ಕಿಚ್ಚನ ಮೇಲಿನ ಪ್ರೀತಿಗೆ ಕೋಣ ಬಲಿ! ಬರ್ತ್‌ ಡೇ ನೆಪದಲ್ಲಿ ಮೂಕ ಪ್ರಾಣಿ ಬಲಿ ಕೊಟ್ಟ ಸುದೀಪ್‌ ಫ್ಯಾನ್ಸ್‌ !! ಎಲ್ಲೆಡೆ ವಿರೋಧ

ಅಭಿಮಾನಿಗಳು ತಮ್ಮ ಹೀರೋಗಳನ್ನು ಆರಾಧಿಸುವುದು ತಪ್ಪಲ್ಲ. ಹಾಲಿನ ಅಭಿಷೇಕ, ಹೂವಿನ ಅಲಂಕಾರ ಇತ್ಯಾದಿ ವಿಶೇಷ ಪೂಜೆಗಳನ್ನು ಮಾಡಲಿ. ಆದರೆ, ಹುಟ್ಟುಹಬ್ಬದ ನೆಪದಲ್ಲಿ ಈ ರೀತಿ ಮೂಕ ಪ್ರಾಣಿಗಳ ಬಲಿ ಕೊಡುವುದು ಅದರಲ್ಲೂ ಸಾರ್ವಜನಿಕವಾಗಿಯೇ ಅದನ್ನು ಚಿತ್ರೀಕರಿಸಿರುವುದು ದೊಡ್ಡ ಅಪರಾಧವಂತೂ ಹೌದು.

ಸಿನಿಮಾ ಅಂದರೆ, ಅದೊಂಥರಾ ಊರ ಹಬ್ಬ. ಅದರಲ್ಲೂ ಅಭಿಮಾನಿಗಳಿಂತೂ ಎಲ್ಲಿಲ್ಲದ ಸಡಗರ. ತಮ್ಮ ಪ್ರೀತಿಯ ನಾಯಕರನ್ನಂತೂ ಆರಾಧಿಸುವ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ತಮ್ಮ ನೆಚ್ಚಿನ ಹೀರೋ ಸಿನಿಮಾ ರಿಲೀಸ್‌ ಆಗುತ್ತೆ ಅಂದರೆ ಸಾಕು, ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ದೊಡ್ಡ ದೊಡ್ಡ ಹೂವಿನ ಹಾರಗಳ ಅಲಂಕಾರ ಮಾಡಿ ಸಂಭ್ರಮಿಸುವ ಅಭಿಮಾನಿಗಳಿಗೇನೂ ಕೊರತೆ ಇಲ್ಲ. ಇನ್ನು, ಸ್ಟಾರ್‌ ನಟರ ಹುಟ್ಟುಹಬ್ಬ ಬಂದರಂತೂ ಅಭಿಮಾನಿಗಳ ಖುಷಿಗೆ ಪಾರವೇ ಇರೋದಿಲ್ಲ. ಅದೆಷ್ಟೋ ಅಭಿಮಾನಿಗಳು ತಾವು ಇದ್ದಲ್ಲೇ ತಮ್ಮ ಸ್ಟಾರ್‌ ನಟರುಗಳ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುವುದು ವಾಡಿಕೆ. ಇದು ತಲತಲಾಂತರದಿಂದಲೂ ಬಂದಂತಹ ಪದ್ಧತಿ. ಈಗ ಹೊಸ ಸುದ್ದಿ ಅಂದರೆ, ಕಿಚ್ಚ ಸುದೀಪ್‌ ಅವರ ಬಳ್ಳಾರಿಯ ಸಂಡೂರು ಸಮೀಪದ ಬಂಡ್ರಿ ಗ್ರಾಮದ ಅಭಿಮಾನಿಗಳು ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಕೋಣ ಬಲಿ ನೀಡಿ ಅತಿರೇಕ ಮೆರೆದಿದ್ದಾರೆ. ಅಷ್ಟೇ ಅಲ್ಲ, ಸುದೀಪ್‌ ಅವರ ಪೋಸ್ಟರ್‌ ಮುಂದೆಯೇ ಕೋಣನ ಬಲಿ ನೀಡಿರುವ ವಿಡಿಯೊ ಕೂಡ ಮಾಡಲಾಗಿದೆ. ಆದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಅಲ್ಲಿ ಸೇರಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕಿಚ್ಚ ಸುದೀಪ್‌ ಅವರು ಕೋವಿಡ್ ಇರುವ ಕಾರಣ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ. ಯಾರೂ ಕೂಡ ಗುಂಪು ಸೇರಿ ಆಚರಿಸಬೇಡಿ. ತಾವು ಇದ್ದಲ್ಲೇ ಶುಭಾಶಯ ತಿಳಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಆದರೆ, ಅವರ ಕೆಲವು ಅಭಿಮಾನಿಗಳು ಅಭಿಮಾನವನ್ನು ಅತಿರೇಕಗೊಳಿಸಿದ್ದಾರೆ.
ಸುದೀಪ್ ಅಭಿಮಾನಿಗಳು ಕೋಣ ಬಲಿ ನೀಡಿ ಹುಟ್ಟುಹಬ್ಬ ಆಚರಿಸಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವಿರೋಧ ಕೇಳಿ ಬರುತ್ತಿದೆ. ಕೋಣ ಬಲಿ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ ಈ ಕೃತ್ಯ ಎಸಗಿದವರ ಮೇಲೆ ದೂರು ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆಯೂ ಸಹ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರ “ದಿ ವಿಲನ್” ಚಿತ್ರದ ಸಕ್ಸಸ್‌ಗೆ ಹಾರೈಸಿ ಕೋಣ ಬಲಿ ಕೊಡಲಾಗಿತ್ತು.

ಆಗ ಕೂಡ ಎಲ್ಲೆಡೆಯಿಂದಲೂ ವಿರೋಧ ವ್ಯಕ್ತವಾಗಿತ್ತು. ಅದೇನೆ ಇರಲಿ, ಅಭಿಮಾನಿಗಳು ತಮ್ಮ ಹೀರೋಗಳನ್ನು ಆರಾಧಿಸುವುದು ತಪ್ಪಲ್ಲ. ಹಾಲಿನ ಅಭಿಷೇಕ, ಹೂವಿನ ಅಲಂಕಾರ ಇತ್ಯಾದಿ ವಿಶೇಷ ಪೂಜೆಗಳನ್ನು ಮಾಡಲಿ. ಆದರೆ, ಹುಟ್ಟುಹಬ್ಬದ ನೆಪದಲ್ಲಿ ಈ ರೀತಿ ಮೂಕ ಪ್ರಾಣಿಗಳ ಬಲಿ ಕೊಡುವುದು ಅದರಲ್ಲೂ ಸಾರ್ವಜನಿಕವಾಗಿಯೇ ಅದನ್ನು ಚಿತ್ರೀಕರಿಸಿರುವುದು ದೊಡ್ಡ ಅಪರಾಧವಂತೂ ಹೌದು. ಸದ್ಯ, ಆ ಘಟನೆಗೆ ಖಂಡನೆ ಆಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಸ್ಟಾರ್‌ಗಳು ತಮ್ಮ ಅಭಿಮಾನಿಗಳಿಗೆ ಈ ರೀತಿಯ ಆಚರಣೆ ಬೇಡ ಎಂಬ ಮನವಿ ಮಾಡಿದ್ದರೂ ಕೂಡ ಪದೇ ಪದೇ ಇಂತಹ ತಪ್ಪುಗಳು ಆಗುತ್ತಲೇ ಇವೆ. ಇಂತಹ ತಪ್ಪು ತಿದ್ದಿಕೊಳ್ಳುವುದು ಯಾವಾಗ ಅನ್ನುವುದೇ ಯಕ್ಷ ಪ್ರಶ್ನೆ.

Related Posts

error: Content is protected !!