ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನ ಎಲ್ಲರನ್ನೂ ದಂಗುಬಡಿಸಿದೆ. ಪುನೀತ್ ಸಾವು ದುಸ್ವಪ್ನವಾಗಬಾರದ ದೇವಾ ಅಂತ ಸಕಲರೂ ಮರುಗುತ್ತಿದ್ದಾರೆ. ಅಪ್ಪು ಬಿಟ್ಟೋದ ನೆನಪುಗಳನ್ನು ಕಣ್ಮುಂದೆ ತಂದುಕೊಂಡು ಹೃದಯವನ್ನು ಮತ್ತೆ ಮತ್ತೆ ಭಾರ ಮಾಡಿಕೊಳ್ಳುತ್ತಿದ್ದಾರೆ. ನಟ ರಮೇಶ್ ಅರವಿಂದ್ ಕೂಡ ಅಂಜನಿಪುತ್ರನ ಅಗಲಿಕೆಯಿಂದ ತೀರಾ ನೊಂದಿದ್ದಾರೆ. ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ ಅಪ್ಪು ಬೆಳಗ್ಗೆ ಎದ್ಮೇಲೆ ಈ ಲೋಕಾನೇ ಬಿಟ್ಟುಹೋಗಿದ್ದನ್ನು ಕಂಡು ಶಾಕ್ಗೆ ಒಳಗಾಗಿದ್ದಾರೆ. `ಬೆಳಕು ಹೋದ್ಮೇಲೆ ಕತ್ತಲು ಬರಲೇಬೇಕಲ್ವಾ ಸಾರ್’ ಹೀಗಂತ ರಾತ್ರಿಯಷ್ಟೇ ಮಾತನಾಡಿದ್ದ ಅಪ್ಪು, ಬೆಳಗಾಗಿ ಸೂರ್ಯ ನೆತ್ತಿ ಮೇಲೆ ಬರುವಷ್ಟರಲ್ಲಿ ಈ ಜಗತ್ತೇ ಬಿಟ್ಟುಹೋಗಿಬಿಟ್ಟರು.
ಅಲ್ಲಾ ರೀ, ಅಪ್ಪುದು ಸಾಯೋ ವಯಸ್ಸಾ ನೀವೇ ಹೇಳಿ. ಜಸ್ಟ್ 46 ಅಷ್ಟೇ ರೀ. ಅಷ್ಟೊಂದು ಫಿಟ್ ಆಗಿದ್ದರೂ ಕೂಡ ಹಾರ್ಟ್ಗೆ ಹೊಡೆತ ಕೊಟ್ಟು ಕರ್ಕೊಂಡು ಹೊಂಟುಬಿಟ್ಟ. ಅಲ್ಲಾ, ಆ ಭಗವಂತನಿಗೆ ದೊಡ್ಮನೆ ಹುಡುಗನ ಮೇಲೆ ಅಷ್ಟೊಂದು ಅಸೂಹೆ, ಅಷ್ಟೊಂದು ಕೋಪ ಯಾಕಾದರೂ ಇತ್ತೋ ಏನೋ ಗೊತ್ತಿಲ್ಲ. ಎಷ್ಟೋ ಜನರಿಗೆ ಸಾವಿನ ಮುನ್ಸೂಚನೆ ಕೊಡುವ, ಸಾವಿನ ಮನೆಯ ಕದತಟ್ಟಿದ ಎಷ್ಟೋ ಜನರನ್ನ ವಾಪಾಸ್ ರ್ಕೊಂಡು ಬರುವ ಭಗವಂತ, ಕೋಟ್ಯಾಂತರ ಮಂದಿ ಪ್ರೀತ್ಸಿ-ಆರಾಧಿಸುವ ಪವರ್ಸ್ಟಾರ್ಗೆ ಒಂದೇ ಒಂದು ಅವಕಾಶವನ್ನು ಕೊಡಲಿಲ್ಲ. ಕೇವಲ ಒಂದೇ ಒಂದು ಚಾನ್ಸ್ ಕೊಟ್ಟಿದ್ದರೆ ಅಂಜನಿಪುತ್ರ ಉಸಿರು ಚೆಲ್ಲುತ್ತಿರಲಿಲ್ಲ. ದೊಡ್ಮನೆ ಅನಾಥವಾಗುತ್ತಿರಲಿಲ್ಲ. ಕರುನಾಡಿಗೆ ಕತ್ತಲೆ ಆವರಿಸುತ್ತಿರಲಿಲ್ಲ. ಅಭಿಮಾನಿಗಳು ಎದೆ ಹೊಡೆದುಕೊಂಡು ಸಾಯುತ್ತಿರಲಿಲ್ಲ. ಅರಸು ಆಸರೆಯಾಗಿದ್ದ ಲಕ್ಷಾಂತರ ಮಂದಿ ಆಕಾಶ ನೋಡುತ್ತಿರಲಿಲ್ಲ. ಇವತ್ತು ಇಷ್ಟೆಲ್ಲಾ ಆಗ್ತಿದೆ ಅಂದರೆ ಅದಕ್ಕೆ ಕಾರಣ ಭಗವಂತನ ಕಲ್ಲು ಮನಸ್ಸು
ಮೇಲೆ ಹೇಳಿದಂತೆ ಅಪ್ಪುದು ಉಸಿರು ಚೆಲ್ಲುವ ವಯಸ್ಸಲ್ಲ. ಅಪ್ಪುಗೆ ಸಾವು ಸಮೀಪಿಸುತ್ತಿದೆ ಎನ್ನುವ ಅರಿವು ಇರಲಿಲ್ಲ. ಹೀಗಾಗಿಯೇ, ಸ್ನೇಹಕ್ಕೆ-ಪ್ರೀತಿಗೆ ಬೆಲೆ ಕೊಡುವ ಪವರ್ಸ್ಟಾರ್ ಸಾಯುವ ಹಿಂದಿನ ದಿನ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಬರ್ತ್ಡೇ ಪಾರ್ಟಿಗೆ ಹೋಗಿದ್ದರು. ಗುರು ಹುಟ್ಟಿದ ದಿನವನ್ನು ಸಂಭ್ರಮಿಸುತ್ತಾ, ಸ್ನೇಹಿತರ ಜೊತೆ ಕಾಲಕಳೆದರು. ಈ ವೇಳೆ ನಟ ರಮೇಶ್ ಅರವಿಂದ್ ಜೊತೆ ಸುಮಾರು ಎರಡು ಗಂಟೆಗಳ ಟೈಮ್ ಸ್ಪೆಂಡ್ ಮಾಡಿದ್ದಾರೆ. ಯಾವತ್ತೂ ಚರ್ಚೆ ಮಾಡದ ವಿಷ್ಯಗಳನ್ನೆಲ್ಲಾ ಪ್ರಸ್ತಾಪ ಮಾಡುತ್ತಾ, ಬಾಲ್ಯ-ಯೌವ್ವನ-ಬದುಕು-ವೈರಾಗ್ಯ-ಸಾವಿನ ಕುರಿತು ಮಾತನಾಡಿದ್ದಾರೆ. ರಮೇಶ್ ಅರವಿಂದ್ ಬುದ್ದನ ಕಥೆಯೊಂದನ್ನು ಎಕ್ಸ್ ಪ್ಲೇನ್ ಮಾಡಿದ್ಮೇಲೆ, ರಾತ್ರಿ ಸರಿದ ಮೇಲೆ ಹಗಲು ಬರಲೇಬೇಕು',
ಬೆಳಕು ಹೋದ್ಮೇಲೆ ಕತ್ತಲು ಬರಲೇಬೇಕಲ್ವಾ ಸಾರ್’ ಎಂದರಂತೆ ಅಪ್ಪು. ಇಂತಹ ಮಾತನಾಡಿದ ಅಪ್ಪು ಬೆಳಗ್ಗೆ ಎಂದಿನಂತೆ ಎದ್ದು ವ್ಯಾಯಾಮ ಮುಗಿಸಿ, ಅಣ್ಣನ `ಭಜರಂಗಿ-೨’ ಚಿತ್ರಕ್ಕೆ ಶುಭಕೋರಿದ ಕೆಲವೇ ಕ್ಷಣಗಳಲ್ಲಿ ಹೃದಯ ಸ್ತಂಬನಗೊಳ್ಳುತ್ತೆ. ಯಾಕೀಗ್ ಆಗ್ತಿದೆ ಎಂದು ಹಾಸ್ಪಿಟಲ್ಗೆ ಹೋಗಿ ಅಡ್ಮಿಟ್ ಆಗುವ ಹೊತ್ತಿಗೆ ಜವರಾಯ ದೊಡ್ಮನೆ ಹುಡುಗನ ಪ್ರಾಣವನ್ನೇ ಕಿತ್ಕೊಂಡುಬಿಟ್ಟ.
ಇಷ್ಟೆಲ್ಲಾ ಆಗಿಹೋಗಿರುವುದನ್ನು ಅರಗಿಸಿಕೊಳ್ಳೋದಕ್ಕೆ ಆಗದ ನಟ ರಮೇಶ್ ಅರವಿಂದ್ ಅವರು ತಮ್ಮ `100'ನೇ ಚಿತ್ರದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಒಂದು ಮಾತು ಹೇಳಿದರು.ಇಂಡಸ್ಟ್ರಿಗೆ ನಾಳೆ ಇನ್ನೊಬ್ಬ ಡ್ಯಾನ್ಸರ್ ಬರ್ಬೋದು
, ಫೈಟರ್ ಬರ್ಬೋದು,ಸ್ಟಾರ್ ಬರ್ಬೋದು.ಆದರೆ,ಇಷ್ಟು ತುಂಬಿಕೊಂಡಿದ್ದ ಪವರ್ಸ್ಟಾರ್ ಥರ ಮತ್ತೊಬ್ಬ ಸ್ಟಾರ್ ಚಿತ್ರರಂಗದಲ್ಲಿ ಹುಟ್ಟಲಿಕ್ಕೆ ಸಾಧ್ಯವೇ ಇಲ್ಲ.ಅಂದ್ಹಾಗೇ,ಅಪ್ಪು ಅದ್ಬುತ ವ್ಯಕ್ತಿಯಾಗಿದ್ದರು.ಮನೆತನಕ್ಕೆ ತಕ್ಕಂತೆ ವಿನಯದಿಂದ-ಸರಳತೆಯಿಂದ ಕೂಡಿದ್ದ ಪವರ್ಸ್ಟಾರ್,ಡ್ಯಾನ್ಸ್,ಫೈಟ್,ಫ್ಯಾಮಿಲಿ ಸೆಂಟಿಮೆಂಟ್ ಸೇರಿಕೊಂಡು ಎಲ್ಲರ ಅಪ್ಪುಗೆಯ ಅಪ್ಪು ಆಗಿದ್ದರು.
ಹೀಗಾಗಿ,ಅಪ್ಪು ಬಿಟ್ಟೋದ ಜಾಗವನ್ನು ಯಾರೂ ತುಂಬಲಿಕ್ಕೆ ಸಾಧ್ಯವಿಲ್ಲ. ಪುನೀತ್ ಜೊತೆಗೆ ಸಾವಿರಾರು ಮೆಮೋರಿಸ್ಗಳು ಇವೆ.ಕಳೆದ ಇಪ್ಪತ್ತು ವರ್ಷದಿಂದ ಅವರೊಟ್ಟಿಗೆ ಸಂಪರ್ಕದಲ್ಲಿದ್ದೇನೆ.
‘ಅಪ್ಪು’ ಸಿನಿಮಾದಿಂದ ಹಿಡಿದು ಇಲ್ಲಿಯವರೆಗೆ ಅವರ ಜರ್ನಿಯನ್ನು ನೋಡಿದ್ದೇನೆ.`ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಕೆಂಪು ಖುರ್ಚಿ ಮೇಲೆ ಕೂರಿಸಿ ಇಡೀ ಕರ್ನಾಟಕಕ್ಕೆ ಯುವರತ್ನನ ಸಾಧನೆಯನ್ನು ವಿವರಿಸಿದ್ದೇನೆ. ಆದರೆ, ಇವತ್ತು ಒಂದು ಕುರ್ಚಿ ಮೇಲೆ ಅವರ ಫೋಟೋ ಇಟ್ಟು ನಮಿಸುವಂತಹ ಸಂದರ್ಭ ಸೃಷ್ಟಿಸಿಯಾಗಿದೆ. ಈ ಸನ್ನಿವೇಶ ಸೃಷ್ಟಿಸಿದ ಆ ಭಗವಂತನಿಗೆ ಧಿಕ್ಕಾರವಿರಲಿ.
ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ