ಚಲನಚಿತ್ರ ಅಕಾಡೆಮಿಯಿಂದ ಪುನೀತ್ ಸ್ಮರಣಾಂಜಲಿ; ಡಾ.ರಾಜ್ ಅವರಂತೆ ಪುನೀತ್ ನೆನಪು ಸದಾ – ಎನ್.ಮಂಜುನಾಥ್ ಪ್ರಸಾದ್

ಬೆಂಗಳೂರು, ನವೆಂಬರ್ 1 (ಕರ್ನಾಟಕ ವಾರ್ತೆ)- ಕನ್ನಡದ ಮೇರುನಟ ಡಾ.ರಾಜಕುಮಾರ್ ಅವರಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿರಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಹೇಳಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸುವ ಚಿತ್ರ ಸಂಗಮ ಆನ್ಲೈನ್ ಚಿತ್ರೋತ್ಸವದಲ್ಲಿ ಇತ್ತೀಚಿಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೌರವಾರ್ಥ ಪುನೀತ್ ಸ್ಮರಣಾಂಜಲಿ ಆನ್ಲೈನ್ ಚಿತ್ರೋತ್ಸವಕ್ಕೆ ಬೆಂಗಳೂರಿನಲ್ಲಿ ಇಂದು ಚಾಲನೆ ನೀಡಿ ಅವರು ಮಾತನಾಡಿದರು.


ಎಷ್ಟೇ ವರ್ಷಗಳು ಕಳೆದರೂ ಡಾ.ರಾಜಕುಮಾರ್ ಅವರು ಜನರ ಮನಸ್ಸಿನಲ್ಲಿ ಹೇಗೆ ಬೇರೂರಿದ್ದಾರೆಯೋ ಅದೇ ಮಾದರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ್ದು, ಜನರ ಮನಸ್ಸನ್ನು ಗೆದ್ದಿದ್ದಾರೆ. ಪುನೀತ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ನೆನಪು ಸದಾ ಇರಲಿದೆ. ಚಲನಚಿತ್ರ ಅಕಾಡೆಮಿ ಮೂಲಕ ಪುನೀತ್ ಸ್ಮರಣಾಂಜಲಿ ಹಮ್ಮಿಕೊಂಡು ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ ಎಂದರು.
ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಚಿತ್ರಗಳನ್ನು ಆನ್ಲೈನ್ ಮೂಲಕ ಕನ್ನಡ ಚಿತ್ರರಸಿಕರಿಗೆ ಪ್ರದರ್ಶಿಸುವ ಚಿತ್ರ ಸಂಗಮ ವಿನೂತನ ಕಾರ್ಯಕ್ರಮ ಕಳೆದ ವರ್ಷ ಯಶಸ್ವಿಯಾಗಿತ್ತು. ಅಂತೆಯೇ ಈ ಬಾರಿಯೂ ಎರಡನೇ ಆವೃತ್ತಿ ನವೆಂಬರ್ 1ರಿಂದ ನಡೆಯುತ್ತಿದ್ದು, ಪುನೀತ್ ರಾಜಕುಮಾರ್ ಅಭಿನಯದ 10 ಶ್ರೇಷ್ಠ ಚಿತ್ರಗಳು ಚಲನಚಿತ್ರ ಅಕಾಡೆಮಿಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಚಿತ್ರಾಸಕ್ತರು ಅಕಾಡೆಮಿಯ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಈ ಚಿತ್ರಗಳನ್ನು ನೋಡಬಹುದು ಹಾಗೂ ಈ ಮೂಲಕ ಪುನೀತ್ ಅವರಿಗೆ ಗೌರವ ಸಲ್ಲಿಸಬೇಕು ಎಂದರು.


ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ಚಲನಚಿತ್ರವನ್ನು ಜನ ಮಾಧ್ಯಮವಾಗಿಸಿ, ಚಿತ್ರ ವೀಕ್ಷಣೆಯ ಸಂಸ್ಕೃತಿಯನ್ನು ಪಸರಿಸುವ ಹೊಣೆ ಹೊತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಿತ್ರೋತ್ಸವಗಳು, ಅಧ್ಯಯನ ಶಿಬಿರಗಳು, ಚರ್ಚಾಗೋಷ್ಠಿ, ಪ್ರಕಾಶನಗಳ ಮೂಲಕ ಚಲನಚಿತ್ರವನ್ನು ಒಂದು ಬಹುಶಾಸ್ಟ್ತ್ರೀಯ ಅಧ್ಯಯನವಾಗಿಸುವ ಕಾರ್ಯದಲ್ಲಿ ನಿರತವಾಗಿದ್ದು, ಇದರ ಮುಂದುವರಿದ ಪ್ರಯತ್ನವೇ ಚಿತ್ರ ಸಂಗಮ ಆನ್ಲೈನ್ ಕಾರ್ಯಕ್ರಮ ಎಂದರು.
ಪ್ರಯೋಗಾತ್ಮಕ ಕಥೆಗಳು, ರಾಷ್ಟ್ರ-ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳು, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡು ವಿಮರ್ಶೆಗೆ ಒಳಪಟ್ಟ ಚಿತ್ರಗಳು, ವಿಶಿಷ್ಟ ಬಗೆಯ ಪ್ರಾದೇಶಿಕ ಭಾಷಾ ಚಿತ್ರಗಳು, ಕನ್ನಡದ ಕುರಿತು, ಕನ್ನಡಿಗರು ನಿರ್ಮಿಸಿದ ಸುಂದರ ಸಾಕ್ಷ್ಮಚಿತ್ರಗಳು, ಸಿನಿಮಾಗಳು, ಯುವ ತಲೆಮಾರಿನ ನವ ಪ್ರಯತ್ನಗಳನ್ನು ಸಿನಿಮಾಸಕ್ತರಿಗೆ ಹಾಗೂ ಸಿನಿಮಾ ವಿದ್ಯಾರ್ಥಿಗಳಿಗೆ ಅಧ್ಯಯನ ದೃಷ್ಟಿಯಿಂದ ತಲುಪಿಸುವ ಪ್ರಯತ್ನವನ್ನು ಅಕಾಡೆಮಿ ಮಾಡುತ್ತಿದ್ದು, ಈ ಬಾರಿ ಯುವನಟರಿಗೆ ಸ್ಫೂರ್ತಿಯಾಗಿದ್ದ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿದ್ದಾರೆ. ಅವರ ಗೌರವಾರ್ಥ ಪುನೀತ್ ಸ್ಮರಣಾಂಜಲಿ ಹಮ್ಮಿಕೊಳ್ಳಲಾಗಿದೆ ಎಂದರು.
ನವೆಂಬರ್ 1ರಿಂದ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಬೆಟ್ಟದ ಹೂವು (ನ.1-2), ಭಕ್ತ ಪ್ರಹ್ಲಾದ (ನ.3-4), ಮೌರ್ಯ (ನ.5-6), ಪೃಥ್ವಿ (ನ.7-8), ಅಭಿ (ನ.9-10), ಅಜಯ್ (ನ.11-12), ಅರಸು (ನ.13-14), ಮಿಲನ (ನ.15-16), ಪವರ್ (ನ.17-18) ಹಾಗೂ ಅಪ್ಪು (ನ.19-20) ಚಿತ್ರಗಳನ್ನು 20 ದಿನಗಳ ಕಾಲ ಪ್ರದರ್ಶಿಸಲಾಗುತ್ತಿದೆ. ಚಿತ್ರಾಸಕ್ತರು ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕರ್ನಾಟಕ ಚಲನಚಿತ್ರ ಅಕಾಡೆಮಿಯ ವೆಬ್ ಸೈಟ್ www.kcainfo.org ಇಲ್ಲಿ ನೋಂದಾಯಿಸಿಕೊಂಡು ಈ ಚಿತ್ರಗಳನ್ನು ನೋಡುವ ಮೂಲಕ ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.


ಇದೇ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧಿಕೃತ ವೆಬ್ ಸೈಟ್ ಗೆ ಚಾಲನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಜಿ. ಜಗದೀಶ್ ಹಾಗೂ ಅಕಾಡೆಮಿಯ ಎಲ್ಲ ಸದಸ್ಯರು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related Posts

error: Content is protected !!