ಅಭಿಮಾನಿಗಳೇ ನಮ್ಮನೆ ದೇವರು ಅಂತ ಅಣ್ಣಾವ್ರು ಹೇಳಿಕೊಟ್ಟು ಹೋಗಿದ್ದಾರೆ. ಅಪ್ಪಾಜಿಯ ಮಕ್ಕಳು ಕೂಡ ಅಭಿಮಾನಿಗಳಲ್ಲಿ ದೇವರನ್ನು ಕಾಣ್ತಿದ್ದಾರೆ. ಅದರಂತೇ ಭಕ್ತ ಸಮೂಹ ಕೂಡ ದೊಡ್ಮನೆ ಯನ್ನು ಹಾಗೂ ದೊಡ್ಮನೆಯ ಕಲಾವಿದರನ್ನು ಆರಾಧಿಸಿಕೊಂಡು ಪೂಜಿಸಿಕೊಂಡು ಹೋಗ್ತಿದ್ದಾರೆ. ಈ ದಿವ್ಯ ಅನುಬಂಧದ ಪಯಣದಲ್ಲಿ ಅಭಿಮಾನಿಯೊಬ್ಬರಿಗೆ ಶಿವಣ್ಣನನ್ನು ಡೈರೆಕ್ಟ್ ಮಾಡುವ ಅವಕಾಶ ಸಿಕ್ಕಿದೆ. ಅಷ್ಟಕ್ಕೂ, ಆ ಅದೃಷ್ಟವಂತ ಅಭಿಮಾನಿ ಬೇರಾರು ಅಲ್ಲ ಮಮ್ಮಿ ಖ್ಯಾತಿಯ ಯುವ ನಿರ್ದೇಶಕ ಕಮ್ ಶಿವಣ್ಣನ ಅಪ್ಪಟ ಅಭಿಮಾನಿ ಲೋಹಿತ್.
ಪ್ರತಿಯೊಬ್ಬ ಅಭಿಮಾನಿಗೂ ಒಂದೊಂದು ಕನಸು ಇರುತ್ತೆ. ಅದರಂತೇ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನು ಆರಾಧಿಸುವ ಲೋಹಿತ್ ಗೂ ಒಂದು ಡ್ರೀಮ್ ಇತ್ತು. ಕರುನಾಡ ಚಕ್ರವರ್ತಿಗೆ ಆಕ್ಷನ್ ಕಟ್ ಹೇಳಬೇಕು ಎನ್ನುವ ದಿವ್ಯಕನಸಿತ್ತು. ಆ ಕನಸು ಇಷ್ಟು ಬೇಗ ನೆರವೇರುತ್ತೆ ಅಂತ ಸ್ವತಃ ಲೋಹಿತ್ ಕೂಡ ಊಹೆ ಮಾಡಿರಲಿಲ್ಲ. ನಿರೀಕ್ಷೆಗೂ ಮೀರಿದ, ಊಹೆಗೂ ನಿಲುಕದ ಘಟನೆ ನಡೆಯಿತು. ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷವಾಗಿ ಶಿವಣ್ಣ ಹಾಗೂ ಲೋಹಿತ್ ಕಾಂಬಿನೇಷನ್ನಲ್ಲಿ ʼಸತ್ಯಮಂಗಳʼ ಸಿನಿಮಾ ಅನೌನ್ಸ್ ಕೂಡ ಆಗಿದೆ.
‘ಸತ್ಯಮಂಗಳ’ ಅಲಿಯಾಸ್ ʼಸತ್ಯ ಮಂಗಲʼ ಅನ್ನೋದು ತಮಿಳು ನಾಡಿನ ಗಡಿಯಲ್ಲಿರುವಂತಹ ಒಂದು ಕಾಡು ಪ್ರದೇಶ. ಆ ಕಾಡಿನ ಹೆಸರನ್ನೇ ಟೈಟಲ್ಲಾಗಿಸಿರುವ ನಿರ್ದೇಶಕ ಲೋಹಿತ್, ಥ್ರಿಲ್ಲರ್ ಜಾನ್ನರ್ ನಲ್ಲಿ ಸಿನಿಮಾ ಕಟ್ಟಿಕೊಡುವುದಕ್ಕೆ ಹೊರಟಂತಿದೆ. ದಟ್ಟ ಅಭಯಾರಣ್ಯ ಹಾಗೂ ಕರಿಚಿರತೆ ಇರುವ ಪೋಸ್ಟರ್ ನೋಡಿದರೆ ಇದೊಂದು ಫ್ಯಾಂಟ ಮ್ ರೀತಿಯ ಸಿನಿಮಾ ಎಂದೆನಿಸುತ್ತೆ. ಈ ಹಿಂದೆ ಹಾರರ್- ಥ್ರಿಲ್ಲರ್ ಸಿನಿಮಾ ಮಾಡಿ ಗೆದ್ದಿರುವ, ʼಮಮ್ಮಿ ಸೇವ್ ಮೀʼ ಹಾಗೂ ʼದೇವಕಿʼ ಚಿತ್ರ ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ಲೋಹಿತ್ ‘ಸತ್ಯಮಂಗಳ’ ಸಿನಿಮಾ ಮೂಲಕ ಬೆಚ್ಚಿಬೀಳಿಸ್ತಾರಾ ಕಾದುನೋಡಬೇಕು.
ಇನ್ನೂ ʼಸತ್ಯಮಂಗಳ ʼಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡ್ತಿದ್ದಾರೆ. ಶಿವಣ್ಣನ 123 ನೇ ʼಬೈರಾಗಿʼ ಚಿತ್ರಕ್ಕೆ ಇವರೇ ನಿರ್ಮಾಪ ಕರು. ಇನ್ನೇನು ಸಿನಿಮಾ ಮುಗಿತ್ತಲ್ಲ ಮುಂದೆ ಯಾವ ಸಿನಿಮಾ ಮಾಡ್ತೀರಾ ಸಾರ್ಥಕ್ ಅಂತ ಸೆಟ್ ನಲ್ಲಿ ಶಿವಣ್ಣ ಕೇಳಿದ್ರಂತೆ. ಆಗ ನಿರ್ದೇಶಕ ಲೋಹಿತ್ ಹೇಳಿದ್ದ ಒನ್ ಲೈನ್ ಸ್ಟೋರಿನಾ ಸಾರ್ಥಕ್ ಶಿವಣ್ಣನಿಗೆ ಹೇಳಿದ್ರಂತೆ. ಕಥೆ ಕೇಳಿ ಥ್ರಿಲ್ಲಾದ ಹ್ಯಾಟ್ರಿಕ್ ಹೀರೋ ಲೋಹಿತ್ ನ ಕರೆಸಿ ಮಾತನಾಡಿದ್ದಾರೆ. ಸ್ಪಾಟ್ ನಲ್ಲೇ ಕಾಲ್ ಶೀಟ್ ಕೊಟ್ಟು ಮೂವೀ ಅನೌನ್ಸ್ ಮಾಡೋದಕ್ಕೆ ಹೇಳಿದ್ದಾರೆ. ಹೀಗಾಗಿ, ವರಮಹಾಲಕ್ಷ್ಮಿ ಹಬ್ಬದಂದು ಶಿವಣ್ಣನ 127 ನೇ ಚಿತ್ರವಾಗಿ ʼಸತ್ಯಮಂಗಳʼ ಘೋಷಣೆಯಾಗಿದೆ.
ಇಷ್ಟೆಲ್ಲಾ ಹೇಳಿದ್ಮೇಲೆ ಈ ಮ್ಯಾಟರ್ ಹೇಳಲೇಬೇಕು. ನಿರ್ದೇಶಕ ಲೋಹಿತ್ ಗೆ ಬಾಲ್ಯದಿಂದಲೂ ಸಿನಿಮಾ ಮೇಲೆ ಹುಚ್ಚಿತ್ತು .ನಿಧಾನಕ್ಕೆ ಸಿನಿಮಾನೇ ಉಸಿರು ಎನ್ನುವಂತಾಯ್ತು. ಲೋಹಿತ್ ಇಷ್ಟರ ಮಟ್ಟಿಗೆ ಮೂವೀ ಮೇಲೆ ವ್ಯಾಮೋಹ ಬೆಳೆಸಿಕೊಳ್ಳಲಿಕ್ಕೆ, ಮಾಯಲೋಕದ ಕಡೆ ಆಕರ್ಷಿತರಾಗಲಿಕ್ಕೆ ಕಾರಣ ಮತ್ತದೇ ಶಿವಣ್ಣ. ಹ್ಯಾಟ್ರಿಕ್ ಹೀರೋ ಸಿನಿಮಾಗಳು ಲೋಹಿತ್ ಮೇಲೆ ಗಾಡ ಪರಿಣಾಮ ಬೀರಿವೆಯಂತೆ. ಮುತ್ತಣ್ಣನ ಮೂವೀ ನೋಡಲಿಕ್ಕೆ ಥಿಯೇಟರ್ ಗೆ ಹೋಗಿ ಗಂಟೆಗಟ್ಟಲೆ ಕಾದು ಟಿಕೆಟ್ ಪಡೆಯುತ್ತಿದ್ದರಂತೆ. ಈ ಸಂಗತಿಯನ್ನ ತಮ್ಮ ಸೋಷಿಯಲ್ ಪೇಜ್ ನಲ್ಲಿ ಬರೆದುಕೊಂಡಿರುವ ಡೈರೆಕ್ಟರ್ ಲೋಹಿತ್, ನನ್ನ ಮುಂದಿನ ಸಿನಿಮಾ ಸತ್ಯಮಂಗಳಕ್ಕೆ ಶಿವಣ್ಣನೇ ಹೀರೋ. ಇಂತಹ ಕ್ಷಣಕ್ಕಾಗಿಯೇ ಚಿತ್ರರಂಗಕ್ಕೆ ಬಂದಿದ್ದು. ಈ ಅದ್ಬುತ ಖುಷಿಯ ಕ್ಷಣವನ್ನು ವರ್ಣಿಸೋಕೆ ಪದಗಳಿಂದ ಸಾಧ್ಯವಿಲ್ಲ ಎಂದಿದ್ದಾರೆ. ಮಹದಾಸೆ ಈಡೇರಿಸಿದ ಶಿವಣ್ಣನಿಗೆ ಸಲಾಂ ಎಂದಿರುವ ಅಭಿಮಾನಿ ಲೋಹಿತ್, ʼಸತ್ಯಮಂಗಳʼ ಮೂಲಕ ಅದ್ಯಾವ ರೀತಿ ಸುನಾಮಿ ಎಬ್ಬಿಸ್ತಾರೆ ಅಂತ ವೇಯ್ಟ್ ಮಾಡಿ ನೋಡಬೇಕು.
– ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ