ಗಂಧದಗುಡಿಗೆ ರಣಬೀರ್ ಕಪೂರ್ ಆಗಮನ ಎಂದಾಕ್ಷಣ ವಾವ್ ಅಂತೀರಿ? ಯಾವ್ ಸಿನಿಮಾ ? ಏನ್ ಕಥೆ? ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು ? ಹೀಗೆ ಬ್ಯಾಕ್ ಟು ಬ್ಯಾಕ್ ಕೊಶ್ಚನ್ಸ್ ನೀವೇ ಹಾಕಿಕೊಳ್ತೀರಿ. ಆದರೆ, ನಾವು ಹೇಳಲಿಕ್ಕೆ ಹೊರಟಿರುವುದು ಬಿಟೌನ್ ರಣಬೀರ್ ಬಗ್ಗೆ ಅಲ್ಲ ಸ್ಯಾಂಡಲ್ ವುಡ್ ರಣಬೀರ್ ಕಪೂರ್ ಕುರಿತಾಗಿ. ಬಾಲಿವುಡ್ ಹ್ಯಾಂಡ್ಸಮ್ ಹಂಕ್ ರಣಬೀರ್ ಕಪೂರ್ ನ ಹೋಲುವಂತಹ ಚಾರ್ಮಿಂಗ್ ಹೀರೋ ಚಂದನವನದಲ್ಲಿದ್ದಾರೆ. ಅವರು ನಮ್ಮ ಕನ್ನಡದವರೇ, ಬೆಂಗಳೂರಲ್ಲೇ ಹುಟ್ಟಿ ಬೆಳೆದಿದ್ದಾರೆ. ಆ ಸುರಸುಂದರಾಂಗ ಸುಮುಖರ ಪರಿಚಯ ಮತ್ತು ಸಿನಿಜರ್ನಿಯ ವರದಿ.
ಬಾಲಿವುಡ್ ಬಾದ್ ಷಾ ಅಮಿತಾಬ್ ಆದರೆ, ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅವರು. ಬಿಟೌನ್ ಕಿಂಗ್ ಖಾನ್ ಶಾರುಖ್, ಸ್ಯಾಂಡಲ್ ಕಿಂಗ್ ಶಿವರಾಜ್ ಕುಮಾರ್, ಬಿಟೌನ್ ಸುಲ್ತಾನ್ ಸಲ್ಮಾನ್, ಸ್ಯಾಂಡಲ್ ವುಡ್ ಸುಲ್ತಾನ್ ದರ್ಶನ್, ಬಾಲಿವುಡ್ ಮಿಸ್ಟರ್ ಪರ್ಫೆಕ್ಟನಿಸ್ಟ್ ಆಮೀರ್, ಸ್ಯಾಂಡಲ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಪವರ್ ಸ್ಟಾರ್, ಬಿಟೌನ್ ಖಿಲಾಡಿ ಅಕ್ಷಯ್, ಸ್ಯಾಂಡಲ್ ವುಡ್ ಟು ಪ್ಯಾನ್ ಇಂಡಿಯಾ ಕಿಲಾಡಿ ರಾಕಿಂಗ್ ಸ್ಟಾರ್, ಬಾಲಿವುಡ್ ಚಾಕೊಲೇಟ್ ಹೀರೋ ರಣಬೀರ್, ಸ್ಯಾಂಡಲ್ ವುಡ್ ಚಾಕೊಲೇಟ್ ಹೀರೋ ಒನ್ ಅಂಡ್ ಓನ್ಲೀ ಸುಮುಖ ಅಂದರೆ ಬಹುಷಃ ಅತಿಶಯೋಕ್ತಿಯಲ್ಲ.
ಸುಮುಖ ಹೆಸರೇ ಹೇಳುವಂತಹ ಸುಂದರವಾದ ಮುಖವುಳ್ಳ ಸುರಸುಂದರಾಂಗ. ಹೆಸರಿಗೆ ತಕ್ಕನಾಗಿರುವ ನಟ. ಥೇಟ್ ರಣಬೀರ್ ಕಪೂರ್ ಥರ ಕಾಣಿಸ್ತಾರೆ. ಬಿಟೌನ್ ಬರ್ಫಿಯಷ್ಟೇ ಹ್ಯಾಂಡ್ಸಮ್ ಆಗಿರುವ ಸುಮುಖ ಕಣ್ಣೋಟದಲ್ಲೇ ಲಾಕ್ ಮಾಡ್ತಾರೆ ಅದಂತೂ ಸತ್ಯ. ನಿಮಗೆ ಡೌಟ್ ಇದ್ರೆ ಒಂದು ಸಲ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿರುವ ‘ ಫಿಸಿಕ್ಸ್ ಟೀಚರ್’ ಟೀಸರ್ ನ ನೋಡಿ ಆಗ ನೀವೇ ಅಚ್ಚರಿಪಡುತ್ತೀರಿ.
ಬಿಟೌನ್ ಚಾಕೊಲೇಟ್ ಹೀರೋ ರಣಬೀರ್ ನ ಹೋಲುವ ನಟ ಸುಮುಖ. ಶಶಿಕುಮಾರ್ ಹಾಗೂ ನಂದಿತ ಯಾದವ್ ಅವರ ಪುತ್ರ. ಅಪ್ಪ- ಅಮ್ಮನಂತೆ ಕಲೆಯ ಸೆಳೆತ. ಬಾಲ್ಯದಿಂದಲೂ ಬಣ್ಣದ ಲೋಕವನ್ನು ನೋಡುತ್ತಾ ಬೆಳೆದ ಸುಮುಖ ಈಗ ಹೊಸ ಸವಾಲೊಂ ದನ್ನು ಸ್ವೀಕರಿಸಿದ್ದಾರೆ. ನಾಯಕನಟ ಪ್ಲಸ್ ನಿರ್ದೇಶಕನಾಗಿ ಗಂಧದಗುಡಿಯ ಅಖಾಡಕ್ಕೆ ಧುಮ್ಕಿದ್ದಾರೆ. ಫಿಸಿಕ್ಸ್ ಟೀಚರ್ ಸಿನಿಮಾದ ಮೂಲಕ ಗಾಂಧಿನಗರದ ಮಂದಿಗೆ ಇನ್ನಷ್ಟು ಚಿರಪರಿಚಿತಗೊಳ್ತಿದ್ದಾರೆ.
ಸುಮುಖರ ತಂದೆ ತಾಯಿ ಬಗ್ಗೆ ಬಹುಷಃ ನಿಮ್ಮೆಲ್ಲರಿಗೂ ತಿಳಿದಿರುತ್ತೆ. ರಂಗಭೂಮಿ- ಕಿರುತೆರೆ- ಬೆಳ್ಳಿತೆರೆಗೆ ಸುಮುಖ ತಂದೆತಾಯಿಯ ಕೊಡುಗೆ ಅಪಾರ. ಕಿರುತೆರೆ ಲೋಕದಲ್ಲಿ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ನಂದಿತ ಯಾದವ್ ಸಾಕಷ್ಟು ಹೆಸರು ಮಾಡಿದ್ದಾರೆ. ಶಶಿಕುಮಾರ್ ಸ್ಮಾಲ್ಸ್ಕ್ರೀನ್ ಹಾಗೂ ಬಿಗ್ ಸ್ಕ್ರೀನ್ ನಲ್ಲಿ ತರಹೇವಾರಿ ಪಾತ್ರಗಳಿಗೆ ಜೀವತುಂಬಿ ನಟಿಸಿದ್ದಾರೆ. ಇದೀಗ ಮಗ ಸುಮುಖ ಅವರ ಸರದಿ. ಯಾನ ಚಿತ್ರದಿಂದ ಸಿನಿಜರ್ನಿ ಶುರುಮಾಡಿ ಅಮ್ಮ ನಂದಿತಾ ನಿರ್ದೇಶಿಸಿರುವ ರಾಜಸ್ತಾನ್ ಡೈರೀಸ್ ನಲ್ಲಿ ಆಕ್ಟ್ ಮಾಡಿರುವ ಸುಮುಖ ಈಗ’ ಫಿಸಿಕ್ಸ್ ಟೀಚರ್’ ಹೆಸರಿನ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ ಜೊತೆಗೆ ಅಭಿನಯ ಕೂಡ ಮಾಡ್ತಿದ್ದಾರೆ.
ಫಿಸಿಕ್ಸ್ ಟೀಚರ್ ಅಂದಾಕ್ಷಣ ಓಹೋ ಭೌತಶಾಸ್ತ್ರದ ಭೋದನೆನಾ ಅನ್ಕೊಬೇಡಿ, ಸೈನ್ಸ್ ಫಿಕ್ಷನ್ ಸಿನಿಮಾ ಇರ್ಬೋದಾ ಎಂದು ಅಂದಾಜಿಸಬೇಡಿ. ಸುಮುಖ ಆಕ್ಷನ್ ಕಟ್ ಹೇಳಿ ಆಕ್ಟ್ ಮಾಡ್ತಿರುವ ಈ ಫಿಸಿಕ್ಸ್ ಟೀಚರ್ ಸಿನಿಮಾ ಊಹೆಗೆ ಮೀರಿದ್ದಂತೆ. ಫಸ್ಟ್ ಲುಕ್ ನಲ್ಲಿ ಬುಕ್ಸ್ ಹಿಡಿದು ಕುಳಿತಿದ್ದಾರೆ, ಚಿತ್ರದಲ್ಲಿ ಬ್ಯಾಚುಲರ್ ಫಿಸಿಕ್ಸ್ ಟೀಚರ್ ಆಗಿ ಕಾಣಿಸಿಕೊಳ್ತಿದ್ದಾರೆ. ಇವ್ರಿಗೆ ಜೊತೆಯಾಗಿ ಕಾಣಿಸಿಕೊಳ್ತಿರುವ ನಟಿ ಪ್ರೇರಣಾ ಕಂಬಂ ಸೈಕಲಾಜಿ ಟೀಚರ್ ಪಾತ್ರ ಪ್ಲೇ ಮಾಡ್ತಿದ್ದಾರೆ. ಮಂಡ್ಯ, ರಮೇಶ್, ರಾಜೇಶ್ ನಟರಂಗ್ ತಾರಾಬಳಗದಲ್ಲಿದ್ದಾರೆ. ಒಂದು ಹಂತದ ಚಿತ್ರೀಕರಣ ಮುಗಿದಿದೆ, ಇದೇ ಅಕ್ಟೋಬರ್ 07 ರಿಂದ ಮತ್ತೆ ಶೂಟಿಂಗ್ ಶುರುವಾಗಲಿದೆ. ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಕ್ಯೂರಿಯಾಸಿಟಿ ಹುಟ್ಟಿಸಿದೆ.
ಅಂದ್ಹಾಗೇ, ಹೀರೋ ಸುಮುಖ ಅವರು ಸ್ಟೂಡೆಂಟ್ ಥರ ಇದ್ದಾರೆ. ಆದರೆ, ಸಿನಿಮಾದಲ್ಲಿ ಟೀಚರ್ ಪಾತ್ರ ನಿರ್ವಹಿಸ್ತಿದ್ದಾರೆ. ಕ್ಲೀನ್ ಶೇವ್ ನಲ್ಲಿ ಸುದ್ದಿಗೋಷ್ಟಿಗೆ ಆಗಮಿಸಿದ್ದರು, ಅವರ ಲುಕ್-ಸ್ಟೈಲ್- ಸ್ಮೈಲ್ -ಫಿಸಿಕ್ -ಟಾಕು ಎಲ್ಲವೂ ರಣಬೀರ್ ಕಪೂರ್ ಅವರನ್ನು ಹೋಲುವಂತಿತ್ತು. ಕಣ್ಣೋಟದಲ್ಲಿ ರಣಬೀರ್ ಛಾಯೆ ಎದ್ದು ಕಾಣ್ತಿತ್ತು. ಈ ಬಗ್ಗೆ ಸಿನಿಲಹರಿ ಟೀಮ್ ಮಾತನಾಡಿಸಿದಾಗ ಸುಮುಖ ಹೇಳಿದ್ದಿಷ್ಟು ನೋಡಿ.
ನಾನು ರಣಬೀರ್ ಕಪೂರ್ ಥರ ಕಾಣ್ತೀನಿ ಅಂತ ಹೇಳಿದ್ದಕ್ಕೆ ಥ್ಯಾಂಕ್ಸ್. ನಾನು ರಣಬೀರ್ ಕಪೂರ್ ನ ಫಾಲೋ ಮಾಡಲ್ಲ. ಆದರೆ, ಅವರ ಸಿನಿಮಾಗಳಿಗೆ ಬಿಗ್ ಫ್ಯಾನ್ ನಾನು. ಬರೀ ರೊಮ್ಯಾಂಟಿಕ್ ಹೀರೋ ಕ್ಯಾರೆಕ್ಟರ್ ಗೆ ಸ್ಟಿಕ್ ಆನ್ ಆಗಿಲ್ಲ. ಬದಲಾಗಿ ಚಾಲೆಂಜಿಂಗ್ ಪಾತ್ರಗಳನ್ನೂ ಮಾಡಿದ್ದಾರೆ. ಅವರ ಒಂದೊಂದು ಸಿನಿಮಾದ ಪಾತ್ರ ಕೂಡ ಪ್ರೇಕ್ಷಕರ ಮನಮುಟ್ಟುತ್ತದೆ. ಹೀಗಾಗಿ ರಣಬೀರ್ ಕಪೂರ್ ನನಗೆ ಇಷ್ಟವಾಗ್ತಾರೆ. ಅಷ್ಟಕ್ಕೂ ಸ್ಯಾಂಡಲ್ ವುಡ್ ರಣಬೀರ್ ಕಪೂರ್ ಅಂತ ಟ್ಯಾಗ್ ಮಾಡಿಕೊಳ್ಳಲಿಕ್ಕೆ ಇಷ್ಟವಿಲ್ಲ ನಾನೇ ಸ್ವಂತ ಬ್ರ್ಯಾಂಡ್ ಆಗ್ತೀನಿ ಅಂತ ಹೆಮ್ಮೆಯಿಂದ ಹೇಳಿಕೊಂಡರು ಸುಮುಖ.
ತಂದೆ ಶಶಿಕುಮಾರ್ ಜತೆಗೆ ಸುಮುಖ
ಫಿಸಿಕ್ಸ್ ಟೀಚರ್ ಸುಮುಖ ಅವರೇ ಹೇಳಿಕೊಂಡಂತೆ ಯಾರ ಐಡೆಂಟಿಟಿಗೂ ನಾವು ಸ್ಟಿಕ್ ಆನ್ ಆಗದೇ ಇರೋದು ಬೆಸ್ಟು. ಅಖಾಡಕ್ಕೆ ಇಳಿದಾಗ ಓನ್ ಬ್ರ್ಯಾಂಡ್ ಆಗಬೇಕು. ಅದೇ ದಾರಿಯಲ್ಲಿ ಯುವ ನಟ ಸುಮುಖ ನಡೆಯುತ್ತಿದ್ದಾರೆ. ಎನಿವೇ, ಕನ್ನಡ ಚಿತ್ರರಂಗಕ್ಕೆ ಚಾಕೊಲೇಟ್ ಹೀರೋ ಸಿಕ್ಕಂತಾಯ್ತು. ಜೊತೆಗೆ ಯೂನಿಕ್ ಟ್ಯಾಲೆಂಟ್ ಇರೋ ಮತ್ತೊಬ್ಬ ಪ್ರತಿಭೆ ಗಂಧದಗುಡಿಗೆ ಆಗಮನವಾಯ್ತು ಅದರಲ್ಲಿ ಎರಡು ಮಾತಿಲ್ಲ ಎನ್ನುವುದಕ್ಕಿಂತ ಸಿನಿಮಾ ಮೇಲಿರುವ ಪ್ರೀತಿ ಭಕ್ತಿ ಶ್ರದ್ಧೆ ಜೊತೆಗೆ ಕಲಾಲೋಕಕ್ಕೆ ವಿಶಿಷ್ಟವಾದ ಕೊಡುಗೆ ನೀಡಲು ಹಾತೊರೆಯುತ್ತಿರುವ ಸುಮುಖ ಅವರ ಮನವೇ ಸಾಕ್ಷಿ.
- ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ