ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ !ಶುಕ್ರವಾರ ಶುಭ ಅಂತಾರೆ, ಆದ್ರೆ ಕನ್ನಡ ಚಿತ್ರರಂಗದ ಪಾಲಿಗೆ ಇದೇ ಶುಕ್ರವಾರ ಕರಾಳ ದಿನವಾಗಿ ಪರಿಣಮಿಸಿದೆ. ಬಹುಶ: ಕನ್ನಡ ಚಿತ್ರರಂಗ ಹಿಂದೂ-ಮುಂದೂ ಎಂದೆಂದಿಗೂ ಇಂತಹ ಘನಘೋರ ಆಘಾತವನ್ನು ಅನುಭವಿಸಲು ಸಾಧ್ಯವೇ ಇಲ್ಲ ಎನ್ನುವಂತಹ ದೊಡ್ಡ ಆಘಾತವೇ ನಡೆದು ಹೋಗಿದೆ. ದೊಡ್ಮನೆಯ ಮಹಾನ್‌ ಪ್ರತಿಭೆ, ಕನ್ನಡಿಗರ ಪ್ರೀತಿಯ ಅಪ್ಪು, ಅಭಿಮಾನಿಗಳ ನೆಚ್ಚಿನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಇನ್ನಿಲ್ಲ ಎನ್ನುವ ಅರಗಿಸಿಕೊಳ್ಳಲಾಗದ ಸುದ್ದಿಯನ್ನು ಅದೇಗೆ ನಂಬಬೇಕೋ ಗೊತ್ತಾಗುತ್ತಿಲ್ಲ…

ಆದರೂ ಸತ್ಯ. ತೀವ್ರ ಹೃದಯಘಾತದಲ್ಲಿ ಪುನೀತ್‌ ರಾಜ್‌ ಕುಮಾರ್‌ ಶುಕ್ರವಾರ ಬೆಳಗ್ಗೆ ವಿಧಿವಶರಾದರು. ಇಂತಹದೊಂದು ಕೆಟ್ಟ ದಿನವನ್ನು ಯಾರು ಕೂಡ, ಯಾವುದೇ ಕ್ಷಣವೂ ಕನಸಲ್ಲೂ ಕಂಡಿರಲು ಸಾಧ್ಯವೇ ಇಲ್ಲ. ಆದರೆ ವಿಧಿಯಾಟದ ಮುಂದೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸೋತು ಹೋಗಿದ್ದಾರೆ. ಇನ್ನು ಬಾಳಿ ಬದುಕಬೇಕಾದ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅವರಿಲ್ಲ ಎನ್ನುವುದು ಕನ್ನಡಿಗರ ದೌರ್ಬಾಗ್ಯವೋ, ದುರಾದೃಷ್ಟವೋ ಗೊತ್ತಿಲ್ಲ. ಅವರಿಲ್ಲದ ಈ ಕ್ಷಣಕ್ಕೆ ಕನ್ನಡ ನಾಡು, ಕನ್ನಡ ಚಿತ್ರರಂಗ ಎರಡು ಕೂಡ ಬಡವಾಗಿದೆ. ಅದು ಇಡೀ ಕರುನಾಡೇ ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ.


ಅವರಿಲ್ಲ ಎಂಬ ತಡೆಯಲಾಗದ ನೋವಿನ ಸಂಕಟಕ್ಕೆ ಅವರಿದ್ದಾರೆಯೇ ಅಂತ ನಾವೆಲ್ಲ ಸಮಾಧಾನಿಸಿಕೊಂಡರೂ, ವಾಸ್ತವದಲ್ಲಿ ಅವರಿಲ್ಲ. ನಿಮ್ಮೆಲ್ಲರ ಪ್ರೀತಿಯ ಅಪ್ಪು ಇನ್ನು ನೆನಪು ಮಾತ್ರ. ದೈಹಿಕವಾಗಿ ಅವರಿಲ್ಲ ಎನ್ನುವ ಸತ್ಯವನ್ನು ಸಂಕಟದ ನಡುವೆಯೂ ಒಪ್ಪಿಕೊಳ್ಳುತ್ತಲೇ ಪುನೀತ್‌ ಅವರು ನಡೆದು ಬಂದ ಹಾದಿ, ಅವರ ವ್ಯಕ್ತಿತ್ವ, ನಟನಾಗಿ ಮಿಂಚಿದ ಪರಿ, ಸಮಾಜಕ್ಕಾಗಿ ಮಿಡಿದ ರೀತಿ..ಹೀಗೆ ಎಲ್ಲವನ್ನು ಇಲ್ಲಿ ಅಕ್ಷರಗಳೊಂದಿಗೆ ಕಟ್ಟಿಕೊಡಲು ಹೊರಟರೆ ಅದೊಂದು ಬೃಹತ್‌ ಗ್ರಂಥವೇ ಆದೀತು. ಯಾಕಂದ್ರೆ ಪುನೀತ್‌ ಅಂದ್ರೆ ಬರೀ ಪುನೀತ್‌ ಅಲ್ಲ, ತಂದೆಯಂತೆಯೇ ಮಗ. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್‌ ಅವರೊಗಿನ ಆಗಾದ ಪ್ರತಿಭೆಯನ್ನು ಬಹುತೇಕ ತಮ್ಮೊಳಗೆ ಅವಗಾನಿಸಿಕೊಂಡ ಅಪರೂಪದ ನಟ ಪುನೀತ್‌ ರಾಜ್ ಕುಮಾರ್.‌

ಈ ಮಾತು ಈ ಕ್ಷಣ ಉತ್ಪ್ರೇಕ್ಷೆ ಎನಿಸಿದರೂ ಸತ್ಯವೂ ಹೌದು. ರಾಜಕುಮಾರ್‌ ಅವರೊಂದಿಗೆ ಪುನೀತ್‌ ಬಾಲ್ಯದಲ್ಲಿ ಅಭಿನಯಿಸಿದ ʼಬೆಟ್ಟದ ಹೂವುʼ, ʼಯಾರಿವನುʼ, ʼಭಕ್ತ ಪ್ರಹ್ಲಾದʼ ಸೇರಿದಂತೆ ಹಲವು ಚಿತ್ರಗಳಲ್ಲಿ ಚಿತ್ರಗಳಲ್ಲಿ ಅಪ್ಪ-ಮಗ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದೇ ಇದಕ್ಕೆ ಸಾಕ್ಷಿ. ದೊಡ್ಮನೆಯ ಕುಟುಂಬದಲ್ಲಿ ವರನಟ ರಾಜ್‌ಕುಮಾರ್‌ ನಟನೆಯ ಪ್ರಭಾವಳಿ ಕಂಡಿದ್ದೇ ಪುನೀತ್‌ ಅವರ ನಟನೆಯಲ್ಲಿಯೇ ಹೆಚ್ಚು. ಬಾಲ್ಯದಿಂದಲೇ ಪುನೀತ್‌ ನಟನೆಗೆ ಇಳಿದಿದ್ದು ಇದಕ್ಕೆ ಕಾರಣವೋ, ರಾಜಕುಮಾರ್‌ ಅವರ ರೂಪ ಪುನೀತ್‌ ಅವರ ಒಳಗಡೆಯೇ ಇತ್ತೋ ಗೊತ್ತಿಲ್ಲ, ನಟನೆಯ ಎಲ್ಲಾ ಪ್ರಕಾರಗಳಲ್ಲೂ ಸೈ ಎನಿಸಿಕೊಂಡ ಅಪರೂಪದ ಪ್ರತಿಭೆ ನಿಮ್ಮೆಲ್ಲರ ಪ್ರೀತಿಯ ಅಪ್ಪು.

ಅಣ್ಣಾವ್ರ ಕುಟುಂಬದಲ್ಲಿ ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌ ಬಣ್ಣ ಹಚ್ಚುವ ಮೊದಲೇ ನಟನಾಗಿ ಬೆಳ್ಳಿ ತೆರೆಯಲ್ಲಿ ಕಂಡವರು ಪುನೀತ್‌ ರಾಜ್‌ ಕುಮಾರ್.‌ ಬೆಟ್ಟದ ಹೂವು, ಯಾರಿವನು, ಸೇರಿದಂತೆ ಅವರ ಬಾಲ್ಯದಲ್ಲಿನ ಅಭಿನಯಸಿದ ಚಿತ್ರಗಳಲ್ಲಿ ಅಪ್ಪು ಅವರ ಅಭಿನಯ ಕಂಡರೆ ಮುಗ್ದ ಮಕ್ಕಳು ಕೂಡ ಎದ್ದು ನಟಿಸುವಂತೆಯೇ ಮಾಡುತ್ತದೆ. ಅದೇ ಕಾರಣಕ್ಕೆ ಅವರಿಗೆ ಬೆಟ್ಟದ ಹೂವು ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಬಂತು. ನಟನೆ ಎಂಬುದು ಅವರಿಗೆ ಅಲ್ಲಿಂದಲೇ ವರವಾಗಿ ಬಂತು. ಮುಂದೆ ದೊಡ್ಡ ಸ್ಟಾರ್‌ ಆಗಿ ಕರುನಾಡಿನ ಪ್ರೀತಿಯ ಅಪ್ಪು ಆಗಿ ಮೆರೆಯುವಂತೆ ಮಾಡಿತು.

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಚಿತ್ರಗಳು ಒಂದೇ ಎರಡೇ ಅಭಿನಯಸಿದ ಚಿತ್ರಗಳೆಲ್ಲವೂ ಸೂಪರ್‌ ಹಿಟ್‌ ಅಂದ್ರೆ, ನಿರ್ಮಾಪಕರ ಪಾಲಿಗೆ ಅಪ್ಪು ರಿಸರ್ವ್‌ ಬ್ಯಾಂಕ್ನಂತೆಯೇ ಆಗಿದ್ದರು. ನಟನೆ, ನೃತ್ಯ, ಪೈಟ್ಸ್‌ ಹೀಗೆ ಎಲ್ಲದ್ದಕ್ಕೂ ಸೈ ಎನ್ನುವ ಅವರ ಕಲಾ ಪ್ರೌಡಿಮೆಗೆ ಪುಟಾಣಿಗಳು ಕೂಡ ಮನಸೋತಿದ್ದರು. ಕನ್ನಡ ಚಿತ್ರರಂಗದ ಪಾಲಿಗೆ ಅಂತಹ ಅಪರೂಪದ ನಟ ಪುನೀತ್‌ ರಾಜ್‌ ಕುಮಾರ್.‌ ನಾಯಕ ನಟನಾಗಿ ಸಿನಿಮಾ ರಂಗ ಪವೇಶಿದ ಆರಂಭದ ದಿನಗಳಲ್ಲಿ ಒಂದಷ್ಟು ವಿವಾದಗಳಲ್ಲಿ ಸುದ್ದಿಯಾಗಿದ್ದರೂ, ಒಟ್ಟಾರೆ ಅವರೊಬ್ಬ ಅನವಶ್ಯಕ ವಿವಾದಕ್ಕೆ ಸಿಲುಕದ ನಿರ್ವೀವಾದದ ವ್ಯಕ್ತಿ. ಅಗೇನೋ ಆಯಿತು, ಆದರೆ ಅಲ್ಲಿಂದ ವಾಪಾಸ್‌ ಬಂದು ಅವರು ಸ್ಟಾರ್‌ ಆಗಿ ಮೆರೆದಿದ್ದು ಒಂದು ಪವಾಡವೇ ಹೌದು.

ಕನ್ನಡ ಚಿತ್ರರಂಗದ ಪಾಲಿಗೆ ದೊಡ್ಮನೆ ಅನ್ನೋದು ಹೆಸರಷ್ಟೇ, ಅದರಾಚೆ ದೊಡ್ಮನೆ ಅಂತ ಎಂದಿಗೂ ಡೊಡ್ಡಸ್ತಿಕೆ ತೋರಿಸಿದ್ದೇ ಇಲ್ಲ. ಕುಟುಂಬದಂತೆಯೇ ಪುನೀತ್‌ ರಾಜ್‌ ಕುಮಾರ್‌ ಕೂಡ ಹಾಗೆಯೇ. ರಾಜಕುಮಾರ್‌ ಅವರ ಮಗ, ದೊಡ್ಡ ಸ್ಟಾರ್‌ ಎನ್ನುವ ಹಿನ್ನೆಲೆ ಇದ್ದರೂ ಎಂದಿಗೂ ಸಾರ್ವಜನಿಕ ಕ್ಷೇತ್ರದಲ್ಲಿ ಆ ನೇಮ್‌ ಹಾಕಿಕೊಂಡಿರಲಿಲ್ಲ. ಅಣ್ಣಾವ್ರ ಹಾಗೆಯೇ ವಿನಯದಲ್ಲಿಯೇ ಎಲ್ಲರ ಮನ ಗೆದಿದ್ದರು. ಹಾಗೆಯೇ ಯಾವುದೇ ಪ್ರಬಾವಳಿಯಲ್ಲೂ ಬದುಕಿರಲಿಲ್ಲ. ಎಲ್ಲವೂ ಇದ್ದರು ಇಲ್ಲದಂತೆಯೇ ಸರಳತೆಯ ಮೂಲಕ ಬದುಕಿದ್ದರು. ಹಾಗೆಯೇ ದೊಡ್ಡ ಮಾನವೀಯ ಗುಣ ಹೊಂದಿದ್ದ ವ್ಯಕ್ತಿತ್ವ ಅವರದು.

ಯಾರೇ ಕಷ್ಟ ಅಂತ ಮನೆ ಬಾಗಿಲಿಗೆ ಹೋದರೆ, ಇನ್ನಾವುದೋ ಕಡೆ ನೆರೆ ಹಾವಳಿ ಅಥವಾ ಇನ್ನಾವುದೋ ಪ್ರಕೃತಿ ವಿಕೋಪಗಳು ಆದವು ಅಂದಾಗ, ಕೊಡುಗೈ ದಾನಿಯಂತೆ ತಮ ಕೈಲಾದ ಸೇವೆ ಮಾಡಿ, ಅದು ಗೊತ್ತಾಗದಂತೆಯೇ ಇದ್ದವರು. ಅಣ್ಣಾವ್ರಂತೆಯೇ ಆರೋಗ್ಯದ ಕಡೆ ಅತೀ ಹೆಚ್ಚು ಗಮನ ಹರಿಸಿದ್ದರು. ಸದಾ ಜಿಮ್‌ ನಲ್ಲಿ ದೇಹ ದಂಡಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದರು. ಅದೇನಾಯಿತೋ ಗೊತ್ತಿಲ್ಲ, ಹೃದಯಾಘಾತ ಎನ್ನುವುದು ಅವರನ್ನು ತಿರುಗಿ ಬಾರದ ಲೋಕಕ್ಕೆ ಕರೆದುಕೊಂಡು ಹೋಗಿದೆ. ಈ ನೋವನ್ನು ಈ ಕರುನಾಡು ಅದೇಗೆ ಸಹಿಸಿಕೊಳ್ಳುತ್ತದೆಯೋ ಗೊತ್ತಿಲ್ಲ. ಆದರೂ ನೋವು ತಡೆದುಕೊಳ್ಳಲೇ ಬೇಕು.

Related Posts

error: Content is protected !!