ಭಜರಂಗಿಯ ಅಪ್ಪುಗೆ! ಅಕ್ಟೋಬರ್‌ 29ಕ್ಕೆ ಶಿವಣ್ಣ ಎಂಟ್ರಿ!!

ಕನ್ನಡದ ಬಹುನಿರೀಕ್ಷೆಯ ಚಿತ್ರ “ಭಜರಂಗಿ 2” ಅಕ್ಟೋಬರ್‌ 29ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾ ಸಾಕಷ್ಟು ಕ್ರೇಜ್‌ ಹೆಚ್ಚಿಸಿದೆ. ಬಿಡುಗಡೆಗೂ ಮುನ್ನ ಚಿತ್ರತಂಡ, ಪ್ರೀರಿಲೀಸ್‌ ಈವೆಂಟ್‌ ಆಯೋಜಿಸಿತ್ತು. ಅಂದು ಕನ್ನಡದ ಸ್ಟಾರ್‌ ನಟರು ಆ ಕಲರ್‌ಫುಲ್‌ ವೇದಿಕೆ ಮೇಲಿದ್ದರು. ತಾಜ್‌ವೆಸ್ಟೆಂಡ್‌ ಸಭಾಂಗಣ ಕೂಡ ಹೌಸ್‌ಫುಲ್‌ ಆಗಿತ್ತು. ಶ್ರೇಯಸ್‌ ಮೀಡಿಯಾ ಆಯೋಜಿಸಿದ್ದ ಈವೆಂಟ್‌ನಲ್ಲಿ “ಭಜರಂಗಿ”ಯದ್ದೇ ಭರ್ಜರಿ ಭರಾಟೆ!.

ಹೌದು, ಶಿವರಾಜಕುಮಾರ್‌ ಅಭಿನಯದ “ಭಜರಂಗಿ 2” ಚಿತ್ರ ಬಿಡುಗಡೆಯಾಗುತ್ತಿರುವ ಸುದ್ದಿಯೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈಗಾಗಲೇ ಚಿತ್ರದ ಪೋಸ್ಟರ್‌, ಟೀಸರ್‌, ಟ್ರೇಲರ್‌ ಮತ್ತು ಹಾಡುಗಳು ಜನಮನ ಗೆದ್ದಿವೆ. ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಬಂದಿವೆ. ಅಂದು ನಟ ಯಶ್‌, ಪುನೀತ್‌ ರಾಜಕುಮಾರ್‌ ಮುಖ್ಯ ಆಕರ್ಷಣೆಯಾಗಿದ್ದರು. ಅಂತೆಯೇ “ಭಜರಂಗಿ 2” ಸಿನಿಮಾ ಕುರಿತು ಸಾಕಷ್ಟು ಮಾತಾಡಿದರು.

“ನಾನು ಕೂಡ ಶಿವರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ. ಇಡೀ ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ನಾವೆಲ್ಲರೂ ಒಂದೇ ಕುಟುಂಬದವರು. ಎಲ್ಲಾ ಸಿನಿಮಾಗಳು ಈಗಷ್ಟೇ ರಿಲೀಸ್‌ ಆಗುತ್ತಿವೆ. ಈ ಸಿನಿಮಾ ಬಿಡುಗಡೆಗೆ ನಾನು ಕೂಡ ಕಾಯುತ್ತಿದ್ದೇನೆ. ಶಿವರಾಜಕುಮಾರ್‌ ಅವರಲ್ಲಿ ಒಳ್ಳೆಯ ಮನಸ್ಸಿದೆ. ಚಿತ್ರರಂಗ ಅವರ ಜೊತೆಗಿದೆ. ಅವರು ಹಾಕಿಕೊಟ್ಟಂತೆ ನಾವೆಲ್ಲ ನಡೆಯುತ್ತಿದ್ದೇವೆ” ಅಂದರು ಯಶ್.‌
ನಾನು ಶಿವಣ್ಣ ಫ್ಯಾನ್ಸ್‌ ಅನ್ನುತ್ತಲೇ ಮಾತಿಗಿಳಿದ ಪುನೀತ್‌ ರಾಜಕುಮಾರ್‌, ನನಗೆ ಅವರ “ಮನ ಮೆಚ್ಚಿದ ಹುಡುಗಿ” , “ಜನುಮದ ಜೋಡಿ” ಮತ್ತು “ಕುರುಬನ ರಾಣಿ” ಪಾತ್ರಗಳು ಇಷ್ಟ. ಅವರು ಹಳ್ಳಿ ಲುಕ್‌ನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಾರೆ.

ಇನ್ನು ಭಜರಂಗಿ 2 ಸಿನಿಮಾ ಯಶಸ್ಸು ಕಾಣಲಿ. ನಿರ್ದೇಶಕ ಎ.ಹರ್ಷ ಅವರು ಸಾಕಷ್ಟು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಕೂಡ ಎಲ್ಲರಿಗೂ ಇಷ್ಟವಾಗುವಂತೆಯೇ ಮಾಡಿದ್ದಾರೆ. ಪ್ರತಿ ಹಂತದಲ್ಲೂ ಚಿತ್ರತಂಡ ಶ್ರಮವಹಿಸಿ ಕೆಲಸ ಮಾಡಿದೆ. ಎಲ್ಲರಿಗೂ ಈ ಚಿತ್ರ ಗೆಲುವು ತಂದುಕೊಡಲಿ ಎಂದರು ಪುನೀತ್.‌
ಹರ್ಷ ಕೂಡ ಶಿವರಾಜ್‌ ಕುಮಾರ್‌ ಅವರ ಸರಳತೆ ಮತ್ತು ಸಹಕಾರ ಕುರಿತು ಮಾತನಾಡಿದರು. ನಿರ್ಮಾಪಕರು ತೋರಿದ ಪ್ರೀತಿಗೆ ಭಾವುಕರಾದರು. ಅದೇ ವೇಳೆ ವೇದಿಕೆ ಏರಿದ ನಿರ್ಮಾಪಕ ಜಯಣ್ಣ ಕೂಡ ಕೆಲಹೊತ್ತು ಭಾವುಕತೆಗೆ ಜಾರಿದರು.

ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಅದಕ್ಕೆ ಶಿವಣ್ಣ ಕೊಟ್ಟ ಸಹಕಾರ ದೊಡ್ಡದು. ನಮಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಈ ಚಿತ್ರಕ್ಕೆ ನಾನು ಎಲ್ಲವನ್ನೂ ನೀಡಿದ್ದೇನೆ. ಒಳ್ಳೆಯ ಚಿತ್ರವನ್ನು ಜನ ಕೈಬಿಡೋದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು ಜಯಣ್ಣ.
ನಿರ್ದೇಶಕರಾದ ಸಂತೋಷ್‌ ಆನಂದರಾಮ್‌, ವೃಷಭ್‌ ಶೆಟ್ಟಿ, ದಿನಕರ್‌ ತೂಗುದೀಪ, ಶೃತಿ, ಭಾವನಾ, ಪ್ರಸನ್ನ, ಚೆಲುವರಾಜ್‌, ಗಿರೀಶ್‌ ಸೇರಿದಂತೆ ಹಲವರು ಮಾತನಾಡಿದರು.

ಇದೇ ವೇಳೆ “ಭಜರಂಗಿ 2” ಚಿತ್ರದ ಹಾಡುಗಳಿಗೆ ಕಲಾವಿದರು ಹೆಜ್ಜೆ ಹಾಕಿ ರಂಜಿಸಿದರು. ಕೊನೆಯಲ್ಲಿ ಶಿವರಾಜ್‌ ಕುಮಾರ್‌, ಯಶ್‌ ಹಾಗು ಪುನೀತ್‌ ಕೂಡ ಸಾಂಗ್‌ಗೆ ಸ್ಟೆಪ್‌ ಹಾಕಿದರು.

Related Posts

error: Content is protected !!