ವಿಧಿ ಅಕ್ಷರಶಃ ಕ್ರೂರಿ ಬಿಡ್ರಿ. ಸ್ಯಾಂಡಲ್‌ವುಡ್ ಗುರುನಾ ಏಕಾಏಕಿ ಕಿತ್ಕೊಂಡ ಆ ವಿಧಿಗೆ ಹಿಡಿಶಾಪ ಹಾಕ್ಲೆಬೇಕು. ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇದ್ದ, ಕಲಾಸರಸ್ವತಿಯನ್ನ ಆರಾಧನೆ ಮಾಡುತ್ತಿದ್ದ, ಅಕ್ಷರಗಳಿಗೆ ಜೀವತುಂಬಿ ಬರೆಯುತ್ತಿದ್ದ, ಗಂಧದಗುಡಿಯಲ್ಲಿ ಬಹುಬೇಡಿಕೆಯ ಸಂಭಾಷಣೆಕಾರರಾಗಿ ಗುರ್ತಿಸಿಕೊಂಡಿದ್ದ, ಗುರುಕಶ್ಯಪ್‌ನ ಜವರಾಯ ಏಕ್ದಮ್ ಕಿತ್ಕೊಂಡಿದ್ದಾನೆ. ಮುಂದೆಂದೂ ತಿರುಗಿ ಬಾರದ ಲೋಕಕ್ಕೆ ಎಳೆದೊಯ್ದಿದ್ದಾನೆ. ಗುರುನಾ ಕಳೆದುಕೊಂಡ ಚಂದನವನ ಕಂಬನಿ ಮಿಡಿಯುತ್ತಿದೆ.
ಗುರುಕಶ್ಯಪ್ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಂಭಾಷಣೆಕಾರರಾಗಿ ಹೆಸರು ಮಾಡಿದ್ದರು. ರಮೇಶ್ ಅರವಿಂದ್ ನಟನೆಯ ಪುಷ್ಪಕ ವಿಮಾನ', ಸುಂದರಾಂಗ ಜಾಣ, ೧೦೦ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ಪ್ರಿಯಾಂಕ ಉಪೇಂದ್ರ ಅಭಿನಯದ
ದೇವಕಿ’ ಚಿತ್ರಕ್ಕೆ ಡೈಲಾಗ್ಸ್ ಗೀಚಿದ್ದರು. ಇದಲ್ಲದೇ ಸುಮಾರು ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಒದಗಿಸಿದ್ದರು. ಗುರುಕಶ್ಯಪ್ ನಿಧನಕ್ಕೆ ರಮೇಶ್ ಅರವಿಂದ್ ಸಂತಾಪ ಸೂಚಿಸಿದ್ದಾರೆ. `ನಾನು ಕಂಡಂತ ಅತಿ ಪ್ರತಿಭಾವಂತರಲ್ಲಿ ಗುರುಕಶ್ಯಪ್ ಕೂಡ ಒಬ್ಬರು. ಒಬ್ಬ ಒಳ್ಳೆಯ ವ್ಯಕ್ತಿ, ಶ್ರೇಷ್ಟ ಬರಹಗಾರರನ್ನು ಕಳೆದುಕೊಂಡಿದ್ದೇವೆ ಓಂ ಶಾಂತಿ’ ಎಂದು ಟ್ವೀಟ್ ಮಾಡಿದ್ದಾರೆ.
ತಾವು ಜೀವತುಂಬಿ ಸಂಭಾಷಣೆ ಒದಗಿಸುತ್ತಿದ್ದ ಸಿನಿಮಾಗಳು ಬೆಳ್ಳಿಪರದೆ ಮೇಲೆ ತೆರೆಕಾಣುವ ಮೊದಲೇ ಗುರುಕಶ್ಯಪ್ ಇಹಲೋಕ ತ್ಯಜಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭೈರಾಗಿ', ಡಾಲಿ ಧನಂಜಯ್ ಅಭಿನಯಿಸಿರುವ
ಮಾನ್ಸೂನ್ ರಾಗ’, ವ್ಹೀಲ್‌ಚೇರ್ ರೋಮಿಯೋ, ಸತ್ಯಮಂಗಲ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಡೈಲಾಗ್ ಬರೆಯುತ್ತಿದ್ದರು. ಗುರುಕಶ್ಯಪ್ ಅವ್ರದ್ದು ಸಾಯೋ ವಯಸ್ಸಲ್ಲ. ೪೫ ವರ್ಷ ವಯಸ್ಸಾಗಿತ್ತಷ್ಟೇ, ಸೋಮವಾರ ರಾತ್ರಿ ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಮಗಳನ್ನ ಅಗಲಿದ್ದಾರೆ. ಡಾಲಿ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಗುರುಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.
ಗುರುಕಶ್ಯಪ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ. ಪುಷ್ಪಕ ವಿಮಾನ' ನಿರ್ದೇಶಕ ರವೀಂದ್ರನಾಥ್
ಗುರು ದೇವ್ರಂತ ಮನುಷ್ಯರಾಗಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ’. ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರಕ್ಕೆ ಗುರು ಸಂಭಾಷಣೆ ಬರೆದುಕೊಟ್ಟಿದ್ದರು. `ಗುರುನಾ ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವೇ ಸರಿ ‘ನಟ ರಘುಮುಖರ್ಜಿ ಟ್ವೀಟ್ ಮಾಡಿದ್ದಾರೆ. ಇವರಷ್ಟೇ ಅಲ್ಲ ಕಲಾವಿದರಾದ ಧರ್ಮಣ್ಣ ಕಡೂರ್, ನಟಿ ಆರೋಹಿ ನಾರಾಯಣ್, ಮಮ್ಮಿ ನಿರ್ದೇಶಕ ಲೋಹಿತ್, ನಿರ್ದೇಶಕ ಆಕಾಶ್ ಶ್ರೀವತ್ಸ ಸೇರಿದಂತೆ ಹಲವರು ಗುರು ಅಗಲಿಕೆ ಕಣ್ಣೀರು ಹಾಕಿದ್ದಾರೆ.
- ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ