ನಿರ್ದೇಶಕ ಪವನ್ ಒಡೆಯರ್ ಹಾಗು ಅವರ ಪತ್ನಿ ಅಪೇಕ್ಷಾ ಪುರೋಹಿತ್ ಅವರ ಒಡೆಯರ್ ಮೂವೀಸ್ ಸಂಸ್ಥೆಯಿಂದ ನಿರ್ಮಾಣ ಆಗಿರುವ ಮೊದಲ ಸಿನಿಮಾ “ಡೊಳ್ಳು” ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಸಿಕ್ಕಿದೆ. ಸಾಗರ್ ಪುರಾಣಿಕ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ೨೦೨೦ರಲ್ಲಿ ಸಿಬಿಎಫ್‌ಸಿಯಿಂದ ಯು ಸರ್ಟಿಫಿಕೆಟ್ ಪಡೆದು ಅಂತಾರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದೆ.
ಈಗಾಗಲೇ ಅಮೇರಿಕಾದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್ ಬಾಸ್ಟನ್ ನಲ್ಲಿ ಮೊದಲ ಪ್ರದರ್ಶನ ಕಂಡು, ಎಲ್ಲಾ ಪ್ರೇಕ್ಷಕರ ಗಮನ ಸೆಳೆಯುವುದರೊಂದಿಗೆ ಎಲ್ಲರ ಪ್ರಶಂಸೆಯನ್ನು ಪಡೆದಿದೆ. ಇನ್ನೂ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣಲಿದೆ. ಢಾಕಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಹಾಗೂ ಡಾಲಸ್ ಸೌತ್ ಏಶಿಯನ್ ಫಿಲಂ ಫೆಸ್ಟಿವಲ್ ಗಳಲ್ಲಿ ಈಗಾಗಲೇ ಆಯ್ಕೆಯಾಗಿದೆ.
ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಎಂಬ ಒಂದು ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ, ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ದಾದಾಸಾಹೇಬ್ ಫಾಲ್ಕೆ ಬೆಸ್ಟ್ ಕನ್ನಡ ಫಿಲ್ಮ್ ಎಂಬ ಪ್ರಶಸ್ತಿ ಡೊಳ್ಳು ಚಿತ್ರಕ್ಕೆ ಲಭಿಸಿದೆ. ದಾದಾಸಾಹೇಬ್ ಫಾಲ್ಕೆ ಎಂ.ಎಸ್.ಕೆ ಟ್ರಸ್ಟ್ ವತಿಯಿಂದ 1 ಲಕ್ಷ ನಗದು ಬಹುಮಾನ ಕೂಡ ಸಿಕ್ಕಿದೆ. ಈ ಕುರಿತಂತೆ ಪವನ್ ಒಡೆಯರ್ ದಂಪತಿ ಖುಷಿ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಚಂದ್ರ ಮಯೂರ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಡಾ. ಪ್ರಭುದೇವ, ವರುಣ್ ಶ್ರೀನಿವಾಸ್, ಚಂದ್ರಮನು ಇತರರು ನಟಿಸಿದ್ದಾರೆ.
ಅಭಿಲಾಷ್ ಕಳತ್ತಿ ಕ್ಯಾಮೆರಾವಿದೆ. ಎಂ. ಅನಂತ್ ಕಾಮತ್ ಸಂಗೀತವಿದೆ. ಬಿ ಎಸ್ ಕೆಂಪರಾಜು ಸಂಕಲನ ಮಾಡಿದರೆ, ಶ್ರೀನಿಧಿ ಡಿ ಎಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ದೇವಿ ಪ್ರಕಾಶ್ ಕಲಾನಿರ್ದೇಶನವಿದೆ. ನಿತಿನ್ ಲೂಕೋಸ್ ಶಬ್ದ ವಿನ್ಯಾಸ ಮಾಡಿದ್ದಾರೆ.