ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಸಖತ್ʼ ಸಿನಿಮಾ ಆರಂಭದಿಂದಲೂ ಸಖತ್ ಆಗಿಯೇ ಸುದ್ದಿ ಮಾಡುತ್ತಿದೆ. ಅದರಲ್ಲೂ ಇತ್ತೀಚೆಗಷ್ಟೇ ರಿಲೀಸ್ ಆದ ಟೀಸರ್ ಯೂಟ್ಯೂಬ್ ನಲ್ಲಿ ಇನ್ನೂ ಸಖತ್ ಆಗಿಯೇ ಸೌಂಡು ಮಾಡುತ್ತಿದೆ. ಹೌದು, “ಸಿಂಪಲ್” ಸುನಿ ನಿರ್ದೇಶನದ ಈ ಸಿನಿಮಾ ಪಕ್ಕಾ ಕಾಮಿಡಿ ಹೂರಣ ತುಂಬಿರುವ ಸಿನಿಮಾ ಅನ್ನುವುದನ್ನೇ ಟೀಸರ್ ಸಾರಿ ಹೇಳುತ್ತಿದೆ. ಟೀಸರ್ ನೋಡಿರುವ ಪ್ರೇಕ್ಷಕ ವರ್ಗ ನಗುವಿನ ಅಲೆಯಲ್ಲಿ ತೇಲುತ್ತಿದೆ. ಇದೇ ಮೊದಲ ಬಾರಿಗೆ ಗಣೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು, ಅವರು ಅಂಧನ ಪಾತ್ರ ಮಾಡಿದ್ದು, ಅದೊಂದು ವಿಭಿನ್ನ ಪಾತ್ರವಂತೆ. ಇನ್ನು, ನಿರ್ದೇಶಕ ಸುನಿ ಅವರ ಕಥೆ ಮಾತುಗಳು ಅಂದಮೇಲೆ ಕಿಕ್ ಇದ್ದೇ ಇರುತ್ತದೆ. ಸಿನಿಮಾದಲ್ಲಿ ಕಚಗುಳಿ ಇಡುವ ಸಂಭಾಷಣೆಯೇ ಇಲ್ಲಿ ಹೈಲೈಟ್. ಈಗಾಗಲೇ ಸುನಿ ಮತ್ತು ಗಣೇಶ್ ಜೋಡಿ ಹಿಟ್ ಸಿನಿಮಾ ಕೊಟ್ಟಿದ್ದು ಗೊತ್ತೇ ಇದೆ. ಅವರಿಬ್ಬರು ಸೇರಿ ಕೊಟ್ಟ “ಚಮಕ್” ಸಾಕಷ್ಟು ಸುದ್ದಿ ಮಾಡಿತ್ತು. ಈಗ “ಸಖತ್” ಸಿನಿಮಾ ಕೂಡ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿರುವ ಡೈಲಾಗ್ ಕೇಳುಗರಿಗೆ ಸಖತ್ ಮಜಾ ಕೊಡುತ್ತಿದೆ.
ಅದೇನೆ ಇರಲಿ, ಟೀಸರ್ ನೋಡಿದವರಿಗೆ ಒಂದು ಅನುಮಾನ ಕಾಡೋದು ಸಹಜ. ಅದೇನೆಂದರೆ, ಇಲ್ಲಿ ಹೀರೋ ನಿಜವಾಗಿಯೂ ಕುರುಡನಾ? ಅಥವಾ ನಾಟಕ ಮಾಡ್ತಾನಾ? ಗೊತ್ತಿಲ್ಲ. ಇದಕ್ಕೆ ಉತ್ತರ ಬೇಕಾದರೆ, ಸಿನಿಮಾ ನೋಡಬೇಕು. ಇದೊಂದು ಹಾಸ್ಯದ ಜೊತೆಗೆ ನ್ಯಾಯಾಲಯದ ವಿಷಯವನ್ನೂ ಹೊಂದಿದೆ. ಅಲ್ಲೊಂದು ರಿಯಾಲಿಟಿ ಶೋ ಸುತ್ತವೂ ಕಥೆ ಸಾಗಲಿದೆ.
ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇನ್ನು ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ಗಿರಿ, ಧರ್ಮಣ್ಣ ಕಡೂರು ಸೇರಿದಂತೆ ಇತರರೂ ಇದ್ದಾರೆ.
ನಿಶ್ವಿಕಾ ನಾಯ್ಡು ಮತ್ತು ಸುರಭಿ ಗಣೇಶ್‌ಗೆ ನಾಯಕಿಯರು. ಈಗಾಗಲೇ ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಎರಡು ಮಿಲಿಯನ್ಸ್ ವೀವ್ಸ್ ನತ್ತ ಸಾಗಿದೆ. ಕೆವಿಎನ್ ಪ್ರೊಡಕ್ಷನ್ ನಡಿ ಸುಪ್ರೀತ್ ಅದ್ಧೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಜೊತೆಗೆ ನಿಶಾ ವೆಂಕಟ್ ಕೋನಾಂಕಿ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ 12ಕ್ಕೆ ಸಖತ್ ಆಗಿಯೇ ಬಿಡುಗಡೆಯಾಗಲಿದೆ.