- ವಿಶಾಲಾಕ್ಷಿ
ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಷ್ ಸೇರಿದಂತೆ ಹಲವಾರು ದಿಗ್ಗಜರು ಗಂಧದಗುಡಿಯನ್ನು ಕಟ್ಟಿಬೆಳೆಸುವುದಕ್ಕೆ ಶ್ರಮಪಟ್ಟಿದ್ದಾರೆ. ನಾಯಕನಟರುಗಳೊಟ್ಟಿಗೆ ನಿರ್ದೇಶಕರು ಹಾಗೂ ನಿರ್ಮಾಪಕರು ಬೆವರುಸುರಿಸಿದ್ದಾರೆ. ಇವತ್ತು ಚಂದನವನದತ್ತ ಭಾರತೀಯ ಚಿತ್ರರಂಗ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ಕಾರಣ ಅಣ್ಣಾವ್ರಿಂದ ಹಿಡಿದು ಅಣ್ತಮ್ಮನವರೆಗಿನ ಪ್ಯಾಷನೇಟ್ ನಟರುಗಳು-ನಿರ್ದೇಶಕರು-ನಿರ್ಮಾಪಕರು ಸೇರಿದಂತೆ ಶ್ರದ್ದಾ-ಭಕ್ತಿಯಿಂದ ಕನ್ನಡ ಸಿನಿಮಾಗಾಗಿ ದುಡಿಯುವ ಪ್ರತಿಯೊಬ್ಬರು. ಕಾರಣಿಭೂತರಾಗುತ್ತಾರೆ. ಹೀಗೆ ಎಲ್ಲರ ಪರಿಶ್ರಮ ಹಾಗೂ ಸಮಕ್ಷಮದಿಂದ ಕನ್ನಡ ಚಿತ್ರರಂಗಕ್ಕೆ ಚಿನ್ನದ ಬೆಲೆ ಬರುತ್ತಿದೆ. ಪರಭಾಷಾ ಮಂದಿ ಮಾತ್ರವಲ್ಲ ಹೊರದೇಶದವರು ಕಣ್ಣರಳಿಸಿ ನೋಡುವಂತಾಗಿದೆ. ಇಂತಹ ಹೊತ್ತಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೌಡ್ರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕೈಹಾಕಿ ಅಚ್ಚರಿ ಮೂಡಿಸಿದ್ದಾರೆ. ಸ್ಯಾಂಡಲ್‌ವುಡ್ ಕೀರ್ತಿಪತಾಕೆಯನ್ನು ಎತ್ತಿಹಿಡಿಯುವಂತಹ ನಯಾ ಸಾಹಸಕ್ಕೆ ಮುಂದಾಗಿದ್ದಾರೆ.
ಕನ್ನಡ ಫಿಲ್ಮ್ ಇಂಡಸ್ಟ್ರಿ ಚಿಕ್ಕದು.. ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ.. ಹೊರದೇಶದಲ್ಲಿ ಅಲ್ಲಾ ಹೊರರಾಜ್ಯದಲ್ಲೇ ಬೇಡಿಕೆ ಇಲ್ಲಾ.. ಕೋಟಿ ಕೋಟಿ ಕಮಾಯಿ ಮಾಡುವ ತಾಕತ್ತಿಲ್ಲ.. ಹೀಗೆ ಮಾತನಾಡುತ್ತಿದ್ದವರೆಲ್ಲರ ಬಾಯಿಗೆ ಕೆಜಿಎಫ್ ಟೀಮ್ ಬೀಗ ಹಾಕಿದ್ದು ಎಲ್ಲರಿಗೂ ಗೊತ್ತೆಯಿದೆ. ಕನ್ನಡ ಸಿನಿಮಾದ ತಾಕತ್ತೇನು? ಗಂಧದಗುಡಿಯ ಪ್ರತಿಭೆಗಳಿಗಿರುವ ಶಕ್ತಿ ಎಂತಹದ್ದು ಎನ್ನುವುದು ಕೆಜಿಎಫ್ ಪ್ರೂ ಮಾಡಿ ತೋರಿಸಿತು. ಅನಂತರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಗೊಂಡ ಚಿತ್ರಗಳು ಕೂಡ ಹೊರರಾಜ್ಯದವರನ್ನು ಹಾಗೂ ಪರಭಾಷೆಯವರನ್ನ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದವು. ಇದೀಗ, `ಉಮಾಪತಿ ಫಿಲ್ಮ್ ಸಿಟಿ’ ನಿರ್ಮಾಣದ ಸುದ್ದಿ ಆಚೆ-ಈಚೆ-ನೀಚೆ-ಪೀಚೆ ಇರುವ ಸಿನಿಮಾ ಮಂದಿಯನ್ನು ಬೆಕ್ಕಸ ಬೆರಗಾಗಿಸಿದೆ. ಈ ಗಂಧದಗುಡಿಯ ಮಂದಿ ಸಾಮಾನ್ಯದವರಲ್ಲ ಬುಡು ಗುರು ಎನ್ನುವ ಡೈಲಾಗ್ ಎಲ್ಲರ ಬಾಯಲ್ಲೂ ಬರುವಂತಾಗಿದೆ.
ಅನ್ನದಾತರಾಗಿ ಗಂಧದಗುಡಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿರುವ ಉಮಾಪತಿ ಶ್ರೀನಿವಾಸ್ ಗೌಡ್ರು ಸಾಮಾನ್ಯದವರಲ್ಲ ಬಿಡಿ. ತಾವು ಎಷ್ಟು ಕೋಟಿಗೆ ಬದುಕ್ತೀವಿ ಅಂತ ಅವರು ಬಾಯ್ಬಿಟ್ಟು ಹೇಳಲ್ಲ ಅಷ್ಟೇ. ಅವರ ಮಹಾಕನಸುಗಳೇ ಕೋಟಿ ಕಥೆಯನ್ನ ಹೇಳುತ್ತವೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಬ್ಬುಲಿ' ಚಿತ್ರದ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಅನಂತರ ಚಾಲೆಂಜಿಂಗ್ ಚಕ್ರವರ್ತಿಯ
ರಾಬರ್ಟ್’ ಚಿತ್ರಕ್ಕೆ ಕೋಟಿ ಕೋಟಿ ಬಂಡವಾಳ ಸುರಿದು ಕೋಟ್ಯಾನುಕೋಟಿ ಗಳಿಸಿದರು. ಈ ಮಧ್ಯೆ ರಾಷ್ಟ್ರಪ್ರಶಸ್ತಿ ಪಡೆಯುವಂತಹ ಒಂದಲ್ಲಾ.. ಎರಡಲ್ಲಾ..' ಸಿನಿಮಾ ಮಾಡಿ ಗೆದ್ದರು. ಈಗ
ಮದಗಜ’ನಿಗೆ ಹಣ ಹೂಡಿಕೆ ಮಾಡಿದ್ದಾರೆ. `ಉಪಾಧ್ಯಕ್ಷ’ ಸಿನಿಮಾಗೆ ದುಡ್ಡು ಹಾಕಿ ಚಿಕ್ಕಣ್ಣನ್ನ ಹೀರೋ ಮಾಡೋದಕ್ಕೆ ಹೊರಟಿದ್ದಾರೆ. ಇಷ್ಟೆಲ್ಲದರ ನಡುವೆ ತಮ್ಮ ದಿವ್ಯಕನಸಿನ ಸಾಕಾರಕ್ಕಾಗಿ 175 ಕೋಟಿ ಇನ್ವೆಸ್ಟ್ ಮಾಡ್ತಿದ್ದಾರೆ.
ಫಿಲ್ಮ್ ಸಿಟಿ ನಿರ್ಮಾಣ ಮಾಡ್ಬೇಕು ಎನ್ನುವುದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ್ರ ಬಹುದೊಡ್ಡ ಕನಸು. ಆ ಕನಸಿನ ಸಾಕಾರಕ್ಕಾಗಿ ಬಹಳಷ್ಟು ದಿನದಿಂದ ಎದುರುನೋಡ್ತಿದ್ದರು. ಕೊನೆಗೂ ಆ ಮಹಾಕನಸಿಗೆ ಭದ್ರಬುನಾದಿ ಹಾಕಿದ್ದಾರೆ. ನಾಗರ ಪಂಚಮಿ ದಿನದಂದು `ಉಮಾಪತಿ ಫಿಲ್ಮ್ ಸಿಟಿ’ಯ ಅಂಗಳದಲ್ಲಿ ಭೂಮಿ ಪೂಜೆ ನೆರವೇರಿದೆ.
ಕನಕಪುರ ರಸ್ತೆಯ ರವಿಶಂಕರ್ ಆಶ್ರಮದ ಬಳಿ ೨೫ ಎಕರೆ ಜಮೀನಿನಲ್ಲಿ ಭರ್ತಿ ೧೭೫ ಕೋಟಿ ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಾಣಗೊಳ್ಳಲಿದೆ. ಈ ವರ್ಷದ ಕೊನೆಯಲ್ಲಿ ಸ್ಟುಡಿಯೋ ಕೆಲಸಕಾರ್ಯ ಆರಂಭ ಮಾಡುವುದಕ್ಕೆ ಪ್ಲ್ಯಾನ್ ರೂಪಿಸಿದ್ದಾರೆ. ರಸ್ತೆಬದಿಗಳು, ಹಳ್ಳಿಗಳು, ರೈಲ್ವೆ ಸ್ಟೇಷನ್, ಆಸ್ಪಿಟಲ್, ಬಂಗ್ಲೋ ನಿರ್ಮಾಣ ಮಾಡಲಾಗುತ್ತೆ.
ಒಂದು ಸಿನಿಮಾದ ಮೇಜರ್ ಪೋರ್ಷನ್ಸ್ ಚಿತ್ರೀಕರಣಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆ ಉಮಾಪತಿ ಮಿನಿ ಫಿಲ್ಮ್ ಸಿಟಿಯಲ್ಲಿ ಮಾಡಲಾಗುತ್ತದೆ.
ರಾಮೋಜಿ ಫಿಲ್ಮ್ ಸಿಟಿ ನೋಡಿ ಪ್ರೇರಣೆಗೊಂಡಿದ್ದ ಉಮಾಪತಿಯವರು ರಾಮೋಜಿ ಫಿಲ್ಮ್ ಸಿಟಿಯಷ್ಟು ದೊಡ್ಡದಾಗಿ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗದಿದ್ದರೂ ಕೂಡ ಚಿಕ್ಕದಾಗಿಯಾದರೂ ಫಿಲ್ಮ್ ಸಿಟಿ ಮಾಡ್ಬೇಕು ಎಂದುಕೊಂಡಿದ್ದರು. ಕೊನೆಗೂ ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ನಮ್ಮ ಸ್ಯಾಂಡಲ್‌ವುಡ್ ಮಂದಿ ಚಿತ್ರೀಕರಣಕ್ಕಾಗಿ ಹೈದ್ರಬಾದ್‌ಗೆ ಹೋಗುವುದನ್ನ `ಉಮಾಪತಿ ಫಿಲ್ಮ್ ಸಿಟಿ’ ತಪ್ಪಿಸಲಿದೆ. ಎಲ್ಲಾ ಅಂದುಕೊಂಡಂಗೆ ಆದರೆ ೨೦೨೩ರ ಹೊತ್ತಿಗೆ ಕನಕಪುರದ ಹತ್ತಿರ ಉಮಾಪತಿ ಫಿಲ್ಮ್ ಸಿಟಿ ತಲೆಎತ್ತಲಿದೆ. ಗಂಧದಗುಡಿ ಮಂದಿಯ ಸಿನಿಮಾ ಕನಸಿಗೆ ಉಮಾಪತಿ ಸ್ಟುಡಿಯೋ ಜೀವತುಂಬಲಿದೆ. ವಿಶೇಷ ಅಂದರೆ ಗಂಧದಗುಡಿಗೆ ಸರ್ಕಾರ ಫಿಲ್ಮ್ ಸಿಟಿ ನಿರ್ಮಾಣ ಮಾಡಿಕೊಡುವ ಮೊದಲೇ ಅನ್ನದಾತರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕೈಹಾಕಿರುವುದು ಹೆಮ್ಮೆಯ ವಿಷ್ಯ. ಹೀಗಾಗಿ, ಉಮಾಪತಿಯವರನ್ನು ಗಾಂಧಿನಗರದ ಮಂದಿ ಮರೆಯೋ ಹಂಗಿಲ್ಲ. ತಲೆ ಮೇಲೆ ಹೊತ್ತು ಮೆರೆಸುವುದನ್ನು ನಿಲ್ಲಿಸೋ ಹಾಗಿಲ್ಲ.
ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ