ದೊಡ್ಡಮನೆಯ ಮಗ, ಕರುನಾಡಿನ ರಾಜರತ್ನ, ಗಂಧದಗುಡಿಯ ಅರಸು, ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನ ಕಳೆದುಕೊಂಡು ಕುಟುಂಬಸ್ಥರು- ಅಭಿಮಾನಿ ದೇವರುಗಳು- ಕರುನಾಡಿನ ಜನರು- ಹೊರರಾಜ್ಯದ ಮಂದಿಯಷ್ಟೇ ಕಣ್ಣೀರಾಕಿಲ್ಲ. ಇವರಷ್ಟೇ ದು:ಖ, ಇವರಷ್ಟೇ ನೋವು, ಇವರಷ್ಟೇ ಸಂಕಟವನ್ನ ಬೆಳ್ಳಿತೆರೆಯೂ ಅನುಭವಿಸ್ತಿದೆ. ಆದರೆ, ಬಾಯ್ಬಿಟ್ಟು ಹೇಳಿಕೊಳ್ಳೋದಕ್ಕೆ ಉಸಿರಿಲ್ಲ,ಕಣ್ಣೀರು ಸುರಿಸೋದಕ್ಕೆ ಜೀವ ಇಲ್ಲ.
ಹೀಗಾಗಿ, ನೋವನ್ನು ಹೇಳಿಕೊಳ್ಳೋದಕ್ಕೆ ಆಗದೇ ಒಳಗೊಳಗೆ ಸೊರಗುತ್ತಾ, ಸಂಕಟ ಪಡುತ್ತಿದೆ. ಕೊನೆಭಾರಿ ಅಪ್ಪು ಮುಖ ನೋಡೋದಕ್ಕೆ ಅವಕಾಶ ಸಿಗಲಿಲ್ಲ, ಕಡೇ ಪಕ್ಷ ನಮನ ಸಲ್ಲಿಸೋಣ ಅಂದರೆ ಇವರ್ಯಾರು ಅರೇಂಜ್ ಮಾಡ್ತಿಲ್ಲವಲ್ಲ ಅಂತ ಬಿಗ್ ಸ್ಕ್ರೀನ್ ಕೊರಗುತ್ತಾ ಇತ್ತು. ಬೆಳ್ಳಿತೆರೆಯ ಈ ಕೂಗು ಬಹುಷಃ ಕರ್ನಾಟಕ ಚಿತ್ರ ಪ್ರದರ್ಶಕರಿಗೆ ಕೇಳಿಸ್ತು ಎನಿಸುತ್ತೆ. ಹೀಗಾಗಿಯೇ, ಅಪ್ಪು ಆತ್ಮಕ್ಕೆ ಶಾಂತಿಕೋರುವುದಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಹೌದು, ಇದೇ ಭಾನುವಾರ ಸಂಜೆ 6 ಗಂಟೆಗೆ ಸರಿಯಾಗಿ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳ ಆವರಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ ಮತ್ತು ಭಾಷ್ಪಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಭಿಮಾನಿ ದೇವರುಗಳು, ಸಿನಿಮಾ ಪ್ರೇಕ್ಷಕರು ಪಾಲ್ಗೊಳ್ಳಬಹುದು. ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳಲ್ಲಿ ಚಿತ್ರೋದ್ಯಮದ ಇತರೆ ವಲಯದ ಗಣ್ಯರು ಭಾಗಿಯಾಗುತ್ತಿದ್ದಾರೆ. ಅಪ್ಪುಗೆ ನಮನ ಸಲ್ಲಿಸುವುದರ ಮೂಲಕ ದಿವಂಗತ ನಟ ಪುನೀತ್ ರಾಜ್ ಕುಮಾರ್ ಆತ್ಮಕ್ಕೆ ಶಾಂತಿಕೋರುತ್ತಿದ್ದಾರೆ. ಈ ಮೂಲಕ ನಾದರೂ ದೊಡ್ಮನೆಯ ರಾಜಕುಮಾರನಿಗೆ ನಮನ ಸಲ್ಲಿಸುವ ಅವಕಾಶ ಸಿಗ್ತಲ್ಲ ಅಂತ ಬೆಳ್ಳಿತೆರೆ ನಿಟ್ಟುಸಿರು ಬಿಟ್ಟಿದೆ. ಇದರ ಮಧ್ಯೆಯೂ ಅಪ್ಪು ನನ್ನ ನೋಡಲಿಕ್ಕೆ ಬರಲ್ವಲ್ಲ ಎಂದು ನೊಂದುಕೊಳ್ಳುತ್ತಿದೆ.
ಹೌದು, ದೊಡ್ಮನೆ ರಾಜಕುಮಾರನ ಸಿನಿಮಾ ಬರ್ತಿದೆ ಎಂದರೆ ಸಾಕು ಬೆಳ್ಳಿಪರದೆ ಕ್ಯಾಕಿ ಹಾಕುತ್ತಿತ್ತು. ಬಾಕ್ಸ್ ಆಫೀಸ್ ಬೆಟ್ಟದ ಹೂ ಮುಡಿದುಕೊಂಡು ಕುಣಿಯುತ್ತಿತ್ತು. ಇದನ್ನೆಲ್ಲಾ ನೋಡೋದಕ್ಕೆ ಅಣ್ಣಾಬಾಂಡ್ ಥಿಯೇಟರ್ ಗೆ ಎಂಟ್ರಿಕೊಡ್ತಿದ್ದರು. ಅಭಿಮಾನಿ ದೇವರುಗಳು ಜೊತೆ ಕುಳಿತು ಸಿನಿಮಾ ನೋಡ್ತಿದ್ದರು. ಇನ್ಮೇಲೆ ಯುವರತ್ನನಿಗಾಗಿ ಕಾದು ಕುಳಿತರು ಬರಲ್ಲ. ಈಕಟು ಸತ್ಯ ಅರಿತಿರುವ
ಸಿಲ್ವರ್ ಸ್ಕ್ರೀನ್ ನಂತೆ ಫ್ಯಾನ್ಸ್ ಕೂಡ ಎದೆಭಾಗ ಹಿಡಿದು ನೋವುಣ್ಣುತ್ತಿದ್ದಾರೆ. ನಮ್ಮ ಜೊತೆ ಇನ್ಯಾವತ್ತೂ ಕುಳಿತುಕೊಂಡು ಸಿನಿಮಾ ನೋಡೋದಕ್ಕೆ ಅಪ್ಪು ಸಾರ್ ಬರಲ್ಲವಲ್ಲ ಎಂದು ಕಣ್ಣೀರಾಗುತ್ತಿದ್ದಾರೆ. ಮಿಡ್ ನೈಟ್ ಶೋ, ಅರ್ಲಿ ಮಾರ್ನಿಂಗ್ ಶೋ, ಫಸ್ಟ್ ಡೇ ಫಸ್ಟ್ ಶೋ ಅಂತ ರಾತ್ರೋರಾತ್ರಿ ಅಪ್ಪುನಾ ನೋಡಲಿಕ್ಕೆ ಆಗಲ್ಲವಲ್ಲ ದೇವಾ ಎಂದು ಹೃದಯ ಹಿಡಿದು ನೊಂದುಕೊಳ್ಳುತ್ತಿದ್ದಾರೆ.
ಇಷ್ಟೆಲ್ಲದರ ಜೊತೆಗೆ
ಪವರ್ ಸ್ಟಾರ್ ಜೀವನದಲ್ಲಿ ಬೆಳ್ಳಿತೆರೆಯ ಪಾತ್ರವೆಷ್ಟು ಎನ್ನುವುದರ ಬಗ್ಗೆ ಕೊಂಚ ಮಾತನಾಡ್ಲೆಬೇಕು. ದೊಡ್ಮನೆ ಹುಡುಗನನ್ನು ಬೆಳ್ಳಿತೆರೆ ಬರೋಬ್ಬರಿ 45 ವರ್ಷಗಳ ಕಾಲ ತಲೆ ಮೇಲೆ ಹೊತ್ತು ಮೆರೆಸಿದೆ. ಕರ್ನಾಟಕದ ಮೂಲೆಮೂಲೆ ಮಾತ್ರವಲ್ಲ ಭರತಖಂಡ ಸುತ್ತೆಲ್ಲ ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡಿದೆ. ನಟಸಾರ್ವಭೌಮ ಎನ್ನುವ ಪಟ್ಟ ಕಟ್ಟಿ ಗಡಿದಾಟಿಸಿದೆ. ಖಜಾನೆಗೆ ಕೋಟಿ ಕೋಟಿ ಹರಿದುಬರುವಂತೆ ಮಾಡಿದೆ ಮಾತ್ರವಲ್ಲ ಬೆಲೆಯೇ ಕಟ್ಟಲಾಗದ ಕೋಟ್ಯಾಂತರ ಅಭಿಮಾನಿಗಳನ್ನು ಸೃಷ್ಟಿಮಾಡಿಕೊಟ್ಟಿದೆ. ಇಷ್ಟೆಲ್ಲಾ, ಸಾಧ್ಯವಾಗಿದ್ದು ಬೆಳ್ಳಿತೆರೆಯಿಂದ ಮತ್ತು ಅಪ್ಪು ನಟನಾಚಾತುರ್ಯದಿಂದ.
ಬಾಲನಟನಾಗಿ ಬೆಳ್ಳಿತೆರೆಗೆ ಲಗ್ಗೆ ಇಟ್ಟು ಬಾಲ್ಯದಲ್ಲೇ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡ ಮಾಸ್ಟರ್ ಲೋಹಿತ್, ನಟಸಾರ್ವಭೌಮನಾಗಿ ಬೆಳೆದು ಗಂಧದಗುಡಿಯ ಅರಸನಾದರು. 45 ವರ್ಷದ ತಮ್ಮ ಸಿನಿಜರ್ನಿಯಲ್ಲಿ 46 ಸಿನಿಮಾ ಮಾಡಿದರು. ನಟನಾಕೌಶಲ್ಯದಿಂದ, ನಯ-ವಿನಯದಿಂದ, ಸರಳ ಮನೋಭಾವದಿಂದ, ದಾನ-ಧರ್ಮದಿಂದ- ಶ್ರದ್ಧಾ- ಭಕ್ತಿಯಿಂದ- ಪ್ರೀತಿ- ವಾತ್ಸಲ್ಯದಿಂದ ಕೇವಲ ಒಂದೇ ಒಂದು ಜನ್ಮದಲ್ಲಿ ಏಳು ಜನ್ಮಕ್ಕಾಗುವಷ್ಟು ಪ್ರೀತಿ- ಕೀರ್ತಿ ಹಾಗೂ ಹೆಸರನ್ನು ಸಂಪಾದನೆ ಮಾಡಿ ಬಿಟ್ಟೋದರು. ಹೀಗಾಗಿ, ಎಷ್ಟೇ ವರ್ಷಗಳು ಉರುಳಿದರೂ ಕೂಡ ಕರುನಾಡಿನಲ್ಲಿ, ಕನ್ನಡಿಗರಲ್ಲಿ, ಸ್ಯಾಂಡಲ್ ವುಡ್ ಇತಿಹಾಸದಲ್ಲಿ ದೊಡ್ಮನೆ ಮಗನ ಹೆಸರು ಅಜರಾಮರ.
ವಿಶಾಲಾಕ್ಷಿ ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ