ಸಾಧು ನಿರ್ದೇಶನದಲ್ಲಿ ಮಹಾಯೋಗಿ ಸಿದ್ಧರೂಢ! ಇದು ಶ್ರೀಗಳಜೀವನ ಚರಿತ್ರೆ; ಪವರ್‌ ಟ್ರೇಲರ್‌ ರಿಲೀಸ್

‌ “ಮಹಾಯೋಗಿ ಸಿದ್ದರೂಢ” ಹೆಸರಿನ ಈ ಚಿತ್ರವನ್ನು ಸಂಗೀತ ನಿರ್ದೇಶಕ, ನಟ ಸಾಧುಕೋಕಿಲ ನಿರ್ದೇಶಿಸಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿ, ಶುಭ ಕೋರಿದರು. ಬಾಗಲಕೋಟೆಯ ಮುಧೋಳದ ಮಂಟೂರಿನ ಶ್ರೀ ಸದಾನಂದ ಮಹಾಸ್ವಾಮಿಗಳು ಈ ಚಿತ್ರ ನಿರ್ಮಾಣ ಮಾಡಿರುವುದು ವಿಶೇಷ.

“ನಮ್ಮ ಮನೆಗೂ, ಸಿದ್ದರೂಢ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪಾಜಿ ಅವರಾಗಲಿ, ನಮ್ಮ ಕುಟುಂಬದ ಯಾರೇ ಆಗಲಿ, ಹುಬ್ಬಳ್ಳಿಗೆ ಹೋದಾಗ ಸಿದ್ದರೂಢರ ಮಠಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ನಮ್ಮ ಅಜ್ಜಿ ಅವರು ಕೆಲವು ದಿನಗಳ ಕಾಲ ಈ ಮಠದಲ್ಲೇ ಇದ್ದರು ಎಂದು ಅಪ್ಪಾಜಿ ಹೇಳುತ್ತಿದ್ದರು. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಬರಬೇಕೆಂದು ಸಾಧುಕೋಕಿಲ ಅವರು ಕರೆದಾಗ ಸಂತೋಷವಾಯಿತು. ಟ್ರೇಲರ್ ತುಂಬಾ ಚೆನ್ನಾಗಿದೆ. ಸಿನಿಮಾ ನೋಡಲು ನಾನು ಕಾತುರನಾಗಿದ್ದೇನೆ ಎಂಬುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾತು.

ಶರಣ ಶ್ರೇಷ್ಠರಾದ ಸಿದ್ದರೂಢರ ಜೀವನಾಧಾರಿತ ಚಿತ್ರ ನಿರ್ದೇಶನ ಮಾಡಿದ್ದು ನನ್ನ ಪುಣ್ಯ. ಮಂಟೂರಿನ ಗುರುಗಳು ನನ್ನನ್ನ ಕರೆದು ಈ ರೀತಿಯ ಚಿತ್ರ ಮಾಡಿಕೊಬೇಕೆಂದು ಹೇಳಿದರು. ಈ ಸಲುವಾಗಿ ನನ್ನನ್ನು ದೆಹಲಿಗೆ ಕಳುಹಿಸಿ ಅಲ್ಲಿ ಸ್ವಾಮಿನಾರಾಯಣ ಆಶ್ರಮದಲ್ಲಿ ಗುರುಗಳ ಕುರಿತು ಚಿತ್ರ ಮಾಡಿದ್ದಾರೆ. ನೋಡಿ ಬನ್ನಿ ಎಂದರು. ನೋಡಿ ಬಂದೆ. ಎಲ್ಲರಿಗೂ ಸಾಧುಕೋಕಿಲ, ಇಂತಹ ಚಿತ್ರ ಮಾಡಿದ್ದಾರಾ? ಎಂಬ ಆಶ್ಚರ್ಯ. ನನಗೂ ಮೊದಲು ಹಾಗೆ ಅನಿಸಿತು.
ಹೆಚ್ಚಿನ ಜನ ಹುಬ್ಬಳ್ಳಿಯ ಸಿದ್ದರೂಢ ಮಠ ನೋಡಿರುತ್ತೀರಾ‌. ಆದರೆ ಮಂಟೂರಿನ ಸಿದ್ದರೂಢ ಮಠಕ್ಕೆ ಹೋಗಿ ಬನ್ನಿ. ಒಂದು ರೀತಿ ಸ್ವಾಮಿ ನಾರಾಯಣ ಮಂದಿರ ಇದ್ದ ಹಾಗೆ ಇದೆ. ನಮ್ಮ ಚಿತ್ರದಲ್ಲಿ ಸಿದ್ದರೂಢರ ಎಂಟು ವರ್ಷದಿಂದ ನಲವತ್ತೆಂಟು ವರ್ಷಗಳ ನಡುವೆ ನಡೆಯುವ ಮಹಿಮೆಗಳನ್ನು ತೋರಿಸಲಾಗಿದೆ.

ಮಂಟೂರು, ಹೈದರಾಬಾದ್, ಕಾಶ್ಮೀರ, ಸಕಲೇಶಪುರ ಹಾಗೂ ಕರ್ನಾಟಕದ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣ ನಡೆಯುವಾಗ ನನಗೂ ಕೆಲವು ವಿಶೇಷ ಅನುಭವಗಳಾದವು. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರ ನಿರ್ದೇಶನಕ್ಕೆ ನನಗೆ ನನ್ನ ಪುತ್ರ ಸುರಾಗ್ ಮಾಡಿದ ಸಹಾಯ ಮರೆಯುವಂತಿಲ್ಲ. ಇದೇ ನವೆಂಬರ್ 9ರಂದು ಮಂಟೂರಿನ ಚಿತ್ರಮಂದಿರದಲ್ಲಿ 55 ನಿಮಿಷಗಳ ಅವಧಿಯ ಈ ಚಿತ್ರ ಬಿಡುಗಡೆಯಾಗುತ್ತಿದೆ. ಅದೊಂದೆ ಕಡೆ ಮಾತ್ರ ಈ ಚಿತ್ರ ನಿರಂತರವಾಗಿ ಪ್ರದರ್ಶನವಾಗುತ್ತಿರುತ್ತದೆ ಎಂದರು ಸಾಧುಕೋಕಿಲ.

ಮಹಾಶರಣರಾದ ಸಿದ್ದರೂಢರ ಮಹಿಮೆ ಅಪಾರ. ಸುಮಾರು ಏಳುವರೆ ಸಾವಿರಕ್ಕೂ ಅಧಿಕ ಮಾರ್ಗವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದವರು ಅವರು. ಅಂತಹ ಮಹಿಮಾ ಪುರುಷರ ಬಗ್ಗೆ ನಮಗೆ ಚಿತ್ರವೊಂದನ್ನು ನಿರ್ಮಿಸುವ ಬಯಕೆಯಾಗಿ ಸಾಧುಕೋಕಿಲ ಅವರನ್ನು ಸಂಪರ್ಕಿಸಿದ್ದೆವು. ಅವರು ಉತ್ತಮವಾಗಿ ತೆಗೆದುಕೊಟ್ಟಿದ್ದಾರೆ. ನಮ್ಮ ಮಂಟೂರ್ ಪಾರ್ಕ್ ನಲ್ಲಿ ತ್ರಿಡಿ ಚಿತ್ರಮಂದಿರ, 7D ಚಿತ್ರಮಂದಿರ, ಸಿದ್ದರೂಢ ಥಿಯೇಟರ್, ಭೂತದಮನೆ, ಜುರಾಸಿಕ್‌ ಪಾರ್ಕ್‌, ಜಂಗಲ್ ಪಾರ್ಕ್, ವೈಷ್ಣೋದೇವಿ ಗುಹೆ, ವಿಜ್ಞಾನ ಲೋಕ, ಜಂಗಲ್ ಪಾರ್ಕ್, ಹೋಟೆಲ್ ಭೂಕಂಪ, ಗಾಜಿನ ಮನೆ ಹೀಗೆ ಹತ್ತು ಹಲವು ವಿಶೇಷಗಳಿವೆ.

ಸ್ವಾಮಿನಾರಾಯಣ ಆಶ್ರಮವನ್ನೇ ಹೋಲುವ ಹಾಗೆ ಪುಟ್ಟ ಊರಿನಲ್ಲಿ ಇದನೆಲ್ಲಾ ನಿರ್ಮಾಣ ಮಾಡಿದ್ದೇವೆ. ಎಲ್ಲರೂ ಈ ಸ್ಥಳಕ್ಕೆ ಭೇಟಿ ನೀಡಬೇಕು. ನಮ್ಮ ಊರಿನ ಚಿತ್ರಮಂದಿರದಲ್ಲಿ ಮಾತ್ರ ಈ ಚಿತ್ರ ಪ್ರದರ್ಶನವಾಗಲಿದೆ ಎಂದ ಸದಾನಂದ ಸ್ವಾಮಿಗಳು, ಡಾ||ರಾಜಕುಮಾರ್ ಅವರಿಗೆ ಮಠದೊಂದಿಗಿದ್ದ ಸಂಬಂಧವನ್ನು ನೆನಪಿಸಿಕೊಂಡರು. ಸಾಧುಕೋಕಿಲ ಪುತ್ರ ಸುರಾಗ್ ಚಿತ್ರ ಸಾಗಿ ಬಂದ ವಿಷಯವನ್ನು ವಿಸ್ತಾರವಾಗಿ ವಿವರಿಸಿದರು. ಕಲಾವಿದರಾದ ತೀರ್ಥೇಶ್ ಹಾಗೂ ಅರವಿಂದ್ ಕುಪ್ಲಿಕರ್ ಇದ್ದರು. ಜೈ ಆನಂದ್ ಛಾಯಾಗ್ರಹಣ, ಆನಂದ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Related Posts

error: Content is protected !!