ದೊಡ್ಮನೆಯ ರಾಜರತ್ನ.. ಕರುನಾಡಿನ ಯುವರತ್ನ.. ಕೋಟ್ಯಾಂತರ ಭಕ್ತರ ಆರಾಧ್ಯದೈವ… ದಿವಂಗತ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ‘ನುಡಿ ನಮನ' ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿದೆ. ಗಂಧದಗುಡಿಯ ಸ್ಟಾರ್ನಟರುಗಳಾದ ರವಿಚಂದ್ರನ್-ದ್ವಾರಕೀಶ್-ದರ್ಶನ್-ಗಣೇಶ್-ದುನಿಯಾ ವಿಜಯ್-ಜಗ್ಗೇಶ್-ಶ್ರುತಿ-ತಾರಾ-ಸುಧಾರಾಣಿ-ಜಯಮಾಲಾ- ಬಿ.ಸರೋಜಾದೇವಿ ಸೇರಿದಂತೆ ಕನ್ನಡ ಕಲಾವಿದರು ಹಾಗೂ ಬಹುಭಾಷಾ ನಟ ಪ್ರಕಾಶ್ ರೈ-ಶರತ್ ಕುಮಾರ್-ಸಂಪತ್ ರಾಜ್-ಶ್ರೀಕಾಂತ್ ನಟ ವಿಶಾಲ್ ಸೇರಿದಂತೆ ಪರಭಾಷಾ ನಟರುಗಳು
‘ನಟಸಾರ್ವಭೌಮ’ನಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಖ್ಯಾತ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅಪ್ಪು ಮೇಲೆ ಗೀತೆ ರಚಿಸಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಅದ್ಬುತವಾಗಿ ಮೂಡಿಬಂದಿದೆ. ದೊಡ್ಮನೆ ಕುಟುಂಬಸ್ಥರು ಮಾತ್ರವಲ್ಲ ಕರುನಾಡಿನ ಪ್ರತಿಯೊಬ್ಬರ ಕಣ್ಣಂಚಲ್ಲೂ ಕಣ್ಣೀರು ತರಿಸುವ ಭಾವಪೂರ್ಣ ಗೀತೆ ನಿಮ್ಮ ಮುಂದೆ
ಮುತ್ತುರಾಜ ಹೆತ್ತ ಮುತ್ತೆ… ಎತ್ತ ಹೋದೆಯೋ..
ಅತ್ತು ಕರೆದರೂ… ಮತ್ತೆ ಬಾರದಾದೆಯೋ…
ಮರೆಯಲಾರೆವು ಎಂದು ನಿನ್ನ ಅಪ್ಪುಗೆ
ನೆನಪು ತುಂಬಿ ಹೋದೆ ದೂರದೂರಿಗೆ
ಸ್ವೀಕರಿಸು ನಮ್ಮ ಭಾಷ್ಪಾಂಜಲಿ-ಶ್ರದ್ಧಾಂಜಲಿ
ಮುಗುಳುನಗೆಯ ಬೀರುತ ಸ್ನೇಹ-ಪ್ರೀತಿ ಹಂಚುತ
ಕೋಟಿ ಕೋಟಿ ಮನಗಳಲಿ ಸೇರಿ ಹೋದೆ ಶಾಶ್ವತ
ಒಳ್ಳೆತನಕೆ ನೀನೇ ಸ್ಪೂರ್ತಿ ಎಲ್ಲಾ ತಲೆಮಾರಿಗೆ
ಬೆಟ್ಟದ ಹೂ ತರಲು ಹೋದೆ ಬಾರದೂರಿಗೆ
ಮತ್ತೆ ಹುಟ್ಟಿ ಬಾರಯ್ಯ ಯುವರತ್ನನೆ
ಕರುನಾಡೆ ನೆನೆಯುವುದು ನಿನ್ನ ಸಾಧನೆ
ಸ್ವೀಕರಿಸು ನನ್ನ ಪುಷ್ಪಾಂಜಲಿ-ಭಾವಾಂಜಲಿ
ವಿಧಿಯ ಕೆಟ್ಟ ಕಣ್ಣಿಗೆ ಕರುಣೆ ಇಲ್ಲದಾಯಿತು
ನೀನು ಇಲ್ಲದ ಈ ಕ್ಷಣ ತೆರೆಯು ಮೂಕವಾಯಿತು
ಎಂದಿಗೂ ಉಳಿಯುವೆ ನೀನು ಚರಿತೆಯ ಪುಟಗಳಲಿ
ಪುನೀತನಾದೆ ನೀನು ಮಾಡಿದ ಸೇವೆಯಲಿ
ಮತ್ತೆ ಹುಟ್ಟಿ ಬಾರಯ್ಯ ರಾಜಪುತ್ರನೆ
ಆಗಲೆ ನಿಲ್ಲುವುದು ನಮ್ಮ ವೇದನೆ
ಸ್ವೀಕರಿಸು ನಮ್ಮ ಭಾಷ್ಪಾಂಜಲಿ-ಭಾವಾಂಜಲಿ
ಮುತ್ತುರಾಜ ಹೆತ್ತ ಮುತ್ತೆ… ಎತ್ತ ಹೋದೆಯೋ..
ಅತ್ತು ಕರೆದರೂ… ಮತ್ತೆ ಬಾರದಾದೆಯೋ…
ಮರೆಯಲಾರೆವು ಎಂದು ನಿನ್ನ ಅಪ್ಪುಗೆ
ನೆನಪು ತುಂಬಿ ಹೋದೆ ದೂರದೂರಿಗೆ
ಸ್ವೀಕರಿಸು ನಮ್ಮ ಭಾಷ್ಪಾಂಜಲಿ-ಶ್ರದ್ಧಾಂಜಲಿ