ಡೈರೆಕ್ಟರ್ ಕ್ಯಾಪ್ ಹಾಕಲಿದ್ದಾರೆ ಅಪ್ಪು; ಶಿವಣ್ಣಂಗೆ ಪವರ್‌ಸ್ಟಾರ್ ಡೈರೆಕ್ಷನ್ ! ಹಿಂಗಿರಲಿದೆ ಅಣ್ತಮ್ಮಾಸ್ ಕಾಂಬಿನೇಷನ್ ?

  • ವಿಶಾಲಾಕ್ಷಿ

ದೊಡ್ಮನೆ ಫ್ಯಾನ್ಸ್ ಇಂತಹದ್ದೊಂದು ಸುದ್ದಿನಾ ನಿರೀಕ್ಷೆ ಮಾಡಿದ್ರೋ ಇಲ್ಲವೋ ಗೊತ್ತಿಲ್ಲ. ಆದರೆ, ದೊಡ್ಮನೆ ರಾಜಕುಮಾರ ತಮ್ಮ ಮನೆಯ ಅಭಿಮಾನಿ ದೇವರುಗಳು ಮಾತ್ರವಲ್ಲ ಸಕಲ ಸಿನಿಮಾಕುಲ ಸಂತೋಷಪಡುವಂತಹ, ಹಬ್ಬ ಮಾಡಿ ಸಂಭ್ರಮಿಸುವಂತಹ ಸಪ್ರೈಸಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ಸಲಗ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ಗೆ ಸ್ಪೆಷಲ್ ಗೆಸ್ಟ್ ಆಗಿದ್ದ ಪವರ್‌ಸ್ಟಾರ್ ಡೈರೆಕ್ಟರ್ ಹ್ಯಾಟ್ ತೊಡುವ ಕನಸೊಂದನ್ನು ಹೊರ ಹಾಕಿದರು. ಕರುನಾಡ ಚಕ್ರವರ್ತಿಗೆ ಆಕ್ಷನ್ ಕಟ್ ಹೇಳುವ ಬಹು ದಿನದ ಆಸೆಯೊಂದನ್ನು ಅಣ್ಣನ ಮುಂದೆಯೇ ವ್ಯಕ್ತಪಡಿಸಿದರು. ಮುಂದೇನಾಯ್ತ ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಅಣ್ಣಾವ್ರ ಮೂವರು ಮಕ್ಕಳು ಕೂಡಿ ಒಂದು ಸಿನಿಮಾ ಮಾಡ್ಬೇಕು, ದೊಡ್ಡ ಪರದೆಯ ಮೇಲೆ ದೊಡ್ಮನೆಯ ಮೂರು ವಜ್ರಗಳನ್ನು ಕಣ್ತುಂಬಿಕೊಳ್ಳಬೇಕು ಎನ್ನುವುದು ರಾಜ್‌ಕುಟುಂಬದ ಕೋಟ್ಯಾಂತರ ಅಭಿಮಾನಿಗಳ ಕೋರಿಕೆ. ಒಂದೊಳ್ಳೆ ಸ್ಕ್ರಿಪ್ಟ್ ಬಂದರೆ ಒಟ್ಟಿಗೆ ಕೂಡಿ ಚಿತ್ರ ಮಾಡ್ಬೇಕು ಅಂತ ರಾಜ್‌ತ್ರಯರು ಕೂಡ ನಿರ್ಧರಿಸಿದ್ದಾರೆ. ಯಾವಾಗ ಅಣ್ಣಾವ್ರ ಮೂರು ಮುತ್ತುಗಳು ಜೊತೆಗೂಡಿ ಬೆಳ್ಳಿತೆರೆಮೇಲೆ ದಿಬ್ಬಣ ಹೊರಡ್ತಾರೋ ಗೊತ್ತಿಲ್ಲ ಆದರೆ, ಪವರ್‌ಸ್ಟಾರ್ ಡೈರೆಕ್ಷನ್‌ನಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಬಿಗ್‌ಸ್ಕ್ರೀನ್ ನಲ್ಲಿ ಧಗಧಗಿಸೋದು ಪಕ್ಕಾ. ಆ ದಿವ್ಯಕ್ಷಣ ಆದಷ್ಟು ಬೇಗ ಬರುತ್ತೆ ಎನ್ನುವ ಬಿಗ್‌ಬ್ರೇಕಿಂಗ್ ನ್ಯೂಸ್‌ವೊಂದನ್ನು ಪುನೀತ್‌ರಾಜ್‌ಕುಮಾರ್ ನೀಡಿದ್ದಾರೆ.

ದೊಡ್ಮನೆಯ ರಾಜಕುಮಾರ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಡೈರೆಕ್ಟರ್ ಹ್ಯಾಟ್ ತೊಡುವ ಕನಸಿದೆ. ಅದು ಇವತ್ತು ನಿನ್ನೆಯದಲ್ಲ ಬಹಳಷ್ಟು ವರ್ಷಗಳ ಹಿಂದೆಯೇ ಹುಟ್ಟುಕೊಂಡಿದ್ದು. ಆದರೆ, ಲೈಟ್ಸ್-ಕ್ಯಾಮೆರಾ-ಆಕ್ಷನ್ ಅಂತ ಹೇಳೋದಕ್ಕೆ ಅಪ್ಪುಗೂ ಬಿಡುವಿಲ್ಲ. ಅಟ್ ದಿ ಸೇಮ್ ಟೈಮ್ ಸೆಂಚುರಿಸ್ಟಾರ್ ಕೂಡ ಫ್ರೀ ಇಲ್ಲ. ಶಿವಣ್ಣ ಡೈರೆಕ್ಟರ್ಸ್ ಆಕ್ಟರ್ ಆಗಿರೋದ್ರಿಂದ, ಸಂಡೇ ಹೊರತುಪಡಿಸಿ ಉಳಿದೆಲ್ಲಾ ದಿನ ಮುಖಕ್ಕೆ ಬಣ್ಣ ಹಚ್ಚುವುದರಿಂದ ವರ್ಷಪೂರ್ತಿ ಬ್ಯುಸಿಯಾಗಿರುತ್ತಾರೆ. ಅಂದ್ಹಾಗೇ,
ಸೆಂಚುರಿಸ್ಟಾರ್ ಸಿನಿ ಅಕೌಂಟ್‌ನಲ್ಲಿ ಮಿನಿಮಮ್ ಅಂದರೆ ಹತ್ತು ಚಿತ್ರಗಳು ಕುಣಿಯುತ್ತಿರುತ್ತವೆ. ಹೀಗಾಗಿ, ಅಣ್ಣಂಗೆ ತಮ್ಮ ಆಕ್ಷನ್‌ಕಟ್ ಹೇಳೋದಕ್ಕೆ ಟೈಮ್ ಸಿಕ್ಕಿರಲಿಲ್ಲ. ಈಗ್ಲೂ ಅಪ್ಪು ಹಾಗೂ ಶಿವಣ್ಣ ಇಬ್ಬರು ಅವರವರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮುತ್ತಣ್ಣನಿಗೆ ಆಕ್ಷನ್‌ಕಟ್ ಹೇಳುವ ಸುವರ್ಣಗಳಿಗೆಗಾಗಿ ಅಣ್ಣಬಾಂಡ್ ಕಾತುರದಿಂದ ಕಾಯ್ತಿದ್ದಾರೆ.

ಹೌದು, ಡೈರೆಕ್ಷನ್ ಮಾಡಬೇಕು, ಮಾಡಿದರೆ ಮೊದಲ ಸಿನಿಮಾ ನಮ್ಮ ಅಣ್ಣ ಶಿವಣ್ಣಂಗೆ ಮಾಡಬೇಕು ಎನ್ನುವುದು ಅಪ್ಪು ಆಸೆ. ಆ ಮಹದಾಸೆಯನ್ನು ಸಲಗ' ಸಿನಿಮಾದ ಪ್ರಿರಿಲೀಸ್ ಇವೆಂಟ್ ಸಂದರ್ಭದಲ್ಲಿ ಎಲ್ಲರ ಮುಂದೆ ಹಂಚಿಕೊಂಡರು. ಅಭಿಮಾನಿ ದೇವರುಗಳನ್ನ ಥಿಯೇಟರ್‌ನಲ್ಲಿ ಎಡ್ಜ್ ಆಫ್ ದಿ ಸೀಟ್‌ನಲ್ಲಿ ಕೂರಿಸ್ಬೇಕು ಅಂತಹದ್ದೊಂದು ಸಿನಿಮಾ ಕೊಡ್ಬೇಕು ಎಂದು ನಟಸಾರ್ವಭೌಮ ಓಪನ್ನಾಗಿ ಹೇಳಿಕೊಂಡರು. ತಮ್ಮನ ಮಾತು ಕೇಳಿ ಥ್ರಿಲ್ಲಾದ ಸನ್ ಆಫ್ ಬಂಗಾರದ ಮನುಷ್ಯ ಸ್ಟೇಜ್ ಮೇಲೆ ಬಂದರು. ಯಾರೂ ಊಹಿಸದ ದಿವ್ಯಕ್ಷಣ ಕೂಡಿಬಂತು ಆಗಲೇ ಅಪ್ಪು ಆಕ್ಷನ್ ಹೇಳಿದರುಐ ಲವ್ ಯೂ, ಯೂ ಮಸ್ಟ್ ಲವ್ ಮೀ’ ಎನ್ನುತ್ತಾ ಎದುರಿಗಿದ್ದ ಉಪ್ಪಿ ಕಡೆ ಶಿವಣ್ಣ ಕೈ ತೋರಿಸಿದರು. ಕರುನಾಡ ಚಕ್ರವರ್ತಿಯ ಪ್ರೀತಿಗೆ ಮನಸೋತ ರಿಯಲ್‌ಸ್ಟಾರ್ ವೇದಿಕೆ ಮೇಲೆ ಬಂದು ಹ್ಯಾಟ್ರಿಕ್ ಹೀರೋನ ಅಪ್ಪಿಕೊಂಡರು. ಒಟ್ನಲ್ಲಿ ದುನಿಯಾ ವಿಜಯ್ ಅವರ `ಸಲಗ’ ಕಾರ್ಯಕ್ರಮ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಯ್ತು.

`ಸಲಗ’ ಪ್ರಿರಿಲೀಸ್ ಇವೆಂಟ್‌ನಲ್ಲಿ ದೊಡ್ಮನೆಯ ದೊಡ್ಡಸಿನಿಮಾ ಸುದ್ದಿಯೊಂದು ಸ್ಪೋಟಕಗೊಳ್ಳುತ್ತೆ ಅಂತ ಯಾರು ನಿರೀಕ್ಷೆ ಮಾಡಿರಲಿಲ್ಲ. ಹೀಗೆ, ಯಾರೂ ನಿರೀಕ್ಷಿಸದ ಸುದ್ದಿಯೊಂದನ್ನು ಪವರ್‌ಸ್ಟಾರ್ ಎಕ್ಸ್ ಕ್ಲೂಸೀವ್ ಆಗಿ ಕೊಟ್ಟೇಬಿಟ್ಟರು. ಸಪ್ರೈಸಿಂಗ್ ಸುದ್ದಿ ಜೊತೆ ಅಣ್ತಮ್ಮಾಸ್ ಆಕ್ಷನ್ ಕಟ್ ಹೇಳುವ ದೃಶ್ಯವೂ ಸೋಷಿಯಲ್ ಮೀಡಿಯಾದಲ್ಲಿ ಮೆರವಣಿಗೆ ಹೊರಟಿದ್ದನ್ನು ನೋಡಿ ದೊಡ್ಮನೆ ಫ್ಯಾನ್ಸ್ ದೀಪಾವಳಿಗೂ ಮುನ್ನವೇ ಪಟಾಕಿ ಹೊಡೆದಿದ್ದಾರೆ.

ಒಟ್ನಲ್ಲಿ, ದೊಡ್ಮನೆ ಅಭಿಮಾನಿ ದೇವರುಗಳ ಪಾಲಿಗೆ ಇದು ದೊಡ್ಡ ಸುದ್ದಿ. ಅಂದ್ಹಾಗೇ, ಒಬ್ಬ ಕಲಾವಿದನೊಳಗೆ ಒಬ್ಬ ನಿರ್ದೇಶಕ ಇರುತ್ತಾನೆ, ಒಬ್ಬ ನಿರ್ದೇಶಕನೊಳಗೆ ಒಬ್ಬ ಕಲಾವಿದ ಇರುತ್ತಾನೆ ಎನ್ನುವ ಮಾತಿದೆ. ಇದಕ್ಕೆ ಉದಾಹರಣೆಯಾಗಿ ರಿಯಲ್‌ಸ್ಟಾರ್ ಉಪ್ಪಿ-ಕ್ರೇಜಿಸ್ಟಾರ್ ರವಿಚಂದ್ರನ್-ಕಿಚ್ಚ ಸುದೀಪ್- ದುನಿಯಾ ವಿಜಯ್-ರಿಷಬ್ ಶೆಟ್ಟಿ- ರಕ್ಷಿತ್ ಶೆಟ್ಟಿ ಹೀಗೆ ಹಲವು ಧ್ರುವತಾರೆಗಳು ಕಣ್ಮುಂದೆ ಇದ್ದಾರೆ. ಇದಕ್ಕೆ, ಆದಷ್ಟು ಬೇಗ ಪವರ್‌ಸ್ಟಾರ್ ಕೂಡ ಸೇರ್ಪಡೆಯಾಗಲಿದ್ದಾರೆ. ಆ ಸುವರ್ಣಕ್ಷಣ ಆದಷ್ಟು ಬೇಗ ಕೂಡಿಬರಲಿ, ಅಣ್ತಮ್ಮಾಸ್ ಹವಾ ಆಕಾಶ ಮುಟ್ಟಲಿ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!