ನಟ ಶರಣ್ ಸದ್ಯ ಕಾಮಿಡಿ ಹೀರೋ ಆಗಿಯೇ ಫೇಮಸ್. ಅವರು ಹಾಸ್ಯ ನಟರಾಗಿಯೂ ಸೈ ಎನಿಸಿಕೊಂಡವರು. ತೆರೆ ಮೇಲೆ ಹೀರೋ ಆಗಿ ಯಾವಾಗ ಕಾಣಿಸಿಕೊಂಡರೋ, ಅಲ್ಲಿಂದ ಎಂದೂ ಹಿಂದಿರುಗಿ ನೋಡೇ ಇಲ್ಲ. ಅವರು ಹೀರೋ ಆಗಿ ನಟಿಸಿದ ಸಿನಿಮಾಗಳೆಲ್ಲವೂ ಯಶಸ್ವಿಯಾಗಿವೆ. ಆ ಸಾಲಿಗೆ ಈಗ “ಅವತಾರ ಪುರುಷ” ಸಿನಿಮಾ ಕೂಡ ಸೇರುವ ನಂಬಿಕೆ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಚಿತ್ರ ಇದೀಗ ರಿಲೀಸ್ಗೆ ರೆಡಿಯಾಗಿದೆ. ಸೆನ್ಸಾರ್ ಮುಗಿಸಿದ ಅವತಾರ ಪುರುಷ ಡಿಸೆಂಬರ್ 10ಕ್ಕೆ ಪ್ರೇಕ್ಷಕರ ಎದುರು ಬರುತ್ತಿದೆ.
ಅಫಿಶಿಯಲ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅವತಾರ ಪುರುಷ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಸದ್ಯ ಚಿತ್ರತಂಡ ಈ ದಿನಾಂಕ ಘೋಷಣೆ ಮಾಡುವುದರ ಜೊತೆಗೆ ಭರ್ಜರಿಯಾಗಿಯೇ ಚಿತ್ರದ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿದೆ. ಹೌದು, ಚಿತ್ರ ಆರಂಭದಿಂದಲೂ ಸಾಕಷ್ಟು ಸುದ್ದಿ ಮಾಡಿದೆ. ಅದರಲ್ಲೂ ಶೀರ್ಷಿಕೆಯಿಂದಲೇ ಸಿನಿಮಾ ಒಂದಷ್ಟು ಕುತೂಹಲ ಮೂಡಿಸಿರುವುದಂತೂ ನಿಜ. ಇನ್ನೊಂದು ನಿರೀಕ್ಷೆಗೆ ಕಾರಣ, ಸಿಂಪಲ್ ಸುನಿ ಈ ಚಿತ್ರವನ್ನು ನಿರ್ದೇಶನ ಮಾಡಿರುವುದು.
ಅಷ್ಟೇ ಅಲ್ಲ, ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದ ಸಿನಿಮಾ ಅಂದಮೇಲೆ, ಅಲ್ಲಿ ವಿಶೇಷ ಕಂಟೆಂಟ್ ಇದ್ದೇ ಇರುತ್ತೆ. ಅಂಥದ್ದೊಂದು ಕಥೆ ಮತ್ತು ಚಿತ್ರಕಥೆ ಇರುವ ಅವತಾರ ಪುರುಷ, ಡಿಸೆಂಬರ್ 10ರಂದು ರಾಜ್ಯಾದ್ಯಂತ ಅಬ್ಬರಿಸಲಿದ್ದಾನೆ. ಈ ಸಿನಿಮಾಗೆ ಶರಣ್ ಹೀರೋ. ಅವರಿಗೆ ಆಶಿಕಾ ರಂಗನಾಥ್ ನಾಯಕಿ. ಉಳಿದಂತೆ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸುಧಾರಣಿ, ಭವ್ಯ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಶರಣ್ ಇಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಅನ್ನುವುದೇ ವಿಶೇಷ. ಅದು ಯಾವುದು ಎಂಬುದನ್ನು ತೆರೆಮೇಲೆಯೇ ಕಾಣಬೇಕು.