ದೊಡ್ಮನೆಯ ರಾಜಕುಮಾರನ ನುಡಿನಮನ ಕಾರ್ಯಕ್ರಮ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಕನ್ನಡ ಚಿತ್ರೋದ್ಯಮದ ಕಡೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ‘ಪುನೀತ್ ನಮನ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸ್ಯಾಂಡಲ್ವುಡ್ನ ಕಲಾವಿದರು ಸೇರಿದಂತೆ ಪರಭಾಷಾ ಸ್ಟಾರ್ಗಳು ಕೂಡ ಆಗಮಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ, ಶರತ್ ಕುಮಾರ್, ಸಂಪತ್ ರಾಜ್, ಶ್ರೀಕಾಂತ್, ನಟ ವಿಶಾಲ್ ಸೇರಿದಂತೆ ಬಹುಭಾಷಾ ನಟರುಗಳು ನಟಸಾರ್ವಭೌಮನಿಗೆ ನುಡಿನಮನ ಸಲ್ಲಿಸೋದಕ್ಕೆ ಬಂದಿದ್ದಾರೆ. ದೊಡ್ಮನೆ ಕುಟುಂಬಸ್ಥರು-ಆಪ್ತರು-ಬಂಧುಗಳು ಸೇರಿದಂತೆ ಕಲಾವಿದರಿಗೆ ಮಾತ್ರ ಇವತ್ತಿನ ‘ಅರಸು ಆರಾಧನೆ’ ಕಾರ್ಯಕ್ರಮದಲ್ಲಿ ಅವಕಾಶವಿದ್ದು ಅಭಿಮಾನಿಗಳು ಇಲ್ಲಿ ಭಾಗಿಯಾಗೋದಕ್ಕೆ ಅವಕಾಶ ನೀಡಿಲ್ಲ. ಇದರಿಂದ ಅಭಿಮಾನಿ ದೇವರುಗಳಿಗೆ ಸಹಜವಾಗಿ ಬೇಸರವಾಗಿದೆ. ಇದರಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿಮಾನಿ ದೇವರುಗಳಿಗೋಸ್ಕರವೇ `ಅಪ್ಪು ನುಡಿನಮನ’ ಕಾರ್ಯಕ್ರಮ ಹಮ್ಮಿಕೊಳ್ಳೋದಕ್ಕೆ ನಿರ್ಧಾರ ಮಾಡಿದೆ. ಈ ಬಗ್ಗೆ ಇವತ್ತಿನ ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದಂತಹ ಸಾ.ರಾ ಗೋವಿಂದು ಅವರು ತಿಳಿಸಿದ್ದು, ದೊಡ್ಮನೆಯ ಜೊತೆಗೆ ಮಾತನಾಡಿ ಶೀಘ್ರದಲ್ಲೇ ಧ್ರುವತಾರೆಗೆ ನಮನ ಸಲ್ಲಿಸೋದಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ.