ಅಂತಹ ಸ್ಥಿತಿ ಯಾರಿಗೂ ಬೇಡ, ಅದನ್ನೆಲ್ಲ ಈಗ ನೆನಪಿಸಿಕೊಳ್ಳುವುದಕ್ಕೂ ನಂಗೆ ಕಷ್ಟ – ಹೀಗಂತ ಕನ್ನಡದ ಆ ಉದಯೋನ್ಮುಖ ನಟಿ ಹೇಳಿದ್ದೇಕೆ ಗೊತ್ತಾ?

ಹೆಸರು ನಿಖಿತಾ ಸ್ವಾಮಿ. ಕನ್ನಡದ ಉದಯೋನ್ಮುಖ ನಟಿ. ವೃತ್ತಿಯಲ್ಲಿ ಸಾಫ್ಟವೇರ್‌ ಎಂಜಿನಿಯರ್‌ ಆಗಿದ್ದವರು. ಸಿನಿಮಾ ಮೇಲಿನ ಆಸಕ್ತಿಯಿಂದ ಕೈತುಂಬಾ ಸಂಬಳ ಸಿಕ್ತಿದ್ದ ಆ ಕೆಲಸಕ್ಕೆ ಗುಡ್‌ ಬೈ ಹೇಳಿ ಗಾಂಧಿ ನಗರಕ್ಕೆ ಎಂಟ್ರಿ ಆಗಿದ್ದಾರೆ. ʼಸದ್ದುʼ ಎನ್ನುವುದು ಇವರ ಚೊಚ್ಚಲ ಮೂವೀ. ಕಳೆದ ಎರಡು ವರ್ಷಗಳ ಹಿಂದೆ, ಅಂದ್ರೆ ಕೊರೋನಾ ಬರೋದಿಕ್ಕಿಂತ ಮುಂಚೆ ಈ ಚಿತ್ರ ತೆರೆ ಕಂಡಿತ್ತಾದರೂ, ನಿರೀಕ್ಷೆಯಷ್ಟು ಈ ಸಿನಿಮಾಕ್ಕೆ ಸಕ್ಸಸ್‌ ಸಿಗಲಿಲ್ಲ. ಆಗ ಬಂದ ರಾಶಿ ರಾಶಿ ಚಿತ್ರಗಳ ನಡುವೆ ʼಸದ್ದುʼ ಸದ್ದೇ ಮಾಡಲಿಲ್ಲ. ಹಾಗಂತ, ನಿಖಿತಾ ಸ್ವಾಮಿ, ಅವರಿಗೇನು ನಷ್ಟ ಆಗಲಿಲ್ಲ. ಆ ಸಿನಿಮಾ ಸದ್ದು ಮಾಡದಿದ್ದರೂ, ಅವರು ಮಾತ್ರ ಸ್ಯಾಂಡಲ್‌ವುಡ್‌ ನಲ್ಲಿ ಸಖತ್‌ ಸಂಡ್‌ ಮಾಡಿದರು. ಆ ಸಿನಿಮಾ ಬಂದು ಹೋದ ಮೇಲೆ ಅವರಿಗೆ ಸಾಕಷ್ಟು ಸಿನಿಮಾ ಸಿಕ್ಕವು. ಕನ್ನಡದ ಜತೆಗೆ ತೆಲುಗಿಗೂ ಹೆಜ್ಜೆ ಹಾಕಿದರು. ಸದ್ಯಕ್ಕೀಗ ಅವರ ಕೈಯಲ್ಲಿ ಏಳೆಂಟು ಸಿನಿಮಾ ಇವೆ. ಅವೆಲ್ಲವೂ ಈಗ ರಿಲೀಸ್‌ ಗೆ ರೆಡಿ ಆಗುತ್ತಿವೆ. ಈ ಪೈಕಿ ಈ ವಾರ ʼ ಇದು ಆಕಾಶವಾಣಿ ಬೆಂಗಳೂರು ನಿಲಯʼ ಎನ್ನುವ ಹೆಸರಿನ ಚಿತ್ರ ತೆರೆ ಕಾಣುತ್ತಿದೆ.

ʼಆಕಾಶವಾಣಿ ಬೆಂಗಳೂರು ನಿಲಯʼ ಎನ್ನುವ ಚಿತ್ರದ ಶೀರ್ಷಿಕೆಯೇ ವಿಭಿನ್ನ. ಯಾಕಂದ್ರೆ ʼಆಕಾಶವಾಣಿ ಬೆಂಗಳೂರು ನಿಲಯʼ ಎನ್ನುವ ಪದವನ್ನು ನೀವೆಲ್ಲ ಅದೆಷ್ಟು ಸಲ ಕೇಳಿದ್ದೀರೋ ಗೊತ್ತಿಲ್ಲ. ಸದಾ ರೇಡಿಯೋದಲ್ಲಿ ಇದು ಅನುರಣಿಸುತ್ತಲೇ ಇರುತ್ತದೆ. ಅದೇ ಹೆಸರಲ್ಲಿ ಈ ಸಿನಿಮಾ ರೆಡಿಯಾಗಿ ರಿಲೀಸ್‌ ಆಗುತ್ತಿದೆ. ಹಾಗೆಂದಾಕ್ಷಣ ಇದು ಆಕಾಶವಾಣಿ ಬೆಂಗಳೂರು ನಿಲಯಕ್ಕೆ ಸಂಬಂಧಿಸಿದ ಚಿತ್ರವಲ್ಲ. ಚಿತ್ರಕ್ಕೆ ಕಥೆ ಬರೆದ ವಿಜಯ್‌ ಕುಮಾರ್‌ ಅವರ ಪ್ರಕಾರ, ಈ ಚಿತ್ರದ ಶೀರ್ಷಿಕೆಗೂ, ಆಕಾಶಾವಾಣಿ ಬೆಂಗಳೂರು ನಿಲಯಕ್ಕೂ ಯಾವುದೇ ಕನೆಕ್ಷನ್‌ ಇಲ್ಲ. ಚಿತ್ರದ ನಾಯಕನ ಹೆಸರು ಆಕಾಶ, ಹಾಗೆಯೇ ನಾಯಕಿ ಹೆಸರು ವಾಣಿ. ಜತೆಗೆ ಅವರ ನಿವಾಸ ಬೆಂಗಳೂರು ನಿಲಯ. ಇದೆಲ್ಲವೂ ಇಲ್ಲಿ ಒಟ್ಟಾಗಿ ಆಕಾಶವಾಣಿ ಬೆಂಗಳೂರು ನಿಲಯ ಎನ್ನುವುದಾಗಿದೆ ಅನ್ನೋದು ಅವರ ಸ್ಪಷನೆಯ ಮಾತು. ಅಂದ ಹಾಗೆ, ಇಲ್ಲಿ ವಾಣಿಯಾಗಿ ನಿಮ್ಮ ಮುಂದೆ ಬರುತ್ತಿದ್ದಾರೆ ಗ್ಲಾಮರಸ್‌ ನಟಿ ನಿಖಿತಾ ಸ್ವಾಮಿ.

ʼ ಪಾತ್ರದ ಹೆಸರು ವಾಣಿ ಅಂತ. ಹೆಸರು ಒಂಥರ ಹಳೆಯ ಶೈಲಿಯಲ್ಲಿದ್ದರೂ, ಆಕೆ ಪಕ್ಕಾ ಮಾರ್ಡನ್‌ ಹುಡುಗಿ. ಇದು ಮಹಿಳಾ ಪ್ರದಾನ ಚಿತ್ರ. ವಾಣಿ ಬಾಲ್ಯದಲ್ಲಿ ಇದ್ದಾಗಲೇ ತನ್ನ ಪೋಷಕರನ್ನು ಕಳೆದುಕೊಳ್ಳುತ್ತಾಳೆ. ತುಂಬಾ ಕಷ್ಟ ಅನುಭವಿಸ್ತಾಳೆ. ಅವಳು ಸ್ವಂತ ದುಡಿಯಬೇಕಾಗುತ್ತದೆ. ಇದೇಕಾರಣಕ್ಕೆ ಆಕೆ ಹಳ್ಳಿ ಬಿಟ್ಟು ಬೆಂಗಳೂರಿಗೆ ಬರ್ತಾಳೆ. ಲೈಫ್‌ ಅನ್ನು ಚಾಲೆಂಜ್‌ ಆಗಿ ತೆಗೆದುಕೊಳ್ತಾಳೆ. ಹಾಗಂತ ಆಕೆ, ಸಮಾಜದಲ್ಲಿ ಯಾವುದೇ ತಪ್ಪು ದಾರಿಗೆ ಹೋಗೋದಿಲ್ಲ. ಬದಲಿಗೆ ಸಮಾಜವೇ ಮೆಚ್ಚುಗೆ ಹೇಳುವಂತ ಸ್ವಂತ ದುಡಿಮೆಗೆ ಮುಂದಾಗ್ತಾಳೆ, ಅಲ್ಲಿಂದ ಆಕೆಯ ಬದುಕಿನ ಪಯಣ ಏನು ಅಂತ ಈ ಚಿತ್ರದಲ್ಲಿ ತೋರಿಸಲಾಗಿದೆʼ ಎನ್ನುವ ಮೂಲಕ ಚಿತ್ರದಲ್ಲಿನ ಪಾತ್ರ ಬಗೆಯನ್ನು ವಿವರಿಸುತ್ತಾರೆ ನಟಿ ನಿಖಿತಾ ಸ್ವಾಮಿ.

ಕೊರೋನಾ ಅಂತ ಸಿನಿಮಾ ಚಟುವಟಿಕೆಗಳಲ್ಲಿ ಇಲ್ಲದೆ ಎರಡು ವರ್ಷಗಳೇ ಆಗಿದ್ದವು. ಮೊದಲನೇ ಅಲೆ ಮುಗಿದು ಇನ್ನೇನು ಸಿನಿಮಾ ಇಂಡಸ್ಟ್ರಿ ಸರಿ ದಾರಿಗೆ ಬಂತು ಅನ್ನೋ ಹೊತ್ತಿಗೆ ಮತ್ತೆ ಎರಡನೇ ಅಲೆ ಶುರುವಾಯಿತು. ಅಲ್ಲಿಂದ ಲಾಕ್‌ ಡೌನ್‌ ಬಂತು. ಒಂದಷ್ಟು ದಿನಗಳ ನಂತರ ಪರಿಸ್ಥಿತಿ ಒಂದಷ್ಟು ತಿಳಿಯಾಗುವ ಹಂತಕ್ಕೆ ಬಂತು. ಆಗಲೇʼ ಆಕಾಶವಾಣಿ ಬೆಂಗಳೂರು ನಿಲಯʼ ಚಿತ್ರಕ್ಕೆ ಚಿತ್ರೀಕರಣ ನಡೆದಿದ್ದು. ʼ ಹೌದು, ಇದೊಂದು ಸ್ಪೆಷಲ್‌ ಅಂತಲೇ ಹೇಳಬಹುದು. ಯಾಕಂದ್ರೆ ಕೊರೋನಾ ಸಮಯದಲ್ಲಿ ನಾವೆಲ್ಲ ಹೋರ ಹೋಗುವುದಕ್ಕೂ ಭಯ ಇದ್ದ ದಿನಗಳು. ಆ ಸಮಯದಲ್ಲಿ ಈ ಸಿನಿಮಾಕ್ಕೆ ಶೂಟಿಂಗ್‌ ಶುರುವಾಯ್ತು. ಹೇಗಪ್ಪಾ ಅಂತ ಭಯ ಇತ್ತು. ಆದ್ರೆ ನಮ್ಮ ಚಿತ್ರದ ಕಥೆ ಬರೆದ ವಿಜಯ್‌ ಕುಮಾರ್‌ ಸರ್‌ ಅವರ ಸ್ವಂತ ಊರು ನೊಣವಿನಕೆರೆ ಅಂತ ಇದೆ. ಅಲ್ಲಿನ ಒಂದು ಮನೆಯಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದ್ದು. ಹಾಗಾಗಿ ನಮಗೆ ಅದೆಲ್ಲ ತುಂಬಾ ಕಂಫರ್ಟ್‌ ಅಂತೆನಿಸಿತುʼ ಎನ್ನುವುದರ ಮೂಲಕ ʼಇದು ಆಕಾಶವಾಣಿ ಬೆಂಗಳೂರು ನಿಲಯʼ ಚಿತ್ರದ ಚಿತ್ರೀಕರಣದ ಅನುಭವವನ್ನು ತೆರೆದಿಟ್ಟರು ನಟಿ ನಿಖಿತಾ ಸ್ವಾಮಿ.

ʼಜಲ್ಲಿಕಟ್ಟುʼ,ʼಟಕಿಲಾʼ, ʼಅದೊಂದು ದಿನʼ ಚಿತ್ರಗಳ ಜತೆಗೆ ತೆಲುಗಿನಲ್ಲೂ ಒಂದು ಚಿತ್ರದಲ್ಲಿ ನಿಖಿತಾ ಬಣ್ಣ ಹಚ್ಚಿದ್ದಾರೆ. ಎಂಟ್ರಿಯಲ್ಲಿಯೇ ಸಾಕಷ್ಟು ಬ್ಯುಸಿ ಇದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಎಲ್ಲಾ ಸಿನಿಮಾಗಳು ಒಂದಲ್ಲೊಂದು ರೀತಿ ಮಹಿಳಾ ಪ್ರಧಾನ ಚಿತ್ರಗಳೇ ಅಂತೆ. ʼ ಇದೆಲ್ಲ ಹೇಗೋ ಏನೋ ನಂಗೂ ಅಚ್ಚರಿ ಎನಿಸುತ್ತೆ. ಸಿಕ್ಕಿರುವ ಸಿನಿಮಾಗಳೆಲ್ಲವೂ ಒಂದ್ರೀತಿ ಮಹಿಳಾ ಪ್ರಧಾನ ಚಿತ್ರಗಳೆ. ಇದು ನನ್ನ ಪಾಲಿಗೆ ತುಂಬಾ ಸ್ಪೆಷಲ್.‌ ಒಬ್ಬ ನಟಿಗೆ ಇಂತಹ ಅವಕಾಶಗಳು ಬೇಕು. ನಾನು ಸಿನಿಮಾ ಜಗತ್ತಿಗೆ ಬರಬೇಕು ಅಂತ ಯೋಚಿಸುತ್ತಿದ್ದಾಗ ಇಂತಹ ಸಿನಿಮಾಗಳು ಸಿಕ್ಕರೆ ಚೆನ್ನಾಗಿರುತ್ತೆ ಅಂತಂದುಕೊಡಿದ್ದು ಹೌದು. ಅದೃಷ್ಟವೇ ಎನ್ನುವ ಹಾಗೆ ನಾನು ಬಯಸಿದಂತೆಯೇ ಆಗಿದೆʼ ಎನ್ನುತ್ತಾ ಮುದ್ದಾದ ಮುಖದಲ್ಲಿ ನಗು ಚೆಲ್ಲುತ್ತಾರೆ ಈ ನಟಿ.ಇನ್ನು ಕೊರೋನಾ ನಂತರ ಚಿತ್ರಮಂದಿರಗಳಲ್ಲಿ ಹಂಡ್ರಡ್‌ ಪರ್ಸೆಂಟ್‌ ಸೀಟು ಭರ್ತಿಗೆ ಅವಕಾಶ ಸಿಕ್ಕ ಬೆನ್ನಲೇ ನಿಖಿತಾ ಸ್ವಾಮಿ ಅಭಿನಯದ ʼಆಕಾಶವಾಣಿ ಬೆಂಗಳೂರು ನಿಲಯʼ ತೆರೆ ಕಾಣುತ್ತಿದೆ. ಇದು ನಿಖಿತಾ ಸೇರಿದಂತೆ ಇಡೀ ಚಿತ್ರ ತಂಡಕ್ಕೂ ಖುಷಿ ಕೊಟ್ಟಿದೆ. ಅದೇ ಖುಷಿಯನ್ನು ಹಂಚಿಕೊಳ್ಳುವಾಗ, ಸಂಭ್ರಮದ ಜತೆಗೆ ನೋವು ಹೊರ ಹಾಕುತ್ತಾರೆ ನಿಖಿತಾ. ಅದಕ್ಕೆ ಕಾರಣ ಕೊರೋನಾ ಅವರ ಬದುಕಿನಲ್ಲೂ ತಂದಿಟ್ಟ ತಲ್ಲಣ.

ʼ ಕೊರೋನಾ ಅನೇಕ ರೀತಿಯಲ್ಲಿ ಪ್ರತಿಯೊಬ್ಬರ ಬದುಕನ್ನು ಕಾಡಿದೆ. ಸಿನಿಮಾ ರಂಗವಂತೂ ತಲ್ಲಣಿಸಿ ಹೋಯಿತು. ಹಾಗೆಯೇ ನನ್ನದೇ ಬದುಕಿನಲ್ಲೂ ಕೊರೋನಾದ ಕಠೋರ ಅನುಭವ ಆಯಿತು. ತಂದೆ ಹುಷಾರಿಲ್ಲದಂತೆ ಆಯಿತು. ಪರೀಕ್ಷೆ ಮಾಡಿಸಿದರೆ, ಕೊರೋನಾ ಪಾಸಿಟಿವ್ ಬಂತು. ಆದಾಗಲೇ ಸಿನಿಮಾ ಕೆಲಸ ಇಲ್ಲದೆ ವರ್ಷಗಳೇ ಆಗಿದ್ದವು. ಕೈಯಲ್ಲಿ ಕಾಸಿಲ್ಲ. ಆ ಸಮಯದಲ್ಲಿ ಅಪ್ಪನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ, ಅವರನ್ನು ಸೇಪ್‌ ಆಗಿ ಮನೆಗೆ ಕರೆದುಕೊಂಡು ಬರುವಷ್ಟರಲ್ಲಿ ಸಾಕಷ್ಟು ದುಡ್ಡು ಖರ್ಚಾಯಿತು. ಹಣದ ವಿಷಯ ಇರಲಿ, ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋದೆವು. ಆ ಸಮಯದಲ್ಲಿ ಅನೇಕ ಸಹಾಯಕ್ಕಾಗಿ ಯಾರನ್ನಾದರೂ ಕೇಳೋಣ ಅಂತೆನಿಸಿದರೂ ಮನಸು ಒಪ್ಪಲಿಲ್ಲ. ನಿಜ ಹೇಳ್ತೀನಿ ಅಂತಹ ಜೀವನ ಯಾರಿಗೂ ಬೇಡ. ಅದನ್ನೆಲ್ಲ ನೆನಪಿಸಿಕೊಳ್ಳುವುದಕ್ಕೂ ನಂಗೆ ಕಷ್ಟ ಆಗ್ತಿದೆ ಎನ್ನುತ್ತಾ ದು:ಖ ನುಂಗಿ ಕೊಂಡು ನಕ್ಕರು ನಿಖಿತಾ ಸ್ವಾಮಿ. ಆದರೂ ಈಗ ತಾವು ನಾಯಕಿ ಆಗಿ ಅಭಿನಯಿಸಿರುವ ಆಕಾಶವಾಣಿ ಬೆಂಗಳೂರು ನಿಲಯ ತೆರೆ ಕಾಣುತ್ತಿರುವುದಕ್ಕೆ ಖುಷಿಯಲಿರುವ ಅವರು, ಪ್ರೇಕ್ಷಕರು ಹೆಚ್ಚಿನ ಸುರಕ್ಷತೆ ತೆಗೆದುಕೊಂಡು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ನಮ್ಮನ್ನೆಲ್ಲ ಬೆಳೆಸಬೇಕು ಎಂದು ವಿನಂತಿಸಿಕೊಂಡರು. ಇದೇ ಶುಕ್ರವಾರ ಈ ಚಿತ್ರ ರಾಜ್ಯದ 100 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಗ್ರಾಂಡ್‌ ಆಗಿ ತೆರೆ ಕಾಣುತ್ತಿದೆ.

  • ಎಂಟರ್‌ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ

Related Posts

error: Content is protected !!