ಮೂಕನಾಯಕ ಚಿತ್ರಕ್ಕೆ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ; ಇದು ಬರಗೂರು ರಾಮಚಂದ್ರಪ್ಪ ನಿರ್ದೇಶನದ ಸಿನಿಮಾ

ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಮೂಕನಾಯಕ” ಸಿನಿಮಾಗೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ನೋಯ್ಡಾದ ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಹೌದು, ಕಳೆದ 2017 ರಲ್ಲಿ ಈ ಚಿತ್ರವನ್ನು ಮಾಡಲಾಗಿತ್ತು. ಬಾಲರಾಜ್‌ ಅವರ ನಿರ್ಮಾಣದ ಈ ಚಿತ್ರವನ್ನು ಬರಗೂರು ರಾಮಚಂದ್ರಪ್ಪ ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶಿಸಿದ್ದರು. ನೋಯ್ಡಾದ ಸಂಸ್ಥೆಯೊಂದು ಇನ್‌ಕ್ರೆಡಿಬಲ್‌ ಸಿನಿ ಅವಾರ್ಡ್ಸ್‌ಗಾಗಿ ಹತ್ತು ವರ್ಷಗಳ ಒಳಗೆ ನಿರ್ಮಾಣಗೊಂಡ ವಿಶ್ವದ ಎಲ್ಲಾ ಭಾಷೆಯ ಚಿತ್ರಗಳನ್ನೂ ಆಹ್ವಾನಿಸಿತ್ತು. “ಮೂಕ ನಾಯಕ” ಚಿತ್ರವನ್ನೂ ಸ್ಪರ್ಧೆಗೆ ಕಳಿಸಲಾಗಿತ್ತು. ಪ್ರವೇಶ ಪಡೆದ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ವಿವಿಧ ವಿಭಾಗಗಳ ಸ್ಪರ್ಧೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಹೀಗೆ ನಾಮ ನಿರ್ದೇಶನಗೊಂಡ “ಮೂಕ ನಾಯಕ” ಚಿತ್ರವು ವಿಶ್ವದ ವಿವಿಧ ಭಾಷೆಗಳ ನಾಮ ನಿರ್ದೇಶಿತ ಚಿತ್ರಗಳೊಂದಿಗೆ ಸ್ಪರ್ಧಿಸಿ, ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜವಾಗಿದೆ.

ಮಾತು ಬಾರದ ಮೂಕ ಚಿತ್ರಕಲಾವಿದರ ಆಶಯ ಮತ್ತು ಅಭಿವ್ಯಕ್ತಿ ವಿನ್ಯಾಸವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರವು ಚಿತ್ರಕಲೆಯ ವಿವಿಧ ಸಾಧ್ಯತೆಗಳನ್ನು ಸಾದರಪಡಿಸಿದೆ. ಸಮುದಾಯದತ್ತ ಸಿನಿಮಾ ಎಂಬ ಪರಿಕಲ್ಪನೆಯಡಿಯಲಿ ಚಿತ್ರಯಾತ್ರೆ ನಡೆಸಿ, ಈಗಾಗಲೇ ಅನೇಕ ಊರುಗಳಲ್ಲಿ ಈ ಚಿತ್ರ ಪ್ರದರ್ಶನ ಮಾಡಲಾಗಿದೆ. ಈ ಹಿಂದೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.

ಮೂಕ ಚಿತ್ರ ಕಲಾವಿದನ ಪಾತ್ರದಲ್ಲಿ ಗೋವಿಂದ್‌ ನಟಿಸಿದ್ದು, ಸೋದರಿ ಪಾತ್ರದಲ್ಲಿ “ಸ್ಪರ್ಶ” ರೇಖಾ ನಟಿಸಿದ್ದರು. ಅವರ ಪಾತ್ರಕ್ಕೆ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟಿ ಪ್ರಶಸ್ತಿಯೂ ಸಿಕ್ಕಿತ್ತು. ಚಿತ್ರದಲ್ಲಿ ಸುಂದರರಾಜ್‌, ಯತಿರಾಜ್‌, ಶೀತಲ್‌ ಶೆಟ್ಟಿ, ವೆಂಕಟರಾಜ್‌ ಇತರರು ಇದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣವಿದೆ. ಸುರೇಶ್‌ ಅರಸು ಸಂಕಲನವಿದೆ. ಶಮಿತಾ ಮಲ್ನಾಡ್‌ ಸಂಗೀತವಿದೆ.

Related Posts

error: Content is protected !!