ದೊಡ್ಮನೆ ಹುಡುಗನ ನೆನೆದ ಸ್ಯಾಂಡಲ್‌ವುಡ್ ಸಿಂಡ್ರೆಲಾ; ಹೃದಯ ಒಪ್ಪಿಕೊಳ್ತಿಲ್ಲ ಅಪ್ಪು ಸಾರ್- ರಾಧಿಕಾ ಭಾವುಕ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ದೊಡ್ಮನೆಗೆ ಮಾತ್ರವಲ್ಲ ಕರುನಾಡಿಗೆ ಮತ್ತು ಕನ್ನಡ ಇಂಡಸ್ಟ್ರಿಗೆ ತುಂಬಲಾರದ ನಷ್ಟ. ಮನೆ ಮಗನನ್ನು ಕಳೆದುಕೊಂಡು ದೊಡ್ಮನೆ ಅದೆಷ್ಟು ನೋವು-ಸಂಕಟ-ದುಃಖ ಪಡುತ್ತಿದೆಯೋ, ಅಷ್ಟೇ ದುಃಖ-ನೋವು-ಸಂಕಟವನ್ನು ಇಡೀ ಕರುನಾಡು ಅನುಭವಿಸುತ್ತಿದೆ. ಇದಕ್ಕೆ ಗಂಧದಗುಡಿ ಕೂಡ ಹೊರತಾಗಿಲ್ಲ. ಚೆಂದದ ಚಂದನವನದಲ್ಲಿ ಒಂದೇ ಕುಟುಂಬದಂತಿದ್ದ ಕಲಾವಿದರೆಲ್ಲರೂ ಕೂಡ ತಮ್ಮ ಮನೆಯ ಸದಸ್ಯನನ್ನು ಕಳೆದುಕೊಂಡು ಕಣ್ಣೀರಾಗುತ್ತಿದ್ದಾರೆ. ಅಪ್ಪು ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಅಂಜನಿಪುತ್ರನೊಟ್ಟಿಗೆ ಕಳೆದ ಸುಮಧುರ ಕ್ಷಣಗಳನ್ನು ಕಣ್ಮುಂದೆ ತಂದುಕೊಂಡು ದುಃಖಿತರಾಗುತ್ತಿದ್ದಾರೆ. ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಪವರ್‌ಸ್ಟಾರ್ ನೆನೆದು ಭಾವುಕರಾಗಿದ್ದಾರೆ.

ರಾಧಿಕಾ ಪಂಡಿತ್ ಮನಸ್ಸಿನ ಮಾತು

ನಮ್ಮ ಮಧ್ಯೆ ನೀವಿಲ್ಲ, ಇನ್ಮುಂದೆ ದೈಹಿಕವಾಗಿ ನಮ್ಮೊಡನೆ ಇರುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳೋದಕ್ಕೆ ನಮ್ಮ ಹೃದಯಾನೇ ತಯ್ಯಾರಿಲ್ಲ ಅಪ್ಪು ಸಾರ್. ಅಂದ್ಹಾಗೇ, ಈ ಕಟು ಸತ್ಯವನ್ನು ನಂಬೋದಕ್ಕೂ- ಅರಗಿಸಿಕೊಳ್ಳೋದಕ್ಕೆ ಧೈರ್ಯ ಸಾಲುತ್ತಿಲ್ಲ. ನೀವಿಲ್ಲದ ಇಂಡಸ್ಟ್ರಿಯನ್ನು ನೆನಪಿಸಿಕೊಳ್ಳೋದಕ್ಕೆ ಅಸಾಧ್ಯ. ಎಲ್ಲವೂ ಮೊದಲಿನಂತೆ ಇರೋದಕ್ಕೆ ಸಾಧ್ಯವೇ ಇಲ್ಲ ಬಿಡಿ. ನಿಮ್ಮೊಟ್ಟಿಗೆ ಅಭಿನಯಿಸೋದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಮತ್ತು ಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮನ್ನು ನಾವು ಎಷ್ಟು ಮಿಸ್‌ಮಾಡಿಕೊಳ್ಳುತ್ತಿದ್ದೇವೋ ನೀವು ನಮ್ಮೆಲ್ಲರನ್ನು ಅಷ್ಟೇ ಮಿಸ್ ಮಾಡಿಕೊಳ್ತೀರಿ ಎನ್ನುವ ಭಾವನೆ ನನ್ನದು. ನೆನಪುಗಳ ಮೂಲ ಎಂದಿಗಿಂತಕೂ ನೀವೀಗ ಸನಿಹವಾಗಿದ್ದೀರಿ ಅಪ್ಪು ಸಾರ್.

ತಮ್ಮ ಮನಸ್ಸಿನ ಭಾವನೆಯನ್ನು ಈ ರೀತಿಯಾಗಿ ಬರಹದ ಮೂಲಕ ಹೊರಹಾಕಿರುವ ರಾಧಿಕಾ, ದೊಡ್ಮನೆ ಹುಡುಗ ಪ್ರೆಸ್ಮೀಟ್ ಹಾಗೂ ಸೀಮಂತದ ಪಟಗಳನ್ನು ಹಂಚಿಕೊಂಡಿದ್ದಾರೆ. ಪವರ್‌ಸ್ಟಾರ್‌ಗೆ ರಾಧಿಕಾ ಕೋ ಸ್ಟಾರ್ ಮಾತ್ರವಲ್ಲ ದೊಡ್ಮನೆ ಕುಟುಂಬದ ಜೊತೆಗೆ ರಾಕಿಂಗ್ ದಂಪತಿಗೆ ಅವಿನಾಭಾವ ಸಂಬಂಧವಿದೆ ಹಾಗೂ ಆತ್ಮೀಯವಾದ ನಂಟಿದೆ. ಅಂದ್ಹಾಗೇ, ರಾಧಿಕಾ ಹಾಗೂ ಪವರ್ ಜೋಡಿ `ದೊಡ್ಮನೆ ಹುಡುಗ’ ಸಿನಿಮಾದ ಮೂಲಕ ಮಾಡಿದ ಮೋಡಿ ಎಂತಹದ್ದು ಎನ್ನುವುದು ನಿಮಗೆಲ್ಲ ಗೊತ್ತೆಯಿದೆ. ಇವರಿಬ್ಬರ ಜೋಡಿನಾ ಅಭಿಮಾನಿಗಳಿಗಿಂತ ಮೊದಲೇ ರಾಕಿಂಗ್‌ಸ್ಟಾರ್ ಮೆಚ್ಚಿಕೊಂಡಿದ್ದರು. ಯುವರತ್ನನ ಜೊತೆಗೆ ಹೆಜ್ಜೆಹಾಕಿ ಬೆಳ್ಳಿತೆರೆಗೆ ಕಿಚ್ಚು ಹಚ್ಚಿದ್ದನ್ನು ಕಂಡು ರಾಕಿಂಗ್‌ಸ್ಟಾರ್ ಬೆಕ್ಕಸ ಬೆರಗಾಗಿದ್ದರು.

ಸುದ್ದಿಗೋಷ್ಟಿಯಲ್ಲಿ ಯಶ್ ಒಮ್ಮೆ ಮಾತನಾಡುತ್ತಾ ರಾಧಿಕಾ ಹಿಂದೆಂದಿಗಿಂತಲೂ ಚೆನ್ನಾಗಿ ಕಾಣಿಸಿಕೊಂಡಿದ್ದಾಳೆ ಮಾತ್ರವಲ್ಲ ನಟಸಾರ್ವಭೌಮನ ಎನರ್ಜಿಗೆ ಮ್ಯಾಚ್ ಆಗುವಂತೆ ಡ್ಯಾನ್ಸ್ ಕೂಡ ಮಾಡಿದ್ದಾಳೆ ಎಂದು ಕೊಂಡಾಡಿದ್ದರು. ಪತಿದೇವರ ಕಾಂಪ್ಲಿಮೆಂಟ್ ಕೇಳಿ ರಾಧಿಕಾ ದಿಲ್ ಖುಷ್ ಆಗಿದ್ದರು. ಫ್ಯಾನ್ಸ್ ಬಾಯಲ್ಲಿತ್ರಾಸ್ ಅಕ್ಕತಿ’ ಹಾಡು ನಲಿದಾಡಿದ್ಮೇಲಂತೂ ಇನ್ನೂ ಸಂಭ್ರಮಪಟ್ಟರು. ಇದಾಗಿ ಮೂರು ತಿಂಗಳು ಅಷ್ಟೇ ರಾಕಿಭಾಯ್ ಜೊತೆ ರಾಧಿಕಾ ಹಸೆಮಣೆ ಏರಿದರು. ರಾಮಾಚಾರಿನಾ ಕೈ ಹಿಡಿದ್ಮೇಲೆ `ಆದಿಲಕ್ಷ್ಮಿ ಪುರಾಣ’ ಚಿತ್ರವೊಂದಕ್ಕೆ ಬಣ್ಣ ಹಚ್ಚಿದರು. ಸದ್ಯ, ಬಣ್ಣದ ಲೋಕದಿಂದ ಕೊಂಚ ದೂರ ಉಳಿದಿದ್ದಾರೆ. ಮನೆ-ಮಕ್ಕಳು-ಸಂಸಾರ ಅಂತ ಫ್ಯಾಮಿಲಿ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ನಟಿ ರಮ್ಯಾರಂತೆ ರಾಧಿಕಾಗೂ ಪವರ್‌ಸ್ಟಾರ್ ಜೊತೆ ಮತ್ತೊಂದು ಚಿತ್ರ ಮಾಡುವ ಆಸೆ ಇತ್ತೋ ಇಲ್ಲವೋ ಗೊತ್ತಿಲ್ಲ? ಆದರೆ, ದೊಡ್ಮನೆ ಹುಡುಗ ಚಿತ್ರದಲ್ಲಿ ನಟಿಸಿದ ಅನುಭವ ಹಾಗೂ ಕರುನಾಡಿನ ರಾಜರತ್ನ ಅಪ್ಪು ಜೊತೆಗೆ ಕಳೆದು ನೆನಪುಗಳಿವೆ ಅಲ್ಲವಾ ಅವುಗಳೆಲ್ಲವೂ ಅಷ್ಟು ಸುಲಭವಾಗಿ ಮರೆಯೋದಕ್ಕೆ ಆಗೋದಿಲ್ಲ. ಹೀಗಾಗಿ, ಅಪ್ಪು ಮರೆಯಾದರೂ ಪವರ್ ಬಿಟ್ಟೋದ ನೆನಪುಗಳು ಸದಾ ಜೀವಂತ

ಎಂಟರ್‌ಟೈನ್ಮೆಂಟ್ ಬ್ಯೂರೋ

Related Posts

error: Content is protected !!