ಚಡ್ಡಿದೋಸ್ತಿಗಳ ಗ್ರ್ಯಾಂಡ್ ದರ್ಶನ ; ಸೆಪ್ಟೆಂಬರ್ 17 ರಂದು ಕಡ್ಡಿ ಅಲ್ಲಾಡ್‌ಸ್ತಾರೆ!

ಕನ್ನಡದಲ್ಲಿ ಹೊಸ ಬಗೆಯ ಶೀರ್ಷಿಕೆ ಹೊತ್ತ ಚಿತ್ರಗಳಿಗೇನು ಲೆಕ್ಕವಿಲ್ಲ. ವಿಭಿನ್ನ ಮತ್ತು ವಿಶೇಷ ಎನಿಸುವ ಶೀರ್ಷಿಕೆಯ ಚಿತ್ರಗಳು ಈಗಾಗಲೇ ಬಂದು ಹೋಗಿವೆ. ಆ ಸಾಲಿಗೆ ಈಗ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಕೂಡ ಸೇರಿದೆ. ಹೌದು ಈಗಾಗಲೇ ಈ ಚಿತ್ರ ಒಂದಷ್ಟು ಜೋರು ಸುದ್ದಿ ಮಾಡಿದ್ದು, ಸಿನಿಮಾ ಪೋಸ್ಟರ್ ಮೂಲಕವೇ ಕುತೂಹಲ ಮೂಡಿಸಿದೆ. ಅಂದಹಾಗೆ ಈ ಚಿತ್ರ ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ನಿರ್ಮಾಣದಲ್ಲಿ ತಯಾರಾಗಿದೆ. ಇನ್ನು, ಆಸ್ಕರ್ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಇದೇ ಮೊದಲ ಸಲ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 17 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಕೊರೊನಾ ಎರಡನೇ ಅಲೆಯ ನಂತರ ಬಿಡುಗಡೆಯಾಗುತ್ತಿರುವ ಈ ಚಿತ್ರ ಜನರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರಲಿದೆ ಎಂಬುದು ಚಿತ್ರತಂಡದ ನಂಬಿಕೆ. ಕಥೆ ಬಗ್ಗೆ ಹೇಳುವುದಾದರೆ, ಇದೊಂದು ಇಬ್ಬರು ಸ್ನೇಹಿತರ ನಡುವೆ ಪ್ರವೇಶಿಸುವ ಒಬ್ಬ ಹುಡುಗಿ ಮತ್ತು ಆಕೆಯೂ ಸೇರಿದಂತೆ ಆ ಇಬ್ಬರು ಗೆಳೆಯರ ಮಧ್ಯೆ ನಡೆಯುವ ಕಥೆ.

ಆ ಕಥೆಯಲ್ಲಿ ಸುತ್ತಿಕೊಳ್ಳುವ ಸಾಮಾಜಿಕ ವ್ಯವಸ್ಥೆಯ ಹಲವು ರೂಪಗಳು, ಇವುಗಳ ನಡುವೆ ಸಿಲುಕಿ ಹಾಕಿಕೊಂಡ ಸ್ನೇಹ, ಪ್ರೀತಿ ಮತ್ತಿತರ ಭಾವನಾತ್ಮಕ ಸಂಬಂಧಗಳು ಚಿತ್ರದ ಹೈಲೈಟ್. ಚಿತ್ರದ ಕಥೆಗೆ ಲೋಕೇಂದ್ರ ಸೂರ್ಯ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅಷ್ಟೇ ಅಲ್ಲ, ಅವರು ಇಲ್ಲಿ ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಇಬ್ಬರು ಸ್ನೇಹಿತರ ನಡುವೆ ಬರುವ ಹುಡುಗಿ ಪಾತ್ರದಲ್ಲಿ ಮಲಯಾಳಿ ನಟಿ ಗೌರಿ ನಾಯರ್ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಸಿ.ವಿ.ಜಿ, ಗಜರಾಜ್, ಪ್ರತಾಪ್, ಸತೀಶ್ ಗೌಡ, ರಾಜು ನಾಯಕ್, ವರ್ಧನ್ ಬಾಲು, ನವೀನ್ ಮಧುಗಿರಿ, ಮಾಸ್ಟರ್ ರಾಕಿನ್, ಮಹಾಲಕ್ಷ್ಮಿ, ಡಾ.|ಪದ್ಮಾಕ್ಷಿ, ಭಾನು, ಆಸಿಯಾ ಷರೀಫ್, ಮೈಸೂರು ಶೋಭ ಮತ್ತಿತರರು ನಟಿಸಿದ್ದಾರೆ. ಹರ್ಷಿತ ಕಲ್ಲಿಂಗಲ್ ಎಂಬುವ ಮಾದಕ ಚೆಲುವೆ ವಿಶೇಷ ಹಾಡೊಂದಕ್ಕೆ ನರ್ತಿಸಿರುವುದು ಚಿತ್ರದ ಮತ್ತೊಂದು ಹೈಲೈಟ್.

ಅನಂತ್ ಆರ್ಯನ್ ಸಂಗೀತ ನೀಡಿದರೆ, ಗಗನ್ ಕುಮಾರ್ ಛಾಯಾಗ್ರಹಣವಿದೆ. ಮರಿಸ್ವಾಮಿ ಸಂಕಲನವಿದೆ. ವೈಲೆಂಟ್ ವೇಲು ಸಾಹಸ ಮಾಡಿದ್ದಾರೆ. ಅಕುಲ್ ನೃತ್ಯ, ಶ್ರೀಧರ್ ಸಿಯಾ, ಕೃಷ್ಣಕುಮಾರ್ ಮತ್ತು ಸತೀಶ್ ಕ್ಯಾತಘಟ್ಟ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರವನ್ನು ರಾಜ್ಯಾದ್ಯಂತ ಜಯದೇವ್ ಫಿಲಮ್ಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ.

Related Posts

error: Content is protected !!