ಕನ್ನಡ ಸಿನಿಮಾಗಳಲ್ಲಿ ಈಗಾಗಲೇ ಭಾರತೀಯ ಚಿತ್ರರಂಗದ ಹಲವು ದಿಗ್ಗಜರು ನಟಿಸಿದ್ದಾರೆ. ನಟಿಸುತ್ತಲೂ ಇದ್ದಾರೆ. ಬಾಲಿವುಡ್ ನಟ, ನಟಿಯರೂ ಇಲ್ಲೊಮ್ಮೆ ಇಣುಕಿ ನೋಡಿದ್ದು ಗೊತ್ತೇ ಇದೆ. ಅಮಿತಾಬ್ ಬಚ್ಚನ್, ಜಾಕಿಶಾರ್ಫ್, ಸಂಜಯ್ ದತ್, ಜೂಹಿ ಚಾವ್ಲಾ, ಶಿಲ್ಪಾಶೆಟ್ಟಿ, ರವೀನಾ ಟಂಡನ್, ನಾನಾ ಪಾಟೇಕರ್ ಸೇರಿದಂತೆ ಹಲವು ನಟ ನಟಿಯರು ಈಗಾಗಲೇ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಾಲಿಗೆ ಮತ್ತೊಬ್ಬ ಬಾಲಿವುಡ್ ನಟನ ಆಗಮನವಾಗುತ್ತಿದೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ!
ಹೌದು, ಕನ್ನಡದ ಸಿನಿಮಾವೊಂದರಲ್ಲಿ ಬಾಲಿವುಡ್ ನಟ ಗೋವಿಂದ ಅವರು ಎಂಟ್ರಿಯಾಗಲಿದ್ದಾರೆ ಅನ್ನೋ ಸುದ್ದಿ ಇದೆ. ಹಾಗೆ ನೋಡಿದರೆ, ಬಹಳ ದಿನಗಳಿಂದಲೂ ಗೋವಿಂದ ಅವರು ಬರ್ತಾರೆ ಎಂಬ ಸುದ್ದಿ ಇತ್ತು. ಆದರೆ, ಯಾವಾಗ, ಯಾವ ಸಿನಿಮಾ ಅನ್ನೋದು ಪಕ್ಕಾ ಆಗಿರಲಿಲ್ಲ. ಈಗ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸಲು ಬರುತ್ತಾರೆ ಎಂಬ ಸುದ್ದಿ ಹಬ್ಬಿರುವುದಂತೂ ನಿಜ.
ಗೋವಿಂದ ಅವರು, ಪ್ರಜ್ವಲ್ ದೇವರಾಜ್ ಅಭಿನಯದ ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ.
ನಿರ್ದೇಶಕ ಕಿರಣ್ ವಿಶ್ವನಾಥ್ ಹಾಗೂ ನಿರ್ಮಾಪಕ ನವೀನ್ ಗೋವಿಂದ ಅವರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ಸಹ ಮಾಡಿದ್ದಾರೆ. ಸ್ಕ್ರಿಪ್ಟ್ ಕೇಳಿ ಆಸಕ್ತಿ ತೋರಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕೃತವಾಗಿ ಘೋಷಣೆ ಆಗಬೇಕಿದೆ. ಸದ್ಯ ಸುದ್ದಿಯಂತೂ ಹರಿದಾಡುತ್ತಿದೆ. ಗೋವಿಂದ ಬಂದ ಮೇಲಷ್ಟೇ ಅದು ಪಕ್ಕಾ ಆಗಲಿದೆ. ಇನ್ನು, ಪ್ರಜ್ವಲ್ ದೇವರಾಜ್ ಅವರು “ಮಾಫಿಯಾ” ಸಿನಿಮಾ ಒಪ್ಪಿದ್ದಾರೆ. ಇನ್ನು, “ವೀರಂ” ಕೂಡ ಮುಗಿಯುವ ಹಂತ ತಲುಪಿದೆ.