ಮತ್ತಷ್ಟು ದಾಖಲೆ ಬರೆದ ಬೊಂಬೆ ಹೇಳುತ್ತೈತೆ ಹಾಡು! 100 ಮಿಲಿಯನ್ಸ್‌ ವೀಕ್ಷಣೆ ಪಡೆದ ಮೇಕಿಂಗ್‌ ವಿಡಿಯೋ!!


ಪುನೀತ್‌ ರಾಜಕುಮಾರ್‌ ಇಲ್ಲವೆಂಬ ಭಾವ ಯಾರಿಗೂ ಇಲ್ಲ. ದೈಹಿಕವಾಗಿ ಅವರಿಲ್ಲದಿದ್ದರೂ, ಎಲ್ಲರ ಹೃದಯದಲ್ಲಿ ಪುನೀತ್‌ ರಾಜಕುಮಾರ್‌ ನೆಲೆಸಿದ್ದಾರೆ. ಇದು ನಿಜ. ಅವರು ಏನೇ ಮಾಡಿದರೂ ದೊಡ್ಡ ಸುದ್ದಿಯೇ ಆಗುತ್ತಿತ್ತು. ಅವರು ಸಿನಿಮಾ ಮಾಡಲಿ, ಹಾಡು ಹಾಡಲಿ, ಡೈಲಾಗ್‌ ಹೇಳಲಿ, ಡ್ಯಾನ್ಸ್‌ ಮಾಡಲಿ, ಫೈಟ್‌ ಮಾಡಲಿ ಏನೂ ಮಾಡಿದರೂ ಜನ ಸೈ ಎನ್ನುತ್ತಿದ್ದರು. ಖುಷಿಯಿಂದಲೇ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದರು. ಅವರಿಲ್ಲದಿದ್ದರೂ, ಆ ಸಂಭ್ರಮ ನಿರಂತರವಾಗಿರುತ್ತೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಪುನೀತ್‌ ಇಲ್ಲ ಅಂದುಕೊಳ್ಳದ ಅವರ ಅಭಿಮಾನಿಗಳು ಮತ್ತು ನಾಡಿನ ಜನ, ಅವರ ಸಿನಿಮಾಗಳನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಹಾಡುಗಳನ್ನು ಪುನಃ ಕೇಳುತ್ತಲೇ ಇದ್ದಾರೆ. ಅವರ ಮಾತುಗಳನ್ನು ಕೇಳಿ ಅದೆಷ್ಟೋ ಮಂದಿ ಕಣ್ಣೀರಾಗಿದ್ದಾರೆ. ಈಗ ಮತ್ತೊಂದು ದಾಖಲೆಯ ವಿಷಯ ಏನೆಂದರೆ, ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೆ ಹಾಡು ದೊಡ್ಡ ದಾಖಲೆ ಬರೆದಿದೆ.

ಹೌದು, ರಾಜಕುಮಾರ ಸಿನಿಮಾ ಪುನೀತ್ ರಾಜ್‌ಕುಮಾರ್ ಅವರ 42ನೇ ಹುಟ್ಟುಹಬ್ಬ ಸಂಭ್ರಮದ ಬಳಿಕ ರಿಲೀಸ್ ಆಗಿತ್ತು. ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ್ದ ಈ ಚಿತ್ರ ದೊಡ್ಡ ಸುದ್ದಿ ಮಾಡಿತ್ತು. ಅನೇಕ ದಾಖಲೆಗಳನ್ನೂ ಬರೆದಿತ್ತು. ಈ ಸಿನಿಮಾ ರಿಲೀಸ್‌ ಆಗುವ ಮೊದಲೇ ದೊಡ್ಡ ಸೌಂಡ ಮಾಡಿತ್ತು. ಅದಕ್ಕೆ ಕಾರಣ, ಬೊಂಬೆ ಹೇಳುತೈತೆ ಹಾಡು. ಹೌದು, ಈ ಹಾಡಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದರು. ಗಾಯಕ ವಿಜಯ್ ಪ್ರಕಾಶ್ ಹಾಡಿದ್ದರು.

ಬೊಂಬೆ ಹೇಳುತೈತೆ ಹಾಡಿನ ಮೇಕಿಂಗ್ ಝಲಕ್ ರಿಲೀಸ್ ಮಾಡಿದ್ದರಿಂದ ಜನರು ಈ ಹಾಡನ್ನೇ ಗುನುಗುವ ಮೂಲಕ ಸಿನಿಮಾ ರಿಲೀಸ್‌ಗೆ ಕಾದಿದ್ದರು. ನಂತರ ಸಿನಿಮಾ ಬಿಡುಗಡೆಯಾದ ಬಳಿಕ ಹಾಡು ಸೂಪರ್‌ ಹಿಟ್‌ ಲಿಸ್ಟ್‌ಗೆ ಸೇರಿತ್ತು. ಈ ಹಾಡು ಈಗ ಮತ್ತಷ್ಟು ಜನಪ್ರಿಯವಾಗಿದೆ ಅನ್ನೋದೇ ವಿಶೇಷ. ಯುಟ್ಯೂಬ್‌ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಭಾರತದಲ್ಲಿ ಮೇಕಿಂಗ್ ವಿಡಿಯೋಗೆ ಇಷ್ಟೊಂದು ವೀವ್ಸ್ ಸಿಕ್ಕಿರುವುದು ವಿಶೇಷತೆಗಳಲ್ಲೊಂದು. ಅದೇನೆ ಇರಲಿ, ಅಪ್ಪು ಫ್ಯಾನ್ಸ್‌ ಮಾತಲ್ಲಿ ಅಪ್ಪು ಸದಾ ರಾಜಕುಮಾರ.

Related Posts

error: Content is protected !!