ಕನ್ನಡ ಚಿತ್ರರಂಗವನ್ನು ಪರಭಾಷಿಗರು ಅದ್ಯಾವತ್ತೋ ಒಪ್ಪಿ ಅಪ್ಪಿದ್ದಾಗಿದೆ. ಇಲ್ಲಿನ ಸಿನಿಮಾಗಳ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾಗಿದೆ. ಹಾಗಾಗಿಯೇ ಈಗ ಕನ್ನಡದ ಹೀರೋಗಳು, ನಿರ್ದೇಶಕರು ಅಷ್ಟೇ ಯಾಕೆ ತಾಂತ್ರಿಕ ವರ್ಗದವರಿಗೆ ಬೇಡಿಕೆ ಹೆಚ್ಚು. ಇಲ್ಲಿನ ಅನೇಕರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಹೊಸ ಸುದ್ದಿ ಅಂದರೆ, “ಉಗ್ರಂ” ಮತ್ತು “ಕೆಜಿಎಫ್” ಮೂಲಕ ಜೋರು ಸುದ್ದಿ ಮಾಡಿದ ಸಂಗೀತ ನಿರ್ದೇಶಕ ರವಿ ಬಸ್ರೂರು ಇದೀಗ ಮತ್ತೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.
ಹೌದು, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಿರ್ಮಾಣದಲ್ಲಿ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಈ ಬಗ್ಗೆ ರವಿ ಬಸ್ರೂರು ಅವರೇ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ”ಭಾರತದ ಬಾಯಿಜಾನ್ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಿರುವುದು ಬಹಳ ಸಂತಸ ತಂದಿದೆ. ಸಲ್ಮಾನ್ ಖಾನ್ ಅವರ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದೇನೆ. ಈ ನನ್ನ ಜರ್ನಿಗೆ ನಿಮ್ಮ ಬೆಂಬಲ ಹೀಗೆ ಇರಲಿ” ಎಂದು ತಮ್ಮ ಸಂಭ್ರವನ್ನು ಹಂಚಿಕೊಂಡಿದ್ದಾರೆ ರವಿಬಸ್ರೂರು.
“ಅಂತಿಮ್” ದಿ ಫೈನಲ್ ಟ್ರೂತ್ ಚಿತ್ರವನ್ನು ಮಹೇಶ್ ಮಂಜ್ರೆಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರವಿಬಸ್ರೂರು ಸಂಗೀತ ನೀಡುತ್ತಿರುವುದು ವಿಶೇಷವಾದರೂ, ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ “ಕೆಜಿಎಫ್”. ಇದು ರವಿಬಸ್ರೂರು ಅವರಿಗೆ ಪರಭಾಷೆಯಲ್ಲಿ ಹೆಸರು ತಂದುಕೊಟ್ಟಿತು. ಕನ್ನಡದ ಜೊತೆ ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಿಗೂ ಸಂಗೀತ ನೀಡುತ್ತಿರುವ ರವಿಬಸ್ರೂರು, ಇನ್ನೂ ಒಂದು ಹಿಂದಿ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೌದು, ಸುಭಾಷ್ ಕಾಳೆ ಜೊತೆ ಕೈ ಜೋಡಿಸಿರುವ ಅಜಯ್ ಕಪೂರ್, ಅಫ್ಘಾನ್ ಬಿಕ್ಕಟ್ಟು ಕುರಿತು ಸಿನಿಮಾ ಮಾಡುತ್ತಿದ್ದು, ಆ ನೈಜ ಚಿತ್ರಕ್ಕೆ ‘ಗರುಡ್’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ ಎಂದು ಪೋಸ್ಟರ್ ಹೇಳುತ್ತಿದೆ. ಈಗಾಗಲೇ ರವಿ ಬಸ್ರೂರ್ ಹಿಂದಿಯ ಯುಧ್ರಾ. ‘ಗಲ್ಲಿ ಬಾಯ್’ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.