ಚಿತ್ರ ವಿಮರ್ಶೆ; ವಿಶಾಲಾಕ್ಷಿ
ಟಾಮ್ ಅಂಡ್ ಜರ್ರಿ ಈ ವಾರ ಬೆಳ್ಳಿತೆರೆಗೆ ಲಗ್ಗೆ ಇಟ್ಟಿರುವ ಸಿನ್ಮಾ. ಫಸ್ಟ್ ಡೇ ಫಸ್ಟ್ ಶೋ ಸಿನ್ಮಾ ನೋಡಿ ಥಿಯೇಟರ್ನಿಂದ ಹೊರಗಡೆ ಬಂದವರು `ಟಾಮ್ ಅಂಡ್ ಜರ್ರಿ’ಗೆ ಜೈಕಾರ ಹಾಕಿದ್ದಾರೆ. ಮಿಡಲ್ಕ್ಲಾಸ್ ಹುಡುಗನ ಈ ಕಥೆ ಗಾಂಧಿಕ್ಲಾಸ್ಗೂ ಸೈ ಮಲ್ಟಿಪ್ಲೆಕ್ಸ್ಗೂ ಜೈ ಎಂದು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಮೂರು ದಿನದ ಬದುಕೆಂಬ ಸಂತೆಯಲ್ಲಿ ಹೇಗ್ ಬದುಕಬೇಕು? ಯಾವ್ ರೀತಿ ಬದುಕಿದರೆ ಜೀವನ ಸುಂದರವಾಗಿರುತ್ತೆ? ಜೀವನದಲ್ಲಿ ಯಾವುದರ ಹಿಂದೆ ಓಡಬೇಕು? ಬದುಕನ್ನು ಯಾವ್ ರೀತಿಯಾಗಿ ಶ್ರೀಮಂತಗೊಳಿಸಿಕೊಳ್ಳಬಹುದು? ಲೈಫ್ನಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ಬೇಕು? ಅದರಿಂದ ಪ್ರತಿಯಾಗಿ ನಮಗೆ ಏನ್ ಸಿಗುತ್ತೆ? ಪ್ರಾಮುಖ್ಯತೆ ಕೊಡದೇ ಇದ್ದರೆ ಏನಾಗುತ್ತೆ? ಮುಂದಿನ ದಿನಗಳಲ್ಲಿ ಯಾವ್ ರೀತಿಯಾಗಿ ಪಶ್ಚಾತಾಪ ಪಡಬೇಕಾಗುತ್ತೆ? ಎನ್ನುವುದನ್ನು ಯುವನಿರ್ದೇಶಕ ರಾಘವ್ ವಿನಯ್ ಶಿವಗಂಗೆ ದೊಡ್ಡ ಪರದೆ ಮೇಲೆ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
‘ಟಾಮ್ ಅಂಡ್ ಜರ್ರಿ'ಚಿತ್ರದಲ್ಲಿ ಧರ್ಮ(ನಿಶ್ಚಿಕ್ ಕೊರೋಡಿ)ಅನಾಥ ಯುವಕ. ಹೆತ್ತವರಿಲ್ಲದೇ ಅನಾಥಾಶ್ರಮದಲ್ಲಿ ಬೆಳೆಯೋ ಇವನಿಗೆ ಬಾಲ್ಯದಿಂದಲೇ ದೊಡ್ಡಮನುಷ್ಯ ಎನಿಸಿಕೊಳ್ಳುವ ಕನಸಿರುತ್ತೆ.ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಅಂತ ಸ್ನೇಹಿತರ ಜೊತೆ ಹೇಳಿಕೊಳ್ಳುತ್ತಿರುತ್ತಾನೆ.ಆಶ್ರಮದಲ್ಲೇ ಬೆಳೆಯುವಾಗ ಧರ್ಮನನ್ನು ಶ್ರೀಮಂತ ಮನೆತನದವರು ದತ್ತು ಪಡೆಯುತ್ತಾರೆ.ಅದರಂತೇ,ಅದೇ ಆಶ್ರಮದಲ್ಲಿ ಅನಾಥೆಯಾಗಿ ಬೆಳೆಯುತ್ತಿದ್ದ ಸತ್ಯ(ಚೈತ್ರ ರಾವ್)ನ ಕೂಡ ಶ್ರೀಮಂತ ಕುಟುಂಬದ ದಂಪತಿಗಳು ದತ್ತು ಪಡೆಯುತ್ತಾರೆ.ಇವರಿಬ್ಬರು ಆಶ್ರಮದಲ್ಲಿದ್ದಾಗ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ.
ಆದರೆ,ಇಬ್ಬರನ್ನೂ ಬೇರೆ ಬೇರೆ ದಂಪತಿಗಳು ದತ್ತು ಪಡೆದ ಕಾರಣಕ್ಕೆ ದೂರ ದೂರ ಆಗ್ಬಿಡ್ತಾರೆ.ಹೀಗೆ,ಬಾಲ್ಯದಲ್ಲೇ ಬೇರೆ ಬೇರೆಯಾದ ಸತ್ಯ ಹಾಗೂ ಧರ್ಮ ಬೆಳೆದು ದೊಡ್ಡವರಾದ ಮೇಲೆ ಮತ್ತೆ ಸಿಗ್ತಾರೆ.ಸತ್ಯ ತುಂಬಾ ಶ್ರೀಮಂತರ ಮನೆಯಲ್ಲಿ ಬೆಳೆದಿರ್ತಾಳೆ ಅವಳಿಗೆ ಯಾವುದಕ್ಕೂ ಕೊರತೆಯಿರೋದಿಲ್ಲ.ಆದರೆ, ಧರ್ಮನನ್ನು ದತ್ತು ಪಡೆದವರು ನಡೆಸುತ್ತಿದ್ದ ಕಂಪನಿಗೆ ಬೆಂಕಿಬಿದ್ದು ಬೀದಿಗೆ ಬಂದಿರುತ್ತಾರೆ.ಹೀಗಾಗಿ,ಧರ್ಮ ತನಗೆ ಇಷ್ಟವಿಲ್ಲದಿದ್ದರೂ ಕೂಡ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಿಕೊಂಡರ್ತಾನೆ.ಇದೇ ಹೊತ್ತಿಗೆ ಬಾಲ್ಯದ ಗೆಳತಿ
‘ಸತ್ಯ’ ಪುನಃ ಸಿಗ್ತಾಳೆ. ಆಕೆಯ ಮೇಲೆ ಧರ್ಮನಿಗೆ ಲವ್ವಾಗುತ್ತೆ.
ಅಂದ್ಹಾಗೇ, ಸತ್ಯ ಮತ್ತು ಧರ್ಮ ಇಬ್ಬರದ್ದು ಅಪೋಸಿಟ್ ಕ್ಯಾರೆಕ್ಟರ್. ಬದುಕನ್ನು ಇಬ್ಬರು ನೋಡುವ ರೀತಿಯೇ ಬೇರೆ ಬೇರೆ. ಇಬ್ಬರ ಯೋಚನೆ-ಆಲೋಚನೆಗಳೇ ಡಿಫರೆಂಟ್. ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಎನ್ನುವುದು ಧರ್ಮನ ನೇಚರ್ ಮತ್ತು ಕನಸು ಆದರೆ, ಕಾರಿದ್ದರೂ ಕಾಲಲ್ಲಿಓಡಾಡುತ್ತಾ ಬಿಂದಾಸ್ ಆಗಿ ಬದುಕುವ ಸ್ವಭಾವ ಸತ್ಯಾಳದ್ದು. ಅನಾಥೆಯಾದರೂ ಶ್ರೀಮಂತ ಕುಟುಂಬದಲ್ಲಿ ಬೆಳೆದ ಈಕೆಗೆ ರಾಯಲ್ ಲೈಫ್ ಬೋರೆದ್ದು ಹೋಗಿರುತ್ತೆ. ಕಣ್ಣು ಆಸೆ ಪಟ್ಟಿದ್ದು, ಮನಸ್ಸು ಕೇಳಿದ್ದು ಕ್ಷಣಾರ್ಧದಲ್ಲಿ ಸಿಕ್ಕಿದ್ದರಿಂದ ಈಕೆಗೆ ಶ್ರೀಮಂತಿಕೆಯ ಮೇಲೆ ಒಂದು ರೀತಿ ಆಲಸ್ಯ ಹುಟ್ಟಿರುತ್ತೆ.
ಹೃದಯ ಏನ್ ಬಯಸುತ್ತೋ ಅದು ಕ್ಷಣಾರ್ಧದಲ್ಲಿ ಸಿಗ್ಬಾರ್ದು ಅದಕ್ಕಾಗಿ ಕಾತುರದಿಂದ ಕಾಯಬೇಕು ಎನ್ನುವ ವಾದ ಈಕೆಯದ್ದು. ಆದರೆ, ಇಷ್ಟಪಟ್ಟಿದ್ದು ಕ್ಷಣಾರ್ಧದಲ್ಲಿ ಸಿಗ್ಬೇಕು, ಜೀವನ ಒಂದೇ ಸಿಲ ಸಿಗೋದು ಸರಿಯಾಗಿ ಎಂಜಾಯ್ ಮಾಡ್ಬೇಕು ಎನ್ನುವುದು ಧರ್ಮನ ವಾದ. ಹೀಗೆ ವಿರುದ್ದ ದಿಕ್ಕಿನಲ್ಲಿ ಸಾಗಬಯಸುವ ಇವರಿಬ್ಬರು ಒಂದಾಗ್ತಾರಾ? ಪ್ರೀತಿಸಿದ ಇವರಿಬ್ಬರು ಜೊತೆಯಾಗ್ತಾರಾ? ಈ ಕೂತೂಹಲದ ಪ್ರಶ್ನೆಗೆ ಉತ್ತರ ಬೇಕು ಅಂದರೆ ಕೂಲ್ಡ್ರಿಂಕ್ಸ್ ಜೊತೆ ಪಾಪ್ಕಾರ್ನ್ ತಗೊಂಡು ನೀವು ಕೂಡ ಥಿಯೇಟರ್ಗೆ ಬನ್ನಿ
ಟಾಮ್ ಅಂಡ್ ಜರ್ರಿ ಇಬ್ಬರು ದೂರ ಆಗ್ತಾರಾ ಅಥವಾ ಇಬ್ಬರು ಜೊತೆಯಾಗ್ತಾರಾ ಅನ್ನೋದಲ್ಲ ಕಥೆ. ಈ ಸಿನಿಮಾದಿಂದ ಜೀವನಕ್ಕೆ- ಬದುಕಿಗೆ ಒಂದು ಸಂದೇಶ ಇದೆ. ಮಿಡಲ್ಕ್ಲಾಸ್-ಹೈಕ್ಲಾಸ್ ಅಂತ ನೋಡದೇ, ಶ್ರೀಮಂತ ಹಾಗೂ ಬಡವ ಎಂದು ಭೇದ-ಭಾವ ಮಾಡದೇ ಹೇಗ್ ಬದುಕಬೋದು? ದೊಡ್ಡ ಮನುಷ್ಯನಾಗ್ಬೇಕು ಎಂದು ಬಯಸುವವರು ಮೊದಲು ಯಾವುದರಲ್ಲಿ ದೊಡ್ಡಮನುಷ್ಯ ಎನಿಸಿಕೊಳ್ಳಬೇಕು? ಸುತ್ತ-ಮುತ್ತಲಿನವರಿಗೆ ಯಾವ್ ರೀತಿಯಾಗಿ ಪ್ರೀತಿ ಹಂಚಬೇಕು? ಭಾವನೆಗಳಿಗೆ ಹೇಗೆ ಬೆಲೆಕೊಟ್ಟು ಬದುಕಬೇಕು? ರಕ್ತ ಸಂಬಂಧಿಗಳಲ್ಲದೇ ಹೋದರೂ ಕೂಡ ಆ ಸಂಬಂಧಕ್ಕೆ ಎಂತಹ ವ್ಯಾಲ್ಯೂ ಕೊಡಬೇಕು? ಹೆಣ್ಣಿಗೆ ಎಷ್ಟು ಗೌರವ ಕೊಡಬೇಕು? ಇದೆಲ್ಲದರ ಜೊತೆಗೆ ತಮ್ಮೊಳಗೆ ತಮ್ಮನ್ನು ಕಂಡುಕೊಳ್ಳುವುದು ಹೇಗೆ? ಸಂತೋಷ ಕಾಣುವುದು ಹೇಗೆ? ನಿಸ್ವಾರ್ಥದಿಂದ-ಖುಷಿಯಿಂದ ಬದುಕುವುದು ಹೇಗೆ ಎನ್ನುವುದನ್ನು ಅಚ್ಚುಕಟ್ಟಾಗಿ ಪ್ರಸೆಂಟ್ ಮಾಡಿದ್ದಾರೆ. ತಾವು ಕಂಡಿದ್ದು-ಕೇಳಿದ್ದು-ನೋಡಿದ್ದು-ಅನುಭವಿಸಿದ್ದು ಎಲ್ಲವನ್ನೂ ಸಿನಿಮಾವಾಗಿಸಿ ಪ್ರೇಕ್ಷಕರಿಗೆ ಜೀವನದ ಪಾಠ ಮಾಡಿದ್ದಾರೆ. ತಂದೆ-ತಾಯಿ ಪ್ರೀತಿಯನ್ನು ಅಮೋಘವಾಗಿ ಕಟ್ಟಿಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಗುರ್ತಿಸಿಕೊಂಡು, ಕೆಜಿಎಫ್ ಸಿನಿಮಾಗೆ ಡೈಲಾಗ್ ರೈಟರ್ ಆಗಿದ್ದ ನಿರ್ದೇಶಕ ರಾಘವ್ ವಿನಯ್ ಶಿವಗಂಗೆಗೆ ‘ಟಾಮ್ ಅಂಡ್ ಜರ್ರಿ'ಚೊಚ್ಚಲ ಸಿನ್ಮಾ.ಮೊದಲ ಪ್ರಯತ್ನದಲ್ಲೇ ಒಂದು ಮಟ್ಟಿಗೆ ಸಕ್ಸಸ್ ಕಂಡಿದ್ದಾರೆ.ಮಿಡಲ್ ಕ್ಲಾಸ್ ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ನಿಶ್ಚಿತ್ ಕೊರೋಡಿ ಭರವಸೆ ಮೂಡಿಸಿದ್ದಾರೆ.ಈ ನಟನ ಸ್ಕ್ರೀನ್ ಪ್ರಸೆನ್ಸ್ ನೋಡಿದರೆ ಗಂಧದಗುಡಿಯಲ್ಲಿ ಗಟ್ಟಿಯಾಗಿ ನೆಲೆಯೂರೋದು ಗ್ಯಾರಂಟಿ ಎನಿಸುತ್ತೆ.ಇನ್ನೂ ನಾಯಕಿ ಸತ್ಯ ಪಾತ್ರಧಾರಿ ಚೈತ್ರಾ ಮುದ್ದಾಗಿ ಅಭಿನಯಿಸಿದ್ದಾರೆ.ಸ್ಕ್ರೀನ್ ಮೇಲೆ ಚೆಂದ ಕಾಣಿಸ್ತಾರೆ, ಕುಡಿನೋಟದಲ್ಲೇ ದಿಲ್ ಕದಿಯುವ ಚಾಕಚಾಕ್ಯತೆ ಚೈತ್ರಾಗಿದೆ. ಅಮ್ಮನ ಪಾತ್ರದಲ್ಲಿ ತಾರಮ್ಮ ಅವ್ರದ್ದು ಅದ್ಭುತ ಅಭಿನಯ.ಕಡ್ಡಿಪುಡ್ಡಿ ಚಂದ್ರು ಅಳುಸ್ತಾರೆ,ಪ್ರಕಾಶ್ ತುಮ್ಮಿನಾಡು ನಗುಸ್ತಾರೆ.ಜೈ ಜಗದೀಶ್,ರಾಕ್ಲೈನ್ ಸುಧಾಕರ್,ಕೋಟೆ ಪ್ರಭಾಕರ್,ಸಂಪತ್ ಮೈತ್ರೇಯ,ಪದ್ಮಜಾ ರಾವ್,ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಅವರವರ ಪಾತ್ರಕ್ಕೆ ಉಸಿರು ತುಂಬಿದ್ದಾರೆ.ಇವರೊಟ್ಟಿಗೆ ಸಂಪೂರ್ಣ ಹೊಸಬರ ತಂಡವಿದ್ದು
`ಟಾಮ್ ಅಂಡ್ ಜರ್ರಿ’ ಗಾಗಿ ಶ್ರಮಿಸಿದ್ದಾರೆ. ನವ ಪ್ರತಿಭೆಗಳಿಗೆ ಚಾನ್ಸ್ ಕೊಡಬೇಕು ಅಂತ `ರಿದ್ಧಿ ಸಿದ್ಧಿ ಫಿಲಂಸ್ನ ರಾಜು ಶೇರಿಗಾರ್ ಉದಾರತೆ ತೋರಿದ್ದಾರೆ.
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮ್ಯಾಥ್ಯೂಸ್ ಮನು ಸಂಗೀತ ಸಂಯೋಜಿಸಿದ್ದಾರೆ. `ಹಾಯಾಗಿದೆ ಎದೆಯೊಳಗೆ'ಹಾಡು ಮತ್ತು ತಾಯಿ ಸೆಂಟಿಮೆಂಟ್ ಇರುವ
`ಜಗದ ಜೋಲಿಯ ತೂಗುವ ಕೈಗಳೇ’ ಸಾಂಗ್ ಪ್ರೇಕ್ಷಕರನ್ನು ಕಟ್ಟಿಹಾಕುತ್ತವೆ. ಸಂಕೇತ್ ಕ್ಯಾಮೆರಾ ವರ್ಕ್ ಚೆನ್ನಾಗಿದೆ, ಹೀರೋ-ಹೀರೊಯಿನ್ನಾ ಚೆನ್ನಾಗಿ ತೋರಿಸಿದ್ದಾರೆ. ಸೂರಜ್ ಅಂಕೊಲೇಕರ್ ಸಂಕಲನ ಇನ್ನೊಂದಿಷ್ಟು ಶಾರ್ಪ್ ಆಗ್ಬೇಕಿತ್ತು. ಅರ್ಜುನ್ ರಾಜ್ ಸಾಹಸ ಸೂಪರ್. `ಸಾವಿಗಿಂತ ರೆಸ್ಟ್ ಇಲ್ಲ.. ಸ್ಮಶಾನಕ್ಕಿಂತ ಒಳ್ಳೆ ರೆಸಾರ್ಟ್ ಇಲ್ಲ’ ಎನ್ನುವಂತಹ ಡೈಲಾಗ್ಗಳಿವೆ. ಆದರೆ, ನಿರ್ದೇಶಕರು ಹೀರೋ ಪಾತ್ರಕ್ಕೆ ಕ್ಲ್ಯಾರಿಟಿ ಕೊಡುವಲ್ಲಿ ಇನ್ನೊಂದಿಷ್ಟು ಇಂಟ್ರೆಸ್ಟ್ ತೋರಿಸಬೇಕಿತ್ತು. ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಅಂದರೆ ನೀನು ಈ ಕೆಲಸ ಮಾಡ್ಬೇಕಪ್ಪ ಅಂತ ಪಾತ್ರವನ್ನು ಗಟ್ಟಿಗೊಳಿಸಬೇಕಿತ್ತು. ಹೀರೋ-ಹೀರೋಯಿನ್ ಮಧ್ಯೆ ಒಂದಿಷ್ಟು ರೊಮ್ಯಾನ್ಸ್ ಇಡಬೇಕಿತ್ತು. ಬಿಎಂಟಿಸಿ ಬಸ್ ಸೀನ್ಗಳಲ್ಲಿ ನಡೆಯುವ ಸಂಭಾಷಣೆ ಕಡಿಮೆಯಾಗಬೇಕಿತ್ತು. ಇದು ಹೊರೆತುಪಡಿಸಿದರೆ ಸಿನಿಮಾ ಆಲ್ ಓಕೆನೇ. ಇಲ್ಲಿವರೆಗೂ ಹೊಸಬರ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಟಾಮ್ ಅಂಡ್ ಜರ್ರಿಗೂ ಅದೇ ಸಕ್ಸಸ್ ಸಿಗುತ್ತಾ ಒಂದು ವಾರ ಕಾಯಬೇಕು.
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ