ದಸರಾ ಹಬ್ಬವನ್ನು ಕನ್ನಡ ಚಿತ್ರರಂಗ ಈ ಬಾರಿ ಎಂದಿಗಿಂತಲೂ ಜೋರಾಗಿಯೇ ಸಂಭ್ರಮಿಸಲು ಸಜ್ಜಾಗಿದೆ. ಹೌದು, ಈಗಾಗಲೇ ಅನೌನ್ಸ್ ಆಗಿರುವಂತೆ ಸುದೀಪ್ ಅಭಿನಯದ “ಕೋಟಿಗೊಬ್ಬ ೩” ಮತ್ತು “ದುನಿಯಾ” ವಿಜಯ್ ಅಭಿನಯದ “ಸಲಗ” ಚಿತ್ರಗಳು ರಿಲೀಸ್ ಆಗುತ್ತಿವೆ. ಅಂತೆಯೇ ಒಂದಷ್ಟು ಹೊಸಬರ ಸಿನಿಮಾಗಳ ಪೋಸ್ಟರ್, ಟೀಸರ್ ಹಾಗು ಟ್ರೇಲರ್ ರಿಲೀಸ್ ಆಗುತ್ತಿವೆ. ಇವುಗಳ ಜೊತೆಯಲ್ಲೇ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ ಟೀಸರ್ ಕೂಡ ಬಿಡುಗಡೆಯಾಗುತ್ತಿದೆ.
ಈ ಮೂಲಕ ಶ್ರೀಮುರಳಿ ಫ್ಯಾನ್ಸ್‌ಗೆ ದಸರಾ ಧಮಾಕ ಗ್ಯಾರಂಟಿ. ಹೌದು, ನಿರ್ದೇಶಕ ನಿರ್ದೇಶಕ ಮಹೇಶ್ ಅವರು “ಮದಗಜ” ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಇದು ಎರಡನೇ ಟೀಸರ್ ಆಗಿದ್ದು, ಅಕ್ಟೋಬರ್ 14ರ ಸಂಜೆ 5.5ಕ್ಕೆ ಆನಂದ್ ಆಡಿಯೋ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ.
ಉಮಾಪತಿ, ನಿರ್ಮಾಪಕರು
ಆರಂಭದಿಂದಲೂ ಕುತೂಹಲ ಹುಟ್ಟಿಸಿರುವ “ಮದಗಜ” ಈಗಾಗಲೇ ತನ್ನ ಪೋಸ್ಟರ್ ಮತ್ತು ಟೀಸರ್ ಮೂಲಕ ಜನಮನ ಗೆದ್ದಿದೆ. ಎಲ್ಲೆಡೆಯಿಂದ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಸದ್ಯ ಶೂಟಿಂಗ್ ಮುಗಿಸಿ, ಬಿಡುಗಡೆಗೆ ತಯಾರಾಗುತ್ತಿರುವ ಚಿತ್ರತಂಡ, ದಸರಾ ಹಬ್ಬಕ್ಕೆ ಟೀಸರ್ ಮೂಲಕ ಎಂಟ್ರಿ ಕೊಡುತ್ತಿದೆ. ಚಿತ್ರ ಡಿಸೆಂಬರ್ ತಿಂಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದೆ ಎಂದು ಸುದ್ದಿಯಾಗಿದ್ದು, ಶ್ರೀಮುರಳಿ ಫ್ಯಾನ್ಸ್, “ಮದಗಜ”ನನ್ನು ಕಣ್ತುಂಬಿಕೊಳ್ಳಲು ಆತುರದಿಂದ ಕಾಯುತ್ತಿದ್ದಾರೆ.
ಮಹೇಶ್ ಕುಮಾರ್, ನಿರ್ದೇಶಕರು
ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಇದೊಂದು ಅದ್ಧೂರಿ ಬಜೆಟ್ ಚಿತ್ರ. ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದು, ಆಶಿಕಾಗೆ ಶ್ರೀಮುರಳಿ ಅವರೊಂದಿಗೆ ಇದು ಮೊದಲ ಸಿನಿಮಾ. ಆಶಿಕಾ ಇಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಪಾತ್ರವೂ ಇಲ್ಲಿ ಕುತೂಹಲ ಮೂಡಿಸಿವೆ. ಉಳಿದಂತೆ ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತವಿದೆ. ಇದು ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ.