ಕನ್ನಡ ಚಿತ್ರರಂಗ ಈಗ ಹೊಸ ಹುರುಪಿನಲ್ಲಿದೆ. ಕೊರೊನಾ ಆತಂಕ ಕೊಂಚ ಕಡಿಮೆಯಾಗುತ್ತಿದ್ದಂತೆಯೇ ಸರ್ಕಾರ ಕೂಡ ಚಿತ್ರರಂಗದ ಚಟುವಟಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈಗ ಶೇ.೧೦೦ರಷ್ಟು ಆಸನ ಭರ್ತಿಗೆ ಅನುಮತಿ ಸಿಕ್ಕಾಗಿದೆ. ಸ್ಟಾರ್ ಸಿನಿಮಾಗಳು ಸೇರಿದಂತೆ ಹೊಸಬರ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿವೆ. ಅತ್ತ, ಹೊಸಬರ ಸಿನಿಮಾಗಳೂ ಸೆಟ್ಟೇರುತ್ತಿವೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿಸಿದ್ದ ಕೆಲವು ಸಿನಿಮಾಗಳು ಸಹ ತನ್ನ ಚಿತ್ರೀಕರಣ ಮುಂದುವರೆಸುತ್ತಿವೆ. ಆ ಸಾಲಿಗೆ “ಶಿವನಪಾದ” ಸಿನಿಮಾವೂ ಸೇರಿದೆ.
ಹೌದು, ಸೀ ಶೋರ್ ಸ್ಟುಡಿಯೋಸ್ ಬ್ಯಾನರ್ನಡಿ ಸಂದೀಶ್ ಹೆಚ್.ಟಿ. ಹಾಗೂ ಪೆರುಮಾಳ್ ವಿ. ಅವರ ನಿರ್ಮಾಣದ ಈ ಚಿತ್ರ ಲವ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಟಚ್ ಹೊಂದಿದೆ. ಜೊತೆಗೆ ಕ್ರೈಮ್ ಕೂಡ ಇಲ್ಲಿದೆ. ಈ ಹಿಂದೆ ಲೂಸ್ ಮಾದ ಯೋಗಿ ಅಭಿನಯದ “ಬಂಗಾರಿ” ಹಾಗು ಮಕ್ಕಳ ಸಿನಿಮಾಗಳಾದ “ಬೆಟ್ಟದ ದಾರಿ”, “ನಡಗಲ್ಲು”, ತಮಿಳಿನ “ಕಾದಲ್ ಪೈತ್ಯಂ” ಚಿತ್ರಗಳನ್ನು ನಿರ್ದೇಶಿಸಿದ್ದ ಮಾ.ಚಂದ್ರು ಅವರು “ಶಿವನಪಾದ” ಚಿತ್ರಕ್ಕೆ ನಿರ್ದೇಶಕರು. ಸದ್ಯ ಈ ಚಿತ್ರ ಶೇ.೫೦ರಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಮಾತಿನಭಾಗ ಹಾಗೂ ಎರಡು ಹಾಡುಗಳನ್ನು ಸಾಗರ, ಮದ್ದೂರು, ಪುಟ್ಟಣ್ಣ ಸ್ಟುಡಿಯೋ, ಮಿಲನಹೌಸ್ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುತ್ತಿದೆ. ಮುದಿನ ವಾರದಿಂದ ಶೂಟಿಂಗ್ ಶುರುವಾಗಲಿದೆ.
ಆರು ಪಾತ್ರಗಳ ಸುತ್ತ ನಡೆಯುವ ಕುತೂಹಲದ ಕಥೆಯಲ್ಲಿ ಒಂದು ಕೊಲೆ ನಡೆಯುತ್ತೆ. ಅದೇ ಚಿತ್ರದ ಹೈಲೈಟ್. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಹೆಚ್.ಟಿ. ಸಾಂಗ್ಲಿಯಾನ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿಯೇ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷತೆಗಳಲ್ಲೊಂದು.
“ಶಿವನಪಾದ” ಎನ್ನುವುದು ಉತ್ತರ ಕರ್ನಾಟಕದಲ್ಲಿರುವ ಒಂದು ಪ್ರಸಿದ್ದ ಪ್ರವಾಸಿ ತಾಣ. ಈ ಚಿತ್ರದಲ್ಲಿ ಆ ಲೊಕೇಶನ್ ಕೂಡ ಒಂದು ಪಾತ್ರವಾಗಿಯೇ ಮೂಡಿಬರಲಿದ್ದು, ಬಹುತೇಕ ಜರ್ನಿಯಲ್ಲೇ ನಡೆಯೋ ಕುತೂಹಲಕರ ಕಥೆ ಇದು ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ನಾಗೇಶ್ ಆರ್. ಆನಂದ್, ವರ್ಷಿತ ಗಿರೀಶ್, ಮೇಘನಾ, ಬಲ ರಾಜವಾಡಿ, ನವೀನ್ ಡಿ.ಪಡೀಲ್, ಅಂಜಲಿ, ಹರಿಹರನ್ ಬಿ.ಪಿ, ಆಟೋ ನಾಗರಾಜ್, ಶೇಷಗಿರಿ, ನರಸಿಂಹಮೂರ್ತಿ, ಸೂರಿ, ರಂಭಾ ಇತರರು ಇದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ಮೂರ್ತಿ ಕ್ಯಾಮೆರಾ ಹಿಡಿದರೆ, ವೀರ್ ಸಮರ್ಥ ಅವರ ಸಂಗೀತವಿದೆ. ವಿಜಯ್ ಭರಮಸಾಗರ ಅವರ ಸಾಹಿತ್ಯ, ವೆಂಕಿ ಯುವಿಡಿ ಸಂಕಲನ ಈ ಚಿತ್ರಕ್ಕಿದೆ.