ತಮ್ಮ ಪಾರ್ಟ್ನರ್ ಜೊತೆ ಸುಕೃಶಿ ಕ್ರಿಯೇಷನ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವ ಕೃತಿಕಾ, ಆ ಮೂಲಕ ಅವರು “ಉತ್ತರಾಂಗ” ಎಂಬ ಹೆಸರಿನ ಶೀರ್ಷಿಕೆಯನ್ನು ಅನಾವರಣ ಮಾಡಿದ್ದಾರೆ. ಈ ಮೂಲಕ ಕೃತಿಕಾ ನಿರ್ಮಾಪಕಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಕೃತಿಕಾ ಪ್ರಮುಖ ಆಕರ್ಷಣೆಯಾಗಿದ್ದು, ಅವರಿಗೆ ಹೀರೋ ಯಾರು ಮತ್ತು ಸಿನಿಮಾದಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನುವುದು ಇಷ್ಟರಲ್ಲೇ ಗೊತ್ತಾಗಲಿದೆ.
ಈ ಬಣ್ಣದ ಲೋಕವೇ ಹಾಗೆ. ಇಲ್ಲಿ ಬಂದವರಿಗೆ ಎಲ್ಲದರಲ್ಲೂ ತೊಡಗಿಸಿಕೊಳ್ಳಬೇಕೆಂಬ ಹಂಬಲ ಇದ್ದೇ ಇರುತ್ತೆ. ಈಗಾಗಲೇ ಹೀರೋ ನಿರ್ದೇಶಕರಾಗಿದ್ದಾರೆ. ನಿರ್ದೇಶಕ ಹೀರೋ ಆಗಿದ್ದಾರೆ. ನಿರ್ಮಾಪಕ ಕೂಡ ನಿರ್ದೇಶಕ, ಹೀರೋ ಆಗಿದ್ದೂ ಉಂಟು! ಹಾಗೆಯೇ ಅದೆಷ್ಟೋ ನಟಿಯರು ಕೂಡ ನಿರ್ಮಾಣದತ್ತ ವಾಲಿರುವುದು ಹೊಸದೇನಲ್ಲ. ಆ ಸಾಲಿಗೆ ಈಗ ನಟಿ ಕೃತಿಕಾ ಕೂಡ ಈಗ ನಿರ್ಮಾಪಕಿಯಾಗಿದ್ದಾರೆ. ಹೀಗೆಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಸ್ವತಃ ಕೃತಿಕಾ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. “ಸಿನಿಲಹರಿ” ಜೊತೆ ಈ ವಿಷಯ ಹಂಚಿಕೊಂಡಿರುವ ಕೃತಿಕಾ ತಮ್ಮ ಸಿನಿಮಾದ ಕುರಿತು ಒಂದಷ್ಟು ಹೇಳಿಕೊಂಡಿದ್ದಾರೆ.
ತಮ್ಮ ಪಾರ್ಟ್ನರ್ ಜೊತೆ ಸುಕೃಶಿ ಕ್ರಿಯೇಷನ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿರುವ ಕೃತಿಕಾ, ಆ ಮೂಲಕ ಅವರು “ಉತ್ತರಾಂಗ” ಎಂಬ ಹೆಸರಿನ ಶೀರ್ಷಿಕೆಯನ್ನು ಅನಾವರಣ ಮಾಡಿದ್ದಾರೆ. ಈ ಮೂಲಕ ಕೃತಿಕಾ ನಿರ್ಮಾಪಕಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಕೃತಿಕಾ ಪ್ರಮುಖ ಆಕರ್ಷಣೆಯಾಗಿದ್ದು, ಅವರಿಗೆ ಹೀರೋ ಯಾರು ಮತ್ತು ಸಿನಿಮಾದಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನುವುದು ಇಷ್ಟರಲ್ಲೇ ಗೊತ್ತಾಗಲಿದೆ.
ಈ “ಉತ್ತರಾಂಗ” ಸಿನಿಮಾಗೆ ಶಿವಾನಿ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಇವರೊಂದಿಗೆ ಕೃತಿಕಾ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಶಿವಾನಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಈ ಹಿಂದೆ ಅವರು ಹಲವಾರು ಆಲ್ಬಂ ಸಾಂಗ್ ಮತ್ತು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಆ ಅನುಭವದ ಮೇಲೆ ಅವರೇ ಕಥೆ ಮತ್ತು ಚಿತ್ರಕಥೆ ಬರೆದು “ಉತ್ತರಾಂಗ” ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಸಿನಿಮಾ. ಉಳಿದಂತೆ ಕಥೆಯ ಒನ್ ಲೈನ್ ಏನು, ಯಾವಾಗ ಶುರುವಾಗಲಿದೆ, ಎಲ್ಲೆಲ್ಲಿ ಚಿತ್ರೀಕರಣಗೊಳ್ಳಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಷ್ಟರಲ್ಲೇ ಉತ್ತರ ಕೊಡುವುದಾಗಿ ಹೇಳುತ್ತಾರೆ ಕೃತಿಕಾ.
ಅಂದಹಾಗೆ, ಸಿನಿಮಾಗೆ “ಗೋಧಿಬಣ್ಣ ಸಾಧಾರಣ ಮೈಕಟ್ಟು” ಸಿನಿಮಾಗೆ ಕ್ಯಾಮೆರಾ ಹಿಡಿದಿದ್ದ ನಂದಕಿಶೋರ್ ಅವರು ಈ ಸಿನಿಮಾಗೂ ಕ್ಯಾಮೆರಾ ಹಿಡಿಯುತ್ತಿದ್ದಾರೆ.
ಉಳಿದಂತೆ ಸಂಗೀತ ನಿರ್ದೇಶಕರು ಯಾರು ಅನ್ನುವುದನ್ನೂ ಇಷ್ಟರಲ್ಲೇ ಚಿತ್ರತಂಡ ಹೇಳಲಿದೆ. ಅದೇನೆ ಇರಲಿ, ಕೃತಿಕಾ ಮೊದಲ ಬಾರಿಗೆ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ಆ ಮೂಲಕ ಒಂದು ಹೊಸ ಬಗೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿರುವುದು ನಿಜಕ್ಕೂ ಖುಷಿಯ ವಿಷಯ. ಅವರ ಈ ಪ್ರಯತ್ನಕ್ಕೆ ಗೆಲುವು ಸಿಗಲಿ ಅನ್ನುವುದು “ಸಿನಿಲಹರಿ” ಆಶಯ.