ಬದುಕು ಅನಿರೀಕ್ಷಿತ life is so unpredictable ಅಂತಾರೆ. ಜೀವನ ಯಾರದ್ದೇ ಆಗಿರಲಿ ಹೀಗೆ ಇರುತ್ತೆ, ಹೀಗೆ ನಡೆಯುತ್ತೆ ಎಂಬುದನ್ನು ಊಹೆ ಮಾಡೋದಕ್ಕೆ ಸಾಧ್ಯವಿಲ್ಲ. ಈ ಕಟುಸತ್ಯವನ್ನು ಅರಿತುಕೊಂಡಿದ್ದ ಕನ್ನಡದ ಕೋಟ್ಯಾಧಿಪತಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಯಾವುದಕ್ಕೂ ಇರಲಿ ಅಂತ ತಾವು ಆಸರೆಯಾಗಿದ್ದ ಚಾರಿಟಿಗಳಿಗೆ ಬರೋಬ್ಬರಿ 8 ಕೋಟಿ ಡೆಪಾಸಿಟಿ ಮಾಡಿಟ್ಟು ಹೋಗಿದ್ದಾರೆನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗ್ತಿದೆ. ಈ ಸುದ್ದಿ ಕೇಳಿದ ಅಪ್ಪು ಭಕ್ತರು ನಮ್ಮ ಬಾಸ್ ದೇವರು ಅಂತಿದ್ದಾರೆ.
ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ದೇವರ ರೂಪದಲ್ಲಿ ದೊಡ್ಮನೆಯ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದ್ದರು ಮತ್ತು ಇದ್ದಾರೆ ಎನ್ನುವುದೇ ಅಚ್ಚರಿಯ ಸತ್ಯ. ಬದುಕಿದ್ದಷ್ಟು ದಿನ ಪ್ರೀತಿ ಹಂಚಿದರು, ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಗೊತ್ತಾಗದಂತೆ ನೋಡಿಕೊಂಡರು. ದೇಹಿ ಎನ್ನುವ ಮೊದಲೇ ದಾನ ಮಾಡಿದರು. ಅನಾಥಾಶ್ರಮ- ವೃದ್ಧಾಶ್ರಮ- ವಸತಿ ಶಿಕ್ಷಣ- ಗೋಶಾಲೆಗೆ ಆಸರೆಯಾದರು. 1800 ವಿಧ್ಯಾರ್ಥಿಗಳ ವಿಧ್ಯಾಭ್ಯಾಸದ ಹೊಣೆ ಹೊತ್ತರು. ಇಷ್ಟೆಲ್ಲಾ ಮಾಡಿದರೂ ಪ್ರಚಾರ ಬಯಸಲಿಲ್ಲ. ಮಾಧ್ಯಮದ ಮುಂದೆ ಯಾವತ್ತೂ ಹೇಳಿಕೊಳ್ಳಲಿಲ್ಲ.
ಹೌದು, ಅಪ್ಪು ಧ್ವನಿಯಾದ ಹಾಡಿಗೆ ಸಿಗುತ್ತಿದ್ದ ಸಂಭಾವನೆ ಮೈಸೂರಿನ ಶಕ್ತಿಧಾಮ ಚಾರಿಟಿಗೆ ಹೋಗುತ್ತೆ ಎನ್ನುವ ವಿಚಾರ ಗೊತ್ತಿತ್ತೆ ವಿನಃ, 16 ವೃದ್ಧಾಶ್ರಮಗಳಿಗೆ, 19 ಗೋಶಾಲೆಗಳಿಗೆ, 45 ಉಚಿತ ಶಾಲೆಗಳಿಗೆ, ಶಕ್ತಿ ಧಾಮದಂತಹ ಎಷ್ಟೋ ಅನಾಥಾಶ್ರಮಗಳಿಗೆ ಆಸರೆಯಾಗಿದ್ರು ಎನ್ನುವ ಸುದ್ದಿ ಯಾರಿಗೂ ಗೊತ್ತಿರಲಿಲ್ಲ. ಅಪ್ಪು ಅಗಲಿಕೆಯ ನಂತ್ರ ಅದೆಷ್ಟು ಸಮಾಜಮುಖಿ ಕೆಲಸ ಮಾಡ್ತಿದ್ದರು ಎನ್ನುವ ಸತ್ಯ ಬಹಿರಂಗಗೊಂಡಿತು. ಇದೀಗ, ಆಸರೆಯಾಗಿದ್ದ ಸಂಸ್ಥೆಗಳು ಯಾವ ಸಂದರ್ಭದಲ್ಲೂ ಸಂಕಷ್ಟಕ್ಕೆ ಸಿಲುಕಬಾರದು ಎನ್ನುವ ಕಾರಣಕ್ಕೆ ಪುನೀತ್ ಮೊದಲೇ 8 ಕೋಟಿ ಡೆಪಾಸಿಟ್ ಮಾಡಿದ್ದರು ಎನ್ನುವ ವಿಚಾರ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ.
ಒಂದ್ವೇಳೆ ಈ ಸುದ್ದಿ ನಿಜ ಆದರೆ ಕನಿಷ್ಟ ಪಕ್ಷ ಅರ್ಧ ವರ್ಷವಾದರೂ ಚಾರಿಟಿಯವರು ದೊಡ್ಮನೆ ಅರಸು ಆಸರೆಯಾಗಿದ್ದ ಸಂಸ್ಥೆಗಳನ್ಮು ನಿಶ್ಚಿಂತೆಯಿಂದ ನಡೆಸುತ್ತಾರೆ. ರಾಜಕುಮಾರ ಇಲ್ಲ ಎನ್ನುವ ಕೊರಗಿನ ನಡುವೆಯೂ ಆಶ್ರಮದಲ್ಲಿ ನೆಲೆಕಂಡುಕೊಂಡವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.
ಶಕ್ತಿಧಾಮದಲ್ಲಿರುವ ವಿಧ್ಯಾರ್ಥಿಗಳು ಸೇರಿದಂತೆ ರಾಜ್ಯದ ಒಟ್ಟು 1800 ವಿಧ್ಯಾರ್ಥಿಗಳ ಓದಿನ ಜವಬ್ದಾರಿ ನನಗಿರಲಿ. ಮುಂದಿನ ವರ್ಷದಿಂದ ನಾನು ಅವರೆಲ್ಲರಿಗೂ ಆಸರೆಯಾಗುವುದಾಗಿ ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್ ಆಶ್ವಾಸನೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅಪ್ಪು ನಡೆಸುತ್ತಿದ್ದ ಅಷ್ಟು ಅನಾಥಾಶ್ರಮ, ವೃದ್ಧಾಶ್ರಮ- ಉಚಿತ ಶಾಲೆ ಹಾಗೂ ಗೋಶಾಲೆಗಳಿಗೆ ನೆರವಾಗುವುದಕ್ಕೆ ಯಾರಾದರೂ ಮುಂದೆ ಬಂದರೆ ಒಳ್ಳೆಯದಾಗುತ್ತೆ. ವಿಶಾಲ್ ರಂತೆ ಸ್ಟಾರ್ ಗಳು, ರಾಜಕೀಯದವರು ಯಾರೇ ಆಗಲಿ ಮುಂದೆ ಬಂದು ಟೇಕ್ ಓವರ್ ಮಾಡಿಕೊಂಡು ಸಮಾಜ ಸೇವೆ ಮಾಡಲಿ ಎನ್ನುವುದೇ ಸಕಲರ ಬೇಡಿಕೆ
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ