ಕುತೂಹಲ ಕೆರಳಿಸಿತು ಕ್ರೇಜಿಸ್ಟಾರ್-ಕಿಚ್ಚ ಭೇಟಿ; ಸ್ಪೆಷಲ್ ಸಮಾಚಾರ ಕೊಡ್ತಾರಾ ಅಪ್ಪ-ಮಗ !

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ದಿಲ್ಲದೇ ಕ್ರೇಜಿ ಸ್ಟಾರ್ ರವಿಚಂದ್ರನ್ ರನ್ನ ಭೇಟಿ‌ ಮಾಡಿದ್ದಾರೆ. ಈ ವೇಳೆ ವಿಕ್ರಾಂತ್‌ ರೋಣ ನಿರ್ಮಾಪಕ ಜಾಕ್‌ ಮಂಜು ಕೂಡ ಇದ್ದರು. ಇವರಿಬ್ಬರ ಭೇಟಿ ನಿಜಕ್ಕೂ ಕುತೂಹಲ ಕೆರಳಿಸಿದೆ. ಅವರವರ ಫ್ಯಾನ್ಸ್‌ಗೆ ಸಣ್ಣದ್ದೊಂದು ಖುಷಿಯೂ ಮೂಡಿದೆ. ಮತ್ತೆ ಬೆಳ್ಳಿತೆರೆ ಮೇಲೆ ಒಂದಾಗ್ತಾರಾ? ಅಥವಾ ಈಗಾಗಲೇ ತೆರೆಗೆ ಬರಲು ರೆಡಿಯಾಗಿರುವ “ವಿಕ್ರಾಂತ್ ರೋಣ” ಹಾಗೂ “ಕೋಟಿಗೊಬ್ಬ 3” ಚಿತ್ರದಲ್ಲೇನಾದರೂ ಕ್ರೇಜಿಯ ಕ್ರೇಜ್‌ ಇದೆಯಾ? ಈ‌ ಸಸ್ಪೆನ್ಸ್‌ ಅನ್ನು ಚಿತ್ರತಂಡ ಗುಟ್ಟಾಗಿಟ್ಟಿದೆಯಾ ? ಹೀಗೆ ಹಲವು ರೀತಿಯಾಗಿ ಫ್ಯಾನ್ಸ್ ಲೆಕ್ಕಚ್ಚಾರ ಹಾಕುತ್ತಿದ್ದಾರೆ.


ಈಗಾಗಲೇ, ಕ್ರೇಜಿ ಹಾಗೂ ಕಿಚ್ಚ ಕಾಂಬೋ ಒಂದಾಗಿರುವುದನ್ನ ನೀವೆಲ್ಲರೂ‌ ನೋಡಿದ್ದೀರಾ. ಸುದೀಪ್ ಮೇಲಿನ ಅಭಿಮಾನಕ್ಕೆ, ಪ್ರೀತಿಗೆ ರವಿಚಂದ್ರನ್‌ ಅವರು “ಮಾಣಿಕ್ಯ” ಹಾಗೂ “ಹೆಬ್ಬುಲಿ” ಚಿತ್ರದಲ್ಲಿ ನಟಿಸಿದ್ದರು. ತಂದೆಯಾಗಿ, ಅಣ್ಣನಾಗಿ ಕೋಟಿಗೊಬ್ಬನ ಜೊತೆ ನಿಂತಿದ್ದರು. ಅದರಂತೇ, ಸುದೀಪ್ ಕೂಡ ಲವ್ ಯೂ ಆಲಿಯಾ ಮತ್ತು ಅಪೂರ್ವ ಸಿನಿಮಾದಲ್ಲಿ ಪ್ರೇಮಲೋಕದ ರಣಧೀರನಿಗೆ ಸಾಥ್ ಕೊಟ್ಟರು. ಸಿಂಗಲ್ ಫ್ರೇಮ್ ನಲ್ಲಿ ಕನಸುಗಾರ ಹಾಗೂ ಕಿಚ್ಚನನ್ನು ನೋಡಿ ಫ್ಯಾನ್ಸ್ ಕೂಡ ಅಷ್ಟೇ ಖುಷಿಪಟ್ಟಿದ್ದರು.


ಅಂದ್ಹಾಗೇ, “ರಾಮಾಚಾರಿ” ಹಾಗೂ “ರನ್ನ” ಸ್ಯಾಂಡಲ್‌ವುಡ್‌ನ ಸೀನಿಯರ್ ಹಾಗೂ ಜೂನಿಯರ್ ಸ್ಟಾರ್ಸ್ ಗಳಾಗಿ ಉಳಿದಿಲ್ಲ. ಬದಲಾಗಿ ಈ ಇಬ್ಬರು ಧ್ರುವ ತಾರೆಗಳ ಮಧ್ಯೆ ತಂದೆ-ಮಗನ ಬಾಂಧವ್ಯವಿದೆ, ಮಮತೆ-ಮಮಕಾರದ ಕಕ್ಕುಲಾತಿಯ ಪ್ರೀತಿಯಿದೆ.‌ ಆ ಪ್ರೀತಿಯನ್ನ ಅಷ್ಟೇ ಜತನದಿಂದ ಕಾಯ್ದುಕೊಂಡಿದ್ದಾರೆ.

ರವಿಮಾಮ ಅಂತೂ ಸುದೀಪ್ ನನ್ನ ದೊಡ್ಡಮಗ ಅಂತಾರೇ. ಕ್ರೇಜಿ ಪ್ರೀತಿಗೆ, ಆತಿಥ್ಯಕ್ಕೆ, ಅಭಿಮಾನಕ್ಕೆ, ಪ್ರೋತ್ಸಾಹಕ್ಕೆ ಕಿಚ್ಚ ಶರಣಾಗ್ತಾರೆ. ಇದೀಗ ಸೈಲೆಂಟಾಗಿ ಇಬ್ಬರು ಭೇಟಿಯಾಗುವುದರ ಮೂಲಕ ಸುದ್ದಿಯಾಗಿದ್ದಾರೆ. ಇಬ್ಬರ ಭೇಟಿ ಕುಶಲೋಪರಿ ವಿಚಾರಣೆಯೋ ಅಥವಾ ಸಿನಿಮಾ ಚರ್ಚೆಯೋ ಕಾದುನೋಡಬೇಕು.

Related Posts

error: Content is protected !!