ಕನ್ನಡದಲ್ಲಿ ವಿಭಿನ್ನ ಕಥೆಯುಳ್ಳ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಮತ್ತೊಂದು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದರೆ, ಅದು “ವ್ಹೀಲ್ ಚೇರ್ ರೋಮಿಯೊ”. ಹೌದು, ಈ ಚಿತ್ರದ ಹಾಡೊಂದು ರಿಲೀಸ್ ಆಗಿದೆ. ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ “ರಂಗುರಾಟೆ” ಎಂಬ ಹಾಡು ಇದೀಗ ರಿಲೀಸ್ ಆಗಿದ್ದು, ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ವಿಭಿನ್ನ ಕಥಾಹಂದರ ಹೊಂದಿರುವ “ವ್ಹೀಲ್ ಚೇರ್ ರೋಮಿಯೋ” ಚಿತ್ರದ ಈ ಹಾಡಿಗೆ .ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಝೇಂಕಾರ್ ಮ್ಯೂಸಿಕ್ ಮೂಲಕ ಹಾಡು ರಿಲೀಸ್ ಆಗಿದೆ. ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತವಿದೆ. ಸದ್ಯದಲ್ಲೇ “ವ್ಹೀಲ್ ಚೇರ್ ರೋಮಿಯೋ” ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಕಲ ಚೇತನವೊಬ್ಬನ ಲವ್‌ಸ್ಟೋರಿ ಚಿತ್ರದ ಹೈಲೈಟ್. ಕಾಲು ಕಳೆದುಕೊಂಡಿರುವ ಹುಡುಗನ ಪಾತ್ರದಲ್ಲಿ ರಾಮ್ ಚೇತನ್ ಅಭಿನಯಿಸಿದ್ದಾರೆ. ಕಣ್ಣಿಲ್ಲದಿರುವ ಹುಡುಗಿಯ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ, ಗಿರೀಶ್ ಶಿವಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ತಂದೆ-ಮಗನ ಬಾಂಧವ್ಯದ ಸನ್ನಿವೇಶಗಳು ಚಿತ್ರದ ಮತ್ತೊಂದು ಹೈಲೈಟ್. .ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. .ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಸಂತೋಷ್ ಪಾಂಡಿ ಛಾಯಾಗ್ರಹಣ, ಕಿರಣ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕಂಬಿರಾಜು ನೃತ್ಯ ನಿರ್ದೇಶನವಿದೆ.