ಅಣ್ಣಾವ್ರು ನಿಧನದ ಬಳಿಕ ಕಣ್ಣುಗಳನ್ನು ದಾನ ಮಾಡಲಾಗಿತ್ತು. ಈಗ ಅಪ್ಪ ಕೊಟ್ಟ ಮಾತನ್ನು ಮಗ ಕೂಡ ಉಳಿಸಿಕೊಂಡಿದ್ದಾರೆ. ಹೌದು, ಪುನೀತ್ ರಾಜಕುಮಾರ್ ಅವರ ಕಣ್ಣುಗಳನ್ನು ಕುಟುಂಬ ದಾನ ಮಾಡಿದೆ. ಪುನೀತ್ ಅವರು ನಿಧನರಾದರು ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ, ಡಾ.ರಾಜಕುಮಾರ್ ಅವರ ಕುಟುಂಬದವರು ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ಭುಜಂಗ ಶೆಟ್ಟಿ ಅವರನ್ನು ಸಂಪರ್ಕಿಸಿ, ಪುನೀತ್ ಅವರ ನಿಧನದ ವಿಷಯ ತಿಳಿಸಿ, ಕಣ್ಣುಗಳನ್ನು ದಾನ ಮಾಡುವ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಡಾ.ಭುಜಂಗಶೆಟ್ಟಿ ಅವರು, ತಮ್ಮ ತಂಡದ ಜೊತೆ ವಿಕ್ರಮ್ ಆಸ್ಪತ್ರೆಗೆ ಧಾವಿಸಿ, ಅಲ್ಲಿ ಕಣ್ಣುಗಳನ್ನು ಪಡೆದಿದ್ದಾರೆ.
ಪುನೀತ್ ರಾಜಕುಮಾರ್ ಅವರು ಅಪ್ಪನಂತೆಯೇ ತಮ್ಮ ಕಣ್ಣುಗಳನ್ನೂ ಸಹ ದಾನ ಮಾಡಿದ್ದಾರೆ.
ನೇತ್ರಾಲಯ ಉದ್ಘಾಟನೆಯಲ್ಲಿ ಅಣ್ಣಾವ್ರು ಸ್ವತಃ ನನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ, ನಮ್ಮ ಮನೆಯವರು, ಮಕ್ಕಳು ಸಹ ನೇತ್ರದಾನ ಮಾಡ್ತೀವಿ ಅಂದಿದ್ದರು. ಹಾಗೆಯೇ ಮಕ್ಕಳೆಲ್ಲರೂ ಅಪ್ಪನಂತೆಯೇ ನೇತ್ರದಾನ ಮಾಡುವುದಾಗಿ ಹೇಳಿದ್ದರು. ಈಗ ಪುನೀತ್ ಆ ಮಾತನ್ನು ಉಳಿಸಿಕೊಂಡಾಗಿದೆ. ಆದರೆ, ಇಷ್ಟು ಬೇಗ ಕಣ್ಣುಗಳನ್ನು ದಾನ ಮಾಡಬೇಕಾದ ಸ್ಥಿತಿ ಬಂದಿದ್ದು ದುರಂತ.
ಪುನೀತ್ ರಾಜಕುಮಾರ್ ಅವರ ಕಣ್ಣುಗಳನ್ನು, ಇಬ್ಬರಿಗೆ ದಾನ ಮಾಡಲಾಗುತ್ತದೆ ಎಂದು ಡಾ.ಭಜುಂಗಶೆಟ್ಟಿ ಅವರು ಹೇಳಿದ್ದಾರೆ. ಸದ್ಯ ಪುನೀತ್ ರಾಜಕುಮಾರ್ ಅವರ ನಾರಾಯಣ ನೇತ್ರಾಲಯಕ್ಕೆ ತರಲಾಗಿದ್ದು, ವೇಟಿಂಗ್ ಲಿಸ್ಟ್ ಇರುವುದರಿಂದ ಯಾರಿಗೆ ಅದು ಸೂಟ್ ಆಗುತ್ತೋ ನೋಡಿ, ಅವರಿಗೆ ನಾಳೆ, ಅಥವಾ ನಾಡಿದ್ದು ಅಳವಡಿಸಲಾಗುತ್ತದೆ. ಇಬ್ಬರಿಗೆ ಕಣ್ಣುಗಳನ್ನು ಅಳವಡಿಸುವ ಅವಕಾಶ ಇದೆ. ನೇತ್ರದಾನ ಮೇಲೆ ಅವರಿಗೆ ನಿಜವಾದ ಕಾಳಜಿ ಇತ್ತು. ಅಣ್ಣಾವ್ರು ನೇತ್ರದಾನ ಪವಿತ್ರವಾದದ್ದು ಅಂತ ಹೇಳೋರು. ಈಗ ಪುನೀತ್ ಅವರ ನಿಧನ ನಂಬಲು ಅಸಾಧ್ಯ ಎಂದಿದ್ದಾರೆ ಭುಜಂಗಶೆಟ್ಟಿ.