ದೊಡ್ಮನೆ ರಾಜಕುಮಾರನ ಅಕಾಲಿಕ ಅಗಲಿಕೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮಾತ್ರವಲ್ಲ ಹೊರರಾಜ್ಯ- ಪರಭಾಷೆಯ ಸ್ಟಾರ್ಸ್ ಗಳು ಕೂಡ ಶೋಕ ವ್ಯಕ್ತಪಡಿಸಿದ್ದಾರೆ. ದೊಡ್ಡ ದೊಡ್ಡ ನಟರುಗಳು ಪುನೀತ್ ನಿವಾಸಕ್ಕೆ ಆಗಮಿಸಿ ಅಪ್ಪು ಕುಟುಂಬವನ್ನು ಸಂತೈಸ್ತಿದ್ದಾರೆ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಧೈರ್ಯವಾಗಿರಿ ಎನ್ನುವ ಮಾತುಗಳನ್ನಾಡ್ತಿದ್ದಾರೆ. ಅಕ್ಕಿನೇನಿ ನಾಗಚೈತನ್ಯ- ರಾಮ್ ಚರಣ್ ತೇಜಾ- ಶಿವಕಾರ್ತಿಕೇಯನ್- ಪ್ರಭು ಗಣೇಶನ್ ನಂತರ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಪವರ್ ಸ್ಟಾರ್ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿದ್ದಾರೆ. ಆದರೆ, ಯುವರತ್ನನ ಮನೆಗೆ ಆಗಮಿಸುವ ಹೊತ್ತಲ್ಲಿ ಕೆಂಪೇಗೌಡ ನಿಲ್ದಾಣದಲ್ಲಿ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರೀ ವೈರಲ್ ಆಗ್ತಿದೆ.
ಮಾಸ್ಟರ್ ಶೆಫ್ ಶೂಟಿಂಗ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದ ತಮಿಳು ನಟ ವಿಜಯ್ ಅವರು, ಚಿತ್ರೀಕರಣದ ನಂತರ
ನಟಸಾರ್ವಭೌಮನ ಪುಣ್ಯಭೂಮಿಗೆ ಭೇಟಿ ನೀಡಲು ನಿರ್ಧರಿಸಿದ್ದರಂತೆ.
ಆದರೆ, ಏರ್ ಪೋರ್ಟ್ ನಲ್ಲಿಯೇ ನಟನ ಮೇಲೆ ಹಲ್ಲೆ ಯತ್ನ ನಡೆದಿದೆ. ವಿಮಾನದಲ್ಲಿ ವಿಜಯ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವಿಚಾರದಲ್ಲಿ ವಿಜಯ್ ಪಿ.ಎ ಮತ್ತು ಸಹಪ್ರಯಾಣಿಕನ ಮಧ್ಯೆ ಕಿರಿಕ್ ಆಗಿತ್ತಂತೆ. ಸಹಪ್ರಯಾಣಿಕ ಪಾನಮತ್ತನಾಗಿದ್ದು, ಸೇತುಪತಿ ಪಿ.ಎ ಜೊತೆ ವಾಗ್ವಾದ ನಡೆಸಿದ್ದಾನೆ ಮಾತ್ರವಲ್ಲ ವಿಮಾನ ನಿಲ್ದಾಣದಲ್ಲಿ ನಡೆದು ಹೋಗುವಾಗ ಹಿಂದೆಯಿಂದ ಬಂದು ಕಾಲಿನಿಂದ ಎಗರೆಗರಿ ಹೊಡೆದಿದ್ದಾನೆ.
ಈ ವೇಳೆ ಸೇತುಪತಿಯವರ ಭದ್ರತಾ ಸಿಬ್ಬಂಧಿ ಯುವಕನನ್ಮು ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಚ್ಚರಿ ಅಂದರೆ, ತಮಿಳು ನಟ ವಿಜಯ್ ಅವರು ಹಲ್ಲೆ ಘಟನೆಯನ್ನು ದೊಡ್ದದು ಮಾಡಲಿಕ್ಕೆ ಹೋಗಿಲ್ಲ. ತಾವು ಬಂದ ಕೆಲಸದ ಕಡೆ ಗಮನ ವಹಿಸಿ ಅಲ್ಲಿಂದ ತೆರಳಿದ್ದಾರೆ. ಒಂದು ವೇಳೆ ವಿಷ್ಯ ದೊಡ್ದು ಮಾಡಿದ್ದರೆ ವಿಜಯ್ ಮೇಲಿನ ಹಲ್ಲೆ ಘಟನೆ ಬೇರೆಯದ್ದೇ ಆದ ತಿರುವು ಪಡೆಯುತ್ತಿತ್ತು. ರೊಚ್ಚಿಗೇಳುವ, ಆಕ್ರೋಶಗೊಂಡು ಅಲ್ಲೋಲ- ಕಲ್ಲೋಲ ಮಾಡುವ ಘಟನೆಗಳು ಸಂಭವಿಸುತ್ತಿತ್ತು. ಇದ್ಯಾವುದಕ್ಕೂ ಆಸ್ಪದ ಕೊಡದ ಜನಪ್ರಿಯ ನಟ,ಶೂಟಿಂಗ್ ಮುಗಿಸಿಕೊಂಡು ಅನಂತರ ಅಂಜನಿಪುತ್ರನ ಪುಣ್ಯಭೂಮಿಗೆ ಭೇಟಿಕೊಟ್ಟು ಹೂವಿನ ಹಾರ ಹಾಕಿ ಅಪ್ಪುಗೆ ನಮಿಸಿದ್ದಾರೆ. ಅನಂತರ ಅಪ್ಪು ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ನಾನು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ. ಆದರೆ, ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ. ಆದರೆ ಕಾಲ್ನಲ್ಲಿ ಒಂದು ಸಲ ಮಾತನಾಡಿದ್ದೆ. ಬಹಳ ಪ್ರೀತಿಯಿಂದ ಮಾತನಾಡಿಸಿದ್ದರು. ನನ್ನ ಸಿನಿಮಾ ನೋಡಿ ಕಾಲ್ ಮಾಡಿದ್ರು, ನನಗೆ ಅವರು ಇಲ್ಲ ಎನ್ನುವುದು ಈ ಕ್ಷಣದವರೆಗೂ ಅರಗಿಸಿಕೊಳ್ಳಲು ಆಗಿಲ್ಲ. ಅವರು ಆಸ್ಪತ್ರೆಗೆ ಸೇರಿದ್ದಾರೆ ಎಂದು ನ್ಯೂಸ್ ನೋಡಿದಾಗ ಅವರು ತುಂಬಾ ಫಿಟ್ ಇದ್ದಾರೆ.. ಖಂಡಿತ ಹುಷಾರಾಗಿ ವಾಪಸ್ ಬರ್ತಾರೆ ಅಂತ ಅಂದು ಕೊಂಡಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿಕೊಂಡರು. ಇಂತಹ ಮನಸ್ಥಿತಿಯ ವ್ಯಕ್ತಿ ನಮ್ಮ ರಾಜವಂಶದ ಕುಡಿಯ ಅಗಲಿಕೆಗೆ ಕಂಬನಿ ಮಿಡಿಯಲು ಬರುತ್ತಿರುವಾಗ, ಅದ್ಯಾರೋ ಪಾನಮತ್ತ ಯುವಕ ಹಲ್ಲೆ ನಡೆಸಿದ್ದು ನಿಜಕ್ಕೂ ಖಂಡನೀಯ
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ