ಗಣೇಶ ಹಬ್ಬಕ್ಕೆ ದಚ್ಚು ಸರ್ಪ್ರೈಸ್!‌ ದರ್ಶನ್‌ ನಟನೆಯ ಹೊಸ ಸಿನಿಮಾದ ಟೈಟಲ್‌ ಅನೌನ್ಸ್‌ ಗುರು…

ಯಜಮಾನ ಸಿನಿಮಾದ ಯಶಸ್ಸಿನ ಬಳಿಕ ಮತ್ತದೇ ತಂಡ ಸೇರಿ ಹೊಸ ಸಿನಿಮಾ ಮಾಡುತ್ತಿರುವ ವಿಷಯ ಗೊತ್ತೇ ಇದೆ. ನಿರ್ಮಾಪಕಿ ಶೈಲಜಾ ನಾಗ್‌ ಅವರು ತಮ್ಮ ಮೀಡಿಯಾ ಹೌಸ್‌ ಸ್ಟುಡಿಯೋ ಬ್ಯಾನರ್‌ನಲ್ಲಿ ದರ್ಶನ್‌ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರವನ್ನು ವಿ.ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ. ಈಗ ಚಿತ್ರದ ಶೀರ್ಷಿಕೆ ಅನೌನ್ಸ್‌ ಮಾಡಲು ತಂಡ ಉತ್ಸಾಹದಲ್ಲಿದೆ. ಸೆಪ್ಟೆಂಬರ್‌ 10ರಂದು ಚಿತ್ರದ ಟೈಟಲ್‌ ಲಾಂಚ್‌ ಆಗುತ್ತಿದೆ. ಇದು ದಚ್ಚು ಫ್ಯಾನ್ಸ್‌ಗೆ ಡಬಲ್‌ ಧಮಾಕ!

ದರ್ಶನ್‌ “ರಾಬರ್ಟ್‌” ಮೂಲಕ ಅಬ್ಬರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಸಿನಿಮಾ ಬಳಿಕ ದರ್ಶನ್‌ ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವೂ ಆಗಲೇ ಸಿಕ್ಕಿತ್ತು. “ಯಜಮಾನ” ಸಿನಿಮಾ ನಿರ್ಮಿಸಿದ್ದ ಶೈಲಜಾನಾಗ್‌ ಅವರಿಗೆ ಮತ್ತೊಂದು ಕಾಲ್‌ ಶೀಟ್‌ ಕೊಟ್ಟಿದ್ದರು ದರ್ಶನ್.‌ ಈಗ ಮತ್ತೆ “ಯಜಮಾನ” ತಂಡವೇ ದರ್ಶನ್‌ ಅವರಿಗೆ ಹೊಸ ಸಿನಿಮಾ ಮಾಡುತ್ತಿದೆ. ಹೌದು, ದರ್ಶನ್‌ ನಾಯಕರಾಗಿ ನಟಿಸಲಿರುವ ಹೊಸ ಚಿತ್ರವನ್ನು ಶೈಲಜಾ ನಾಗ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಸುದ್ದಿ ಎಲ್ಲರಿಗೂ ಗೊತ್ತಿತ್ತು. ಆದರೆ, ಸಿನಿಮಾದ ಶೀರ್ಷಿಕೆ ಏನು ಅನ್ನೋದು ಗೌಪ್ಯವಾಗಿತ್ತು. ಅದಕ್ಕೆ ಈಗ ಸಮಯ ನಿಗದಿಯಾಗಿದೆ.

ದರ್ಶನ್‌ ಅವರು ಹೊಸ ಸಿನಿಮಾ ಮೂಲಕ ಭರ್ಜರಿ ಎಂಟ್ರಿಕೊಡಲು ತಯಾರಿ ನಡೆಸುತ್ತಿದ್ದಾರೆ. ದಚ್ಚು ಅಭಿನಯದ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಸೆಪ್ಟೆಂಬರ್‌ ೧೦ರಂದು ಉತ್ತರ ಸಿಗಲಿದೆ. ಅಂದು ಗಣೇಶ ಹಬ್ಬ. ಅಂದೇ ಡಿಬಾಸ್‌ ಹೊಸ ಸಿನಿಮಾದ ಟೈಟಲ್‌ ರಿವೀಲ್‌ ಆಗುತ್ತಿದೆ. ಈ ಸುದ್ದಿಯನ್ನು ಸ್ವತಃ ನಿರ್ಮಾಪಕಿ ಶೈಲಜಾನಾಗ್‌ ಅವರೇ ತಮ್ಮ ಮುಖಪುಟದಲ್ಲಿ ಹಂಚಿಕೊಂಡಿದ್ದಾರೆ. ಇದು ಸಹಜವಾಗಿಯೇ ದಚ್ಚು ಅಭಿಮಾನಿಗಳಿಗೆ ಸಾಕಷ್ಟು ಖುಷಿಕೊಟ್ಟಿದೆ. ಅಂದಹಾಗೆ, ಇದು ದರ್ಶನ್‌ ಅಭಿನಯದ 55ನೇ ಚಿತ್ರ. ಶೈಲಜಾ ನಾಗ್ ಮತ್ತು ಬಿ. ಸುರೇಶ ಅವರ ಮೀಡಿಯ ಹೌಸ್ ಸ್ಟುಡಿಯೋ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಮತ್ತೊಂದು ನಿರೀಕ್ಷೆಯ ಸಿನಿಮಾ. ನಿರ್ದೇಶಕ ವಿ.ಹರಿಕೃಷ್ಣ ನಿರ್ದೇಶನದ ಜೊತೆಗೆ ಸಂಗೀತವನ್ನೂ ನೀಡುತ್ತಿದ್ದಾರೆ. ಅದೇನೆ ಇರಲಿ, “ಯಜಮಾನ”ದಂತಹ ಸೂಪರ್‌ ಹಿಟ್‌ ಸಿನಿಮಾ ನೀಡಿರುವ ಈ ಟೀಮ್‌ ಮತ್ತೊಮ್ಮೆ ಮೋಡಿ ಮಾಡಲಿದೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ.

ವಿ.ಹರಿಕೃಷ್ಣ ಅವರು ದರ್ಶನ್‌ ಅವರ ಬಹುತೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. “ಯಜಮಾನ” ಮೂಲಕ ಅವರು ನಿರ್ದೇಶಕರಾದರು. ಈಗ ಮತ್ತೆ ದಚ್ಚು ಸಿನಿಮಾ ನಿರ್ದೇಶಿಸುತ್ತಿರುವುದು ವಿಶೇಷ. ಶೈಲಜಾನಾಗ್‌ ನಿರ್ಮಾಣದ ಹತ್ತನೇ ಚಿತ್ರವಿದು ಎಂಬುದು ಇನ್ನೊಂದು ವಿಶೇಷ. ಸದ್ಯ ಚಿತ್ರದ ಶೀರ್ಷಿಕೆ ರಿವೀಲ್‌ ಆಗುತ್ತಿದೆ. ಈ ಬಾರಿಯೂ ಮಜವೆನಿಸುವ ಸಿನಿಮಾ ಕಟ್ಟಿಕೊಡುವ ಉತ್ಸಾಹದಲ್ಲಿ ವಿ.ಹರಿಕೃಷ್ಣ ತಂಡವಿದೆ.

ಇನ್ನು, ನಿರ್ಮಾಪಕಿ ಶೈಲಜಾನಾಗ್‌ ಅವರು ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡಿದವರು. ಈ ಚಿತ್ರವನ್ನೂ ಸಹ ಭರ್ಜರಿಯಾಗಿಯೇ ನಿರ್ಮಿಸುವ ಯೋಚನೆಯಲ್ಲಿದ್ದಾರೆ. ಕೊರೊನಾ ಹಾವಳಿಗೆ ತತ್ತರಿಸಿರುವ ಕನ್ನಡ ಸಿನಿಮಾ ರಂಗ ಮತ್ತೆ ಚೇತರಿಸಿಕೊಳ್ಳುತ್ತಿದೆ. ಈ ಮಧ್ಯೆಯೇ ದಚ್ಚು ಅಭಿನಯದ ಹೊಸ ಸಿನಿಮಾದ ಶೀರ್ಷಿಕೆ ಗಣೇಶ ಹಬ್ಬದಂದು ಅನಾವರಣಗೊಳ್ಳುತ್ತಿರುವುದು ಖುಷಿಕೊಟ್ಟಿದ್ದು, ಚಿತ್ರರಂಗ ಗರಿಗೆದರುವಂತೆ ಮಾಡಿದೆ.

Related Posts

error: Content is protected !!