ಕಾಂಟ್ರೋವರ್ಸಿ ಚೇತನ್‌- ಹೀಗೇಕಾದ್ರೂ ಆ ದಿನಗಳ ಹೀರೋ ?

ಚೇತನ್‌ ಒಬ್ಬ ನಟ. ಹಾಗೆಯೇ ಒಬ್ಬ ಸಾಮಾಜಿಕ ಹೋರಾಟಗಾರ. ಅವರಿಗಿರುವ ಅವೆರೆಡು ಬ್ರಾಂಡ್‌ ಗಳ ಬಗ್ಗೆ ಅನುಮಾನವೇ ಇಲ್ಲ. ಅದರಾಚೆ ಅವರು ಯಾರು ? ಅವರ ಹಿಂದಿನ ಶಕ್ತಿಯಾವುದು ? ಹೋಗ್ಲಿ ಅವರು ಒಪ್ಪಿ-ಅಪ್ಪಿಕೊಂಡಿರುವ ಸಿದ್ದಾಂತವಾದ್ರು ಯಾವ್ದು? ಈ ಪ್ರಶ್ನೆಗಳಿಗೆ ಈಗಲೂ ಉತ್ತರ ಇಲ್ಲ. ಹಾಗೆಯೇ ಚೇತನ್‌ ಅವರದ್ದು ಎಡಪಂಥವೂ ಅಲ್ಲ ಬಲಪಂಥವೂ ಅಲ್ಲ.

ನಟ ಚೇತನ್‌ ಅಹಿಂಸ ಹೀಗೇಕಾದ್ರೂ ? ಹೀಗಂತ ಕೇಳ್ತೀರೋದು ನಾವಲ್ಲ, ಬದಲಿಗೆ ಕನ್ನಡದ ಸಿನಿಮಾ ಪ್ರೇಕ್ಷಕರು ಹಾಗೂ ಅವರನ್ನು ಹತ್ತಿರದಿಂದ ಬಲ್ಲವರು. ಯಾಕಂದ್ರೆ ನಟ ಚೇತನ್‌ ದಿನೇ ದಿನೇ ತಾವೊಬ್ಬ ಕಾಂಟ್ರೋವರ್ಷಿ ಹೀರೋ ಎನ್ನುವುದನ್ನು ಪ್ರೂ ಮಾಡುತ್ತಲೇ ಹೊರಟಿದ್ದಾರೆ. ಕೊರೋನಾ ನಂತರದ ಈ ದಿನಗಳಲ್ಲಿ ಉಪೇಂದ್ರ ಆಯ್ತು, ಕುಮಾರ ಸ್ವಾಮಿ ಆಯ್ತು, ಕೊನೆಗೆ ಸಿದ್ದರಾಮಯ್ಯ ಅವರನ್ನು ಬಿಡದೆ ಅವರನ್ನು ಟೀಕಿಸಿದ್ದು ಮುಗೀತು. ಅಲ್ಲಿಂದೀಗ ಕಾಂಗ್ರೆಸ್‌ಗೂ ಆರ್‌ಎಸ್‌ಎಸ್‌ ಸಂಘಟನೆಯ ನಂಟು ಅಂಟು ಹಾಕಿ, ಬಾಯಿಗೆ ಬಂದಂತೆ ಟೀಕಿಸಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ಅವರು ಹಾಕಿರುವ ಸ್ಟೇಟಸ್ ದೊಡ್ಡ ವಿವಾದಕ್ಕೂ ನಾಂದಿ ಹಾಡಿದೆ. ಉಪೇಂದ್ರ ಬಿಟ್ರು, ಕುಮಾರ ಸ್ವಾಮಿ ಬಿಟ್ರು, ಹೋಗ್ಲಿ ಬಿಡಿ ಆತ ನಮ್ಮಡುಗ ಅಂತ ಸಿದ್ದರಾಮಯ್ಯ ಕೂಡ ಬಿಟ್ರು, ಹಾಗಂತ ಇಡೀ ಪಾರ್ಟಿಗೇ ಡ್ಯಾಮೇಜ್‌ ಮಾಡಲು ಹೊರಟ್ರೆ, ಕಾಂಗ್ರೆಸ್‌ನವ್ರು ಬಿಡ್ತಾರಾ?

ಸದ್ಯಕ್ಕೆ ಗೊತ್ತಾಗಿರುವ ಮಾಹಿತಿ ಪ್ರಕಾರ ನಟ ಚೇತನ್‌ ಅವರ ವಿರುದ್ಧ ಸೋಷಲ್‌ ಮೀಡಿಯಾದಲ್ಲಿಯೇ ತಕ್ಕ ಉತ್ತರ ನೀಡಲು ಕಾಂಗ್ರೆಸ್‌ ಮುಂದಾಗಿದೆ. ಮುಂದೆಯೂ ಹೀಗೆಯೇ ಅರ್ಥಹೀನ ಟೀಕೆ ಮಾಡಿದರೆ ಸರಿಯಾದ ಉತ್ತರ ನೀಡಲು ಕಾಂಗ್ರೆಸ್‌ ಮುದಾಗಿದೆಯಂತೆ. ಇರಲಿ ಬಿಡಿ, ಅದನ್ನ ಅವರವರು ನೋಡಿ ಕೊಳ್ತಾರೆ. ಪ್ರಶ್ನೆ ಇರೋದು ನಟ ಚೇತನ್‌ ಹೀಗೇಕೆ ಅಂತ. ಹಾಗಂತ ಸಿನಿಮಾ ಪ್ರೇಕ್ಷಕರಿಗೆ ಈ ಪ್ರಶ್ನೆ ಕಾಡ್ತಿರೋದು ಇದೇ ಮೊದಲು ಅಲ್ಲ. ಅವರು ನಟರಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಆ ದಿನಗಳಿಂದಲೂ ನಟ ಚೇತನ್‌ ಕೊಂಚ ವಿಚಿತ್ರವಾಗಿಯೇ ಕಾಣಿಸಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ಅದು ಅವರ ಖಾಸಗಿ ಬದುಕಿನ ಜತೆಗೆ ಸಿನಿ ಕೆರಿಯರ್‌ ದೃಷ್ಟಿಯಿಂದಲೂ ಹೌದು. ಯುವ ನಿರ್ದೇಶಕ ಕೆ.ಎಂ. ಚೈತನ್ಯ ನಿರ್ದೇಶನ ʼ ಆ ದಿನಗಳುʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದವರು ನಟ ಚೇತನ್‌. ಇದು ಅವರ ಚೊಚ್ಚಲ ಸಿನಿಮಾ. ಅಮೆರಿಕದಲ್ಲಿದ್ದ ಹುಡುಗ ದಿಢೀರ್‌ ಕನ್ನಡಕ್ಕೆ ಬಂದು ದೊಡ್ಡ ಸಂಚಲನ ಸೃಷ್ಟಿಸಿದರು.

ಮಾಜಿ ಡಾನ್‌ ಅಗ್ನಿ ಶ್ರೀಧರ್‌ ಅವರದ್ದೇ ಬದುಕಿನ ಈ ಕಥಾ ಚಿತ್ರದಲ್ಲಿ ನಟ ಚೇತನ್‌ ಭರವಸೆಯ ತಾರೆಯಾಗಿ ಕಾಣಿಸಿಕೊಂಡರು. ಇನ್ನೇನು ಬಹುಬೇಡಿಕೆಯ ನಟನಾಗಿ ಅವರು ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ನಟ ಎನಿಸಿಕೊಳ್ತಾರೆ ಎನ್ನುವ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯ ನಡುವೆಯೇ ಚೇತನ್‌ ಕಾಣೆಯಾದರು. ವಾಪಾಸ್‌ ಅಮೆರಿಕಕ್ಕೆ ಹೋದರು. ಒಂದಷ್ಟು ದಿನಗಳ ನಂತರ ಮತ್ತೆ ಅಲ್ಲಿಂದ ಬಂದವರುʼ ಮೈನಾʼ ದಂತಹ ಬ್ಲಾಕ್‌ ಬಸ್ಟರ್‌ ಚಿತ್ರದಲ್ಲಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಮತ್ತೆ ಹೊಸ ಭರವಸೆ ಮೂಡಿಸಿದರು. ಆದ್ರೇನು, ಮುಂದೆ ಮತ್ತೆ ಚೇತನ್‌ ನಟನೆಯಾಚೆ ಹೋರಾಟ, ಸಾಮಾಜಿಕ ಕೆಲಸ ಅಂತೆಲ್ಲ ಬ್ಯುಸಿಯಾದರು. ಅವರ ಈ ನಿಲುವು ಪ್ರಶ್ನಾತೀತವೇ. ಯಾಕಂದ್ರೆ ಪ್ರತಿಯೊಬ್ಬರ ಬದುಕಿನ ಆಯ್ಕೆ, ಇನ್ನಾರೋ ಬಯಸಿದಂತೆಯೇ ಇರಬೇಕಿಲ್ಲ. ತಾನೊಬ್ಬ ನಟನಾಗುವುದಕ್ಕಿಂತ ಸಾಮಾಜಿಕ ಹೋರಾಟಗಾರನಾಬೇಕಿದೆ ಅಂತ ಚೇತನ್‌ ಅದಕ್ಕೆ ಸ್ಪಷ್ಟನೆ ಕೊಟ್ಟರು. ಕನ್ನಡ ಚಿತ್ರರಂಗದ ಮಟ್ಟಿಗೆ ಚೇತನ್‌ ಅವರನ್ನು ಇದು ಭಿನ್ನವಾದ ಸ್ಥಾನದಲ್ಲಿ ನಿಲ್ಲಿಸಿತು. ಯಾಕಂದ್ರೆ ನಟರಂದ್ರೆ, ಸಿನಿಮಾ ಮಾಡಬೇಕು, ಸ್ಟಾರ್‌ ಆಗಿ ಮೆರೀಬೇಕು, ಆ ಮೂಲಕ ಐಷಾರಾಮಿಯ ಕಂಪೋರ್ಟ್‌ ಜೋನ್‌ ನಲ್ಲಿ ಕುಳಿತಿರಬೇಕು ಅನ್ನೋ ಸಿನಿಮಾದ ರಂಗದ ಸಿದ್ಧ ಸೂತ್ರಗಳನ್ನು ಬ್ರೇಕ್‌ ಮಾಡಿ, ಅವರು ಜನರ ಪರವಾಗಿ ಬೀದಿಗಿಳಿಬೇಕು ಅಂದಾಗ ವಾಹ್ಹ್….‌ ಇಂತಹ ನಟ ಕನ್ನಡಕ್ಕೆ ಬೇಕಿತ್ತು ಅಂತ ಮೆಚ್ಚಿಕೊಂಡು ಮಾತನಾಡಿದವರು ಕಮ್ಮಿ ಇರಲಿಲ್ಲ.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಸಿನಿಮಾ ರಂಗದಲ್ಲಿನ ಮೀಟೂ ಪ್ರಕರಣ, ಸರ್ಕಾರದ ಬೆಲೆ ಏರಿಕೆ ಧೋರಣೆಗಳು.. ಹೀಗೆ ಒಂದಲ್ಲ ನಟ ಚೇತನ್‌ ಪ್ರತಿಯೊಂದಕ್ಕೂ ಇಲ್ಲಿ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಲ್ಲೆಲ್ಲವೂ ಅನಗತ್ಯ ವಿವಾದವೇ ಆಗಿದೆ.

ಆ ಹೊತ್ತಿಗೆ ಅವರೊಬ್ಬ ಸಾಮಾಜಿಕ ಹೋರಾಟಗಾರನಾಗಿ ಮಾತ್ರ ಗುರುತಿಸಿಕೊಂಡಿದ್ದರು. ಅಲ್ಲಿಂದಾಚೆ ಯಾವುದೇ ಈಸಂ ಗೂ ಸಿಲುಕಿರಲಿಲ್ಲ. ಹಾಗಾಗಿ ಕನ್ನಡದ ಅದೆಷ್ಟೋ ಸಿನಿಮಾ ಪ್ರೇಕ್ಷಕರು ನಟ ಚೇತನ್‌ ಅವರನ್ನು ಒಬ್ಬ ಡಿಫೆರೆಂಟ್‌ ಆಕ್ಟರ್‌ ಅಂತಲೇ ಮಾತನಾಡಿದ್ದರು. ಮುಂದೇನಾಯ್ತೋ ಗೊತ್ತಿಲ್ಲ, ಚೇತನ್‌ ನಿಲುವು, ನಡೆ ಎಲ್ಲವೂ ಬದಲಾದವು. ಯಾರ ಅಂಕೆಗೂ ಸಿಲುಕದೆ ಹುಚ್ಚು ಕುದುರೆಯಂತೆ ಓಡತೊಡಗಿದರು ಚೇತನ್. ರಾಜಕೀಯ, ಸಾಮಾಜಿಕ, ಆರ್ಥಿಕ ರಂಗಗಳು ಸೇರಿದಂತೆ ಪ್ರಚಲಿತ ವಿದ್ಯಮಾನಗಳಿಗೆಲ್ಲ ಪ್ರತಿಕ್ರಿಯೆ ನೀಡತೊಡಗಿದರು. ವಿವಾದವೋ, ವಿಚಿತ್ರವೋ ದೊಡ್ಡ ಮಟ್ಟದ ಪ್ರಚಾರದಲ್ಲಿ ಚೇತನ್‌ ಧಗ ಧಗಸಿತೊಡಗಿದರು. ಮೊದಲೆಲ್ಲ ಅವರನ್ನು ಮೆಚ್ಚಿಕೊಂಡು ಮಾತನಾಡಿದವರೆಲ್ಲ ಚೇತನ್‌ ವಿರುದ್ಧ ಗಡುಗತೊಡಗಿದರು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಸಿನಿಮಾ ರಂಗದಲ್ಲಿನ ಮೀಟೂ ಪ್ರಕರಣ, ಸರ್ಕಾರದ ಬೆಲೆ ಏರಿಕೆ ಧೋರಣೆಗಳು.. ಹೀಗೆ ಒಂದಲ್ಲ ನಟ ಚೇತನ್‌ ಪ್ರತಿಯೊಂದಕ್ಕೂ ಇಲ್ಲಿ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಲ್ಲೆಲ್ಲವೂ ಅನಗತ್ಯ ವಿವಾದವೇ ಆಗಿದೆ. ಚೇತನ್‌ ಪ್ರಸ್ತಾಪಿಸಿದ ವಿಷಯ ಎಷ್ಟು ಗಂಭೀರವಾದದ್ದು ಎನ್ನುವುದಕ್ಕಿಂತ ಚೇತನ್‌ ಅವರನ್ನೇ ಟಾರ್ಗೆಟ್‌ ಮಾಡಿ, ಟೀಕಿಸಲಾಯಿತು. ಮೀಟೂ ಪ್ರಕರಣದಲ್ಲಂತೂ ಚೇತನ್‌ ಕೊಲೆ ಬೆದರಿಕೆ ಎದುರಿಸಿದರು. ಚಿತ್ರರಂಗ ಕೂಡ ಅವರನ್ನು ದೂರವೇ ನಿಲ್ಲಿಸಿತು. ಯಾಕಂದ್ರೆ, ಇಲ್ಲಿ ಚೇತನ್‌ ಅಂದ್ರೆ ಒಬ್ಬ ನಟ ಎಂದಷ್ಟೇ ಕಂಡಿತೇ ಹೊರತು, ಅದರಾಚೆ ಅವರಾರು ಅನ್ನೋದೇ ಇಲ್ಲಿ ದೊಡ್ಡ ಪ್ರಶ್ನೆ ಆಗಿ ಉಳಿಯಿತು.

ಹೌದು, ಅದು ನಿಜವೂ ಕೂಡ, ಚೇತನ್‌ ಅಂದ್ರೆ ಯಾರು ಎನ್ನುವುದು ಈಗಲೂ ಎಲ್ಲರಿಗೂ ಇರುವ ಯಕ್ಷ ಪ್ರಶ್ನೆ. ಚೇತನ್‌ ಒಬ್ಬ ನಟ ಹಾಗೆಯೇ ಒಬ್ಬ ಸಾಮಾಜಿಕ ಹೋರಾಟಗಾರ. ಅವರಿಗಿರುವ ಅವೆರೆಡು ಬ್ರಾಂಡ್‌ ಗಳ ಬಗ್ಗೆ ಅನುಮಾನವೇ ಇಲ್ಲ. ಅದರಾಚೆ ಅವರು ಯಾರು ? ಅವರ ಹಿಂದಿನ ಶಕ್ತಿಯಾವುದು ? ಹೋಗ್ಲಿ ಅವರು ಒಪ್ಪಿ-ಅಪ್ಪಿಕೊಂಡಿರುವ ಸಿದ್ದಾಂತವಾದ್ರು ಯಾವ್ದು? ಈ ಪ್ರಶ್ನೆಗಳಿಗೆ ಈಗಲೂ ಉತ್ತರ ಇಲ್ಲ. ಚೇತನ್‌ ಅವರದ್ದು ಎಡಪಂಥಿಯವೋ, ಬಲಪಂಥೀಯವೋ ಅದರಲ್ಲೂ ಗೊಂದಲ ಇದೆ. ಹಾಗಂತ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳಲ್ಲಿ ಅವರು ಒಲವು ಹೊಂದಿರುವ ಪಕ್ಷ ಯಾವುದು ಅಂತಲೂ ಹೇಳೋ ಹಾಗಿಲ್ಲ. ಒಂದೊಮ್ಮೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರ ಸ್ವಾಮಿ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದ ಚೇತನ್‌, ಈಗ ಈಗ ಕಾಂಗ್ರೆಸ್‌ -ಬಿಜೆಪಿ ಎರಡು ಆರ್‌ ಎಸ್‌ ಎಸ್‌ ನ ಕೊಂಬೆಗಳೇ ಅಂತ ಟೀಕಿಸಿ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಅಲ್ಲಿಂದಾಚೆ, ಚೇತನ್‌ ಅವರು ಒಬ್ಬ ಕಮ್ಯುನಿಸ್ಟಾ? ಅದು ಅಲ್ಲ. ಕಮ್ಯುನಿಸ್ಟರ ಮೇಲೂ ನಂಬಿಕೆ ಇಲ್ಲ. ಉಳಿದಂತೆ ಉಪೇಂದ್ರ ಅವರ ಪ್ರಜಾಕೀಯವನ್ನು ಅವರು ಒಪ್ಪಿಕೊಂಡಿಲ್ಲ. ಉಪೇಂದ್ರ ಅವರು ಕೂಡ ಚೇತನ್‌ ಅವರ ಟೀಕೆಯ ಬಾಣಕ್ಕೆ ಸಿಲುಕಿ ಒದ್ದಾಡಿದವರೇ. ಹೀಗಾಗಿ ಒಂದ್ರೀತಿ ಚೇತನ್ ಅವರದ್ದು ಏಕಾಂಗಿ, ಎಡಬಿಡಂಗಿ ನಿಲುವು.‌ ಮೇಲ್ನೋಟಕ್ಕೆ ಚೇತನ್‌ , ಬಿಜೆಪಿ ಸೇರಿದಂತೆ ಬಲಪಂಥೀಯ ಶಕ್ತಿಗಳ ವಿರೋಧಿ ಅಂತ ಕಂಡರೂ, ಈಗ ತಾವೊಬ್ಬ ಕಾಂಗ್ರೆಸ್‌ ವಿರೋಧಿ ಅಂತಲೂ ತೋರಿಸಿಕೊಂಡಿದ್ದಾರೆ. ಈ ನಿಲುವೇ ಅವರನ್ನು ಒಬ್ಬ ಎಡಬಿಡಂಗಿ ವ್ಯಕ್ತಿಯನ್ನಾಗಿ ರೂಪಿಸುತ್ತಿದೆ. ಯಾರನ್ನು, ಹೇಗೆ, ಯಾವ ರೂಪದಲ್ಲಿ ಟೀಕಿಸಬೇಕೆನ್ನುವ ಅರಿವಿಲ್ಲದೆ ಸಿಕ್ಕ ಸಿಕ್ಕವರನ್ನು ಟೀಕಿಸುತ್ತಿದ್ದಾರೆ. ಆ ಮೂಲಕ ಚೇತನ್‌ ಒಬ್ಬ ಸಾಮಾಜಿಕ ಹೋರಾಟಗಾರ ಎನ್ನುವುದರ ಬದಲಿಗೆ, ಕಾಂಟ್ರೋವರ್ಷಿ ಹೀರೋ ಅಂತ ಗುರುತಿಸುವಂತೆ ಮಾಡಿದೆ. ಚೇತನ್‌ ಅವರಿಗೆ ಈ ಅರಿವು ಈಗಲಾದರೂ ಬಂದರೆ ಒಳ್ಳಿತು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ

Related Posts

error: Content is protected !!