಯ ಎಂದರೆ ಹಸುಗೂಸುಗಳಿಗೂ ಅಚ್ಚುಮೆಚ್ಚು. ಮೇರುನಟನ ಮಗನೆಂಬ ದರ್ಪವಿಲ್ಲದೇ, ಅಪ್ಪನ ಆದರ್ಶಗಳನ್ನು-ಸರಳತೆಯನ್ನು-ಸೌಜನ್ಯವನ್ನು ತನ್ನದಾಗಿಸಿಕೊಂಡು ಕಿರಿಯರಲ್ಲಿ ಕಿರಿಯನಾಗಿ ನಡೆದುಬಂದ ಅಪ್ಪು, ತಲೆ ಎತ್ತಿ ನಿಲ್ಲಬೇಕಾದರೆ ತಲೆಬಾಗಿ ನಡೆಯಬೇಕೆಂಬ ಸೂಕ್ತಿಯನ್ನು ಅಕ್ಷರಶಃ ಪಾಲಿಸಿದವರು. ನಿರ್ಮಾಪಕರಿಗೆ-ನಿರ್ದೇಶಕರಿಗೆ-ಕಥೆಗಾರರಿಗೆ-ನೃತ್ಯ ನಿರ್ದೇಶಕರಿಗೆ-ನೃತ್ಯಗಾರರಿಗೆ-ಗೀತ ಸಾಹಿತಿಗಳಿಗೆ-ಸಂಗೀತ ನಿರ್ದೇಶಕರಿಗೆ-ಗಾಯಕರಿಗೆ-ಛಾಯಾಗ್ರಾಹಕರಿಗೆ-ಸಾಹಸ ಕಲಾವಿದರಿಗೆ-ಲೈಟ್‌ಮ್ಯಾನ್‌ನಿಂದ ಹಿಡಿದು ಗೋಡೆಗೆ ಪೋಸ್ಟರ್ ಅಂಟಿಸುವ ತನಕ ಎಲ್ಲರೊಂದಿಗೆ ನಗುನಗುತ್ತಾ, ಆತ್ಮೀಯವಾಗಿ ಸೌಜನ್ಯದಿಂದ ವರ್ತಿಸುತ್ತಿದ್ದ ಅಪ್ಪುಗೆ ಪ್ರೀತಿಯ ಅಪ್ಪು ಅಜರಾಮರ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರವಲ್ಲದೇ ಇತರೆ ಎಲ್ಲಾ ಸಂಘ-ಸಂಸ್ಥೆಗಳೊಟ್ಟಿಗಿನ ಅಪ್ಪು ಅವರ ನಂಟು ಮರೆಯಲು ಸಾಧ್ಯವಿಲ್ಲ. ಕಾವೇರಿ ವಿವಾದ, ಮಹದಾಯಿ, ಮುಂತಾದ ಕನ್ನಡ ಪರ ಹೋರಾಟಗಳಲ್ಲಿ ಮುಂದೆ ನಿಲ್ಲುತ್ತಿದ್ದುದ್ದನ್ನು ಕನ್ನಡಿಗರು ಮರೆಯಲು ಸಾಧ್ಯವೇ ? ಇಲ್ಲಿಯವರೆಗೂ ನಾವು ನೋಡಿದ ಅಪ್ಪು ಚಿತ್ರರಂಗದ ಪವರ್‌ಸ್ಟಾರ್. ಇದರಿಂದಾಚೆಗೆ ಇವತ್ತು ಜಗತ್ತೇ ತಿರುಗಿ ನೋಡುತ್ತಿರುವ ಅಪ್ಪು, ಬೇರೆ ಬೇರೆ ದೇಶದ ಜನರ ಕಣ್ಣಲ್ಲಿ ನೀರು ತರಿಸಿದ ಅಪ್ಪು, ಕೊಡುಗೈ ದಾನಿ ಅಪ್ಪು, ಯುವರತ್ನ ಮಾತ್ರವಲ್ಲ ಸೇವಾರತ್ನ ಅಪ್ಪು, ಸದ್ದಿಲ್ಲದೇ ಸಾವಿರಾರು ಬದುಕುಗಳಿಗೆ ಬೆಳಕಾದ ಅಪ್ಪು, ಸಾವಿನಲ್ಲೂ ಸಾರ್ಥಕತೆ ಮೆರೆದು ನೇತ್ರದಾನ ಮಾಡಿದ ಅಪ್ಪು, ಒಂದು ದೊಡ್ಡ ಸಂಸ್ಥೆ ಮಾಡಬಹುದಾದದ್ದನ್ನು ಒಬ್ಬ ವ್ಯಕ್ತಿಯಾಗಿ ಸಾಧಿಸಿದ ಅಪ್ಪು, ಅಬ್ಬಾ.. ಒಂದೇ.. ಎರಡೇ..

ಹಣ ಪಡೆಯದೇ ಸಮಾಜಮುಖಿಯಾಗಿ ಕರ್ನಾಟಕ ಸರ್ಕಾರದ ಹಾಲು-ಒಕ್ಕೂಟದ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿದ್ದರು. ಎಲ್.ಇ.ಡಿ ಬಲ್ಬ್ ಯೋಜನೆಗಳ ರಾಯಭಾರಿಯಾಗಿದ್ದರು. ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ತಂಡದ ಆರ್‌ಸಿಬಿಗೆ ರಾಯಭಾರಿಯಾಗಿದ್ದರು. ಬಿಎಂಟಿಸಿ ಬಸ್ ಹಾಗೂ ರಾಜ್ಯ ಚುನಾವಣಾ ಕಮಿಷನ್‌ಗೂ ಸಹ ರಾಯಭಾರಿಯಾಗಿ ಅವರ ಜನಪರ ಕಾಳಜಿ ತೋರಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ ನೀಡಲು ಡಾ.ರಾಜ್‌ಕುಮಾರ್ ಅವರ ಹೆಸರಲ್ಲಿ ಐಎಎಸ್ ಮತ್ತು ಎಪಿಎಸ್ ತರಭೇತಿ ಸಂಸ್ಥೆ ತೆರೆದಿದ್ದರು. ಪಿ.ಆರ್.ಕೆ ಎಂಬ ಸಂಸ್ಥೆಯಡಿ ಹೊಸ ಹೊಸ ಬಗೆಯ ಚಿತ್ರಗಳನ್ನು ತಯ್ಯಾರಿಸುತ್ತಿದ್ದರು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದರು. ಪಿಆರ್‌ಕೆ ಆಡಿಯೋ ಸಂಸ್ಥೆಯನ್ನು ನಿರ್ಮಿಸಿ ಆಡಿಯೋ ಹಕ್ಕುಗಳನ್ನು ಪಡೆಯುತ್ತಿದ್ದರು. ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿಗೆ ನಿರೂಪಕರಾಗಿ ಮಾತ್ರವಲ್ಲದೇ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದರು. ಕನ್ನಡಕ್ಕೆ ಹೊಸ ತಂತ್ರಜ್ಞಾನ ಪರಿಚಯಿಸಬೇಕೆನ್ನುವ ಹಂಬಲವಿಟ್ಟುಕೊಂಡಿದ್ದ ಅಪ್ಪು ಎಲ್ಲವನ್ನೂ ಅರ್ಧದಲ್ಲಿ ಬಿಟ್ಟು ಹೋದದ್ದು ನಮ್ಮೆಲ್ಲರಿಗೂ ತುಂಬಲಾರದ ನಷ್ಟ.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಸಂಭಾವನೆಯನ್ನು ಪರೋಪಕ್ಕಾರಕ್ಕೆ ನೀಡಿದ, ಆರೂವರೆ ಕೋಟಿ ಕನ್ನಡಿಗರ ಹೃದಯದ ಯುವರತ್ನ ಅನೇಕ ಗೀತೆಗಳನ್ನು ಹಾಡಿ ಅದರಿಂದ ಬಂದ ಸಂಭಾವನೆಯನ್ನು ಆಶ್ರಮಗಳಿಗೆ ನೀಡುತ್ತಿದ್ದರು. ಸಾವಿರಾರು ಜನರಿಗೆ ವಿದ್ಯಾರ್ಜನೆ, ಮಕ್ಕಳ ವಿದ್ಯಾಭ್ಯಾಸ, ಗೋಶಾಲೆಗಳಿಗೆ-ವೃದ್ಧಾಶ್ರಮಕ್ಕ- ತಮ್ಮದೇ ಕುಟುಂಬದ ಶಕ್ತಿಧಾಮ ಆಶ್ರಮಕ್ಕೆ ತಮ್ಮ ಸಂಭಾವನೆಯ ಬಹುಪಾಲು ಹಣವನ್ನು ನೀಡುತ್ತಿದ್ದರು. ಸಮಾಜಮುಖಿಯಾಗಿ ಬದುಕಿ-ಬಾಳಿದ ಪುಣ್ಯಾತ್ಮ ಪುನೀತ್ ರಾಜ್‌ಕುಮಾರ್ 29 ಅಕ್ಟೋಬರ್
2021ರಂದು ಹೃದಯಾಘಾತಕ್ಕೆ ಒಳಗಾಗಿ ನಮ್ಮನ್ನು ಅಗಲಿದ ಶ್ರೀ ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀದ ದರ್ಶನಕ್ಕೆ ಒಂದು ಲೆಕ್ಕದ ಪ್ರಕಾರ ಮಹಾತ್ಮ ಗಾಂಧೀಜೀಯವರ ಅಂತಿಮ ದರ್ಶನಕ್ಕೆ ಬಂದಿದ್ದಕ್ಕೆ ಹೆಚ್ಚಿನ ಜನರು ಬಂದಿದ್ದರು ಎನ್ನುವ ಮಾತಿದೆ. ಪುನೀತ್ ರಾಜ್‌ಕುಮಾರ್ ಅವರ ಕೀರ್ತಿ ದೊಡ್ಡದು.. ಬಹಳ ದೊಡ್ಡದು.

Related Posts

error: Content is protected !!