ವಿಆರ್ ಎಲ್ ಸಂಸ್ಥೆಯ ಮಾಲೀಕ ವಿಜಯ ಸಂಕೇಶ್ವರ ಅವರ ಬಯೋಫಿಕ್ ವಿಜಯಾನಂದ ಚಿತ್ರ ಸೆಟ್ಟೇರಲು ರೆಡಿ ಆಗಿದೆ. ಅಕ್ಟೋಬರ್ ೨೪ಕ್ಕೆ ಗ್ರಾಂಡ್ ಮುಹೂರ್ತಕ್ಕೆ ದಿನ ಫಿಕ್ಸ್ ಆಗಿದೆ. ಅಲ್ಲಿಂದ ಶೂಟಿಂಗ್ ಸ್ಟಾರ್ಟ್ ಆಗ್ತಿದೆ.
ಯುವ ನಿರ್ದೇಶಕಿ ರಿಷಿಕಾ ಶರ್ಮಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ʼವಿಜಯಾನಂದʼ ಸೆಟ್ಟೇರಲು ಸಜ್ಜಾಗಿದೆ. ಎಲ್ಲವೂ ಅಂದುಕೊಂ ಡಂತೆಯೇ ಆಗಿದ್ದರೆ ಚಿತ್ರಕ್ಕೆ ಸೆಪ್ಟೆಂಬರ್ ಕೊನೆ ವಾರದಲ್ಲಿಯೇ ಮುಹೂರ್ತ ಮುಗಿದು ಹಳೇ ಮಾತೇ ಆಗುತ್ತಿತ್ತೇನೋ, ಆದರೆ ತಾಂತ್ರಿಕ ಕಾರಣದಿಂದ ಮುಹೂರ್ತದ ದಿನಾಂಕ ಪೋಸ್ಟ್ ಪೋನ್ಡ್ ಆಯಿತು. ಈಗ ಅಕ್ಟೋಬರ್ ೨೪ಕ್ಕೆ ಗ್ರಾಂಡ್ ಮುಹೂರ್ತಕ್ಕೆ ದಿನ ಫಿಕ್ಸ್ ಆಗಿದೆ. ಸದ್ಯಕ್ಕೆ ಚಿತ್ರ ತಂಡ ಅದೇ ಕೆಲಸದಲ್ಲಿ ಬ್ಯುಸಿ ಆಗಿದೆ. ಈ ನಡುವೆ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿಯೇ ತೊಡಗಿಸಿಕೊಂಡಿರುವ ಚಿತ್ರ ತಂಡ, ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ದೊಡ್ಡದೊಂದು ಆಡಿಷನ್ಸ್ ಶೋ ಮುಗಿಸಿಕೊಂಡು ಬಂದಿದೆ. ಚಿತ್ರತಂಡ ಹೇಳುವ ಮಟ್ಟಿಗೆ ಅದೊಂದು ದಾಖಲೆಯ ಆಡಿಷನ್ಸ್ ಶೋ. ಆಡಿಷನ್ಸ್ ಗೆ ಬಂದ ಕಲಾವಿದರ ಸಂಖ್ಯೆಯೇ ಅದಕ್ಕೆ ಸಾಕ್ಷಿಯಂತೆ.
ಹೌದು, ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರಕ್ಕೆ ಆ ದಿನ ಕಲಾವಿದರ ದಂಡೇ ಆಗಮಿಸಿತ್ತು. ನೋಡಿದವರಿಗೆಲ್ಲ ಅಲ್ಲೆನೋ ರಾಜಕೀಯ ಸಮಾವೇಶವೇ ಜರುಗಿದೆ ಅಂತಲೇ ಅನಿಸುವಂತಿತ್ತು ಆಡಿಷನ್ಸ್ ಶೋ. ನೂರಿನ್ನೂರು ಅಲ್ಲ, ಅಲ್ಲಿಗೆ ಬಂದವರ ಸಂಖ್ಯೆ ಕನಿಷ್ಠ ೫ ಸಾವಿರಕ್ಕೂ ಹೆಚ್ಚಿತ್ತು. ಅಷ್ಟು ಕಲಾವಿದರಿಗೂ ಆಡಿಷನ್ಸ್ ಅವಕಾಶ ಕೊಟ್ಟ ಚಿತ್ರ ತಂಡ, ಚಿತ್ರದ ಪಾತ್ರಗಳಿಗೆ ಸೂಕ್ತವಾಗುವ ೪೦ ಕ್ಕೂ ಹೆಚ್ಚು ಕಲಾವಿದರನ್ನು ಆಯ್ಕೆ ಮಾಡಿಕೊಂಡು ಬಂದಿದೆ. ಅಂದ ಹಾಗೆ ʼವಿಜಯಾನಂದʼ ಚಿತ್ರವು ವಿಆರ್ ಎಲ್ ಸಂಸ್ಥೆಯ ಮಾಲೀಕ, ನಾಡಿನ ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಫಿಕ್. ಅದೇ ಕಾರಣಕ್ಕೆ ಹುಬ್ಬಳ್ಳಿಯ ಆಡಿಷನ್ಸ್ ಜಾತ್ರೆಯಂತೆ ನಡೆಯಿತು ಅನ್ನೋದು ಚಿತ್ರ ತಂಡದ ಮಾತು ಕೂಡ.
ʼಚಿತ್ರದ ಮುಖ್ಯ ಪಾತ್ರಗಳನ್ನು ಹೊರತು ಪಡಿಸಿ, ಒಂದಷ್ಟು ಸಹ ಕಲಾವಿದರು ಚಿತ್ರಕ್ಕೆ ಬೇಕಿದೆ. ಅವರೆಲ್ಲ ಉತ್ತರ ಕರ್ನಾಟಕದ ಭಾಷೆ ಬಲ್ಲವರೇ ಆಗಬೇಕಿದೆ. ಅದೇ ಕಾರಣಕ್ಕೆ ನಾವು ಒಂದು ದಿನ ಕಾಲ ಹುಬ್ಬಳ್ಳಿಯಲ್ಲಿ ಆಡಿಷನ್ಸ್ ಆಯೋಜಿಸಿದ್ದೇವು. ಇದನ್ನು ಮೊದಲೇ ಅನೌನ್ಸ್ ಮಾಡಿದ್ದೆವು. ಅದೇ ಕಾರಣಕ್ಕೆ ಇರಬೇಕು, ಆಡಿಷನ್ಸ್ ಗೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಮೂರು ಪಟ್ಟು ಕಲಾವಿದರು ಆಗಮಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಗೋವಾ, ಮುಂಬೈನಿಂದಲೂ ಒಂದಷ್ಟು ಕಲಾವಿದರು ಬಂದಿದ್ದರು. ಬಂದವರ ಸಂಖ್ಯೆ ಹೆಚ್ಚಿದೆ ಅಂತ ಯಾವರನ್ನು ಯಾರನ್ನು ವಾಪಸ್ ಕಳುಹಿಸಿಲ್ಲ. ಆಡಿಷನ್ಸ್ ಗೆ ನಾವು ನಾಲ್ಕು ತಂಡಗಳಲ್ಲಿ ಸಿದ್ದತೆ ಮಾಡಿಕೊಂಡಿದ್ದೆವು. ಅಂದು ಅಲ್ಲಿಗೆ ಬಂದವರೆನ್ನೆಲ್ಲ ಆಡಿಷನ್ಸ್ ಅವಕಾಶ ಕೊಟ್ಟು, ನಮ್ಮ ಚಿತ್ರದ ಪಾತ್ರಗಳಿಗೆ ಬೇಕಿದ್ದ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದೇವೆʼ ಎನ್ನುತ್ತಾರೆ ನಿರ್ದೇಶಕಿ ರಿಷಿಕಾ ಶರ್ಮಾ.
ಅಂದ ಹಾಗೆ, ‘ವಿಜಯಾನಂದ’ ಚಿತ್ರ ಕನ್ನಡದ ಮಟ್ಟಿಗೆ ಒಂದು ವಿಶೇಷ ಚಿತ್ರವಾಗುವುದಂತೂ ಹೌದು. ಒಂದು ಲಾರಿಯಿಂದ ಇವತ್ತು ಸಾವಿರಾರು ಬಸ್ಸು ಹಾಗೂ ಲಾರಿಗಳನ್ನು ಹೊಂದಿದ್ದು ಮಾತ್ರವಲ್ಲ ದೊಡ್ಡ ಉದ್ಯಮಿಯಾಗಿ ಹೊರ ಹೊಮ್ಮಿರುವ ವಿಜಯ ಸಂಕೇಶ್ವರ ಅವರ ಬಯೋಪಿಕ್ ಎನ್ನುವುದು ಅದಕ್ಕೆ ಕಾರಣ. ದೊಡ್ಡ ಸಾಧನೆಯ ಮೂಲಕವೇ ಕನ್ನಡಿಗರ ಮನೆ ಮಾತನಾದ ವಿಜಯ ಸಂಕೇಶ್ವರ ಅವರ ಸಾಹಸದ ಬದುಕು ಈಗ ತೆರೆ ಮೇರೆ ಬರುತ್ತಿದೆಅಂದರೆ ಕೂತೂಹಲ ಇಲ್ಲದೆ ಇರುತ್ತಾ? ಹುಬ್ಬಳ್ಳಿ ಸೇರಿ ಈಗ ಉತ್ತರ ಕರ್ನಾಟಕದಲ್ಲಿ ದೊಡ್ಡ ಹವಾ ಶುರುವಾಗಿದೆ.
ಆಡಿಷನ್ಸ್ ನಲ್ಲಿ ಚಿತ್ರತಂಡದೊಂದಿಗೆ ನಿರ್ಮಾಪಕರೂ ಆದ ವಿಆರ್ ಎಲ್ ಸಂಸ್ಥೆಯ ಎಂಡಿ ಆನಂದ್ ಸಂಕೇಶ್ವರ್
ಅಂದ ಹಾಗೆ, ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಭರವಸೆಯ ಯುವ ನಟ ನಿಹಾಲ್ ರಜಪೂತ್ ಕಾರಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ಅನಂತನಾಗ್ ಕೂಡ ಚಿತ್ರದಲ್ಲಿದ್ದಾರೆ. ಉಳಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಅದೆಲ್ಲವೂ ಇಷ್ಟರಲ್ಲಿಯೇ ರಿವೀಲ್ ಆಗಲಿದೆಯಂತೆ. ಆಡಿಷನ್ಸ್ ನಲ್ಲಿ ವಿಆರ್ಎಲ್ ಸಂಸ್ಥೆಯ ಎಂಡಿ ಆನಂದ್ ಸಂಕೇಶ್ವರ್ ಕೂಡ ಭಾಗವಹಿಸಿದ್ದರು.
- ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ