ದೊಡ್ಮನೆಯೇ ಹಾಗೆ. ಅದು ಬರೀ ಹೆಸರಷ್ಟೇ, ಹಾಗೆಂದು ಎಂದಿಗೂ ದೊಡ್ಡಸ್ತಿಕೆ ತೋರಿಸಿಲ್ಲ ಅಣ್ಣಾವ್ರ ಕುಟುಂಬ. ಒಂದ್ರೀತಿ ಅಣ್ಣಾವ್ರ ಮುಂದುವರೆಕೆಯೇ ವ್ಯಕ್ತಿತ್ವ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದಿಗೂ ತಾವೊಬ್ಬ ದೊಡ್ಡ ಸ್ಟಾರ್ ಅಂತ ಎಂದಿಗೂ ಮರೆದಿರಲಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎನ್ನುವಂತೆ ಎಲ್ಲಿಯೇ ಸಿಕ್ಕಾಗಲೂ ಅದೇ ವಿನಯತೆ, ಅದೇ ಸಿಂಪ್ಲಿಸಿಟಿ ಮೂಲಕವೇ ಮಾಧ್ಯಮದವರನ್ನು ಮಾತನಾಡಿಸುವ ಪರಿಯೇ ಅಚ್ಚರಿ ತರಿಸುತ್ತಿತ್ತು.
ಅಪ್ಪ ದೊಡ್ಡ ಸ್ಟಾರ್, ಅಮ್ಮ ದೊಡ್ಡ ನಿರ್ಮಾಪಕರು, ಹಾಗೆಯೇ ಅಣ್ಣಂದಿರೆಲ್ಲ ಸ್ಟಾರ್ ಗಳು, ಇಷ್ಟೆಲ್ಲ ಪ್ರಭಾವ ಇದ್ದರೂ ಸಾರ್ವಜನಿಕ ಕ್ಷೇತ್ರದಲ್ಲಿ ಅದೆಲ್ಲವನ್ನು ಎಂದಿಗೂ ತೋರಿಸಿರಲಿಲ್ಲ ಪುನೀತ್. ಅನೇಕ ಸಿನಿಮಾ ಕಾರ್ಯಕ್ರಮಗಳಿಗೆ ಬಂದಾಗೆಲ್ಲ ವಿನಯ ವಿದ್ಯಾರ್ಥಿಯಂತೆ ವೇದಿಕೆಯಲ್ಲಿ ಕುಳಿತು, ಅಷ್ಟೇ ವಿನಯದಲ್ಲಿ ನಾಲ್ಕು ಮಾತನಾಡಿ, ಸಿನಿಮಾ ತಂಡದವರಿಗೆ ಶುಭ ಹಾರೈಸಿ ಹೋಗುತ್ತಿದ್ದ ಅವರ ಸರಳ ಮತ್ತು ವಿನಯತೆಯ ಮೂಲಕವೇ ಅವರೊಬ್ಬ ದೊಡ್ಡ ಸ್ಟಾರ್ ಆಗಿ ಮರೆದಿದ್ದರು.
ಅಭಿಮಾನಿಗಳ ಪಾಲಿಗೆ ಅವರೊಬ್ಬ ಪವರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರು, ಕನ್ನಡ ಚಿತ್ರರಂಗ ಪಾಲಿಗೆ ಪ್ರೀತಿಯ ಅಪ್ಪು ಆಗಿದ್ದರು. ಚಿತ್ರರಂಗದ ಯಾರೇ ಹಿರಿಯರು ಸಿಕ್ಕರೂ, ಅವರಿಗೆ ನಮಸ್ಕರಿಸಿ, ಗೌರವಿಸಿ, ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಪರಿಯೇ ಮಾದರಿಯಾಗಿತ್ತು. ಸಿನಿಮಾ ರಂಗಕ್ಕೆ ಯಾರೇ ಹೊಸಬರು ಬಂದರೂ, ಅವರನ್ನು ಅಷ್ಟೇ ಗೌರವದಿಂದ ಸ್ವಾಗತಿಸುವ ರೀತಿ ಇನ್ನೂ ವಿಶೇಷ. ಸಾಮಾನ್ಯವಾಗಿ ಇತ್ತೀಚಿಗೆ ಸಿನಿಮಾ ರಂಗಕ್ಕೆ ಬಂದು ಆಕಸ್ಮಿಕವಾಗಿ ಗೆದ್ದು ಬೀಗಿದವರೆಲ್ಲ ಸ್ಟಾರ್ ಎಂಬ ಕೊಂಬು ಹೊದ್ದು ಮರೆದರು, ಪುನೀತ್ ಬಾಕ್ಸ್ ಆಫೀಸ್ ಸ್ಟಾರ್ ಆಗಿದ್ದರೂ, ಸ್ಟಾರ್ ಎಂಬ ಕೊಂಬು ಮೂಡಿಸಿಕೊಂಡಿರಲಿಲ್ಲ. ಅದು ಅವರ ಸರಳತೆಯ ಇನ್ನೊಂದು ವಿಶೇಷವೇ ಹೌದು.