ಡೋಂಟ್ ವರೀ ಮಚ್ಚಾ ನಾನ್ ನಿನ್ನ ಜೊತೆ ಇರುತ್ತೀನಿ ಹೀಗಂತ ಗೆಳೆಯ ಪನ್ನಗನಿಗೆ ಚಿರು ಸದಾ ಹೇಳ್ತಿದ್ದಂತಹ ಮಾತು. ಇದ್ದಷ್ಟು ದಿನ ಕೊಟ್ಟ ಮಾತಿಗೆ ಬದ್ದರಾಗಿದ್ದರು, ದೋಸ್ತಿಯ ಬೆನ್ನಿಗೆ ನಿಂತಿದ್ದರು. ಜೀವದ ಗೆಳೆಯ ಪನ್ನಗನ ಪ್ರತಿ ಹೆಜ್ಜೆಯಲ್ಲೂ ಹೆಜ್ಜೆಹಾಕಿದರು. ಇದೀಗ ದೈಹಿಕವಾಗಿ ಇಲ್ಲದ ಕ್ಷಣಗಳಲ್ಲೂ ಸ್ನೇಹಿತ ಪನ್ನಗನ ಯಶಸ್ಸಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ ಯುವಸಾಮ್ರಾಟ್ ಚಿರಂಜೀವಿಯವರು. ಅದ್ಹೇಗೆ? ಎಂಥ? ಎಂಬುದರ ಕಥನ ಚಿಕ್ಕದಾಗಿ ನಿಮ್ಮ ಮುಂದೆ.
ಸ್ಯಾಂಡಲ್ವುಡ್ನ ಯುವಸಾಮ್ರಾಟ್ ಚಿರಂಜೀವಿ ಹಾಗೂ ಪನ್ನಗಭರಣ ಇಬ್ಬರು ಬೆಸ್ಟ್ ಫ್ರೆಂಡ್ಸ್. ಬರೀ ಬೆಸ್ಟ್ ಫ್ರೆಂಡ್ಸ್ ಅಲ್ಲ ಇಬ್ಬರು ಪ್ರಾಣಸ್ನೇಹಿತರು, ಜೀವದ ಗೆಳೆಯರು, ಕುಚುಕುಗಳು, ಚಡ್ಡಿದೋಸ್ತ್ ಗಳು ಎಲ್ಲಕ್ಕಿಂತ ಮಿಗಿಲಾಗಿ ಒಡಹುಟ್ಟಿದ ಅಣ್ಣತಮ್ಮಂದ್ರಿಗೆ ಸೆಡ್ಡು ಹೊಡೆದಂತೆ ಬಾಳಿ ತೋರಿಸಿದವರು. ರಕ್ತ ಹಂಚಿಕೊಂಡು ಹುಟ್ಟಿದವರಿಗಿಂತ ಮಿಗಿಲಾಗಿದ್ದ ಇವರಿಬ್ಬರನ್ನು ನೋಡಿ ಗೆಳೆತನ ಅಂದ್ರೆ ಹಿಂಗಿರಬೇಕು, ದೋಸ್ತಿ ಅಂದ್ರೆ ಹಿಂಗಿರಬೇಕು ಅಂತ ಮೆಚ್ಚುಗೆ ಪಡುತ್ತಿದ್ದರು. ಚಿರು ಹಾಗೂ ಪನ್ನಗ ಒಂದೇ ತಟ್ಟೆಯಲ್ಲಿ ತಿನ್ನುತ್ತಿದ್ದರು, ಕಷ್ಟ-ಸುಖ-ನೋವು-ನಲಿವಲ್ಲಿ ಜತೆಯಾಗಿದ್ದರು. ಸೋಲು-ಗೆಲುವು ಎಲ್ಲವನ್ನೂ ಕಂಡುಂಡು ಆಕಾಶದೆತ್ತರಕ್ಕೆ ಬೆಳೆದುನಿಲ್ಲೋಕೆ ಸಕಲ ತಯ್ಯಾರಿ ಮಾಡಿಕೊಂಡಿದ್ದರು. ವಾಯಪುತ್ರ ಚಿರು ಹಾಗೂ ಪ್ರಜ್ವಲ್ ಕಾಂಬಿನೇಷನ್ನಲ್ಲಿ ಮಹಾಸಿನಿಮಾ ಮಾಡೋದಕ್ಕೆ ನಿರ್ದೇಶಕ ಪನ್ನಗ ಪ್ಲ್ಯಾನ್ ಕೂಡ ಮಾಡಿದ್ದರು. ಹೀಗಿರುವಾಗಲೇ ಹೇಳದೇ ಕೇಳದೇ ಚಿರು ಉಸಿರು ಚೆಲ್ಲಿದರು. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಹೊರಟೆಹೋದರು.
ರಾಜಮಾರ್ತಾಂಡ ಚಿರು ದೈಹಿಕವಾಗಿ ಕಣ್ಮರೆಯಾಗಿರಬಹುದು, ಆದರೆ ಎಲ್ಲರ ಕಣ್ಣಲ್ಲೂ, ಮನಸ್ಸಲ್ಲೂ, ಹೃದಯದಲ್ಲೂ ಶಿವಾರ್ಜುನನಾಗಿ ಅಚ್ಚಳಿಯದೇ ಉಳಿದಿದ್ದಾರೆ. ಚಿರು ಕುಟುಂಬಸ್ತರು ಮಾತ್ರವಲ್ಲ ಕರುನಾಡ ಮಂದಿ ಚಿರು ಬಿಟ್ಟೋದ ನೆನಪುಗಳನ್ನು ಆಗಾಗ ಮೆಲುಕು ಹಾಕ್ತಾರೆ. ಈ ರೀತಿಯಾಗಿ ಎಲ್ಲರೂ ನೆನಪಿಸಿಕೊಳ್ಳುವಂತೆ ಬಾಳಿಬದುಕಿದ ವಾಯುಪುತ್ರ ಚಿರಂಜೀವಿ ಸರ್ಜಾ, ತನ್ನ ಜೀವದ ಗೆಳೆಯನ ಯಶಸ್ಸಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ದೈಹಿಕವಾಗಿ ಇಲ್ಲದ ಹೊತ್ತಲ್ಲೂ ಸ್ನೇಹಿತ ಪನ್ನಗಭರಣರ ಯಶಸ್ಸಿಗೆ ಬೆಂಗಾವಲಾಗಿ ನಿಂತಿದ್ದಾರೆ. ಬದುಕಿದ್ದಾಗ ಸದಾ ಹೇಳುತ್ತಿದ್ದ ಡೋಂಟ್ ವರೀ ಮಚ್ಚಾ ನಾನ್ ನಿನ್ನ ಜೊತೆ ಇರುತ್ತೀನಿ'ಎನ್ನುವ ಮಾತಿಗೆ ಯುವಸಾಮ್ರಾಟ್ ಬದ್ದರಾಗಿದ್ದಾರೆ.
ಸೈಮಾ ಅಂಗಳದಲ್ಲಿ ಪ್ರಶಸ್ತಿ ಸ್ವೀಕರಿಸಿದ ಪನ್ನಗಭರಣ
ಚಿರು ನನಗೆ ಲಕ್ಕಿಚಾರ್ಮ್’ ಅಂತ ಹೇಳಿಕೊಂಡಿದ್ದಾರೆ.
2021ರ ಅದ್ಧೂರಿ ಸೈಮಾಗೆ ತೆರೆಬಿದ್ದಿದೆ. ಕನ್ನಡದ ನಿರ್ದೇಶಕ ಪನ್ನಗಭರಣರ ‘ಫ್ರೆಂಚ್ ಬಿರಿಯಾನಿ’ ಚಿತ್ರದ ನಿರ್ದೇಶನಕ್ಕೆ 2020ರ ಸೈಮಾ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಿಕ್ಕಿದೆ. ಅತ್ಯುತ್ತಮ ನಿರ್ದೇಶಕನ ಪ್ರಶಸ್ತಿ ಮುಡಿಗೇರಿಸಿಕೊಂಡ ಪನ್ನಗಭರಣ ಇಡೀ ಚಿತ್ರತಂಡಕ್ಕೆ ಅವಾರ್ಡ್ ಅನ್ನು ಡೆಡಿಕೇಟ್ ಮಾಡಿದರು. ನನ್ನ ಕನಸು ನನಸಾಯ್ತು ಅಂತ ಸಂತೋಷಪಟ್ಟು ಸಂಭ್ರಮಿಸಿದ ಪನ್ನಗಭರಣ ಜೀವದ ಗೆಳೆಯ ಹೊತ್ತುತಂದ ಅದೃಷ್ಟಕ್ಕೆ ಅಚ್ಚರಿಗೊಂಡರು ಜೊತೆಗೆ ಆಕಾಶಕ್ಕೆ ಕೈಮುಗಿದರು.
ಹೌದು, ಸೈಮಾ ಅಂಗಳಕ್ಕೆ ಹೋಗುವಾಗ ಪನ್ನಗ ಚಿರುನಾ ಜೊತೆಗೆ ಕರ್ಕೊಂಡು ಹೋಗಿದ್ದರು. ಅದ್ಹೇಗೆ ಅಂದರೆ ಪನ್ನಗ ತೊಟ್ಟಿದ್ದ ಬ್ಲೇಜರ್ ಕಾಲರ್ ನಲ್ಲಿ ಚಿರು ಕಂಗೊಳಿಸುತ್ತಿದ್ದರು. ಪನ್ನಗರ ಪತ್ನಿ ನಿಖಿತಾ ಪ್ರಿಯಾಭರಣಗೆ ಚಿರು ಹಾಗೂ ಪನ್ನಗರ ನಡುವಿದ್ದ ಪ್ರೀತಿ ಬಾಂದವ್ಯದ ಬಗ್ಗೆ ಚೆನ್ನಾಗಿಯೇ ಗೊತ್ತು ಹಾಗೇ ಹತ್ತಿರದಿಂದ ನೋಡಿದ್ದಾರೆ. ಹೀಗಾಗಿಯೇ, ಬ್ಲೇಜರ್ ನ ಕಾಲರ್ ನಲ್ಲಿ ಯುವಸಾಮ್ರಾಟ್ ಫೋಟೋ ಪ್ರಿಂಟ್ ಹಾಕಿಸಿದರು. ಇದನ್ನೆಲ್ಲಾ ನೋಡಿ ಸ್ವತಃ ಪನ್ನಗ ಕೂಡ ಅಚ್ಚರಿಗೊಂಡರು. ಸೈಮಾ ಅಂಗಳದಲ್ಲಿ ದೋಸ್ತಿ ಜೊತೆ ಧಗಧಗಿಸಿದರು. ಅಲ್ಲಿಂದ ವಾಪಾಸ್ ಬರುವಾಗ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಪಡೆದುಕೊಂಡು, ಕಾಲರ್ ಪಟ್ಟಿ ಎಗರಿಸುತ್ತಲೇ ಹೊರಬಂದರು ಪನ್ನಗ.
ಇದನ್ನೆಲ್ಲಾ ನೋಡಿದಾಗ ಪನ್ನಗ ಯಶಸ್ಸಿಗೆ ಚಿರು ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ ಅನ್ಸುತ್ತೆ. ಸ್ವರ್ಗದಿಂದಲೇ ಗೆಳೆಯನ ಈ ಸೈಮಾ ಸಕ್ಸಸ್ ಗೆ ಆಶೀರ್ವಾದ ಮಾಡಿದ್ದಾರೆ ಎನಿಸುತ್ತೆ. ಎನಿವೇ, ನಿರ್ದೇಶಕ ಪನ್ನಗ ಚಿರುನಾ ಲಕ್ಕಿ ಚಾರ್ಮ್ ಎಂದು ನಂಬಿದ್ದಾರೆ. ಅವರ ನಂಬಿಕೆಗೆ ಸೈಮಾ ಕೊಟ್ಟಿರುವ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಾಕ್ಷಿ . ಒಟ್ಟಿನಲ್ಲಿ ನಂಬಿಕೆಯೇ ದೇವರು, ಆ ದೇವರು ನಾವು ನಂಬಿದವರು ಅಲ್ಲವೇ.
ವಿಶಾಲಾಕ್ಷಿ , ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ