‘ಪೃಥ್ವಿ’ಯ ಒಡಲು ಸೇರಿತು ಬೆಟ್ಟದ ಹೂವು; ಅಪ್ಪುಗೆ ಕಣ್ಣೀರ ವಿದಾಯ !

ದೊಡ್ಮನೆಯ‌ ಹುಡುಗ, ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ಪೃಥ್ವಿ’ ಮೇಲಿನ ಪಯಣ ಮುಗಿದೇಹೋಯ್ತು.
ವಿಧಿಯ ಆಟಕ್ಕೆ ಹೃದಯಾಘಾತಗೊಂಡು ಉಸಿರು ಚೆಲ್ಲಿದ ಅಪ್ಪು ಅಂತಿಮ ಯಾತ್ರೆ ಮುಗಿಸಿಕೊಂಡು ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟೇ ಬಿಟ್ಟರು.


ಮನೆಮಗನನ್ನು ಕಳೆದುಕೊಂಡ ದುಃಖದಲ್ಲಿ ಇಡೀ ದೊಡ್ಮನೆ ಕಣ್ಣೀರು ಹಾಕುತ್ತಲೇ ಇದೆ. ಇದಕ್ಕೆ,
ಚಿತ್ರರಂಗದ ಸ್ಟಾರ್ ನಟ ನಟಿಯರು ಕೂಡ ಹೊರತಾಗಿಲ್ಲ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಶ್ರುತಿ- ಸುಧಾರಾಣಿ- ರಚಿತರಾಮ್- ಅನುಪ್ರಭಾಕರ್- ರಶ್ಮಿಕಾ- ಯಶ್- ರವಿಚಂದ್ರನ್- ಸುದೀಪ್- ಉಪ್ಪಿ- ಅಭಿಷೇಕ್- ವಿನೋದ್ ಪ್ರಭಾಕರ್- ರಾಕ್ ಲೈನ್ ವೆಂಕಟೇಶ್ – ಬಹದ್ದೂರ್ ಚೇತನ್- ರಮೇಶ್ ಅರವಿಂದ್- ದುನಿಯಾ ವಿಜಯ್ – ಡಾಲಿ ಧನಂಜಯ್ – ವಸಿಷ್ಟ- ವಿಜಯ್ ಪ್ರಕಾಶ್ – ಶಶಿಕುಮಾರ್ ಸೇರಿದಂತೆ ಭಾಗಿಯಾಗಿದ್ದ ಕನ್ನಡದ ಧ್ರುವತಾರೆಗಳೆಲ್ಲರೂ ಕಂಬನಿ ಮಿಡಿದರು. ಹೃದಯ ಭಾರಮಾಡಿಕೊಂಡು ಪುನೀತ್ ರನ್ನು ಕಳುಹಿಸಿಕೊಟ್ಟರು.

ಶುಕ್ರವಾರ ಮಧ್ಯಾಹ್ನದೊತ್ತಿಗೆ ಇಹಲೋಕ ತ್ಯಜಿಸಿದ ಅಪ್ಪುಗೆ ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕಂಠೀರವ ಸ್ಟೇಡಿಯಂನಿಂದ ಬೆಳಗ್ಗೆ 4.45 ರ ಸುಮಾರಿಗೆ ಹೊರಟ ಪಾರ್ಥೀವ ಶರೀರದ ಮೆರವಣಿಗೆ 5.30 ರೊಳಗೆ ಕಂಠೀರವ ಸ್ಡುಡಿಯೋ ತಲುಪಿತು.


ಈಡಿಗ ಸಂಪ್ರದಾಯದಂತೆ ವಿನಯ್ ರಾಜ್ ಕುಮಾರ್
ಅಂತಿಮಕಾರ್ಯದ ವಿಧಿ ವಿಧಾನಗಳನ್ನು ನೆರವೇರಿಸಿದರು.ರಾಣೆಬೆನ್ನೂರಿನ ಶರಣಬಸವೇಶ್ವರ ಮಠದ ಡಾ. ಪರಮಾನಂದ ಸ್ವಾಮೀಜಿಯಿಂದ ಮಂತ್ರ ಪಠಣೆ ಮಾಡಿದರು. ಕುಶಾಲು ತೋಪು ಸಿಡಿಸಿ, ರಾಷ್ಟ್ರಗೀತೆ ಮೂಲಕ ಸಕಲ ಸರ್ಕಾರಿ ಗೌರವಗಳನ್ನು ನೀಡುವುದರ ಮೂಲಕ ಅಪ್ಪು ಅಂತ್ಯಸಂಸ್ಕಾರಕ್ಕೆ ಸರ್ಕಾರದವರು ಸಹಕರಿಸಿದರು.

ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಯಲ್ಲಿ ಸಿ.ಎಂ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮುನಿ ರತ್ನ, ಶಾಸಕ ಕುಮಾರ್ ಬಂಗಾರಪ್ಪ, ಶಾಸಕ ಎಸ್. ಆರ್. ವಿಶ್ವನಾಥ್, ಸಚಿವರಾದ ಆರ್. ಅಶೋಕ್ ಸೇರಿದಂತೆ ಹಲವು ರಾಜಕೀಯ ಧುರೀಣರು ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.‌ ಕಳೆದ ಮೂರು ದಿನಗಳಿಂದಲೂ ದೊಡ್ಮನೆಯ ಜೊತೆಗಿದ್ದು ಕಷ್ಟಕ್ಕೆ ಸ್ಪಂಧಿಸುತ್ತಿರುವ ಗಣ್ಯರು, ತಮ್ಮನನ್ನು ಕಳೆದುಕೊಂಡು ಕಣ್ಣೀರು‌ ಸುರಿಸುತ್ತಲೇ ಇದ್ದ ಶಿವಣ್ಣ ಹಾಗೂ ರಾಘಣ್ಣರಿಗೆ ಎಲ್ಲಾ ಗಣ್ಯರುಗಳು ಕೂಡ ಸಂತೈಸುವ ಕೆಲಸ ಮಾಡ್ತಿದ್ದರು. ಆದರೆ, ಜೀವವೇ ಆಗಿದ್ದ ಸಹೋದರನ ಸಾವು ಶಿವಣ್ಣ ಹಾಗೂ ರಾಘಣ್ಣರನ್ನ ಭಾದಿಸುತ್ತಿದ್ದೆ. ಇಬ್ಬರು ಅಣ್ತಮ್ಮಂದಿರ ಹೃದಯ ನುಚ್ಚುನೂರಾಗಿದೆ.

ಇನ್ನೂ ಪತಿಯನ್ನು ಕಳೆದುಕೊಂಡ ದುಃಖ ಅಶ್ವಿನಿ ಪುನೀತ್ ರನ್ನು ಮೌನ ಕ್ಕೆ ‌ಶರಣಾಗುವಂತೆ ಮಾಡಿದೆ. ಅಪ್ಪನ ಅಗಲಿಕೆ ವಂದಿತಾ ಹಾಗೂ ಧೃತಿಯನ್ನ ಕಂಗಾಲಾಗಿಸಿದೆ. ಅಪ್ಪಾ‌.. ಅಪ್ಪಾ.. ಅಪ್ಪಾ.. ಎನ್ನುತ್ತಲೇ ನೋವುಣ್ಣುತ್ತಿದ್ದಾರೆ. ಇವರೊಟ್ಟಿಗೆ ಕೋಟ್ಯಾಂತರ ಅಭಿಮಾನಿಗಳೂ ಕೂಡ ದುಃಖಿತರಾಗಿದ್ದಾರೆ.
ಆಪ್ತರು ಹಾಗೂ ಕುಟುಂಬ ಸ್ಥರಿಗಷ್ಟೇ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶವಿದ್ದಿದ್ದರಿಂದ ಫ್ಯಾನ್ಸ್ ನಿರಾಸೆಗೊಂಡಿದ್ದಾರೆ. ಸಾರ್ವಜನಿಕ ದರ್ಶನ ಮಾಡಿದರೂ ಕೂಡ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗಲಿಲ್ಲವಲ್ಲ ಎನ್ನುವ ಬೇಜಾರ್ ನಲ್ಲಿದ್ದಾರೆ. ಹೀಗಾಗಿ ದೊಡ್ಮನೆ ಕುಟುಂಬಸ್ಥರು ಅಂತಿಮ ನಮನದ ನಂತರ ಅವಕಾಶ ಮಾಡಿಕೊಟ್ಟಿದ್ದಾರೆ. ಸಾಗರೋಪಾದಿಯಲ್ಲಿ ಅಭಿಮಾನಿಗಳು ಅಪ್ಪು ಅಂತ್ಯಸಂಸ್ಕಾರಗೊಂಡ ಜಾಗಕ್ಕೆ ಬಂದು ನಮಿಸುತ್ತಿದ್ದಾರೆ.

ಭಾವುಕಗೊಂಡು ವಿದಾಯ ಹೇಳುತ್ತಿದ್ದಾರೆ.‌ ಏನೇ ಹೇಳಿ ಭಗವಂತ ದೊಡ್ಮನೆ ರಾಜಕುಮಾರನನ್ನು ನೋಡಿ ಅಸೂಹೆ ಪಟ್ಟುಬಿಟ್ಟ. ಕೋಟ್ಯಾಂತರ ಭಕ್ತರಿಗೆ ಅಪ್ಪು ಆರಾಧ್ಯದೈವ ವಾಗಿದ್ದನ್ನು ನೋಡಿ‌ ದೇವರಿಗೆ ಸಹಿಸಿಕೊಳ್ಳೋದಕ್ಕೆ ಆಗಲಿಲ್ಲ ಅನ್ಸುತ್ತೆ ಅದಕ್ಕೆ ಬೇಗ ಕಿತ್ಕೊಂಡುಬಿಟ್ಟಿದ್ದಾನೆ. ಇನ್ಮೇಲೆ ಆದರೂ ದೈವಸಮಾನರನ್ನು ಅರ್ಧ ವಯಸ್ಸಿಗೆ ಕಿತ್ತುಕೊಳ್ಳದಿರಲಿ ಎನ್ನುವುದೇ ಸಕಲರ ಬೇಡಿಕೆ

ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Related Posts

error: Content is protected !!