ಗಂಧದಗುಡಿಯ ಯುವರಾಜ ನಿಖಿಲ್ ಪತ್ನಿಗೆ ಸೀಮಂತ : ಆನಂದದ ಕಡಲಲ್ಲಿ ದೊಡ್ಡಗೌಡ್ರ ಕುಟುಂಬ !

ಬರ್ತಾನವ್ವ ಭೂಪ..ಬರ್ತಾನವ್ವ ಭೂಪ..ದೊಡ್ಮನೆ ಯುವರಾಣಿ ಮಡಿಲಿನಲಿ. ಮುತ್ತು ರತ್ನದಂತೆ..ಬೆಳ್ಳಿ ಬೊಂಬೆ ಯಂತೆ..ದೊಡ್ಡಗೌಡರ ವಂಶದಲ್ಲಿ. ಯಸ್, ದೊಡ್ಡಗೌಡರ ಕುಟುಂಬದಲ್ಲಿ ಸಂತೋಷ-ಸಂಭ್ರಮ ಮನೆಮಾಡಿದೆ.ಕರುಳ ಕುಡಿಯನ್ನ ಸ್ವಾಗತಿಸುವುದಕ್ಕೆ ಕಾತುರದಿಂದ ಕಾಯ್ತಿದೆ. ಪುಟ್ಟ ಕಂದಮ್ಮನ ಆಗಮನಕ್ಕಾಗಿ ತುದಿಗಾಲಿನಲ್ಲಿ ನಿಂತಿರುವ ಗೌಡ್ರ ಫ್ಯಾಮಿಲಿ, ವಿಜೃಂಭಣೆಯಿಂದ ಸೀಮಂತಶಾಸ್ತ್ರ ನೆರವೇರಿಸಿದ್ದಾರೆ.

ದೊಡ್ಡಗೌಡರ ಮನೆ-ಮನದಂಗಳದಲ್ಲಿ ಸಂತೋಷ- ಸಂಭ್ರಮ ಹಾಗೂ ಹಬ್ಬದ ವಾತಾವರಣ. ಆನಂದಸಾಗರದಲ್ಲಿ, ಖುಷಿಯ ಅಲೆಯಲ್ಲಿ ಗೌಡ್ರ ಕುಟುಂಬ ನಲಿಯುತ್ತಿದೆ. ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ತಮ್ಮ ಮನೆಯ ಕೀರ್ತಿಯ ಕೂಸನ್ನ ಮಡಿಲಲ್ಲಿ ಹೊತ್ತಿರುವ, ಮನೆಮಗಳ ರೂಪದಲ್ಲಿರುವ ರೇವತಿಗೆ ಸೀಮಂತಕಾರ್ಯ ನಡೆಸಿದ್ದಾರೆ. ಎಚ್ ಎಸ್ ಆರ್ ಲೇಔಟ್‌ನ ಖಾಸಗಿ ಕನ್ವೆಷನ್ ಹಾಲ್‌ನಲ್ಲಿ ಗೌಡ್ರ ಕುಟುಂಬ ವಿಜೃಂಭಣೆಯಿಂದ ಸೀಮಂತಶಾಸ್ತ್ರವನ್ನು ಮಾಡಿಮುಗಿಸಿದ್ದಾರೆ.

ಪ್ರತಿಹೆಣ್ಣು ತನ್ನ ಮದುವೆ ಬಗ್ಗೆ ಎಷ್ಟು ಕನಸುಗಳನ್ನ ಕಂಡಿರುತ್ತಾಳೋ ಅಷ್ಟೇ ಆಸೆ-ಕನಸು ತನ್ನ ಸೀಮಂತಶಾಸ್ತ್ರದ ಮೇಲೆಯೂ ಹೊತ್ತಿರುತ್ತಾಳೆ. ಅದರಂತೇ, ರೇವತಿ ಕೂಡ ಬೇಬಿಶವರ್ ಮೇಲೆ ಮಹದಾಸೆ ಹೊತ್ತಿದ್ದರು. ಪತ್ನಿ ರೇವತಿಯ ಕನಸಿನಂತೆಯೇ ನಿಖಿಲ್ ಸೀಮಂತಶಾಸ್ತ್ರವನ್ನು ಅರೇಂಜ್ ಮಾಡಿದ್ದರು. ವೈಟ್ ಅಂಡ್ ವೈಟ್ ಲುಕ್‌ನಲ್ಲಿ ಗೌಡ್ರುಡುಗ ನಿಖಿಲ್ ಮಿಂಚಿದರೆ, ಗೋಲ್ಡನ್ ವಿತ್ ಆರೇಂಜ್ ಕಲರ್ ಕಾಂಬಿನೇಷನ್ ರೇಷ್ಮೆಸ್ಯಾರಿಯಲ್ಲಿ ರೇವತಿ ಕಂಗೊಳಿಸಿದರು. ಅಪ್ಪ-ಅಮ್ಮನಾಗಿ ಪ್ರಮೋಷನ್ ಪಡೆಯುತ್ತಿರುವ ನಿಖಿಲ್-ರೇವತಿ ಖುಷಿಖುಷಿಯಾಗಿ ಈ ರೀತಿ ಕ್ಯಾಮೆರಾಗೆ ಪೋಸ್ ಕೊಟ್ಟರು ನೋಡಿ.

ಕೊರೊನಾ ಆತಂಕದ ಹಿನ್ನಲೆ ಕುಟುಂಬಸ್ತರ ಜೊತೆಗೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸಿನಿಮಾ ಹಾಗೂ ರಾಜಕೀಯ ಲೋಕದ ಕೆಲವೇ ಕೆಲವು ಗಣ್ಯರು ಸೀಮಂತಶಾಸ್ತ್ರದಲ್ಲಿ ಭಾಗಿಯಾಗಿದ್ದರು. ದೊಡ್ಡಗೌಡರ ಕುಡಿಯನ್ನ ಹೊತ್ತಿರುವ ರೇವತಿಗೆ ಶುಭಹಾರೈಸಿದರು. ಅಂದ್ಹಾಗೇ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಿಖಿಲ್-ರೇವತಿಗೆ ಗಂಡುಮಗು ಜನಿಸುವುದಾಗಿ ವಿನಯ್ ಗುರೂಜಿ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಆ ಮಗು ಭವಿಷ್ಯ ಉಜ್ವಲವಾಗಿರುತ್ತದಲ್ಲದೇ ನಿಖಿಲ್‌ಗೆ ಶಾಸಕನಾಗುವ ಅದೃಷ್ಠ ಇರುವುದಾಗಿ ವಿನಯ್ ಗುರೂಜಿ ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್‌ಕುಮಾರಸ್ವಾಮಿಯವರು ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್, ಗಂಧದಗುಡಿಯ ಅಂಗಳದಲ್ಲಿ ಗೆಲುವಿನ ಗದ್ದುಗೆ ಏರುವುದರ ಜೊತೆಗೆ ರಾಜಕೀಯ ನಾಯಕರಾಗಿ ಅಧಿಕಾರದ ಚುಕ್ಕಾಣಿ ಹಿಡಿಬೇಕು ಎನ್ನುವ ಮಹದಾಸೆವೊತ್ತಿದ್ದಾರೆ. ಪಕ್ಷಸಂಘಟನೆ ಹಾಗೂ ಪ್ರಚಾರದ ಜೊತೆಗೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ, ರೈಡರ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಪತ್ನಿಯ ಆಸೆಯಂತೆ ಸೀಮಂತಶಾಸ್ತ್ರ ನೆರವೇರಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಡದಿಯ ಫಾರ್ಮ್ಹೌಸ್‌ನಲ್ಲಿ ನಿಖಿಲ್-ರೇವತಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಇವರಿಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಇದೀಗ ರೇವತಿಗೆ ಎಂಟುತಿಂಗಳು. ಇನ್ನೊಂದು ತಿಂಗಳಲ್ಲಿ ಗೌಡ್ರ ಮನೆಗೆ ಪುಟ್ಟಕಂದಮ್ಮನ ಆಗಮನವಾಗಲಿದೆ. ಮರಿಯುವರಾಜನೋ.. ಅಥವಾ ಮರಿ ಯುವರಾಣಿಯೋ ಕಾದುನೋಡ್ಲೆಬೇಕು ಅಲ್ಲವೇ.

  • ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!