ನಿರ್ದೇಶಕ ವಿಜಯ ಪ್ರಸಾದ್ ಮತ್ತು ಲೂಸ್ ಮಾದ ಯೋಗಿ ಇಬ್ಬರ ಕಾಂಬಿನೇಷನ್ನಲ್ಲಿ “ಸಿದ್ಲಿಂಗು” ಚಿತ್ರ ಸೂಪರ್ ಹಿಟ್ ಆಗಿತ್ತು. ಇದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ “ಸಿದ್ಲಿಂಗು ೨” ಬರಲಿದೆ ಎಂಬ ಸುದ್ದಿ ಹೊಸದೇನಲ್ಲ. ಅದಕ್ಕೂ ಮೊದಲು ಮತ್ತೊಂದು ಹೊಸ ಸುದ್ದಿ ಇದೆ. ಅದೇ ಈ ಹೊತ್ತಿನ ವಿಶೇಷ.
ಹೌದು, ನಿರ್ದೇಶಕ ವಿಜಯ ಪ್ರಸಾದ್ ಈಗ ಎರಡು ಸಿನಿಮಾಗಳನ್ನು ನಿರ್ದೇಶಿಸಿ, ಅವುಗಳನ್ನು ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದ್ದಾರೆ. ಜಗ್ಗೇಶ್ ಅಭಿನಯದ “ತೋತಾಪುರಿ ೧” ಮತ್ತು ಸತೀಶ್ ನೀನಾಸಂ ಅವರ “ಪೆಟ್ರೋಮ್ಯಾಕ್ಸ್” ಚಿತ್ರಗಳನ್ನು ತೆರೆಗೆ ತರುವ ಯೋಜನೆಯಲ್ಲಿದ್ದಾರೆ.
ಈ ಎರಡು ಸಿನಿಮಾಗಳ ನಂತರ ನಿರ್ದೇಶಕ ವಿಜಯಪ್ರಸಾದ್ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಅದೇ “ಪರಿಮಳ ಲಾಡ್ಜ್”.
ಹೌದು, ಕಳೆದ ಎರಡು ವರ್ಷಗಳ ಹಿಂದೆ ನಿರ್ದೇಶಕ ವಿಜಯಪ್ರಸಾದ್ ಅವರು “ಪರಿಮಳ ಲಾಡ್ಜ್” ಸಿನಿಮಾ ಅನೌನ್ಸ್ ಮಾಡಿದ್ದರು. ಈ ಚಿತ್ರಕ್ಕೆ ಪ್ರಸನ್ನ ನಿರ್ಮಾಪಕರಾಗಿದ್ದರು. ಈ ಚಿತ್ರದ ಆರಂಭಕ್ಕೂ ಮನ್ನ ಟೀಸರ್ ಕೂಡ ಬಂದಿತ್ತು. ಸತೀಶ್ ನೀನಾಸಂ, ಲೂಸ್ ಮಾದ ಯೋಗೇಶ್, ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಆ ಟೀಸರ್ನಲ್ಲಿ ಕಾಣಿಸಿಕೊಂಡಿದ್ದರು. ಈಗ ಹೊಸ ಸುದ್ದಿ ಅಂದರೆ, ಈ ಚಿತ್ರದ ಪರಿಮಳ ಮತ್ತೆ ಸೂಸುತ್ತಿದೆ.
ಹೌದು, ಸತೀಶ್ ನೀನಾಸಂ ಈಗ “ಪರಿಮಳ ಲಾಡ್ಜ್” ಸಿನಿಮಾದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ವತಃ ವಿಜಯಪ್ರಸಾದ್ ಅವರೇ ಹೇಳಿಕೊಂಡ ಸುದ್ದಿ ಎಲ್ಲೆಡೆ ಹರಡಿದೆ. ಅವರ “ಪರಿಮಳ ಲಾಡ್ಜ್”ಗೆ ಲೂಸ್ ಮಾದ ಯೋಗೇಶ್ ನಾಯಕರಾಗಿ ಮುಂದುವರೆಯಲಿದ್ದಾರೆ. ಉಳಿದಂತೆ ನಟಿ ಸುಮನ್ ರಂಗನಾಥ್ ಇರಲಿದ್ದಾರೆ. ಆದರೆ, ನಾಯಕಿ ಯಾರೆಂಬುದು ಅಂತಿಮವಾಗಬೇಕಿದೆ.