ಗಂಧರ್ವ ಲಾಡ್ಜ್- ಬಟ್ಟೆ ಬ್ಯಾಗ್ ಸೀಜ್? ಅಂದು ಸಾಹಿತಿ ನಮ್ ಋಷಿ ಭಾವುಕ- ಇಂದು ಖುಷಿಯ ಪುಳಕ !

ಋಷಿ ಕಳೆದ ಎರಡು ವರ್ಷಗಳ ಹಿಂದೆ ಸಿನಿಮಾ ಸಲುವಾಗಿ ಗಂಧರ್ವ ಲಾಡ್ಜ್ ನಲ್ಲಿದ್ದರು. ಆಗ 300 ಕ್ಕೂ ಹೆಚ್ಚು ಹಾಡುಗಳನ್ನು ಹೋಟೆಲ್ ನಲ್ಲೇ ಗೀಚಿದ್ದರು. ಸಮಸ್ಯೆ ಯಿಂದಾಗಿ ಹೋಟೆಲ್ ಬಿಲ್ 15000 ಕೊಡಲಾಗಲಿಲ್ಲ. ಹಾಗಾಗಿ ಬ್ಯಾಗ್- ಪುಸ್ತಕದ ಬ್ಯಾಗ್ ಹೋಟೆಲ್ ನಲ್ಲಿ ಲಾಕ್ ಆಯ್ತು. ಎರಡು ವರ್ಷ ಅಲ್ಲೇ ಇತ್ತು. ರೂಮ್ ಬಾಯ್ ಋಷಿ ಸಾಹಿತ್ಯ ಮೆಚ್ಚಿ ಕರೆದು ತಮ್ಮ ವೇತನದಲ್ಲಿ ಬಿಲ್ ಕಟ್ಟಿ ಬಟ್ಟೆ, ಗೀತೆಗಳ ಪುಸ್ತಕ ಕೊಟ್ಟಿದ್ದಾನೆ...

ಗಂಧರ್ವ ಲಾಡ್ಜ್- ಬಟ್ಟೆ ಜೊತೆ ಬೆಲೆಕಟ್ಟಲಾಗದ ಸಾಹಿತ್ಯದ ಬ್ಯಾಗ್ ಸೀಜ್ ಕಥೆ ಹೇಳೋ ಮೊದಲು, ಋಷಿಯವರ ಬಗ್ಗೆ ಒಂದು ಸಾಲು. ಋಷಿ
‘ಒಳಿತು ಮಾಡು ಮನುಸ’ ಖ್ಯಾತಿಯ ಗೀತ ರಚನೆಕಾರರು. ಹೃದಯಲ್ಲಿ ಕಲ್ಲಿದ್ದವನಿಗೆ ಇದೆಲ್ಲ ಅಂಟಲ್ಲ ಎನ್ನುವವರೆಲ್ಲಾ ಬದಲಾಗುವಂತಹ ಹಾಡು ಕೊಟ್ಟವರು. ಋಷಿ ರಚಿಸಿದ, ಮಧುರ ನಾಯಿರಿ ಸಂಗೀತ ಸಂಯೋಜಿಸಿದ, ಸಿ. ಅಶ್ವಥ್ ಅವರು ಧ್ವನಿಯಾದ ‘ ಒಳಿತು ಮಾಡು ಮನಸು’ ಹಾಡು ಕೇವಲ ಹಾಡಲ್ಲ ಅದೊಂದು ಸ್ಪೂರ್ತಿಯ ಚಿಲುಮೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಅಷ್ಟಕ್ಕೂ, ಈ‌ ಹಾಡಿನ ಬಗ್ಗೆ ಮಾತನಾಡುವುದಕ್ಕೆ ಕಾರಣ
ಒಳಿತು ಮಾಡು ಮನುಸ ಋಷಿ ಈಗ ಖುಷಿಯಲ್ಲಿದ್ದಾರೆ. ಎರಡು ವರ್ಷಗಳ ನಂತರ ಐದು ಜೊತೆ ಬಟ್ಟೆಯ ಕೈಚೀಲ ಎಲ್ಲದಕ್ಕಿಂತ ಹೆಚ್ಚಾಗಿ ಬೆಲೆಯೇ ಕಟ್ಟಲಾಗದ ಸಾಹಿತ್ಯವಿದ್ದ ಬ್ಯಾಗ್ ಮರಳಿ ಸಿಕ್ಕಿರುವುದು. ಹೋಟೆಲ್ ನ ರೂಮ್ ಬಾಯ್ ಜೋಪಾನ ಮಾಡಿ ಪುನಃ ಋಷಿ ಅವರ ಕೈಗೆ ತಲುಪಿಸಿರುವುದು.

ಹೌದು, ಋಷಿ ಕಳೆದ ಎರಡು ವರ್ಷಗಳ ಹಿಂದೆ ಸಿನಿಮಾ ಸಲುವಾಗಿ ಗಂಧರ್ವ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಒನ್ ವೇ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಹೊತ್ತಿದ್ದ ಋಷಿಯವರು
ಗಂಧರ್ವ ಲಾಡ್ಜ್ ನಲ್ಲೇ ಕಥೆ- ಚಿತ್ರಕಥೆ ಅಂತ ಬ್ಯುಸಿಯಾಗಿದ್ದ ಋಷಿ ಸುಮಾರು 300 ಕ್ಕೂ ಹೆಚ್ಚು ಹಾಡುಗಳನ್ನೇ ಹೋಟೆಲ್ ನಲ್ಲೇ ಕುಳಿತು ಗೀಚಿದ್ದಾರೆ. ಆ ಎಲ್ಲಾ ಹಾಡುಗಳು ಕೂಡ ಒಳಿತು ಮಾಡು ಮನುಸ ಸ್ಟೈಲ್ ನಲ್ಲೇ ರಚನೆಯಾಗಿವೆ. ಆ ಬಗ್ಗೆ ಶೀಘ್ರದಲ್ಲೇ ಋಷಿ ಅವರೇ ಹೇಳ್ತಾರೆ.

ದುರಂತ ಅಂದರೆ ಋಷಿ ನಿರ್ದೇಶಿಸಿದ ಒನ್ ವೇ ಸಿನಿಮಾ ಬಿಡುಗಡೆಗೊಂಡು ನಷ್ಟವಾಯ್ತು. ಎಷ್ಟರ ಮಟ್ಟಿಗೆ ಅಂದರೆ ಉಳಿದುಕೊಂಡಿದ್ದ ಗಂಧರ್ವ ಹೋಟೆಲ್ ಬಿಲ್ ಕೊಡೋದಕ್ಕೆ ಆಗದೇ ಇರುವಷ್ಟು. ಸುಮಾರು 15000 ಕೊಡಬೇಕಿತ್ತು, ಹಣ ಕೊಡಲಿಕ್ಕೆ ಸಾಧ್ಯವಾಗದೇ ಇದ್ದಿದ್ದರಿಂದ ಬಟ್ಟೆ ಬ್ಯಾಗ್- ಪುಸ್ತಕದ ಬ್ಯಾಗ್ ಎಲ್ಲವೂ ಹೋಟೆಲ್ ನಲ್ಲಿ ಲಾಕ್ ಆಯ್ತು. ಎರಡು ವರ್ಷ ಕಳೆದರೂ ದುಡ್ಡು ಹೊಂದಿಸಿಕೊಳ್ಳೋದಕ್ಕೆ ಆಗಲಿಲ್ಲ. ಹೋಗಲಿ ಬಿಡು ಅಂತ ಸುಮ್ಮನಾಗಿದ್ದರು. ಆದರೆ, ಋಷಿ ಗೀಚಿದ್ದ ಸಾಹಿತ್ಯವನ್ನ ಕಣ್ಣಾಡಿಸಿದ ಹೋಟೆಲ್ ರೂಮ್ ಬಾಯ್ ಋಷಿ ಅವರನ್ನ ಮತ್ತೆ ಸಂರ್ಪಕ ಮಾಡಿದ್ದಾರೆ. ಸಾರ್ ಹದಿನೈದು ‌ಸಾವಿರ ನಾನು ಕಟ್ಟುತ್ತೇನೆ ನೀವು ಹೋಟೆಲ್ ಗೆ ಬನ್ನಿ ಎಂದು ಕರೆಸಿಕೊಂಡು ಅವರ ಬಟ್ಟೆ ಬ್ಯಾಗ್ ಜೊತೆಗೆ ಸಾಹಿತ್ಯದ ಹೊತ್ತಗೆಯನ್ನ ಋಷಿ ಅವರ ಕೈಗಿಟ್ಟಿದ್ದಾನೆ.

ಕಳೆದ ಎರಡು ವರ್ಷಗಳಿಂದ ಅದೇ ಹೋಟೆಲ್ ನಲ್ಲಿ ಬಟ್ಟೆ ಹಾಗೂ ಪುಸ್ತಕದ ಚೀಲ ಬಿಟ್ಟು ಕಣ್ಣೀರಾಕುತ್ತಲೇ ಹೊರನಡೆದಿದ್ದ ಋಷಿ ಇವತ್ತು ರೂಮ್ ಬಾಯ್ ಮೂರ್ತಿಯ ಸಹಾಯದಿಂದ
ಖುಷಿಖುಷಿಯಾಗಿ ಬ್ಯಾಗ್ ಸಮೇತ ಹೋಟೆಲ್ ನಿಂದ ಹೊರಬಂದಿದ್ದಾರೆ. ಬಹುಷಃ ಋಷಿ ಅವರ ಕೈಗೆ
ಕೋಟಿ ಕೊಟ್ಟಿದ್ದರೂ ಕೂಡ ಇಂತಹ ಖುಷಿ ಸಿಗುತ್ತಿರಲಿಲ್ಲ ಅನ್ಸುತ್ತೆ. ಸಾವು ಬಂದೇ ಬರುತ್ತೆ ಸಾಯೋದಕ್ಕೆ ಮುಂಚೆ ನಾಲ್ಕು‌ಮಂದಿಗೆ ಸಹಾಯ ಮಾಡಿ ಸಾಯಬೇಕು. ಆಗ ಬದುಕಿದ್ದಕ್ಕೂ ಸಾರ್ಥಕ ಎಂಬುದು ಸಾಹಿತಿ ಋಷಿಯವರ ಧ್ಯೇಯ. ಅದರಂತೇ ಅವರು ಬದುಕುತ್ತಿದ್ದಾರೆ. ಹತ್ತಾರು ಮಂದಿಗೆ ಅವರ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಆದರೆ, ಭಗವಂತ ಸಹಾಯ ಮಾಡುವವರ ಅಕೌಂಟ್ ಗೆ ಅಮೌಂಟ್ ಡೆಪಾಸಿಟ್ ಆಗದೇ ಇರೋ ಥರ ನೋಡಿಕೊಳ್ತಾನೆ. ದೇವರಿಗೆ ಒಳ್ಳೆಯವರ ಮೇಲೆ ಅದ್ಯಾಕಷ್ಟು ಹೊಟ್ಟೆ ಉರಿನೋ ಗೊತ್ತಿಲ್ಲ. ಇನ್ಮೇಲಾದರೂ ಹಲವರ ಬದುಕು ಬದಲಾಯಿಸಿದ ಸಾಹಿತಿ ಋಷಿ ಅವರ ಜೀವನವನ್ನೂ ಭಗವಂತ ಬದಲಾಯಿಸಲಿ. ಋಷಿಗೆ ಸರಸ್ವತಿ ಒಲಿದಂತೆ ಲಕ್ಷ್ಮಿಯೂ ಒಲಿದುಬರಲಿ..

ವಿಶಾಲಾಕ್ಷಿ ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!