ಹೊತ್ತಿಲ್ಲದ ಹೊತ್ತು, ತುತ್ತಿಲ್ಲದೇ ನಿಂತು,ಕಾದಿದ್ದೆ ನಿನಗಾಗಿ ಯಾಕೇ, ಹೇಳು ಯಾಕೇ, ಹೇಳು ಯಾಕೇ.ಆಣೆಯ ಇಟ್ಟು ಭಾಷೆಯ ಕೊಟ್ಟು, ಹಿಂದಿಂದೆ ಬಂದಿದ್ದು ಯಾಕೇ,ಹೇಳು ಯಾಕೇ, ಹೇಳು ಯಾಕೇ, ಈ ರೀತಿ ಸಾಗುವ
ಏಕ್ ಲವ್ ಯಾ’ ಚಿತ್ರದ ಹಾಡು ಸುನೀಲ್ ಹಾಗೂ ಹನುಮನ ಕಂಠಸಿರಿಯಲ್ಲಿ ಮೂಡಿ ಬರಲಿದೆ…
- ವಿಶಾಲಾಕ್ಷಿ
ಹೊಡಿರೀ ಹಲಗಿ.. ಹಚ್ಚಿ ಪಟಾಕಿ… ಹಳ್ಳಿಹೈದ ಹನುಮಂತಣ್ಣ ಮತ್ತೆ ಅಖಾಡಕ್ಕೆ ಇಳಿದಿದ್ದಾನೆ. ಮ್ಯೂಸಿಕ್ ಲೋಕದಲ್ಲಿ ಮ್ಯಾಜಿಕ್ ಮಾಡೋದಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾನೆ. ಅಂದ್ಹಾಗೇ, ಚಿಲ್ಲೂರು ಚಿಂಗಾರಿಯನ್ನು ಮತ್ತೆ ಕಣಕ್ಕೆ ಇಳಿಸಿರುವುದು ಡೈರೆಕ್ಟರ್ ಜೋಗಿ ಪ್ರೇಮ್ ಹಾಗೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ . ಹಾವೇರಿ ಜಿಲ್ಲೆ ಸವಣೂರ್ ತಾಲೂಕ್ ಬಡ್ನಿ ತಾಂಡಾದಲ್ಲಿ ಮತ್ತೆ ಕುರಿ ಕಾಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಹನುಮನನ್ನು ಮತ್ತೆ ಬೆಂಗಳೂರಿಗೆ ಕರೆತಂದಿದ್ದಾರೆ. ಜನ್ಯಾಜೀ ಫೋನ್ ಹೋಗಿದ್ದೇ ತಡ ಬಡ್ನಿ ಹೈದ ಹನುಮ ಅಂಗಿ-ಲುಂಗಿ ತೊಟ್ಟು ಹೆಗಲಿಗೊಂದು ಟವಲ್ ಹಾಕಿಕೊಂಡು ಬೆಂಗಳೂರಿಗೆ ಬಂದಿಳಿದಿದ್ದಾನೆ.
ಸವಣೂರ್ ಸೂಪರ್‌ಸ್ಟಾರ್ ಎನಿಸಿಕೊಂಡಿದ್ದ ಹನುಮಂತನಿಗೆ ಅರ್ಜುನ್ ಜನ್ಯಾ ತಮ್ಮ ಸಿನಿಮಾದಲ್ಲಿ ಒಂದು ಅವಕಾಶ ಕೊಡ್ತೀನಿ ಅಂತ ಸಾರೆಗಾಮ' ಅಂಗಳದಲ್ಲೇ ಅನೌನ್ಸ್ ಮಾಡಿದ್ದರು. ಪ್ರೇಮ್ ನಿರ್ದೇಶನದ ಸಿನೆಮಾದಲ್ಲಿ ಸಾರೆಗಾಮ ರನ್ನರ್ ಅಪ್ ಹನುಮನಿಗೆ ಹಾಡುವ ಅವಕಾಶ ಸಿಗಲಿದೆ ಎನ್ನುವ ಸುದ್ದಿಯೊಂದು ಈ ಹಿಂದೆ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು. ಇದೀಗ, ಆ ಸುದ್ದಿ ನಿಜವಾಗಿದೆ. ಹಳ್ಳಿಹಕ್ಕಿ ಹನುಮನಿಗೆ ಜೋಗಿ ಪ್ರೇಮ್ ನಿರ್ದೇಶನದ
ಏಕ್ ಲವ್’ ಯಾ’ ಚಿತ್ರದಲ್ಲಿ ಹಾಡುವ ಚಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದು, `ಸಾರೆಗಾಮ’ ಸೀಸನ್ 13ರ ವಿನ್ನರ್ ಸುನೀಲ್ ಜೊತೆ ಚಿಲ್ಲೂರು ಚಿಂಗಾರಿ ಹನುಮಂತ ಕಂಠಕುಣಿಸಿದ್ದಾರೆ.
ಹೊತ್ತಿಲ್ಲದ ಹೊತ್ತು, ತುತ್ತಿಲ್ಲದೇ ನಿಂತು.. ಕಾದಿದ್ದೆ ನಿನಗಾಗಿ ಯಾಕೇ.. ಹೇಳು ಯಾಕೇ.. ಹೇಳು ಯಾಕೇ.. ಆಣೆಯ ಇಟ್ಟು ಭಾಷೆಯ ಕೊಟ್ಟು.. ಹಿಂದಿಂದೆ ಬಂದಿದ್ದು ಯಾಕೇ.. ಹೇಳು ಯಾಕೇ.. ಹೇಳು ಯಾಕೇ.. ಈ ರೀತಿಯಾಗಿ ಸಾಗುವ
ಏಕ್ ಲವ್ ಯಾ’ ಚಿತ್ರದ ಹಾಡು ಸುನೀಲ್ ಹಾಗೂ ಹನುಮನ ಕಂಠಸಿರಿಯಲ್ಲಿ ಮೂಡಿಬರಲಿದೆ. ಇತ್ತೀಚೆಗೆ ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ಕಾರ್ಯ ಮುಗಿದಿದೆ. ಅದರ ಝಲಕ್‌ನ ಡೈರೆಕ್ಟರ್ ಪ್ರೇಮ್ ಹಾಗೂ ಜನ್ಯಾಜೀಯವರು ತಮ್ಮ ಸೋಷಿಯಲ್ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ನೋಡಿ ಬಡ್ನಿಭೀಮನ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಂತಹ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾಗೆ ಉಘೇ ಉಘೇ ಎನ್ನುತ್ತಿದ್ದಾರೆ. ಸೆನ್ಸೇಷನಲ್ ಡೈರೆಕ್ಟರ್ ಸಿನಿಮಾದಲ್ಲಿ ಹನುಮ ಹಾಡಿದ್ದಾಯ್ತು ಈ ಹಾಡಿನಿಂದ ಹಳ್ಳಿ ಹೈದನ ಸಂಗೀತ ಪಯಣಕ್ಕೆ ಕಿಕ್‌ಸ್ಟಾರ್ಟ್ ಸಿಗುವಂತಾಗಲಿ, ಬಣ್ಣದ ಲೋಕದಲ್ಲಿ ಬಡ್ನಿಭೀಮನ ಜವಾರಿ ಬಂಡಿ ಸಾಗಲಿ ಅನ್ನೋದೇ ಸಿನಿಲಹರಿ ಆಶಯ
ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ