ಸಿಟ್‌ ರಾಜ ಸಿಟ್‌ : ವರಮಹಾಲಕ್ಷ್ಮಿ ದಿನ ಗಾಂಧಿ ನಗರದ ಮಂದಿನಾ ಬೆಚ್ಚಿ ಬೀಳಿಸಿದ ರಾಜಾಸೀಟ್‌ !

ಕಾಂತ ಕನ್ನಳ್ಳಿ, ಸ್ಯಾಂಡಲ್‌ ವುಡ್‌ನಲ್ಲಿ ಈ ಹೆಸರು ಕೇಳಿದಾಕ್ಷಣ ನೆನಪಾಗೋದು ʼಇರುವುದೆಲ್ಲವ ಬಿಟ್ಟುʼ ಚಿತ್ರ. ಯಾಕಂದ್ರೆ ಅವರು ನಿರ್ದೇಶನದ ಈ ಚಿತ್ರದಲ್ಲಿನ ಅಭಿನಯಕ್ಕೆ ಮೇಘನಾ ರಾಜ್‌ ಗೆ ಅತ್ಯುತ್ತಮ ನಟಿ ರಾಜ್ಯಪ್ರಶಸ್ತಿ ಬಂತು. ಆ ಚಿತ್ರದ ಒಂದಷ್ಟು ಗ್ಯಾಪ್‌ ನಂತರ ಯುವ ನಿರ್ದೇಶಕ ಕಾಂತ ಕನ್ನಳ್ಳಿ ಹೊಸದೊಂದು ಆಲೋಚನೆಯೊಂದಿಗೆ ಹೊಸದೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದಿಕ್ಕೆ ರೆಡಿಯಾಗಿದ್ದಾರೆ. ಹೊಸದೊಂದು ಪ್ರೊಡಕ್ಷನ್ ಹೌಸ್ ನಡಿ ಹೊಸಬರ ಜತೆಗೆ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಶುಕ್ರವಾರವಷ್ಟೇ ಲಾಂಚ್ ಆಗಿದೆ. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಇತ್ತು. ಅಂದು ಲಕ್ಷ್ಮಿ ಎಲ್ಲರ ಮನೆಗೆ ಬರ್ತಾಳೆ ಅನ್ನೋ ನಂಬಿಕೆ. ಶುಭ ದಿನ. ಅದೇ ಹಿನ್ನೆಲೆಯಲ್ಲಿ ಕಾಂತ ಕನ್ನಳ್ಳಿ ನಿರ್ದೇಶನದ ಹೊಸ ಸಿನಿಮಾದ ಫಸ್ಟ್ ಪೋಸ್ಟರ್ ರಿವೀಲ್ ಆಗಿದೆ.

ಚಿತ್ರದ ಹೆಸರು ʼರಾಜಾಸೀಟ್ʼ.‌ ನವರಸ ನಾಯಕ ಜಗ್ಗೇಶ್‌ ಅವರು ಈ ಪೋಸ್ಟರ್‌ ಲಾಂಚ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು ʼರಾಜಾಸೀಟ್‌ʼ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಮಡಿಕೇರಿಯ ರಾಜಾಸೀಟ್‌. ಕೊಡಗಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಇದು. ಹಾಗೆಯೇ ಇದಕ್ಕೆ ಹಿಸ್ಟ್ರಿಯ ಟಚ್‌ ಕೂಡ ಇದೆ. ಹಾಗಂತ ಈ ಚಿತ್ರ ತಂಡ ಅದೇ ʼರಾಜಾಸೀಟ್‌ʼ ಕುರಿತು ಸಿನಿಮಾ ಮಾಡ್ಲಿಕ್ಕೆ ಹೊರಟಿದೆಯಾ ? ಆ ಬಗೆಗಿನ ಕ್ಯೂರಿಯಾಟಿಸಿಗೆ ಇನ್ನು ಉತ್ತರ ಸಿಕ್ಕಿಲ್ಲ. ಆದರೆ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ನೋಡಿದರೆ ಮಡಿಕೇರಿ ʼರಾಜಾಸೀಟ್‌ʼಗೆ ಯಾವುದೇ ಕನೆಕ್ಷನ್‌ ಇದ್ದಂತೆ ಕಾಣುತ್ತಿಲ್ಲ. ಸುತ್ತಿಕೊಂಡಿರೋ ಕೈ, ಅದರಡಿ ಸಿಲುಕಿದ ಕಣ್ಣು, ಅಲ್ಲಿ ಗಮನ ಸೆಳೆಯುವ ನೀಲಿ ಆಕಾರದ ಕಣ್ಣು ಗುಡ್ಡೆ, ವಿಚಿತ್ರವಾಗಿರೋ ಅದರ ಲುಕ್ಕು….. ಹಾಗೆ ಸುಮ್ಮನ್ನೆ ಅದನ್ನೇ ದೃಷ್ಟಿಸಿ ನೋಡುತ್ತಾ ಹೋದರೆ ಒಂದು ಕ್ಷಣ ನಡುಕ ತರಿಸುವ ಹಾಗಿದೆ. ಇದೆಲ್ಲ ನೋಡಿದರೆ ಇದೊಂದು ಹಾರರ್‌ ಜಾನರ್‌ ಕಥೆ ಅನ್ನೋದು ನಿಮಗೂ ಅನ್ಸುತ್ತೆ. ಆ ಮಟ್ಟಿಗೆ ಈಗ ಸೋಷಲ್‌ ಮೀಡಿಯಾದಲ್ಲಿ ʼರಾಜಾಸೀಟ್‌ʼ ಚಿತ್ರದ ಪೋಸ್ಟರ್‌ ಸದ್ದು ಮಾಡುತ್ತಿದೆ.

ಎನ್‌ರೂಟ್‌ ಪ್ರೊಡಕ್ಷನ್‌ ಹೌಸ್‌ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಇದು. ಅಂದ ಹಾಗೆ ಎನ್‌ ರೂಟ್‌ ಪ್ರೊಡಕ್ಷನ್‌ ಹೌಸ್‌ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿರುವ ಹೊಸ ಸಂಸ್ಥೆ. ಮಾಧ್ಯಮ ಕ್ಷೇತ್ರದಲ್ಲಿಯೇ ಇದ್ದ ಶ್ರೀರಾಮ್‌ ಸೇರಿದಂತೆ ಎಳು ಜನ ಯುವಕರು ಇದರ ರೂವಾರಿಗಳು. ಸದ್ಯಕ್ಕೀಗ ಒಟಿಟಿ ನಲ್ಲಿ ಕನ್ನಡ ಸಿನಿಮಾಗಳ ಟ್ರೆಂಡ್‌ ಶುರುವಾಗಿದೆ. ಅದೇ ನಿಟ್ಟಿನಲ್ಲಿ ಒಟಿಟಿಗೆ ಅಂತಲೇ ರಾಜಾಸೀಟ್‌ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರಂತೆ. ಇನ್ನು ಸ್ಪೆಷಲ್‌ ಅಂದ್ರೆ ರಾಜಾಸೀಟ್‌ ಕಥೆ, ನಿರ್ಮಾಪಕರ ಶ್ರೀರಾಮ್‌ ಅವರದ್ದೇ. ನಿರ್ಮಾಣದ ಜತೆಗೆ ಈಗವರು ನಿರ್ದೇಶನಕ್ಕೂ ಬರುವ ಹಂಬಲ ಹೊತ್ತಿದ್ದಾರೆ. ಸದ್ಯಕ್ಕೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಯುವ ನಿರ್ದೇಶಕ ಕಾಂತ ಕನ್ನಳ್ಳಿಗೆ ಈ ಸಿನಿಮಾದ ನಿರ್ದೇಶನ ಜವಾಬ್ದಾರಿ ಹೊರಿಸಿದ್ದಾರಂತೆ.

ರಾಜಾಸೀಟ್‌ ಗೆ ಈಗ ಹೀರೋ ಮಾತ್ರ ಎಂಟ್ರಿ ಆಗಿದ್ದಾರೆ. ಆರವ್‌ ಗೌಡ ಅಲಿಯಾಸ್‌ ಆರವ್‌ ಲೋಕೇಶ್‌ ಈ ಚಿತ್ರದ ಮುಖ್ಯ ಮಾತ್ರಕ್ಕೆ ಸೆಲೆಕ್ಟ್‌ ಆಗಿದ್ದು, ಉಳಿದ ಕ್ಯಾರೆಕ್ಟರ್‌ ಗಳಿಗೆ ಇಷ್ಟರಲ್ಲಿಯೇ ಆರ್ಟಿಸ್ಟ್‌ ಸೆಲೆಕ್ಷನ್‌ ನಡೆಯಲಿದೆಯಂತೆ. ಬಹುತೇಕ ಹೊಸ ಆರ್ಟಿಸ್ಟ್‌ ಗಳನ್ನೇ ಪರಿಚಯಿ ಸುವ ಇರಾದೆ ಚಿತ್ರ ತಂಡಕ್ಕಿದೆ. ಟೆಕ್ನಿಷನ್‌ ಅಂತ ಬಂದಾಗ ಛಾಯಾಗ್ರ ಹಣಕ್ಕೆ ರಾಘವ್‌ ಎನ್ನುವವರನ್ನು ಸೆಲೆಕ್ಟ್‌ ಮಾಡಿಕೊಳ್ಳಲಾಗಿದೆ. ಇನ್ನು ಹದಿನೈದು ದಿನಗಳೊಳಗೆ ಚಿತ್ರಕ್ಕೆ ಬೇಕಾಗಿರುವ ಕಲಾವಿದರು ಹಾಗೂ ತಂತ್ರಜ್ಜರನ್ನು ಆಯ್ಕೆ ಮಾಡಿಕೊಂಡು, ಒಂದೇ ಶೆಡ್ಯೂಲ್‌ ನಲ್ಲಿ ಬೆಂಗಳೂರು, ಮೈಸೂರು ಹಾಗೂ ದುಬೈನಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ

Related Posts

error: Content is protected !!