ಪುನೀತ್ ರಾಜಕುಮಾರ್ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಅದು ಪ್ರೀತಿಗೆ ಮಾತ್ರ. ಈಗ ಮತ್ತೊಂದು ಸಿನಿಮಾದಲ್ಲಿ ಅದೇ ಪ್ರೀತಿ ವಿಶ್ವಾಸಕ್ಕೆ ಡ್ಯಾನ್ಸ್ ಮಾಡಲು ಒಪ್ಪಿದ್ದಾರೆ ಎಂಬ ಸುದ್ದಿ ಇದೆ. ಹೌದು, ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್ ಅವರು ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಮತ್ತು ಪ್ರಭುದೇವ ಇಬ್ಬರೂ ಒಂದು ಹಾಡಲ್ಲಿ ಹೆಜ್ಜೆ ಹಾಕಲಿದ್ದಾರಂತೆ. ಅಂದಹಾಗೆ, ಆ ಸಿನಿಮಾದ ಹೆಸರು. “ಲಕ್ಕಿ ಮ್ಯಾನ್” ಇದು ಕನ್ನಡದಲ್ಲಿ ತಯಾರಾಗುತ್ತಿರುವ ಸಿನಿಮಾ. ತಮಿಳಿನ “ಓ ಮೈ ಕಡುವಲೇ” ಸಿನಿಮಾದ ಪ್ರೇರಣೆಯಿಂದ ಶುರುವಾಗುತ್ತಿರುವ ಸಿನಿಮಾ ಇದು.
ಈ “ಲಕ್ಕಿ ಮ್ಯಾನ್” ಸಿನಿಮಾದ ಸ್ಪೆಷಲ್ ಹಾಡಲ್ಲಿ ಪ್ರಭುದೇವ ಮತ್ತು ಪುನೀತ್ ಸ್ಟೆಪ್ ಹಾಕಲಿದ್ದು, ಆ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಅಂದಹಾಗೆ, ಬೆಂಗಳೂರಲ್ಲಿ ಶೂಟಿಂಗ್ ಶುರುವಾಗಿದೆ.
ಈ ಸಿನಿಮಾಗೆ ಕೃಷ್ಣ ಹೀರೋ. ಅವರ ಜೊತೆ ಸಂಗೀತ ಶೃಂಗೇರಿ, ರೋಷನಿ ಪ್ರಕಾಶ್ ಇಬ್ಬರು ನಾಯಕಿಯರು. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ಹಾಡಿನೊಂದಿಗೆ ಕುಂಬಳಕಾಯಿ ಹೊಡೆಯುವ ಯೋಜನೆ ಚಿತ್ರತಂಡಕ್ಕಿದೆ. ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಈ ಹಿಂದೆ ಕನ್ನಡದಲ್ಲಿ “ಮನಸೆಲ್ಲಾ ನೀನೇ” ಚಿತ್ರದಲ್ಲಿ ನಾಯಕರಾಗಿದ್ದರು. ಪ್ರಭುದೇವ ನಿರ್ದೇಶನದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಉಪೇಂದ್ರ ಅವರ “ಎಚ್2ಓ” ಚಿತ್ರದೊಂದಿಗೆ ಕನ್ನಡಕ್ಕೆ ಬಂದಿದ್ದಋು. ಆ ನಂತರ “ಮನಸೆಲ್ಲಾ ನೀನೆ” ಮತ್ತು “ಪ್ರಾರಂಭ” “1 2 3” ಚಿತ್ರಗಳಲ್ಲಿ ನಟಿಸಿದ್ದರು. ಬಹಳ ವರ್ಷಗಳ ನಂತರ ಕನ್ನಡ ಸಿನಿಮರಂಗಕ್ಕೆ ಎಂಟ್ರಿಯಾಗಿದ್ದಾರೆ.