ನಟ ಸಂಚಾರಿ ವಿಜಯ್ ಈಗಿಲ್ಲ ಅನ್ನೋದನ್ನು ಈಗಲೂ ಅರಗಿಸಿಕೊಳ್ಳಲಾಗದ ಸಂಗತಿ. ಆದರೂ ಅದು ವಾಸ್ತವ. ಅವರು ಕಡೆಯದಾಗಿ ಅಭಿನಯಿಸಿದ ಸಿನಿಮಾಗಳು ಈಗ ಬೆಳ್ಳಿತೆರೆ ಮೇಲೆ ಚಿಮ್ಮಲು ಕಾದಿವೆ. ಆ ಪೈಕಿ ಸೆ.24 ಕ್ಕೆ ಪುಕ್ಸಟ್ಟೆ ಲೈಪು ಪುರ್ ಸೊತ್ತೇ ಇಲ್ಲ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ಅನೇಕ ಕಾರಣಕ್ಕೆ ತುಂಬಾ ಸ್ಪೆಷಲ್. ಅದರಲ್ಲಿ ವಿಜಯ್ ಅವರ ಪಾತ್ರ, ನಟನೆಯೂ ಕೂಡ ಕಾರಣ.
ಛೇ, ಅವರು ಇರಲೇಬೇಕಿತ್ತು…ಹೌದು, ಆ ಚಿತ್ರದ ಟ್ರೇಲರ್‌ನಲ್ಲಿ ಕಾಣುವ ಅವರ ನಟನೆಯನ್ನು ನೋಡಿದಾಗ ನಮ್ಮೊಳಗೆ ಅಂತಹದೊಂದು ವೇದನೆ ಗಾಢವಾಗಿ ಕಾಡುತ್ತದೆ. ಕೇವಲ ಎರಡೇ ನಿಮಿಷದ ಆ ಟ್ರೇಲರ್ ನಲ್ಲಿನ ಅವರ ಅಭಿನಯ ನೋಡ ನೋಡುತ್ತಲೇ ಛೇ, ಅವರು ನಮ್ಮೊಂದಿಗೆ ಇರಲೇಬೇಕಿತ್ತು ಅಂತ ಮನಸ್ಸು ಪರಿತಪಿಸತೊಡಗುತ್ತದೆ. ಒಂದ್ರೀತಿಯ ಬೇಸರ ನಮ್ಮನ್ನೇ ಆವರಿಸಿಕೊಳ್ಳುತ್ತದೆ. ಟ್ರೇಲರ್ ಮುಗಿಯುತಾ ಬಂದಾಗ ಒಂದು ಡೈಲಾಗ್ ಕೇಳುತ್ತದೆ. ʼಎಲ್ಲಾದರೂ ಕಾಣದಂತೆ ಆರು ತಿಂಗಳು ಹೊರಟು ಹೋಗು, ಯಾರ ಕಣ್ಣಿಗೂ ಕಾಣಬೇಡʼ ಅಂತ ಪೊಲೀಸ್ ಪಾತ್ರದಾರಿ ಅಚ್ಯುತ್ ಕುಮಾರ್ ಹೇಳುತ್ತಾರೆ. ಹಾಗೆಯೇ ನಟ ಸಂಚಾರಿ ವಿಜಯ್ ಹೊರಟು ಹೋಗಿದ್ದಾರೆಯೇ ಎನ್ನುವ ಕೊಂಚ ಸಮಾಧಾನದ ಮಾತು ಅಲ್ಲಿ ಕೇಳಿದರೂ ವಾಸ್ತವದಲ್ಲಿ ಅವರಿಲ್ಲ ಎನ್ನುವ ಗಾಢ ಬೇಸರದಲ್ಲಿಯೇ ಟ್ರೇಲರ್ ನಲ್ಲಿನ ಅವರ ಅಭಿನಯ ನಮ್ಮೆನ್ನೆಲ್ಲ ಮಂತ್ರ ಮುಗ್ದಗೊಳಿಸುತ್ತದೆ. ಅಂದ ಹಾಗೆ ಆ ಟ್ರೇಲರ್ ʼಪುಕ್ಸಟ್ಟೆ ಲೈಪು ಪುರ್ ಸೊತ್ತೇ ಇಲ್ಲʼ ಚಿತ್ರದ್ದು.
ನಟ ಸಂಚಾರಿ ವಿಜಯ್ ಈಗಿಲ್ಲ. ಆದರೆ ಅವರ ಅಭಿನಯದ ಕೊನೆಯ ಸಿನಿಮಾಗಳು ಈಗ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಕಾದಿವೆ. ಆ ಪೈಕಿ ʼಪುಕ್ಸಟ್ಟೆ ಲೈಪು ಪುರ್ ಸೊತ್ತೇ ಇಲ್ಲʼ ಸಿನಿಮಾ ಕೂಡ ಒಂದು. ಆರಂಭದಿಂದಲೂ ಟೈಟಲ್ ಮೂಲಕವೇ ಕುತೂಹಲ ಮೂಡಿಸಿದ ಸಿನಿಮಾ ಇದು. ಜತೆಗೆ ಟೀಸರ್ ಹಾಗೂ ಟ್ರೇಲರ್ ಮೂಲಕವೂ ಮತ್ತಷ್ಟು ಸದ್ದು ಮಾಡಿ, ಈಗ ಪ್ರೇಕ್ಷಕರ ಮುಂದೆ ಬರುತ್ತಿದೆ. ಸೆ.24 ಕ್ಕೆ ಈ ಚಿತ್ರ ಗ್ರಾಂಡ್ ರಿಲೀಸ್ ಗೆ ರೆಡಿ ಆಗಿದೆ. ಶೇಕಡಾ 50 ರಷ್ಟು ಸೀಟು ಭರ್ತಿಯ ಅವಕಾಶದ ನಡುವೆಯೇ ಈ ಚಿತ್ರ ಇದೇ ವಾರ ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿದೆ. ಕೊರೋನಾ ಆರಂಭಕ್ಕೂ ಮುನ್ನ ಇದ್ದ ಸಿನಿಮಾ ವಾತಾವರಣ ಈಗಿಲ್ಲ ಎನ್ನುವುದು ಸತ್ಯವೇ ಆಗಿದ್ದರೂ, ಸಂಕಷ್ಟದ ಪರಿಸ್ಥಿತಿ ಈಗ ತಿಳಿಯಾಗುತ್ತಿದೆ. ಈ ವಾರದಲ್ಲಿಯೇ ಚಿತ್ರಮಂದಿರಗಳಲ್ಲಿ ಶೇ. 100 ರಷ್ಟು ಸೀಟು ಭರ್ತಿಗೂ ಅವಕಾಶ ಸಿಗುವ ಸಾಧ್ಯತೆಗಳಿವೆ.
ಚಿತ್ರರಂಗದ ಪಾಲಿಗೆ ಇದು ದೊಡ್ಡ ಆಶಾಭಾವನೆ ಹುಟ್ಟು ಹಾಕಿದೆ. ಆ ದಿನಗಳು ಮತ್ತೆ ಬಂದೇ ಬರಬಹುದು ಎನ್ನುವ ದೊಡ್ಡ ಭರವಸೆ ಮೂಲಕ ರಿಲೀಸ್ ಗೆ ರೆಡಿ ಇರುವ ಸಿನಿಮಾಗಳು, ಚಿತ್ರಮಂದಿರಗಳಿಗೆ ನುಗ್ಗಲು ತಯಾರಿ ನಡೆಸಿವೆ. ಈ ಪೈಕಿ ಈಗ ಬೆಳ್ಳಿತೆರೆಯಲ್ಲಿ ಅಬ್ಬರಿಸಲು ತುದಿಗಾಲ ಮೇಲೆ ನಿಂತಿರೋ ಸಿನಿಮಾ ʼಪುಕ್ಸಟ್ಟೆ ಲೈಪು ಪರುಸೊತ್ತೇ ಇಲ್ಲʼ. ನಟ ಸಂಚಾರಿ ವಿಜಯ್ ಅಭಿನಯದ ಕಾರಣಕ್ಕೆ ದೊಡ್ಡ ಕುತೂಹಲ ಹುಟ್ಟು ಹಾಕಿರೋ ಸಿನಿಮಾ ಇದು. ಅವರೊಂದಿಗೆ ಇಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು, ಜಯಶ್ರೀ ಸೇರಿದಂತೆ ರಂಗಭೂಮಿಯ ದೊಡ್ಡ ಕಲಾವಿದರ ಸಮಾಗಮವೇ ಇಲ್ಲಿದೆ. ಸರ್ವಸ್ವ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗಿರೋ ಈ ಸಿನಿಮಾಕ್ಕೆ ಅರವಿಂದ್ ಕುಪ್ಲೀಕರ್ ನಿರ್ದೇಶಕ. ರಂಗಭೂಮಿಯ ದೊಡ್ಡ ಅನುಭವ ಅವರಿಗಿದೆ. ಟ್ರೇಲರ್ ನೋಡಿದಾಗ ಈ ಸಿನಿಮಾದ ತಿರುಳು ಕೊಂಚ ನಿಮಗೂ ಅರ್ಥವಾಗಿರಬಹುದು. ʼಬೇಲಿಯೇ ಎದ್ದು ಹೊಲ ಮೇಯ್ದದಂತೆ ʼಎನ್ನುವ ಗಾದೆ ಮಾತಿನಂತೆ ಇಲ್ಲಿ ಪೊಲೀಸರೇ ಕಳ್ಳರ ಜತೆ ಸೇರಿ ಕಳ್ಳತನ ಮಾಡಿದ್ರೆ ಹೇಗಿರುತ್ತೆ ಎನ್ನುವ ಸಣ್ಣ ಎಳೆಯೊಂದನ್ನು ಇಟ್ಟುಕೊಂಡು ನಿರ್ಮಾಣ ಮಾಡಿರುವ ಸಿನಿಮಾ ಇದು.
ಅಚ್ಯುತ್ ಕುಮಾರ್ ಪೊಲೀಸ್ ಪಾತ್ರದಲ್ಲಿ, ರಂಗಾಯಣ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರಗಳೇ ಇಲ್ಲಿ ವಿಭಿನ್ನ, ವಿಶಿಷ್ಟವಾಗಿವೆ. ಚಿತ್ರದ ಪ್ರಮುಖ ಪಾತ್ರದಾರಿ ವಿಜಯ್ ಅವರದ್ದು ಈಲ್ಲಿ ಬೀಗ ರಿಪೇರಿ ಮಾಡುವ ಒಬ್ಬ ಯುವಕ. ಆತನ ಹೆಸರು ಶಹಜಹಾನ್. ಆತ ಬೀಗ ರಿಪೇರಿಯಿಂದ ಬರುವ ಸಂಪಾದನೆಯಿಂದ ಜೀವನ ನಡೆಸಲು ಕಷ್ಟ ಆದಾಗ, ಕಳ್ಳತನಕ್ಕೆ ಕೈ ಹಾಕುತ್ತಾರೆ. ಅಲ್ಲಿಂದ ಏನೆಲ್ಲ ಘಟನೆಗಳು ಘಟಿಸುತ್ತವೆ ಎನ್ನುವ ಕಥಾನಕವೇ ಈ ಚಿತ್ರದ್ದು. ವಿಜಯ್ ಅವರಿಗೆ ಇಲ್ಲಿ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಅವರೆಲ್ಲ ಟ್ರೇಲರ್ ನಲ್ಲಿ ಕಾಣಿಸಿಕೊಂಡು ಭಾರೀ ಕುತೂಹಲ ಮೂಡಿಸಿರುವುದು ವಿಶೇಷ.
ಅಷ್ಟು ಮಾತ್ರವಲ್ಲ,ರಿಲೀಸ್ ಹಿನ್ನೆಲೆಯಲ್ಲೀಗ ಚಿತ್ರ ತಂಡ ಪ್ರಚಾರಕ್ಕಾಗಿ ಮೊನ್ನೆಯಷ್ಟೇ ವಿಶೇಷವಾದ ಆನಿಮೇಟೆಡ್ ವಿಡಿಯೊವೊಂದನ್ನು ಲಾಂಚ್ ಮಾಡಿದೆ. ಆ ವಿಡಿಯೋ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುವ ವಿಶಿಷ್ಟ ಪ್ರಯೋಗವನ್ನು ಚಿತ್ರ ತಂಡ ಮಾಡಿದೆ. ಇದು ತುಂಬಾನೆ ಡಿಫೆರೆಂಟ್ ಆಗಿದೆ.ಆನಿಮೇಟೆಡ್ ವಿಡಿಯೋದಲ್ಲಿ ದಿವಂಗತ ನಟರಾದ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ದನ್, ಅಂಬರೀಷ್ ಸೇರಿ ಹಲವು ಕಲಾವಿದರ ಜೊತೆಗೆ ನನ ದಿವಂಗತ ಸಂಚಾರಿ ವಿಜಯ್ ಅವರು ಮಾತುಕತೆ ನಡೆಸುತ್ತಾ ತಮ್ಮ ಹೊಸ ಚಿತ್ರದ ಬಗ್ಗೆ ವಿವರಿಸುವ ದೃಶ್ಯವದು.
ಈ ವಿಡಿಯೋ ಮೂಲಕ ವಿಜಯ್ ಅವರನ್ನು ಹಲವರು ನೆನಪಿಸಿಕೊಂಡಿದ್ದಾರೆ. ಅದು ಕೂಡ ಚಿತ್ರದ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡಿದೆ. ಚಿತ್ರ ತಂಡ ಹೇಳುವ ಪ್ರಕಾರ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ನಟ ವಿಜಯ್ ಅಭಿಮಾನಿಗಳು ಕೂಡ ದೊಡ್ಡ ಕಾತರದಲ್ಲಿದ್ದಾರೆ. ಕಥೆ ಜತೆಗೆ ಕಲಾವಿದರ ಅಭಿನಯವೂ ಕೂಡ ಇಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿವೆ. ಆ ಕಾರಣಕ್ಕೆ ಸಿನಿಮಾಕ್ಕೆ ದೊಡ್ಡ ರೆಸ್ಪಾನ್ಸ್ ಸಿಗುವ ನಿರೀಕ್ಷೆ ಕೂಡ ಚಿತ್ರ ತಂಡಕ್ಕಿದೆ. ಚಿತ್ರ ತಂಡ ಅಂದುಕೊಂಡಂತೆ ಸಿನಿಮಾ ಕನ್ನಡ ಸಿನಿಮಾ ರಸಿಕರ ಆಶೀರ್ವಾದವೂ ಸಿಗಲಿ.
- ಎಂಟರ್ ಟೈನ್‌ಮೆಂಟ್ ಬ್ಯೂರೋ ಸಿನಿಲಹರಿ