ಏನನ್ನು ಅಪೇಕ್ಷೆ ಪಡದೇ ನನ್ನನ್ನು ನಿಷ್ಕಲ್ಮಶವಾಗಿ ಪ್ರೀತಿಸುವ-ಆರಾಧಿಸುವ-ಪೂಜಿಸುವ-ಗೌರವಿಸುವ-ತಲೆ ಮೇಲೆ ಹೊತ್ತು ಮೆರೆಸುವ ನನ್ನೆಲ್ಲಾ ಅಭಿಮಾನಿ ದೇವರುಗಳನ್ನೆಲ್ಲಾ ಒಂದು ದಿನ ಒಟ್ಟಿಗೆ ಸೇರಿಸ್ಬೇಕು. ನಾನು ಅಪ್ಪು ಅಭಿಮಾನಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಪ್ರತಿಯೊಬ್ಬರಿಗೂ ಹೊಟ್ಟೆತುಂಬಾ ಊಟ ಹಾಕಬೇಕು, ಭಕ್ಷ್ಯಭೋಜನವನ್ನು ಸವಿದು ನನ್ನ ಫ್ಯಾನ್ಸ್ ಸಂತೃಪ್ತಿಗೊಳ್ಳಬೇಕು ನಾನು ಅದನ್ನು ನನ್ನ ಕಣ್ಣಾರೆ ನೋಡ್ಬೇಕು ಎನ್ನುವುದು ದೊಡ್ಮನೆಯ ರಾಜಕುಮಾರ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಮಹಾಬಯಕೆ ಆಗಿತ್ತಂತೆ. ಈ ಮಹಾದಾಸೆಯ ಬಗ್ಗೆ ಪತ್ನಿ ಅಶ್ವಿನಿಯವರ ಜೊತೆ ಹಲವು ಭಾರಿ ಹೇಳಿಕೊಂಡಿದ್ದರಂತೆ. ಪಕ್ಕಾ ಪ್ಲ್ಯಾನ್ ಮಾಡಿ ಅಭಿಮಾನಿಗಳಿಗೆ ಭೋಜನ ಕೂಟ ಏರ್ಪಾಟು ಮಾಡೋಣವೆಂದೆಲ್ಲ ಚರ್ಚಿಸಿದ್ದರಂತೆ. ಅಷ್ಟರಲ್ಲಿ ಭಗವಂತ ಅಪ್ಪುನಾ ಕರೆಸಿಕೊಂಡುಬಿಟ್ಟ. ದೊಡ್ಮನೆಯಿಂದ-ಕರುನಾಡಿನಿಂದ ಪುನೀತ್ರನ್ನು ಕಿತ್ಕೊಂಡು ಬಹುದೂರ ಕೊಂಡೊಯ್ದುಬಿಟ್ಟ.
ಅರಮನೆ ಮೈದಾನದಲ್ಲಿ `ದೊಡ್ಮನೆ’ ಅನ್ನ ದಾಸೋಹ !
ಅಪ್ಪು ಮರೆಯಾಗಿ ಹನ್ನೆರೆಡು ದಿನಗಳು ಕಳೆದಿವೆ. ಆದರೆ, ಅಂಜನಿಪುತ್ರನನ್ನು ಕಳೆದುಕೊಂಡ ದುಃಖ-ಸಂಕಟ-ನೋವು ಕಿಂಚಿತ್ತೂ ಕಮ್ಮಿಯಾಗುತ್ತಿಲ್ಲ ಕಣ್ಣೀರು ನಿಲ್ಲುತ್ತಿಲ್ಲ. ಈ ಮಧ್ಯೆಯೇ ಹೃದಯ ಭಾರವಾಗಿಸಿಕೊಂಡು ಪುನೀತ್ ಪುಣ್ಯಸ್ಮರಣೆಯ ಕಾರ್ಯವನ್ನು ಮಾಡಬೇಕಾಗಿ ಬಂತು. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಹನ್ನೊಂದನೇ ದಿನದ ಕಾರ್ಯ ನೆರವೇರಿಸಲಾಗಿತ್ತು ಅನಂತರ ಪುನೀತ್ ಮನೆಯಲ್ಲಿ ಗಣ್ಯರಿಗೆ ಅನ್ನದಾಸೋಹವನ್ನಿಟ್ಟುಕೊಂಡಿದ್ದರು. ಇಲ್ಲಿ ಫ್ಯಾನ್ಸ್ ಗೆ ಅವಕಾಶವಿಲ್ಲದ ಕಾರಣಕ್ಕೆ ಹನ್ನೆರಡನೇ ದಿನದಂದು ಅಭಿಮಾನಿ ದೇವರುಗಳಿಗೋಸ್ಕರವೇ `ಪುನೀತ್ ಪುಣ್ಯಾರಾಧನೆ’ ಹಮ್ಮಿಕೊಂಡಿದ್ದರು. ಅಪ್ಪು ಮಹಾಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ದೊಡ್ಮನೆಯಿಂದ ಅನ್ನಸಂತರ್ಪಣೆ ನಡೀತು.
ದೊಡ್ಮನೆ ದಾಸೋಹ !
ಚಿಕನ್ ಕಬಾಬ್- ಮಟನ್ ಚಾಪ್ಸ್- ಮೊಟ್ಟೆ- ಘೀ ರೈಸ್
ಮಸಾಲಾ ರೈಸ್ ಮಸಾಲಾ ವಡೆ-ಆಲೂ ಕಬಾಬ್-ಅಕ್ಕಿಪಾಯಸ-ಅನ್ನರಸಂ
ಮೇಲೆ ಹೇಳಿದಂತೆ ಅಪ್ಪುಗೆ ತನ್ನೆಲ್ಲಾ ಅಭಿಮಾನಿ ದೇವರುಗಳನ್ನು ಒಮ್ಮೆ ಕರೆಸಿ ಊಟ ಹಾಕಿಸ್ಬೇಕು ಎನ್ನುವ ಕನಸಿತ್ತು. ಆ ಕನಸು ಬದುಕಿದ್ದಾಗ ಈಡೇರಿಲ್ಲ. ಈ ವಿಷ್ಯವನ್ನು ಪುನೀತ್ ಅವರ ಪತ್ನಿ ಅಶ್ವಿನಿಯವರು ಶಿವಣ್ಣ-ರಾಘಣ್ಣ ಜೊತೆ ಹಂಚಿಕೊಂಡಿದ್ದಾರೆ. ತಮ್ಮನ ಬಹುದಿನದ ಕನಸನ್ನು ಈಡೇರಿಸುವ ಸಲುವಾಗಿಯೇ ನಗರದ ಪ್ಯಾಲೇಸ್ ಗ್ರೌಂಡ್ನಲ್ಲಿ `ಪುನೀತ್ ಪುಣ್ಯಸ್ಮರಣೆ’ಯ ಜೊತೆಗೆ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಅಚ್ಚರಿ ಅಂದರೆ ಅಪ್ಪು ಮದುವೆಗೆ ಅಡುಗೆ ಮಾಡಿದ್ದ ಕ್ಯಾಟರಿಂಗ್ ನವರೇ ಇವತ್ತು ಪವರ್ಸ್ಟಾರ್ ಶ್ರದ್ಧಾಂಜಲಿ ಕೂಟಕ್ಕೆ ಅಡುಗೆಯನ್ನು ಸಿದ್ದಪಡಿಸಿದ್ದರು. ವೆಜ್ ಹಾಗೂ ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿದ್ದು, ಚಿಕನ್ ಕಬಾಬ್- ಮಟನ್ ಚಾಪ್ಸ್- ಮೊಟ್ಟೆ- ಘೀ ರೈಸ್- ಮಸಾಲಾ ರೈಸ್- ಮಸಾಲಾ ವಡೆ-ಆಲೂ ಕಬಾಬ್-ಅಕ್ಕಿಪಾಯಸ-ಅನ್ನರಸಂ ಸೇರಿದಂತೆ ವಿವಿಧ ರೀತಿಯ ಖಾದ್ಯಗಳನ್ನು ತಯ್ಯಾರಿಸಿದ್ದರು. ಸುಮಾರು ೩೦೦೦೦ಕ್ಕೂ ಹೆಚ್ಚು ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ದೊಡ್ಮನೆ ಅನ್ನ ತಿನ್ನೋಕೆ ಪುಣ್ಯ ಮಾಡಿರಬೇಕು !
ನಾವು ತಿನ್ನುತ್ತಿರುವುದು ದೊಡ್ಮನೆಯ ಪ್ರಸಾದ ಕಣ್ರೀ !
ದೊಡ್ಮನೆ ರಾಜರತ್ನನ ಸ್ಮರಣಾರ್ಥವಾಗಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಜನರು ಆಗಮಿಸಿದ್ದರು. ಸಾರ್ವಜನಿಕರನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂಧೋಬಸ್ತ್ ಮಾಡಲಾಗಿತ್ತು. 1000 ಕ್ಕೂ ಹೆಚ್ಚು ಖಾಕಿ ಪಡೆಯನ್ನು ನಿಯೋಜನೆ ಮಾಡಿದ್ದರು. ದೊಡ್ಮನೆ ಭಕ್ತರು ಹಾಗೂ ಪವರ್ಸ್ಟಾರ್ ಅಭಿಮಾನಿ ದೇವರುಗಳು ಸೇರಿದಂತೆ ಯುವಕರು-ಯುವತಿಯರು-ಮಹಿಳೆಯರು-ಮಕ್ಕಳು-ವೃದ್ದರು-ಕಾರ್ಮಿಕರು-ಅಂಧರು-ವಿಶೇಷ ಚೇತನರು ಹೀಗೆ ಸಕಲರೂ ಕೂಡ ಪರಮಾತ್ಮ'ನ ಪುಣ್ಯಾರಾಧನೆಯಲ್ಲಿ ಪಾಲ್ಗೊಂಡರು.ನಟಸಾರ್ವಭೌಮನ ಸ್ಮರಣೆ ಮಾಡುತ್ತಾ ಸರದಿ ಸಾಲಿನಲ್ಲಿ ಶಿಸ್ತಿನಿಂದ ಸಾಗಿಬಂದು ಪಂಕ್ತಿಯಲ್ಲಿ ಕುಳಿತುಕೊಂಡರು.ಮೊದಲ ಪಂಕ್ತಿಯಲ್ಲಿ ಕುಳಿತವರಿಗೆ ಶಿವರಾಜ್ಕುಮಾರ್-ರಾಘವೇಂದ್ರ ರಾಜ್ಕುಮಾರ್ ಮತ್ತು ಅಶ್ವಿನಿ ಪುನೀತ್ರಾಜ್ಕುಮಾರ್ ಊಟ ಬಡಿಸಿದರು.ಭೋಜನ ಸವಿದವರು ಹೇಳಿದ್ದು ಒಂದೇ ಮಾತು
ದೊಡ್ಮನೆ ಅನ್ನ ತಿನ್ನೋಕೆ ಪುಣ್ಯ ಮಾಡಿರಬೇಕು’. ಅಷ್ಟಕ್ಕೂ ಇದು ಬರೀ ಊಟವಲ್ಲ `ದೊಡ್ಮನೆಯ ಪ್ರಸಾದವೇ’ ಸರೀ ಎಂದರು.
ತಮ್ಮನ ಅಗಲಿಕೆಯ ನಡುವೆಯೂ ಶಿವಣ್ಣ ರಕ್ತದಾನ !
ಅಣ್ಣಾ ಕಾರು ತಗೊಂಡೆ ಅಂತ ಹೇಳ್ತಿದ್ದ
ಸಮಾಜಸೇವೆ ಬಗ್ಗೆ ಯಾವತ್ತೂ ಹೇಳಿಕೊಂಡಿರಲಿಲ್ಲ !
ಪವರ್ಸ್ಟಾರ್ ಪುಣ್ಯಸ್ಮರಣೆಗೆ ಬಂದು ಭೋಜನ ಸ್ವೀಕರಿಸಿದವರ ಪೈಕಿ ಸಾಕಷ್ಟು ಮಂದಿ ರಕ್ತದಾನ ಮಾಡಿದರು. ಮೊದಲಿಗೆ ಶಿವಣ್ಣ ಬ್ಲಡ್ ಡೊನೇಟ್ ಮಾಡಿ ಅಭಿಮಾನಿ ದೇವರುಗಳಿಗೆ ಮಾಧರಿಯಾದರು. ತಮ್ಮನ ಅಗಲಿಕೆಯ ನೋವು-ಸಂಕಟದ ನಡುವೆಯೂ ಕೂಡ ಶಿವಣ್ಣ ರಕ್ತದಾನ ಮಾಡಿದ್ದನ್ನು ಕಂಡು ಪುಣ್ಯಸ್ಮರಣೆಗೆ ಬಂದ ಹಲವರು ನಾ ಮುಂದು- ತಾ ಮುಂದು ಅಂತ ರಕ್ತದಾನ ಮಾಡುವಲ್ಲಿ ನಿರತರಾದರು. ಈ ವೇಳೆ ಮಾತನಾಡಿದ ಶಿವಣ್ಣ ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕು ಅಂತಾನೇ ಗೊತ್ತಾಗ್ತಿಲ್ಲ. ಇಂತಹ ಫ್ಯಾನ್ಸ್ ಗಳನ್ನು ಪಡೆದಿರುವುದು ಅಪ್ಪು ಪುಣ್ಯ ಆದರೆ ಅಪ್ಪುನಂಥಹ ತಮ್ಮನನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೇನೆ. ಹೊಸ ಸಿನಿಮಾ- ಹೊಸ ಕಾರು- ಊಟ- ತಿಂಡಿ ಬಗ್ಗೆ ಬಿಟ್ಟರೆ ಸಮಾಜಮುಖಿ ಕೆಲಸಗಳ ಬಗ್ಗೆ-ದಾನ-ಧರ್ಮದ ಬಗ್ಗೆ ಅಪ್ಪು ನನ್ನ ಹತ್ತಿರ ಯಾವತ್ತೂ ಹೇಳಿಕೊಳ್ಳದೇ ಹೋಗಿಬಿಟ್ಟ. ನನ್ನ ತಮ್ಮನಾಗಿ ಇಷ್ಟೊಂದು ಸಮಾಜ ಸೇವೆ ಮಾಡ್ತಿದ್ದ ಎನ್ನುವುದನ್ನು ಈಗ ಕೇಳ್ತಿದ್ದರೆ ಹೆಮ್ಮೆಯಾಗುತ್ತೆ ನನಗೆ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಗೊತ್ತಾಗಬಾರ್ದು ಅಂತ ಅಪ್ಪಾಜಿ ಯಾವಾಗ್ಲೂ ಹೇಳ್ತಿದ್ದರು ಅದನ್ನೇ ಪುನೀತ್ ಪಾಲಿಸಿದ್ದಾನೆ. ದುಃಖಕರ ಸಂಗತಿ ಅಂದರೆ ಅಭಿಮಾನಿಗಳಿಗೆ ಊಟ ಹಾಕ್ಬೇಕು ಎನ್ನುವ ಅಪ್ಪು ಕನಸು ಶ್ರದ್ಧಾಂಜಲಿ ಮೂಲಕ ಈಡೇರುತ್ತಿರುವುದನ್ನು ನೋಡಿ ನನಗೆ ಸಹಿಸಿಕೊಳ್ಳೋದಕ್ಕೆ ಆಗುತ್ತಿಲ್ಲ ಎಂದು ಶಿವಣ್ಣ ನೋವು ತೋಡಿಕೊಂಡರು.
ಸಹೋದರ ಪುನೀತ್ ಸಾವಿನಿಂದ ಮನಸ್ಸು- ಹೃದಯ ಸಂಕಟ ಪಡುತ್ತಿದ್ದರೂ ಕೂಡ ನಟ ರಾಘವೇಂದ್ರ ರಾಜ್ಕುಮಾರ್ ಮಾಧ್ಯಮದ ಮುಂದೆ ಹಾಗೂ ಅಭಿಮಾನಿಗಳ ಮುಂದೆ ತೋರಿಸಿಕೊಳ್ಳುತ್ತಿಲ್ಲ. ತಮ್ಮ ಬಿಟ್ಟೋದ ನೆನಪುಗಳ ಜೊತೆ ಪ್ರತಿಕ್ಷಣ ಬದುಕುತ್ತಿರುವ ರಾಘಣ್ಣ, ‘ನಿಮ್ಮಷ್ಟೇ ನೋವು ನಮಗೂ ಆಗಿದೆ,ನಮ್ಮಷ್ಟೇ ದುಃಖ ನೀವು ಅನುಭವಿಸುತ್ತಿದ್ದೀರಿ'ದಯವಿಟ್ಟು ಯಾರು ಕೂಡ ದುಡುಕಬಾರ್ದು.ಆತ್ಮಹತ್ಯೆಯಂತಹ ನಿರ್ಣಯಗಳನ್ನು ಕೈಗೊಂಡು ಕುಟುಂಬವನ್ನು ಅನಾಥರನ್ನಾಗಿ ಮಾಡ್ಬಾರ್ದು ಎಂದು ಮನವಿ ಮಾಡಿಕೊಳ್ಳುತ್ತಲೇ ಬರ್ತಿದ್ದಾರೆ.
ಇವತ್ತು ಕೂಡ ಅಭಿಮಾನಿಗಳಿಗೆ ಅದನ್ನೇ ಕೈಮುಗಿದು ಹೇಳಿದರು ನನ್ನ ತಮ್ಮ ಅರಸು ಒಳ್ಳೊಳ್ಳೆ ಕೆಲಸಗಳನ್ನು ಮಾಡಿದ್ದಾನೆ-ಒಳ್ಳೆಯ ಗುಣ ಮೈಗೂಡಿಸಿಕೊಂಡು ಆದರ್ಶವಾಗಿ ಬದುಕಿ ತೋರಿಸಿದ್ದಾನೆ.ದಯವಿಟ್ಟು ನಾವೆಲ್ಲರೂ ಕೂಡ ಅವನಂತೆ ಬಾಳಿ-ಬದುಕಿ ಸ್ಪೂರ್ತಿಯಾಗೋಣ ಎಂದರು.ಆರೋಗ್ಯದ ಸಮಸ್ಯೆ ಇದ್ದರೂ ಕೂಡ
ಪುನೀತ್ ಪುಣ್ಯಾರಾಧನೆ’ಯಲ್ಲಿ ಪಾಲ್ಗೊಂಡು ಅಭಿಮಾನಿ ದೇವರುಗಳು ಭೋಜನ ಸ್ವೀಕರಿಸುತ್ತಿದ್ದ ಪಂಕ್ತಿಯಲ್ಲಿ ಸಾಗಿ ಎಲ್ಲರನ್ನೂ ಮಾತನಾಡಿಸಿದರು. ಹೊಟ್ಟೆತುಂಬಾ ಊಟ ಮಾಡಿ ಸಂತೃಪ್ತಿಯಿಂದ ಹೊರಡಿ ಎಂದು ಕೇಳಿಕೊಂಡರು. ಅದಕ್ಕೆ ಹೇಳೋದು ದೊಡ್ಡಮನೆಯವರದ್ದು ದೊಡ್ಡಮನಸ್ಸು-ದೊಡ್ಡಗುಣ-ದೊಡ್ಡತನ ಅಂತ.
ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ